ಶನಿವಾರ, ನವೆಂಬರ್ 23, 2019
18 °C

ಬನಹಟ್ಟಿಯಲ್ಲಿ ಸಂಭ್ರಮದ `ಐದೇಶಿ'

Published:
Updated:
ಬನಹಟ್ಟಿಯಲ್ಲಿ ಸಂಭ್ರಮದ `ಐದೇಶಿ'

ಬನಹಟ್ಟಿ: ನಗರದ ಹೊರವಲಯದ ಅರಳಿಕಟ್ಟೆಯಲ್ಲಿ ಗುರುವಾರ ದೇವರನ್ನು ಊರೊಳಗೆ ಕರೆದುಕೊಳ್ಳುವ ವಿಶಿಷ್ಟವಾದ `ಐದೇಶಿ' ಕಾರ್ಯಕ್ರಮವನ್ನು  ಶ್ರದ್ಧೆ, ಭಕ್ತಿ ಮತ್ತು ಸಂಭ್ರಮದಿಂದ ಆಚರಿಸಲಾಯಿತು.ಐದೇಶಿ ಎಂದರೆ ಐದು ದಿನಗಳ ಕಾರ್ಯಕ್ರಮ. ಯುಗಾದಿಯ ದಿನದಂದು ನೆರೆಯ ಆಂಧ್ರಪ್ರದೇಶದ ಶ್ರೀಶೈಲಂನಲ್ಲಿ ಮಲ್ಲಿಕಾರ್ಜುನ ದೇವರ ಜಾತ್ರೆಯನ್ನು ಮುಗಿಸಿಕೊಂಡು ಜನರು ಮತ್ತೆ ನಗರಕ್ಕೆ ಮರಳುತ್ತಾರೆ.

ಮರಳಿದ ಕಂಬಿಗಳು ಮತ್ತು ಜನರು ಅರಳಿಕಟ್ಟೆಯಲ್ಲಿ ಇರುತ್ತಾರೆ. ಕಾರಣ ಅವರಿಗೆ ನಗರದೊಳಗೆ ನೇರವಾದ ಪ್ರವೇಶ ಇರುವುದಿಲ್ಲ. ನಂತರ ಅವರನ್ನು ಊರೊಳಗೆ ಕರೆದುಕೊಳ್ಳುವ ದಿನವನ್ನು ನಗರದ ಹಿರಿಯರು ಕೂಡಿಕೊಂಡು ನಿರ್ಧಾರ ಮಾಡುತ್ತಾರೆ.ಅಂದು ಮನೆಯ ಗಂಡು ಮಕ್ಕಳು ದೀವಟಿಗೆಯನ್ನು ಮತ್ತು ಹೆಣ್ಣು ಮಕ್ಕಳು  ಹೊಸ ಬಟ್ಟೆಗಳನ್ನು ಧರಿಸಿಕೊಂಡು  ಆರತಿಯನ್ನು ಮತ್ತು ಮಲ್ಲಿಕಾರ್ಜುನ ದೇವರಿಗೆ ಪ್ರಿಯವಾದ ಬೆಲ್ಲವನ್ನು ತೆಗೆದುಕೊಂಡು ಹೋಗಿ ನೈವೇದ್ಯ ಮಾಡುತ್ತಾರೆ.

ಈ ಸಂಪ್ರದಾಯ ಶತಮಾನಗಳಿಂದ ನಡೆಯುತ್ತ ಬಂದಿದೆ. ನಂತರ ಸಂಜೆ ಅರಳಿಕಟ್ಟೆಯಿಂದ ಮಲ್ಲಯ್ಯನ ಕಂಬಿಗಳನ್ನು ಮೆರವಣಿಗೆಯಲ್ಲಿ ತೆಗೆದುಕೊಂಡು ಬರುತ್ತಾರೆ.ನಂತರ ಐದು ದಿನಗಳ ಕಾಲ ರಾತ್ರಿ 9ಕ್ಕೆ  ನಗರದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಸಾಮೂಹಿಕ ಮಂಗಳಾರತಿ  ನಡೆಯುತ್ತದೆ. ಇದರಲ್ಲಿ ಚಿಕ್ಕಮಕ್ಕಳಿಂದ ಹಿಡಿದು ಹಿರಿಯರು ಪಾಲ್ಗೊಳ್ಳುತ್ತಾರೆ. ಐದನೆಯ ದಿನ ದೇವಸ್ಥಾನದ ಆವರಣದಲ್ಲಿ ಬೆಲ್ಲ ಹಂಚುವ ವಿಶೇಷ ಕಾರ್ಯಕ್ರಮ.

ಇದರಲ್ಲಿ ನಗರದ ಮಲ್ಲಯ್ಯನ ಭಕ್ತರು ನೂರಾರು ಕೆ.ಜಿ ಯಷ್ಟು ಬೆಲ್ಲವನ್ನು ಹಂಚುತ್ತಾರೆ. ಈ ಕಾರ್ಯಕ್ರಮವು ಶತಮಾನಗಳಿಂದ ತಪ್ಪದೆ ಇಂದಿನ ಆಧುನಿಕ ಯುಗದಲ್ಲಿಯೂ ನಡೆದು ಬಂದಿದೆ.

ಪ್ರತಿಕ್ರಿಯಿಸಿ (+)