ಬನ್ನಿ,ಬೆರಗಾಗಿ ಇದು ಬೊಂಬೆ ಲೋಕ

7

ಬನ್ನಿ,ಬೆರಗಾಗಿ ಇದು ಬೊಂಬೆ ಲೋಕ

Published:
Updated:

ದಸರಾ ಕಾಲಿಡುತ್ತಿದೆ. ಮೈಸೂರಿನ ರಾಜವೈಭೋಗ ಸಾರುವ ಸುಂದರ ಬೊಂಬೆಗಳು ಹಳೆ ಮೈಸೂರಿಗರ ಮನೆಯ ಅಟ್ಟದ ಮೇಲಿಂದ ಇಳಿದು ಪ್ರದರ್ಶನಕ್ಕೆ ಸಜ್ಜಾಗುತ್ತಿವೆ. ಬೊಂಬೆಗಳು ಬರೀ ಆಟಿಕೆಗಳಷ್ಟೇ ಅಲ್ಲ. ಅವು ಸಂಸ್ಕೃತಿ, ಸಂಪ್ರದಾಯ ಬಿಂಬಿಸುವ ಕಾಲಾತೀತ ರಾಯಭಾರಿಗಳೂ ಹೌದು. ಹಾಗೆಂದ ಮಾತ್ರಕ್ಕೆ ನಮ್ಮ ರಾಜ್ಯದಲ್ಲಷ್ಟೇ ಬೊಂಬೆಗಳ ಕಾರುಬಾರು ಎಂದುಕೊಂಡಿರಾ? ಖಂಡಿತಾ ಇಲ್ಲ. ಹಲವು ದೇಶಗಳಲ್ಲಿ  ಆಯಾಯ ಸಂಪ್ರದಾಯಕ್ಕೆ ಅನುಗುಣವಾಗಿ ಬೊಂಬೆಗಳು ಪಾರುಪತ್ಯ ನಡೆಸುತ್ತವೆ. ಬನ್ನಿ, ನಮ್ಮ ದಸರೆಯ ಬೊಂಬೆಯಾಟದ ಈ ಹೊತ್ತಿನಲ್ಲಿ ದೇಶ- ವಿದೇಶಗಳ ಪ್ರಮುಖ ಬೊಂಬೆ ಸಂಗ್ರಹಾಲಯಗಳತ್ತ ಒಮ್ಮೆ ಕಣ್ಣಾಡಿಸಿ ಬರೋಣ.      

                                        =====         

 

ಗ್ರಾಮೀಣ ರೂಪಕ

ಥಾಯ್ಲೆಂಡ್ ದೇಶದ ಬ್ಯಾಂಕಾಕ್‌ನಲ್ಲಿರುವ ಬೊಂಬೆ ಸಂಗ್ರಹಾಲಯ ದೆಹಲಿಯ ಸಂಗ್ರಹಾಲಯಕ್ಕಿಂತ ಹಳೆಯದು. ಕುನಿಂಗ್ ಥಾಂಕಾರ್ನ್ ಚಾಂಥ್ವಿಮೊಲ್ ಎಂಬುವವರು 1956ರಲ್ಲಿ ಇದನ್ನು ಸ್ಥಾಪಿಸಿದರು. ಜಪಾನ್‌ನ ಟೋಕಿಯೋದ ಬೊಂಬೆ ತಯಾರಿಕಾ ಶಾಲೆಯಲ್ಲಿ ತರಬೇತಿ ಪಡೆದಿದ್ದ ಕುನಿಂಗ್ ಸ್ವತಃ ತಯಾರಿಸಿದ 400ಕ್ಕೂ ಹೆಚ್ಚು ಬೊಂಬೆಗಳು ಇಲ್ಲಿವೆ.ಥಾಯ್ಲೆಂಡ್‌ನ ಗ್ರಾಮೀಣ ಮತ್ತು ಬುಡಕಟ್ಟು ಜನಾಂಗದ ಜನಜೀವನ ಈ ಬೊಂಬೆಗಳ ಮೂಲಕ ತೆರೆದುಕೊಳ್ಳುತ್ತದೆ. ಸ್ಥಳೀಯ ನೃತ್ಯರೂಪಕ `ಖೊನ್~ ಮುಖವಾಡ ತೊಟ್ಟ ಬೊಂಬೆಗಳು ಸಹ ಇಲ್ಲಿವೆ. 1978ರಲ್ಲಿ ಪೋಲೆಂಡ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಜನಪದ ಬೊಂಬೆಗಳ ಸ್ಪರ್ಧೆಯಲ್ಲಿ ಈ ಸಂಗ್ರಹಾಲಯಕ್ಕೆ ಪ್ರಥಮ ಸ್ಥಾನ ಲಭ್ಯವಾಗಿದೆ.

`ಪಂಚಿಂಗ್~ ಡಾಲ್ಸ್
ದೆಹಲಿಯ ಚಿಲ್ಡ್ರನ್ಸ್ ಬುಕ್ ಟ್ರಸ್ಟ್ ಕಟ್ಟಡದಲ್ಲಿರುವ ಅಂತರ ರಾಷ್ಟ್ರೀಯ ಬೊಂಬೆ ಸಂಗ್ರಹಾಲಯ ಬಗೆ ಬಗೆ ವೇಷಭೂಷಣದ ಬೊಂಬೆಗಳಿಗೆ ಜಗತ್ಪ್ರಸಿದ್ಧ. ಇದು ದೇಶದ `ರಾಜಕೀಯ ವ್ಯಂಗ್ಯಚಿತ್ರ~ ಕ್ಷೇತ್ರದ ಪಿತಾಮಹ ಎಂದೇ ಖ್ಯಾತರಾದ ಕೆ.ಶಂಕರಪಿಳ್ಳೈ (1902- 1989) ಅವರ ಕನಸಿನ ಕೂಸು.

 

ತಮ್ಮ `ಪಂಚ್~ ವ್ಯಂಗ್ಯಚಿತ್ರ ವಾರಪತ್ರಿಕೆಯ ಮೂಲಕ ರಾಜಕಾರಣಿಗಳಿಗೆ `ಪಂಚ್~ ನೀಡುತ್ತಿದ್ದ ಪಿಳ್ಳೈ ಅವರಿಗೆ ಇಂತಹದ್ದೊಂದು ಸಂಗ್ರಹಾಲಯ ಸ್ಥಾಪನೆಗೆ ಪ್ರೇರಣೆ ಬಂದದ್ದು, ಬಹುಮಾನವಾಗಿ ಬಂದ ಕೇವಲ ಒಂದು ಬೊಂಬೆಯಿಂದ ಎಂದರೆ ನಿಮಗೆ ಅಚ್ಚರಿಯಾಗಬಹುದು.1950ರ ದಶಕದ ಆರಂಭದಲ್ಲಿ ಶಂಕರ್ ಅವರು ಆಯೋಜಿಸಿದ್ದ ಮಕ್ಕಳ ಸ್ಪರ್ಧೆಯ ವಿಜೇತರಿಗೆ ಹಂಗೇರಿಯ ರಾಯಭಾರಿ ತಮ್ಮ ದೇಶದ ಸುಂದರ ಬೊಂಬೆಯೊಂದನ್ನು ಬಹುಮಾನವಾಗಿ ಕೊಟ್ಟರು.ಆ ಬೊಂಬೆಯ ಸೌಂದರ್ಯಕ್ಕೆ ಶಂಕರ್ ಎಷ್ಟರ ಮಟ್ಟಿಗೆ ಮಾರುಹೋದರೆಂದರೆ ರಾಯಭಾರಿಯ ಅನುಮತಿ ಪಡೆದು ಅದನ್ನು ತಾವೇ ಇಟ್ಟುಕೊಂಡುಬಿಟ್ಟರು! ಅಷ್ಟೇ ಅಲ್ಲ ಆ ನಂತರ ಯಾವ ದೇಶಕ್ಕೆ ಹೋದರೂ ಅಲ್ಲಿಂದ ಬೊಂಬೆಗಳನ್ನು ಖರೀದಿಸಿ ತರತೊಡಗಿದರು.ಹೀಗೆ 500ಕ್ಕೂ ಹೆಚ್ಚು ಬೊಂಬೆಗಳು ಅವರ ಮಡಿಲು ಸೇರಿದಾಗ, ದೇಶದಾದ್ಯಂತ ಅವುಗಳನ್ನು ಪ್ರದರ್ಶನಕ್ಕೆ ಇಡುವ ಬಯಕೆ ಅವರಿಗೆ ಉಂಟಾಯಿತು. ಆದರೆ ಹೀಗೆ ಪ್ರದರ್ಶನಕ್ಕೆ ಪ್ಯಾಕ್ ಮಾಡಿ ತಂದ ಬೊಂಬೆಗಳನ್ನು ಬಿಚ್ಚುವುದು, ಬಳಿಕ ಮತ್ತೆ ತುಂಬುವುದು ಮಾಡತೊಡಗಿದಾಗ ಬಹುತೇಕ ಬೊಂಬೆಗಳ ಕೈಕಾಲುಗಳು ಮುರಿದವು.ತಲೆ ಎಗರಿತು. ವೇಷಭೂಷಣ ಕಳಚಿಬೀಳುತ್ತಿತ್ತು. ಇದರಿಂದ ತೀವ್ರ ನೊಂದುಕೊಂಡ  ಶಂಕರ್, ಒಮ್ಮೆ ದೆಹಲಿಯಲ್ಲಿ ಏರ್ಪಡಿಸಿದ್ದ ಪ್ರದರ್ಶನಕ್ಕೆ ಬಂದಿದ್ದ ಆಗಿನ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಅವರ ಪುತ್ರಿ ಇಂದಿರಾಗಾಂಧಿ ಅವರ ಬಳಿ ತಮ್ಮ ಅಳಲು ತೋಡಿಕೊಂಡರು.

 

ಆಗ `ನೀವ್ಯಾಕೆ ಶಾಶ್ವತವಾದ ಒಂದು ಬೊಂಬೆ ಸಂಗ್ರಹಾಲಯ ಸ್ಥಾಪಿಸಬಾರದು?~ ಎಂದು ಇಂದಿರಾ ಅವರು ಕೇಳಿದ್ದೇ ತಡ ಶಂಕರ್ ಅವರ ಮನಸ್ಸಿನಲ್ಲಿ ಅಂತಹದ್ದೊಂದು ಸಾಧ್ಯತೆ ಮೊಳಕೆಯೊಡೆದು, 1965ರಲ್ಲಿ ಕಾರ್ಯರೂಪಕ್ಕೆ ಬಂದೇಬಿಟ್ಟಿತು.ಹೀಗೆ 1000 ಬೊಂಬೆಗಳಿಂದ ಆರಂಭವಾದ ಈ ಸಂಗ್ರಹಾಲಯದಲ್ಲಿ ಇದೀಗ 80 ದೇಶಗಳ 6500 ಬೊಂಬೆಗಳ ಬೃಹತ್ ಸಂಗ್ರಹವೇ ಇದೆ. ಇವುಗಳಲ್ಲಿ 5 ಸಾವಿರ ಬೊಂಬೆಗಳು ಕೊಡುಗೆಯ ರೂಪದಲ್ಲೇ ಬಂದಿವೆ. ಮಗ್ಗುಲಲ್ಲೇ ಇರುವ ಕಾರ್ಯಾಗಾರದಲ್ಲಿ ಕುಶಲಕರ್ಮಿಗಳು ಪ್ರತಿ ಬೊಂಬೆಯನ್ನೂ ಬಹಳ ತಾದಾತ್ಮ್ಯದಿಂದ ಸಿದ್ಧಪಡಿಸುತ್ತಾರೆ.ಅವುಗಳ ಉಡುಪು, ಅಲಂಕಾರ, ಒಡವೆ ಎಲ್ಲದಕ್ಕೂ ನೈಜತೆ ಮತ್ತು ಸಂಸ್ಕೃತಿಗೆ ಪ್ರಾಶಸ್ತ್ಯ ಕೊಡಲಾಗುತ್ತದೆ. ಹಬ್ಬದುಡುಗೆ ಧರಿಸಿದ ಜಪಾನೀಯರು, ಬ್ರಿಟನ್ ರಾಣಿಯ ಸಂಗ್ರಹದಲ್ಲಿ ಇರುವ ಅತ್ಯಪರೂಪದ ಬೊಂಬೆಗಳ ನಕಲುಗಳು, ಹಂಗೇರಿಯ ನರ್ತಕಿಯರು, ಸ್ಪೇನ್‌ನ ಪ್ಲಮೆನ್ಕೊರಿ ನೃತ್ಯಗಾತಿಯರು ಮತ್ತು ಶ್ರಿಲಂಕಾದ ಕ್ಯಾಂಡಿಪೆಹರಾ ಬೊಂಬೆಗಳು ಸಹ ಇಲ್ಲಿವೆ.
ಟಿಬೆಟನ್ ದೃಶ್ಯ ಕಾವ್ಯ

ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿರುವ `ಲಾಸೆಲ್ ಡಾಲ್ ಮ್ಯೂಸಿಯಂ~ ಟಿಬೆಟ್‌ನ ಸಂಸ್ಕೃತಿಯನ್ನು ಬಿಂಬಿಸುವ ಸುಂದರ ದೃಶ್ಯಕಾವ್ಯ. ಟಿಬೆಟ್‌ನ ವಿವಿಧ ಪ್ರಾಂತ್ಯಗಳ ದೈನಂದಿನ ಜನಜೀವನ ಮತ್ತು ಧಾರ್ಮಿಕ ಹಬ್ಬಗಳು ಬಿಕ್ಕುಗಳ ಕೈಯಲ್ಲಿ ಇಲ್ಲಿ ಕಲೆಗಳಾಗಿ ಅರಳಿ ನಿಂತಿವೆ.

 

 ಬರೀ ಆಟಿಕೆಗಳಲ್ಲ...

ಜಪಾನೀಯರಿಗೆ ಬೊಂಬೆಯೆಂದರೆ ಬರೀ ಆಟಿಕೆಯ ವಸ್ತುವಲ್ಲ, ಅದೊಂದು ಪ್ರದರ್ಶನ ಕಲೆ. ಧಾರ್ಮಿಕ, ಜನಪದ, ಆಧ್ಯಾತ್ಮಿಕ ಚಿಂತನೆಯ ಸಾಕಾರ ರೂಪ. ಅದಕ್ಕೇ ಜೊತೆಯಲ್ಲಿ ಮಕ್ಕಳಿದ್ದಾಗಷ್ಟೇ ಅವರು ಬೊಂಬೆ ಮ್ಯೂಸಿಯಂಗೆ ಹೋಗುವವರಲ್ಲ. ಹಿರಿಯರಿಗೂ ಅದೊಂದು ಆಗಾಗ್ಗೆ ಭೇಟಿ ನೀಡುವ ಆಪ್ತವಾದ ತಾಣ.

 

ಅಂತಹ ದೇಶದಲ್ಲಿರುವ `ಯೊಕೊಹಾಮ ಮ್ಯೂಜಿಯಂ~ನಲ್ಲಿ 141 ದೇಶಗಳ ಜನಪದ ಲೋಕವೇ ಇದೆ. ವಿಭಿನ್ನ ಸಂಸ್ಕೃತಿಯನ್ನು ಬಿಂಬಿಸುವ ವಿದೇಶಿ ಬೊಂಬೆಗಳನ್ನು ಸೌಹಾರ್ದದ ಸಂಕೇತ ಎಂದೇ ಅವರು ಪರಿಗಣಿಸುತ್ತಾರೆ.ಸ್ವದೇಶಿ ಉಡುಪು ತೊಟ್ಟ 380 ಬೊಂಬೆಗಳ ಜೊತೆಗೆ ಪ್ರಪಂಚದ ವಿವಿಧ ಮೂಲೆಗಳ ಸಂಸ್ಕೃತಿಯನ್ನು ಬಿಂಬಿಸುವ 4000 ಬೊಂಬೆಗಳನ್ನು ಈ ಪುಟ್ಟ ಸಂಗ್ರಹಾಲಯ ಹೊಂದಿದೆ. ಯಮಶಿತ ಉದ್ಯಾನದ ಎಡಬದಿಯ ಕಾಲುದಾರಿಯಲ್ಲಿ ಕೊಂಚ ದೂರ ಸಾಗಿದರೆ ಸಿಗುವ ಈ ಸಂಗ್ರಹಾಲಯವನ್ನು ಸುತ್ತಿ ಬರಲು ಕೆಲವೇ ನಿಮಿಷ ಸಾಕು.

ಚರ್ಚ್ ಸಂಸ್ಕೃತಿ ಅನಾವರಣ
ಬಣ್ಣ ಬಣ್ಣದ ಬಟ್ಟೆ ತೊಟ್ಟು ನೋಡುಗರ ಚಿತ್ತ ಚಂಚಲಗೊಳಿಸುವ ಬೊಂಬೆಗಳನ್ನು ನೋಡಿದ್ದೀರಿ. ಆದರೆ ಸನ್ಯಾಸಿನಿಯರು, ಪಾದ್ರಿಗಳ ವೇಷ ತೊಟ್ಟ ಬೊಂಬೆಗಳ ಸಾಮ್ರಾಜ್ಯವೂ ಇದೆ ಎಂಬುದು ನಿಮಗೆ ಗೊತ್ತೇ?ಅವೆುರಿಕದ ಮಿಚಿಗನ್‌ನಲ್ಲಿರುವ `ನನ್ ಡಾಲ್ ಮ್ಯೂಜಿಯಂ~ ಅಂತಹ ಒಂದು ವಿಶೇಷ ಸಂಗ್ರಹಾಲಯ. ಇದರ ಹಿಂದಿನ ಶಕ್ತಿ ವ್ಯಾಲಿ ಮತ್ತು ಸ್ಯಾಲಿರಗಾಲ್‌ಸ್ಕಿ ಎಂಬ ದಂಪತಿ. 1945ರಲ್ಲಿ ಯುವತಿಯಾಗಿದ್ದ ಸ್ಯಾಲಿರಗಾಲ್‌ಸ್ಕಿಗೆ ಕ್ಯಾಥೊಲಿಕ್ ಚರ್ಚ್‌ನ ಸಂಪ್ರದಾಯವನ್ನು ಬೊಂಬೆಗಳಲ್ಲಿ ಹಿಡಿದಿಡುವ ಬಯಕೆ ಉಂಟಾಯಿತು.ಮದುವೆಯಾದ ಬಳಿಕ ಅವರ ಈ ಬಯಕೆಯ ಸಸಿಗೆ ಪತಿ ವ್ಯಾಲಿ ನೀರೆರೆದು ಹೆಮ್ಮರವಾಗಿಸಿದರು. ಹೀಗೆ ಸಿದ್ಧಗೊಂಡ ಕ್ರೈಸ್ತ ಪಾದ್ರಿಗಳು, ಸನ್ಯಾಸಿನಿಯರ 500ಕ್ಕೂ ಹೆಚ್ಚು ಬೊಂಬೆಗಳು ಬಳಿಕ ಮಿಚಿಗನ್ ಸಂಗ್ರಹಾಲಯವನ್ನು ಸೇರಿದವು.ಆವರೆಗೂ ಜತನವಾಗಿ ಕಾಯ್ದುಕೊಂಡಿದ್ದ ಈ ಸುಂದರ ಬೊಂಬೆಗಳನ್ನು ಸಂಗ್ರಹಾಲಯಕ್ಕೆ ಒಪ್ಪಿಸುವಾಗ ವ್ಯಾಲಿ ದಂಪತಿ ಹಾಕಿದ್ದು ಒಂದೇ ಷರತ್ತು. ಅದೆಂದರೆ ಯಾವುದೇ ಕಾರಣಕ್ಕೂ ಬೊಂಬೆ ನೋಡಲು ಬರುವವರಿಂದ ಪ್ರವೇಶ ಶುಲ್ಕ ವಸೂಲು ಮಾಡಬಾರದು, ಬಡವರು ಬಲ್ಲಿದರೆನ್ನದೆ ಎಲ್ಲರಿಗೂ ಅವುಗಳನ್ನು ನೋಡುವ ಅವಕಾಶ ಲಭ್ಯವಾಗಬೇಕು ಎಂಬುದಾಗಿತ್ತು.ಬಳಿಕವೂ ಸಂಗ್ರಹಾಲಯದೊಟ್ಟಿಗೆ ದಂಪತಿ ನಿರಂತರ ಸಂಪರ್ಕ ಹೊಂದಿದ್ದರು. 1995ರಲ್ಲಿ ವ್ಯಾಲಿ ನಿಧನರಾದ ಬಳಿಕ ಸ್ಯಾಲಿರಗಾಲ್‌ಸ್ಕಿ ತಪ್ಪದೇ ಭೇಟಿ ನೀಡುತ್ತಾ, ಬೆಲೆ ಕಟ್ಟಲಾಗದ ತಮ್ಮ ಅಮೂಲ್ಯ ಕೊಡುಗೆಯ ಮೇಲ್ವಿಚಾರಣೆ ಮಾಡುತ್ತಿದ್ದಾರೆ. 

ಹೊಚ್ಚ ಹೊಸತು

ಅತಿ ಹೆಚ್ಚು ಆಧುನಿಕ ಬೊಂಬೆಗಳು ಇರುವುದು ಕೆನಡಾದ ಹೆನ್ನಾ ಮ್ಯೂಜಿಯಮ್‌ನಲ್ಲಿ. ಈ ಸಂಗ್ರಹಾಲಯದ ಆಡಳಿತ ಮಂಡಳಿ 1900ನೇ ಇಸವಿಯಿಂದ ಈವರೆಗೆ 75 ಬೊಂಬೆ ತಯಾರಿಕಾ ಘಟಕಗಳಿಂದ ಸಾವಿರಾರು ಬೊಂಬೆಗಳನ್ನು ತಂದು ಇಲ್ಲಿ ಒಟ್ಟು ಮಾಡಿದೆ.

 

ಬಿಳಿ ನೆಲದ ಕಪ್ಪು ಹಾದಿ

ಅಮೆರಿಕದ ಫಿಲಡೆಲ್ಫಿಯಾದಲ್ಲಿರುವ ಬೊಂಬೆ ಸಂಗ್ರಹಾಲಯ ಒಂದು ಅಪರೂಪದ ತಾಣ. ತಲೆತಲಾಂತರದಿಂದ ನಿರಂತರವಾಗಿ ಶೋಷಣೆಗೆ ಒಳಗಾದ ಜನಾಂಗವೊಂದು ಮುಖ್ಯವಾಹಿನಿಗೆ ಬರುವ ಮುನ್ನ ಎದುರಿಸುವ ಸಾಮಾಜಿಕ ಸ್ಥಿತ್ಯಂತರಗಳು ಬೊಂಬೆಗಳ ರೂಪದಲ್ಲಿ ಇಲ್ಲಿ ಅನಾವರಣಗೊಂಡಿವೆ.

 

ಕಪ್ಪು ವರ್ಣೀಯರಾದ ಪರಮಾಣು ತಂತ್ರಜ್ಞೆ ಬಾರ್ಬರಾ ವೈಟ್‌ಮನ್ ತಮ್ಮ ಜನರ ಇತಿಹಾಸ ಮತ್ತು ಸಂಸ್ಕೃತಿಯನ್ನು ನೂರಾರು ಬೊಂಬೆಗಳಲ್ಲಿ ದಾಖಲಿಸುವ ಮೂಲಕ, ವರ್ಣಭೇದ ನೀತಿಯಿಂದ ಒಡಮೂಡಿದ ಅಂದಿನ ಕಾಲಘಟ್ಟದ ತವಕ,    ತಲ್ಲಣಗಳನ್ನು ಅತ್ಯಂತ ಆರ್ದ್ರವಾಗಿ ಸೆರೆಹಿಡಿದಿದ್ದಾರೆ.

 

`ಡಾರ್ಕ್ ಇಮೇಜಸ್~ ಎಂದೇ ಹೆಸರಾದ ಈ ಬೊಂಬೆಗಳು `ಸ್ವಾತಂತ್ರ್ಯ ಮತ್ತು ಘನತೆಗಾಗಿನ ಹೋರಾಟದ ಪ್ರತೀಕ. ಪ್ರತಿ ಬೊಂಬೆಯೂ ಕಪ್ಪು ವರ್ಣೀಯರ ಸತ್ಯಶೋಧನೆ ಮತ್ತು ಸಬಲೀಕರಣದ ಸಂಕೇತ~ ಎಂದು ಬಾರ್ಬರಾ ಹೇಳಿ ಕೊಂಡಿದ್ದಾರೆ. ಆ ಒಂದಿಡೀ ಜನಾಂಗದ ಇತಿಹಾಸ ಸಂಶೋಧನಾ ಕಾರ್ಯವೂ ಇಲ್ಲಿ ನಡೆಯುತ್ತಿದೆ.ನೋಡಿದಿರಾ! ದೇಶ ವಿದೇಶಗಳಲ್ಲಿ ಬೊಂಬೆಗಳ ಸಂಗ್ರಹದ ಬಗ್ಗೆ ಆಸಕ್ತಿ, ಅಭಿರುಚಿ ಎಷ್ಟರ ಮಟ್ಟಿಗೆ ಇದೆ ಎಂದು?

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry