ಶನಿವಾರ, ಫೆಬ್ರವರಿ 27, 2021
25 °C

ಬನ್ನಿ... ಜಳಕ ಮಾಡೋಣ

–ಸಹನಾ ಕಾಂತಬೈಲು Updated:

ಅಕ್ಷರ ಗಾತ್ರ : | |

ಬನ್ನಿ... ಜಳಕ ಮಾಡೋಣ

ಬಿ  ಸಿಲ ಝಳ ದಿನದಿಂದ ದಿನಕ್ಕೆ ಏರುತ್ತಿದೆ. ಉರಿ ಬಿಸಿಲಿಗೆ ಬೆಂದ ಮೈ–ಮನ ನೀರ ಸೆಲೆ ಅರಸುವುದು ಸಹಜ. ದಟ್ಟ ಕಾಡಿನಲ್ಲಿ ಮರಗಿಡಗಳ ನಡುವೆ ಹರಿವ ತಂಪಾದ ಜಲರಾಶಿಗೆ ಮೈಯೊಡ್ಡಿ ಜಳಕದ ಪುಳಕ ಅನುಭವಿಸುವ ಆಸೆಯೇ? ಹಾಗಿದ್ದರೆ ಮಡಿಕೇರಿಯ ಚೆಂಬು ಗ್ರಾಮಕ್ಕೆ ಬನ್ನಿ. ಇಲ್ಲಿನ ಉಂಬಳೆ ಜಲಪಾತದಲ್ಲಿ ಹನಿಹನಿಯಾಗಿ ಮುತ್ತಿನ ಮಳೆಯಂತೆ ಬೀಳುವ ಜಲಧಾರೆಗೆ ಮೈಯೊಡ್ಡಿ, ಮನಸೋ ಇಚ್ಛೆ ಸ್ನಾನ ಮಾಡಿ. ಮಂದಗಮನೆಯಾಗಿ ಹರಿವ ನದಿ ನೀರಿಗೆ ಇಳಿದು ಪರಸ್ಪರ ನೀರೆರಚಿ ಆಟವಾಡಿ. ದಣಿವಾದರೆ ಅಲ್ಲೇ ಇರುವ ಬಂಡೆಗಳ ಮೇಲೆ ವಿಶ್ರಮಿಸಿ.ಈಗ ಜಲಪಾತದಲ್ಲಿ ಮಳೆಗಾಲದ ಆರ್ಭಟ ಇಲ್ಲ. ನದಿ ಭೋರ್ಗರೆಯುವುದಿಲ್ಲ. ಬಂಡೆ ಜಾರುವ ಆತಂಕವಿಲ್ಲ. ಯಾವ ಹೆದರಿಕೆಯೂ ಇಲ್ಲದೆ ನೀರಾಟದ ಸುಖ ಅನುಭವಿಸಬಹುದು. ಬಿರು ಬಿಸಿಲ ದಿನಗಳಲ್ಲೂ ಇಲ್ಲಿ ನೀರಿರುತ್ತದೆ. ಇದು ಬೋರ್ ಹೊಡೆದರೆ ಸಮೀಪದಲ್ಲಿ ಅತ್ಯಾಡಿ ಎಂಬ ಇನ್ನೊಂದು ಸರ್ವಋತು ಜಲಪಾತವಿದೆ. ಅಲ್ಲೂ ಜಲಕ್ರೀಡೆ ಮುಂದುವರಿಸಬಹುದು. ಅದೃಷ್ಟ ಚೆನ್ನಾಗಿದ್ದರೆ ಬೇಸಿಗೆಯಲ್ಲೂ ಜಡಿಮಳೆಯಲ್ಲಿ ಮೀಯುವ ಭಾಗ್ಯ ನಿಮ್ಮದಾಗಬಹುದು. ಹೀಗೆ ಬನ್ನಿ: ಮಡಿಕೇರಿಯಿಂದ ಮಂಗಳೂರಿಗೆ ಹೋಗುವ ಹೆದ್ದಾರಿಯಲ್ಲಿ 28 ಕಿ.ಮೀ. ಕ್ರಮಿಸಿದಾಗ ಕಲ್ಲುಗುಂಡಿ ಎಂಬ ಪುಟ್ಟ ಊರು ಸಿಗುತ್ತದೆ. ಇಲ್ಲಿಂದ ಎಡಬದಿಗೆ ಕಚ್ಚಾ ರಸ್ತೆಯಲ್ಲಿ 11 ಕಿ.ಮೀ. ಸಾಗಿದರೆ ಉಂಬಳೆ ಜಲಪಾತ ಸಿಗುತ್ತದೆ. ಬಸ್ ಸೌಕರ್ಯವಿಲ್ಲ. ಕಾರು ಪ್ರಯಾಣವೂ ಈ ಮಾರ್ಗದಲ್ಲಿ ಕಷ್ಟ.ಕಲ್ಲುಗುಂಡಿಯಿಂದ ಜೀಪು ಮಾಡಿಕೊಂಡು ಬರಬೇಕು. ಜೀಪಿನ ಕುಲುಕಾಟದೊಂದಿಗೆ ದಾರಿಯುದ್ದಕ್ಕೂ ಕಂಡುಬರುವ ಗಗನಚುಂಬಿ ಮರಗಳು, ಸುಂದರ ಪರ್ವತ ಶ್ರೇಣಿಗಳು, ಝರಿ-ತೊರೆಗಳು ಮನಸ್ಸಿಗೆ ಮುದ ನೀಡುತ್ತವೆ. ಸುತ್ತಮುತ್ತ ಹೋಟೆಲ್‌ಗಳಿಲ್ಲ. ಊಟ, ತಿಂಡಿಯನ್ನು ಪ್ರವಾಸಿಗರೇ ತರಬೇಕಾಗುತ್ತದೆ. ಈ ಸ್ಥಳದಲ್ಲಿ ಮೊಬೈಲ್ ಸಂಪರ್ಕ ಸಿಗುವುದಿಲ್ಲ. ಇಲ್ಲಿ ಇರುವಷ್ಟು ಹೊತ್ತು ಮೊಬೈಲ್ ರಿಂಗಣದಿಂದ ಪಾರಾಗಿ ಕಿವಿ–ಮಿದುಳನ್ನು ಪ್ರಶಾಂತವಾಗಿರಿಸಬಹುದು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.