ಬನ್ನೇರುಘಟ್ಟದಲ್ಲಿ ಆರಂಭವಾಗಲಿದೆ ಚಿರತೆ ಸಫಾರಿ

7

ಬನ್ನೇರುಘಟ್ಟದಲ್ಲಿ ಆರಂಭವಾಗಲಿದೆ ಚಿರತೆ ಸಫಾರಿ

Published:
Updated:

ಮೈಸೂರು:  ಬೆಂಗಳೂರು ಸಮೀಪವಿರುವ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ದೇಶದ ಮೊಟ್ಟ ಮೊದಲ ~ಚಿರತೆ ಸಫಾರಿ~ ಆರಂಭವಾಗಲಿದೆ.ರಾಜ್ಯದಲ್ಲಿ ಈಗಾಗಲೇ ಇರುವ ಹುಲಿ ಸಫಾರಿ, ಸಿಂಹ ಸಫಾರಿ ಮತ್ತು ಕರಡಿ ಸಫಾರಿಗಳ ಸಾಲಿಗೆ ಚಿರತೆ ಸಫಾರಿ ಸೇರಲಿದೆ. ಬನ್ನೇರುಘಟ್ಟಕ್ಕೆ ಬರುವ ಪ್ರವಾಸಿಗರು ಮತ್ತು ಅಧ್ಯಯನಶೀಲರಿಗೆ ಚಿರತೆಗಳ ಕುರಿತು ಹೆಚ್ಚಿನ ಮಾಹಿತಿ ಮತ್ತು ಸಂಶೋಧನೆಗೆ ಒತ್ತು ನೀಡುವ ಉದ್ದೇಶದಿಂದ ಈ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ.ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಚಿರತೆ ಸಫಾರಿ ಆರಂಭಿಸಲು ಕರ್ನಾಟಕ ಮೃಗಾಲಯ ಪ್ರಾಧಿಕಾರವು ಯೋಜನೆ ರೂಪಿಸಿದೆ.~ರಾಜ್ಯದ ಮೈಸೂರು ಮತ್ತು ಬೇರೆ ಮೃಗಾಲಯಗಳಲ್ಲಿ ಚಿರತೆಗಳಿವೆ. ಅದರಲ್ಲೂ ಮೈಸೂರು ಮೃಗಾಲಯದಲ್ಲಿ ಜಾಗ್ವಾರ್ ಮತ್ತು ಚಿರತೆ ಎರಡೂ ಇವೆ. ರಾಜ್ಯದ ಅರಣ್ಯಗಳಲ್ಲಿಯೂ ಇವುಗಳು ಸಾಕಷ್ಟು ಸಂಖ್ಯೆಯಲ್ಲಿವೆ.ಈಗಾಗಲೇ ಪ್ರಸ್ತಾವ ಸಿದ್ಧವಾಗಿದ್ದು, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಆಡಳಿತ ಮಂಡಳಿಯಲ್ಲಿ ಚರ್ಚೆಯೂ ನಡೆದಿದೆ. ಅಕ್ಟೋಬರ್ 9ರಂದು ನಡೆಯಲಿರುವ ಸಭೆಯಲ್ಲಿಯೂ ಚರ್ಚೆ ನಡೆಯುವ ನಿರೀಕ್ಷೆಯಿದೆ. ಬನ್ನೇರುಘಟ್ಟ ಉದ್ಯಾನದ ಅಭಿವೃದ್ಧಿಯ ಮಾಸ್ಟರ್ ಪ್ಲ್ಯಾನ್‌ನಲ್ಲಿಯೂ ಪ್ರಸ್ತಾಪವಿದೆ~ ಎಂದು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ. ನಂಜುಂಡಸ್ವಾಮಿ ~ಪ್ರಜಾವಾಣಿ~ಗೆ ತಿಳಿಸಿದ್ದಾರೆ.ಬನ್ನೇರುಘಟ್ಟ ಉದ್ಯಾನದಲ್ಲಿ ಇರುವ ಒಟ್ಟು ಪ್ರದೇಶದ ಕಾಲು ಭಾಗ ಖಾಲಿಯಾಗಿದ್ದು, ಅಲ್ಲಿಯೇ ಚಿರತೆ ಪಾರ್ಕ್ ನಿರ್ಮಿಸಲಾಗುವುದು. ಸುತ್ತಲೂ ರಕ್ಷಣಾ ಗೋಡೆ, ಚಿರತೆಗಳಿಗೆ ವಾಸಸ್ಥಾನದ ಆವರಣ, ಸುರಕ್ಷತೆ, ರಸ್ತೆಗಳ ನಿರ್ಮಾಣ ಮಾಡಲಾಗುತ್ತದೆ.ಮೈಸೂರು ಸೇರಿದಂತೆ ರಾಜ್ಯದ ಹಲವೆಡೆ ಚಿರತೆಗಳು ಆಹಾರ ಅರಸಿ ನುಗ್ಗುತ್ತಿವೆ. ಇದರಿಂದ ಮಾನವ ಮತ್ತು ಚಿರತೆಗಳ ಸಂಘರ್ಷಗಳು ಬಹಳಷ್ಟು ವರದಿಯಾಗುತ್ತಿವೆ.  ಮೈಸೂರು ವಲಯದಲ್ಲಿಯೇ ಕಳೆದ ಒಂದು ವರ್ಷದಲ್ಲಿ ಇಂತಹ 11 ಪ್ರಕರಣಗಳು ನಡೆದಿವೆ. ಚಿರತೆಗಳು ಮನುಷ್ಯರನ್ನು ತಿನ್ನುವುದಿಲ್ಲ. ಆದರೆ, ಅಪಾಯ ಎದುರಾದಾಗ ಮಾತ್ರ ತಿರುಗಿ ದಾಳಿ ಮಾಡುತ್ತವೆ. ಆದ್ದರಿಂದ ಇವುಗಳ ಕುರಿತು ತಿಳಿವಳಿಕೆ ಮೂಡಿಸಲೂ ಚಿರತೆ ಸಫಾರಿ ಸಹಕಾರಿಯಾಗುತ್ತದೆ. ಬಳ್ಳಾರಿ ಜಿಲ್ಲೆಯ ದರೋಜಿಯಲ್ಲಿ ಕರಡಿಧಾಮ, ಶಿವಮೊಗ್ಗ ಜಿಲ್ಲೆಯ ತಾವರೆಕೊಪ್ಪದಲ್ಲಿ ಸಿಂಹಧಾಮ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪಿಲಿಕುಳದಲ್ಲಿ ಹುಲಿ ನಿಸರ್ಗಧಾಮ ಇದೆ. ಬನ್ನೇರುಘಟ್ಟದಲ್ಲಿಯೂ ಹುಲಿ ಮತ್ತಿತರ ವನ್ಯಪ್ರಾಣಿಗಳನ್ನು ನೋಡುವ ಅವಕಾಶ ಇದೆ. ಚಿರತೆ ಸಫಾರಿ ಆರಂಭವಾದರೆ  ವನ್ಯಜೀವಿ ಅಧ್ಯಯನ ಮಾಡುವ ಮತ್ತು ಆಸಕ್ತರಿಗೆ ಉಳಿದ ಪ್ರಾಣಿಗಳ ಜೊತೆಗೆ ಚಿರತೆಗಳ ಅಧ್ಯಯನ ಮಾಡುವ ಅವಕಾಶವೂ ಸಿಗುತ್ತದೆ.~ರಾಷ್ಟ್ರೀಯ ಹುಲಿ ಅಭಯಾರಣ್ಯದ ಹೊರಗಿನ ಚಟುವಟಿಕೆ ಇದಾಗಿದ್ದು, ಜೀವವಿಜ್ಞಾನ ಅಧ್ಯಯನ ಪಾರ್ಕ್ ಇದಾಗಲಿದೆ. ಆದ್ದರಿಂದ ಸಫಾರಿ ನಿಷೇಧಕ್ಕೆ ಸುಪ್ರೀಂ ಕೋರ್ಟ್ ನೀಡಿರುವ ಆಜ್ಞೆಯು ನಮಗೆ ಅನ್ವಯಿಸುವುದಿಲ್ಲ. ಇದರಿಂದ ಚಿರತೆಗಳ ಕುರಿತು ನಡೆಯಬೇಕಾಗಿರುವ ಅಧ್ಯಯನಕ್ಕೆ ಹೆಚ್ಚಿನ ಅವಕಾಶ ಸಿಗಲಿದೆ~ ಎಂದು ನಂಜುಂಡಸ್ವಾಮಿ ಸ್ಪಷ್ಟಪಡಿಸುತ್ತಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry