ಬನ್‌ಝಾಕ್ರಿ ಜಲಧಾರೆ

7

ಬನ್‌ಝಾಕ್ರಿ ಜಲಧಾರೆ

Published:
Updated:
ಬನ್‌ಝಾಕ್ರಿ ಜಲಧಾರೆ

ಒತ್ತೊತ್ತು ಹಸಿರು ಪೊದೆ; ನಡುವೆ ಬೆಳ್ಳನೆ ಹರಿವ ನೀರಿನ ಬಳುಕು; ಅದನ್ನು ನೋಡುತ್ತಿದ್ದರೆ ಕಣ್ಣಿಗೆ ಹಿತ- ಮನಸ್ಸಿಗೂ ಮುದ. ಅದು ಬನ್‌ಝಾಕ್ರಿ ಜಲಪಾತ. ಇರುವುದು ಸಿಕ್ಕಿಂ ರಾಜ್ಯದಲ್ಲಿ.ಭಾರತದ ಈಶಾನ್ಯ ಭಾಗದಲ್ಲಿ ಇರುವ ಸಿಕ್ಕಿಂ ರಾಜ್ಯ ಹಸಿರಿನಿಂದ ಭರ್ತಿಯಾದ ಪ್ರದೇಶ. ಈ ಹಸಿರ ಪ್ರದೇಶದಲ್ಲಿ ಪ್ರವಾಸಿಗರು ನೋಡಿ ಮೈಮರೆಯಲು ಸಾಕಷ್ಟು ಜಾಗಗಳಿವೆ. ಅಂಥ ಜಾಗಗಳಲ್ಲಿ ಬನ್‌ಝಾಕ್ರಿ ಜಲಪಾತವೂ ಒಂದು.ರಾಜಧಾನಿ ಗ್ಯಾಂಗ್‌ಟಾಕ್‌ನಿಂದ ನಾಲ್ಕು ಕಿ.ಮೀ. ದೂರದಲ್ಲಿ ಇರುವ ರಂಕಾ ಪ್ರದೇಶದಲ್ಲಿ ಈ ಜಲಪಾತವಿದೆ. ಇಲ್ಲಿ 2006ರಲ್ಲಿ ಮೈಕ್ರೋ ಹೈಡ್ರೋ ಎಲೆಕ್ಟ್ರಿಕ್ ಪ್ರಾಜೆಕ್ಟ್ ಆರಂಭವಾಗಿದ್ದು, ವಿದ್ಯುಚ್ಛಕ್ತಿ ಉತ್ಪಾದನೆ ನಡೆಯುತ್ತಿದೆ.ದಟ್ಟ ಕಾಡಿನ ನಡುವೆ ಜಲಪಾತವನ್ನು ಒಳಗೊಂಡ ಎರಡು ಎಕರೆ ಜಾಗದಲ್ಲಿ ಉದ್ಯಾನವನ ನಿರ್ಮಿಸಲಾಗಿದೆ. ಇದೇ ಜಾಗದಲ್ಲಿ ಸಿಕ್ಕಿಂ ಆದಿವಾಸಿಗಳಾದ ಝಾಕ್ರಿಗಳ ಸಂಸ್ಕೃತಿಗೆ ಕನ್ನಡಿ ಹಿಡಿಯುವ ವಸ್ತು ಸಂಗ್ರಹಾಲಯ ಮತ್ತು ಆ ಜನರ ಪ್ರತಿಕೃತಿಗಳೂ ಇವೆ.ವಿಶಿಷ್ಟ ಜಾತಿಯ, ವಿವಿಧ ಆಕಾರದ ಹೂವುಗಳು ಕೂಡ ಉದ್ಯಾನವನದ ಆಕರ್ಷಣೆಗಳಲ್ಲಿ ಒಂದು. ಡ್ರ್ಯಾಗನ್ ಪ್ರತಿಕೃತಿ ಇರುವ ಕೊಳ ಮಕ್ಕಳಿಗೆ ಇಷ್ಟವಾದರೆ, ಮೀನಿಗೆ ಗಾಳ ಹಾಕುವ ತಾಣಗಳು ಎಲ್ಲ ವರ್ಗದವರನ್ನೂ ಸೆಳೆಯುತ್ತವೆ.ಸಮುದ್ರ ತೀರದಿಂದ 7000 ಅಡಿ ಎತ್ತರದಲ್ಲಿ ಇರುವ ಈ ಜಾಗದಲ್ಲಿ ವರ್ಷದ ಎಂಟು ತಿಂಗಳು ಮಳೆ ಮಳೆ. ಅದರ ಪರಿಣಾಮದಿಂದಲೇ ಹಸಿರಿಲ್ಲಿ ಮೈಮುರಿದುಕೊಂಡು ಬಿದ್ದಿದೆ.ಪ್ರವಾಸಿಗರಿಗಾಗಿ ಇಲ್ಲಿ ಆಧುನಿಕ ಶೈಲಿಯ ಕೆಫೆಟೇರಿಯಾ ಇದೆ. ಕಾಫಿ ಹೀರುತ್ತಾ ಪ್ರಕೃತಿಯ ಸಹಜ ಸೌಂದರ್ಯ ಸವಿಯುವುದು ಅವಿಸ್ಮರಣೀಯ ಅನುಭವ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry