ಸೋಮವಾರ, ಅಕ್ಟೋಬರ್ 14, 2019
24 °C

ಬಯಕೆ ತೋಟದ ಬೇಲಿಯಾಚೆ ತೇಲಿಹೋಯಿತು ಸಂಗೀತ

Published:
Updated:

ಎಫ್‌ಎಂ ರೇಡಿಯೋದಲ್ಲಿ ಕೇಳಿಬರುವ ಕನ್ನಡ ಹಾಡುಗಳಲ್ಲಿ ನಿರಂತರವಾಗಿ ಕಾಡುವ ಕಂಠ ಸೋನು ನಿಗಮ್. ಒಂದು ದೇಶದಲ್ಲಿ ತಿಂಡಿ ತಿಂದು, ಅದೇ ದಿನ ರಾತ್ರಿ ಹೊತ್ತಿಗೆ ಇನ್ನೊಂದು ದೇಶದ ಸ್ಟುಡಿಯೋ ತಲುಪಿ, ಅಹೋರಾತ್ರಿ ಕೆಲಸ ಮಾಡುವಷ್ಟು ಅವರು ಬ್ಯುಸಿಯಾಗಲು ಕಾರಣವಿದೆ.ಅವರ ಮೇಲೆ ಇತ್ತೀಚೆಗೆ ಬಿದ್ದದ್ದು ಬ್ರಿಟ್ನಿ ಸ್ಪಿಯರ್ಸ್ ಕಣ್ಣು. ಬ್ರಿಟ್ನಿ ಮೋಹಿಸಿದ್ದು ಸೋನು ಕಂಠವನ್ನಷ್ಟೆ! ಸ್ವೀಡನ್‌ನ ಡಿಜೆ ಟಿಮ್ ಬರ್ಗ್ ಜೊತೆಗೂ ಈಗಾಗಲೇ ಒಡಂಬಡಿಕೆ ಮಾಡಿಕೊಂಡಿರುವ ಸೋನು, ಪಾಪ್ ತಾರೆ ಸ್ಪಿಯರ್ಸ್ ಆಲ್ಬಂನಲ್ಲಿದ್ದ `ಐ ವಾನ್ನ ಗೋ...~ ಎಂಬ ಹಾಡಿಗೆ ದನಿಯಾದರು.ಅಂತರರಾಷ್ಟ್ರೀಯ ಮಟ್ಟದ ಜನಪ್ರಿಯ ಗಾಯಕ, ಗಾಯಕಿಯರು ಭಾರತದ ಕಡೆ ಮುಖ ಮಾಡಲು ಬಲವಾದ ಕಾರಣವೇನಾದರೂ ಇದೆಯೇ ಎಂಬುದು ಪ್ರಶ್ನೆ. ಸೋನು ಅವರಲ್ಲಿ ಅದಕ್ಕೆ ಉತ್ತರವಿದೆ. ಅವರೆನ್ನುತ್ತಾರೆ: `ನಮ್ಮ ದೇಶದಲ್ಲಿನ ಸಂಗೀತ ಸಂಪತ್ತಿನ ಅರಿವು ಅವರಿಗಾಗಿದೆ.ಸಿನಿಮಾ ಮಾರುಕಟ್ಟೆ ಬೆಳೆದಂತೆ ಹಿಂದಿ ಹಾಡುಗಳು ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾ, ಸ್ವೀಡನ್ ಎಲ್ಲೆಡೆ ವ್ಯಾಪಕವಾಗಿ ಕೇಳುತ್ತಿವೆ. ಪರದೇಶಿ ಚಿತ್ರಗಳಿಗೆ ಹಾಡುಗಳಿಗೆ ಜಾಗವಿರುವುದಿಲ್ಲ. ಆದರೆ, ಅಲ್ಲೇನಿದ್ದರೂ ಆಲ್ಬಂಗಳದ್ದೇ ಭರಾಟೆ. ನಾವು ನಮ್ಮ ಏಕತಾನತೆಯ ಬಗ್ಗೆ ಮಾತನಾಡುತ್ತೇವೆ. ಅವರು ಅವರ ಸಂಗೀತ ಒಂದೇ ಥರ ಆಯಿತಲ್ಲ ಎಂದು ತಲೆಕೆಡಿಸಿಕೊಂಡಿದ್ದಾರೆ. ಅದಕ್ಕೇ ಅವರಿಗೆಲ್ಲಾ ಭಾರತೀಯರ ಕಂಠ, ರೆಹಮಾನ್ ತರಹದ ಸಂಗೀತ ನಿರ್ದೇಶಕರು ಬೇಕೆನ್ನಿಸುತ್ತಿರುವುದು. ನಮ್ಮ ಜಾನಪದಕ್ಕೀಗ ವಿದೇಶಿ ಮಾರುಕಟ್ಟೆ ಇದೆ ಎಂದು ನಿಸ್ಸಂದೇಹವಾಗಿ ಹೇಳಬಹುದಾದ ಬೆಳವಣಿಗೆ ಇದು~.`ರಾ.ಒನ್~ ಹಿಂದಿ ಚಿತ್ರದಲ್ಲಿ ಜನಪ್ರಿಯ ಪಾಪ್ ಗಾಯಕ ಅಕಾನ್ `ಚಮ್ಮಕ್ ಚಲ್ಲೋ~ ಹಾಡಿದ ಮೇಲೆ ಅವರ ಹೆಸರು ಇಲ್ಲೂ ಅನೇಕರಿಗೆ ಗೊತ್ತಾಯಿತು. ಅದರ ಪರಿಣಾಮವೇ 2007ರಲ್ಲಿ ಅವರು ಬಿಡುಗಡೆ ಮಾಡಿದ ಆಲ್ಬಂಗೆ ಈಗಲೂ ಬೇಡಿಕೆ.`ಭಾರತದಲ್ಲಿ ಅಕಾನ್ ಮಾರುಕಟ್ಟೆ ಕಂಡುಕೊಂಡ ಮೇಲೆ ಅನೇಕ ಪಾಶ್ಚಾತ್ಯ ಗಾಯಕರು, ಸಂಗೀತಗಾರರು ಈ ಕಡೆ ಮುಖ ಮಾಡುತ್ತಿದ್ದಾರೆ. ಜನಪ್ರಿಯ ಸಂಗೀತಕ್ಕೆ ನಮ್ಮ ದೇಶವೀಗ ದೊಡ್ಡ ಮಾರುಕಟ್ಟೆ. ಅದಕ್ಕೇ ಇಲ್ಲಿ ಬ್ರಿಟಿಷ್‌ನ `ದಿ ಎಕ್ಸ್ ಫ್ಯಾಕ್ಟರ್ ಶೋ~ನ ಭಾರತೀಯ ಶೈಲಿಯನ್ನು ಬಿಡುಗಡೆ ಮಾಡುತ್ತಿರುವುದು.ಇಂಡಿಯನ್ ಐಡಲ್‌ನಂಥ ಕಾರ್ಯಕ್ರಮಗಳು ಕೂಡ ಪಾಶ್ಚಾತ್ಯ ಪ್ರಭಾವಕ್ಕೆ ಒಳಪಟ್ಟಂಥವೇ~ ಎನ್ನುವ ಸೋನು ತಮ್ಮ ನಾಲ್ಕು ವರ್ಷದ ಮಗ ನೆವಾನ್ ಬಗ್ಗೆ ಈಗಲೇ ತಲೆಕೆಡಿಸಿಕೊಳ್ಳುತ್ತಿಲ್ಲ. ತಮಿಳಿನಲ್ಲಿ ಧನುಷ್ ಹಾಡಿರುವ `ಕೊಲವೆರಿ ಡಿ~ಯ ಇಂಗ್ಲಿಷ್ ಶೈಲಿಯನ್ನು ನೆವಾನ್ ಹಾಡಿದ್ದು ವಯೋಸಹಜ ಕುತೂಹಲವಷ್ಟೇ ಎನ್ನುವ ಸೋನು, ಮಗನಿಗೆ ಈಗಲೇ ಸಂಗೀತ ಹೇಳಿಕೊಡುವ ಗೊಡವೆಗೆ ಹೋಗಿಲ್ಲವಂತೆ.ಅಂದಹಾಗೆ, ಹರಿಕೃಷ್ಣ, ಮನೋಮೂರ್ತಿ ಸಂಗೀತ ಸಂಯೋಜನೆ, ಜಯಂತ ಕಾಯ್ಕಿಣಿ ಸಾಹಿತ್ಯವೆಂದರೆ ಈಗಲೂ ಸೋನು ಪುಳಕಿತರಾಗುತ್ತಾರೆ. ಯಾವ ದೇಶದಲ್ಲೇ ಇದ್ದರೂ ಅಲ್ಲೇ ಟ್ಯೂನ್ ಕೇಳಿಸಿಕೊಂಡು ಹಾಡುತ್ತಾರೆ. ಅವರಿಗೆ ಇಷ್ಟವಾದ ಕನ್ನಡದ ಹಾಡು `ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ~.ಮೊನ್ನೆ ವಿದೇಶದಲ್ಲೂ ಅವರು ಆ ಹಾಡನ್ನು ಗುನುಗಿದಾಗ ಯಾರೋ ಅಭಿಮಾನಿ ಅದು ಯಾವ ಭಾಷೆಯದ್ದು ಎಂದು ಕೇಳಿದರಂತೆ. `ಕನ್ನಡ~ ಎಂದು ಹೇಳಿದ ಮೇಲೆ ಇನ್ನೂ ಕೆಲವು ಹಾಡುಗಳನ್ನು ಹಾಡಿ ಎಂದಾಗ ಸೋನು ದಂಗಾದದ್ದೂ ಉಂಟು. ಹಿಂದಿ ಗಾಯಕನಿಂದ ಕನ್ನಡವೂ ಕಡಲಾಚೆ ಹೋದದ್ದು ಹೀಗೆ.ಸಂಗೀತ ಹೇಗೆ ಜಾಗತಿಕವಾಗುತ್ತಿದೆ ಎಂಬುದಕ್ಕೆ ಸೋನು ಅನುಭವ ಕನ್ನಡಿ ಹಿಡಿಯುತ್ತದಲ್ಲವೇ?

Post Comments (+)