ಬುಧವಾರ, ಮಾರ್ಚ್ 3, 2021
30 °C

ಬಯಲಾಗುತ್ತಿದೆ ಭವಿಷ್ಯ....

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಯಲಾಗುತ್ತಿದೆ ಭವಿಷ್ಯ....

ನವದೆಹಲಿ (ಪಿಟಿಐ): ಇಡೀ ದೇಶವೇ ಕುತೂಹಲದಿಂದ ಎದುರು ನೋಡುತ್ತಿದ್ದ ಹದಿನಾರನೇ ಲೋಕಸಭಾ ಚುನಾವಣೆಗೆ ಒಂಬತ್ತು ಹಂತಗಳಲ್ಲಿ ನಡೆದ ಮತ­ದಾನದ ಎಣಿಕೆಯ ಕಾರ್ಯವು ಶುಕ್ರವಾರ ಬೆಳಿಗ್ಗೆ 8 ಗಂಟೆಯಿಂದ ದೇಶದಾದ್ಯಂತ ಆರಂಭಗೊಂಡಿದೆ.ಇನ್ನು ಕೆಲವೇ ಗಂಟೆಗಳ ಅವಧಿಯಲ್ಲಿ ದೇಶದ ಅಧಿ­ಕಾರದ ಚುಕ್ಕಾಣಿ ಹಿಡಿ­ಯುವವರು ಯಾರು ಎಂಬುದು ಸ್ಪಷ್ಟಗೊಳ್ಳಲಿದೆ.

ದೇಶದಾದ್ಯಂತ 989 ಕೇಂದ್ರಗಳಲ್ಲಿ ಬೆಳಿಗ್ಗೆ 8ಕ್ಕೆ ಮತ ಎಣಿಕೆ ಆರಂಭಗೊಂಡಿದ್ದು, ಬಹುತೇಕ ಮಧ್ಯಾಹ್ನದ ಹೊತ್ತಿಗೆ ಎಲ್ಲಾ ಕ್ಷೇತ್ರಗಳ ಫಲಿತಾಂಶ ಹೊರಬೀಳಲಿದೆ. ಸಂಜೆ 5ರ ಹೊತ್ತಿಗೆ ಸಂಪೂರ್ಣ ಚಿತ್ರಣ ಲಭಿಸಲಿದೆ.

543 ಕ್ಷೇತ್ರಗಳಲ್ಲಿ  8251 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಬಹುತೇಕ ಮತಗಟ್ಟೆ ಸಮೀಪ ಸಮೀಕ್ಷೆಗಳು ಬಿಜೆಪಿ ಅತ್ಯಧಿಕ ಸ್ಥಾನಗಳನ್ನು ಗಳಿಸಲಿದೆ ಎಂದು ಅಂದಾಜಿಸಿವೆ.

ಮೊದಲಿಗೆ ಅಂಚೆ ಪತ್ರದ ಎಣಿಕೆ: ಚುನಾವಣಾ ಆಯೋಗದ ನಿರ್ದೇಶ­ನದಂತೆ ಮೊದಲಿಗೆ ಅಂಚೆ ಮತಪತ್ರಗಳ ಎಣಿಕೆ ನಡೆದು ನಂತರ ವಿದ್ಯು­ನ್ಮಾನ ಮತಯಂತ್ರಗಳಲ್ಲಿ ದಾಖಲಾಗಿ­ರುವ ಮತಗಳ ಎಣಿಕೆ ಕಾರ್ಯ ಆರಂಭವಾಗಲಿದೆ.

ಮತಯಂತ್ರದ ದತ್ತಾಂಶ ಸಂಗ್ರಹ ಕೋಶವನ್ನು ಎಣಿಕೆ ಕೇಂದ್ರದ ಹಿರಿಯ ಅಧಿಕಾರಿಗಳು, ಅಭ್ಯರ್ಥಿಗಳ ಏಜೆಂಟರ ಸಮ್ಮುಖದಲ್ಲಿ ತೆರೆದು ಎಣಿಕೆ ಮಾಡಲಾಗುತ್ತದೆ.

ಚುನಾವಣಾ ಫಲಿತಾಂಶ ಸಂಪೂರ್ಣ­ವಾಗಿ ಹೊರಬಿದ್ದ ಬಳಿಕ ಚುನಾವಣಾ ಆಯೋಗವು ಜಯಗಳಿಸಿದ ಅಭ್ಯರ್ಥಿಗಳ ಪಟ್ಟಿಯ ಅಧಿಸೂಚನೆ ಹೊರಡಿಸಲಿದೆ. ಇದು ನಂತರ 16ನೇ ಲೋಕಸಭೆ ಅಸ್ತಿತ್ವಗೊಳ್ಳಲು ಚಾಲನೆ ನೀಡಲಿದೆ.

2014ರ ಸಾರ್ವತ್ರಿಕ ಚುನಾವಣೆ­ಯಲ್ಲಿ ಶೇ 66.38­ರಷ್ಟು ಮತದಾನ ನಡೆದಿದ್ದು, ಇದು ಸಾರ್ವ­ಕಾಲಿಕ ದಾಖಲೆ ಆಗಿದೆ. ಈ ಸಾರಿ 80.14 ಕೋಟಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.