ಬುಧವಾರ, ಮಾರ್ಚ್ 3, 2021
25 °C
ಹೊಳಲ್ಕೆರೆ ತಾಲ್ಲೂಕು ದಾಸಯ್ಯನ ಹಟ್ಟಿಯಲ್ಲಿ 4 ಎಕರೆ ಬೆಳೆ, ಹೊಸ ಪ್ರಯೋಗಕ್ಕೆ ಮುಂದಾದ ರೈತರು

ಬಯಲುಸೀಮೆಗೂ ಕಾಲಿಟ್ಟ ಶುಂಠಿ

‌ಸಾಂತೇನಹಳ್ಳಿ ಕಾಂತರಾಜ್‌ Updated:

ಅಕ್ಷರ ಗಾತ್ರ : | |

ಬಯಲುಸೀಮೆಗೂ ಕಾಲಿಟ್ಟ ಶುಂಠಿ

ಹೊಳಲ್ಕೆರೆ: ಶಿವಮೊಗ್ಗ, ಚಿಕ್ಕ ಮಗಳೂರು, ಹಾಸನ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತಿದ್ದ ಶುಂಠಿ ಈಗ ಬಯಲುಸೀಮೆಗೂ ಕಾಲಿಟ್ಟಿದೆ. ತಾಲ್ಲೂಕಿನ ದಾಸಯ್ಯನ ಹಟ್ಟಿಯ ಶ್ರೀನಿವಾಸ್‌, ತಿಮ್ಮೇಶ್‌, ಚಂದ್ರಪ್ಪ ಎಂಬ ರೈತರು ನಾಲ್ಕು ಎಕರೆ ಜಮೀನಿನಲ್ಲಿ ಶುಂಠಿ ಬೆಳೆದಿದ್ದಾರೆ.ಈಗ ಐದು ತಿಂಗಳ ಬೆಳೆ ಇದ್ದು, ಶುಂಠಿ ನಳನಳಿಸುತ್ತಿದೆ. ಇನ್ನು ನಾಲ್ಕು ತಿಂಗಳಲ್ಲಿ ಬೆಳೆ ಕಟಾವಿಗೆ ಬರಲಿದ್ದು, ಬಂಪರ್‌ ಬೆಳೆ ನಿರೀಕ್ಷೆಯಲ್ಲಿ ಈ ರೈತರಿದ್ದಾರೆ.‘ತಾಲ್ಲೂಕಿನಲ್ಲಿ ನಾವೇ ಪ್ರಥಮ ಬಾರಿಗೆ ಶುಂಠಿ ಬೆಳೆದಿದ್ದೇವೆ. ನನ್ನ ಸಹೋದರಿಯನ್ನು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮದ ವರನಿಗೆ ಮದುವೆ ಮಾಡಿಕೊಟ್ಟಿದ್ದು, ಅವರ ಮಾರ್ಗ ದರ್ಶನದಲ್ಲಿ ಶುಂಠಿ ಬೆಳೆದಿದ್ದೇವೆ.ನಾವು ಎರಡು ಎಕರೆ, ನಮ್ಮೂರಿನ ಚಂದ್ರಪ್ಪ ಎಂಬ ರೈತ ಎರಡು ಎಕರೆಯಲ್ಲಿ ಶುಂಠಿ ನಾಟಿ ಮಾಡಿದ್ದು, ಬೆಳೆ ಉತ್ತಮವಾಗಿ ಬಂದಿದೆ. ಏಪ್ರಿಲ್‌ನಲ್ಲಿ ಶುಂಠಿ ನಾಟಿ ಮಾಡಿದ್ದು, ಇನ್ನು ನಾಲ್ಕು ತಿಂಗಳ ನಂತರ ಕಟಾವಿಗೆ ಬರಲಿದೆ. ಮಾರಾಟ ಕ್ಕಾದರೆ 9 ತಿಂಗಳಿಗೆ ಕಟಾವು ಮಾಡಬಹುದು. ನಾಟಿ ಮಾಡುವ ಶುಂಠಿ ಬೇಕೆಂದರೆ 14 ತಿಂಗಳು ಬಿಡಬೇಕು’ ಎನ್ನುತ್ತಾರೆ ರೈತ ಶ್ರೀನಿವಾಸ್‌.ಅಧಿಕ ಖರ್ಚು: ಶುಂಠಿ ಬೆಳೆಯಲು ಹೆಚ್ಚು ಹಣ ಖರ್ಚಾಗುತ್ತದೆ. ನಾಟಿ ಮಾಡುವ ಶುಂಠಿಯ ಬೆಲೆ 60 ಕೆ. ಜಿ ಚೀಲಕ್ಕೆ ಸರಾಸರಿ ₹ 3,000 ಇರುತ್ತದೆ. ಎಕರೆಗೆ ಕನಿಷ್ಠ 25 ಚೀಲ ಶುಂಠಿ ಬೇಕಾಗುತ್ತದೆ. ಅಂದರೆ ಬಿತ್ತನೆ ಶುಂಠಿಗೇ ಎಕರೆಗೆ ₹ 75,000 ಬೇಕಾಗುತ್ತದೆ. ಹೊಲಕ್ಕೆ ತುಂತುರು ನೀರಾವರಿ ಸೆಟ್‌ ಅಳವಡಿ ಸಬೇಕು.ತಿಂಗಳಿಗೆ ಒಮ್ಮೆ ಕ್ರಿಮಿ ನಾಶಕ ಸಿಂಪಡಿಸಲು ₹ 5 ಸಾವಿರ ಬೇಕು. ತಿಂಗಳಿಗೆ ಒಮ್ಮೆ ಕಳೆ ತೆಗೆಸಲು 25 ರಿಂದ 30 ಕೂಲಿ ಆಳುಗಳು ಬೇಕು. ಒಂದು ಆಳಿಗೆ ₹ 350 ರಂತೆ ಒಮ್ಮೆ ಕಳೆ ತೆಗೆಸಲು ₹ 10 ಸಾವಿರ ಖರ್ಚಾಗುತ್ತದೆ ಎನ್ನುತ್ತಾರೆ ಅವರು.‘3 ಅಡಿ ಬದು ಕಟ್ಟಿ, ಒಂದೂವರೆ ಅಡಿ ಅಂತರದಲ್ಲಿ ಶುಂಠಿ ನಾಟಿ ಮಾಡಬೇಕು.  ಬಲಿತ ಶುಂಠಿಯನ್ನು 50 ಗ್ರಾಂ ತುಂಡುಗಳನ್ನಾಗಿ ಮಾಡಿ ನಾಟಿ ಮಾಡಬೇಕು. ಹೊಲದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು.

ಬಿಸಿಲು ಹೆಚ್ಚಾದರೂ ಶುಂಠಿ ತಡೆಯುವುದಿಲ್ಲ. ಆದ್ದರಿಂದ ಬೇಸಿಗೆಯಲ್ಲಿ ತೇವಾಂಶ ಆರದಂತೆ ನೋಡಿ ಕೊಳ್ಳಬೇಕು. ಫಲವತ್ತಾದ ಭೂಮಿಯಲ್ಲಿ ಮಾತ್ರ ಹೆಚ್ಚು ಇಳುವರಿ ಬರುತ್ತದೆ. ಭೂಮಿಗೆ ಕೊಟ್ಟಿಗೆ ಗೊಬ್ಬರ ಹಾಕಬೇಕು.

ನಾಟಿಯ ನಂತರ ಡಿಎಪಿ, 17–17–17, 20–20–20 ಗೊಬ್ಬರ ಕೊಡಬೇಕು. ಯೂರಿಯಾ ಕೊಡುವಂತಿಲ್ಲ’ ಎನ್ನುತ್ತಾರೆ ಶ್ರೀನಿವಾಸ್ ಅವರ ಸಹೋದರ ತಿಮ್ಮೇಶ್‌.ಅದೃಷ್ಟ ಇದ್ದರೆ ಹೆಚ್ಚು ಲಾಭ: ‘ಶುಂಠಿ 10 ತಿಂಗಳ ಬೆಳೆ ಆದರೂ ಅದೃಷ್ಟ ಇದ್ದರೆ ಹೆಚ್ಚು ಲಾಭ ಗಳಿಸಬಹುದು. ಉತ್ತಮ ಇಳುವರಿ ಬಂದರೆ ಎಕರೆಗೆ 60 ಕೆಜಿಯ 500 ಚೀಲ ಶುಂಠಿ ಬರುತ್ತದೆ. ಮಾರುಕಟ್ಟೆಯಲ್ಲಿ ಚೀಲಕ್ಕೆ ₹ 3,000 ದರ ಇದ್ದರೂ ₹ 15 ಲಕ್ಷ ಹಣ ಸಿಗುತ್ತದೆ.

ದರ ಕಡಿಮೆ ಇದ್ದಾಗ ಶುಂಠಿಯನ್ನು ಕೀಳದೆ ಗಿಡದಲ್ಲೇ ಬಿಡಬಹುದು. 10 ತಿಂಗಳ ನಂತರವೂ ಆರೇಳು ತಿಂಗಳು ಹೊಲದಲ್ಲೇ ಬಿಡಬಹುದು. ಕೀಳುವುದು ತಡವಾದರೂ ಶುಂಠಿ ಕರಗುವುದಿಲ್ಲ.

ದರ ಹೆಚ್ಚಾದಾಗ ಕಿತ್ತು ಮಾರಾಟ ಮಾಡ ಬಹುದು. ಹಾಸನದಲ್ಲಿ ಮಾರುಕಟ್ಟೆ ಇದ್ದು, ಅಲ್ಲಿಗೆ ಕೊಂಡೊಯ್ಯಬಹುದು. ಆಂಧ್ರದಿಂದ ಕೆಲವು ವ್ಯಾಪಾರಿಗಳು ಹೊಲಕ್ಕೇ ಬಂದು ಖರೀದಿಸುತ್ತಾರೆ’ ಎನ್ನುತ್ತಾರೆ ಈ ರೈತರು.ಹಸಿ ಶುಂಠಿಯನ್ನು ಒಣಗಿಸಿದರೆ ಒಣ ಶುಂಠಿ ಆಗುತ್ತದೆ. ಇದಕ್ಕೆ ಇನ್ನೂ ಹೆಚ್ಚು ದರ ಇರುತ್ತದೆ. ಆದರೆ ಒಣಗಿಸುವುದು ಕಷ್ಟ ಎಂದು ನಾವು ಹಸಿ ಶುಂಠಿಯನ್ನೇ ಮಾರುತ್ತೇವೆ. ಶುಂಠಿಯ ಸಸ್ಯ ಖಾರವಾಗಿರುವುದರಿಂದ ದನ, ಎಮ್ಮೆ, ಕುರಿ, ಮೇಕೆ, ಕಾಡುಪ್ರಾಣಿಗಳು ತಿನ್ನುವುದಿಲ್ಲ. ಶುಂಠಿ ಕಿತ್ತ ನಂತರ ಅದರ ಸೊಪ್ಪು ಹೊಲದಲ್ಲೇ ಕೊಳೆತು ಗೊಬ್ಬರ ಆಗುತ್ತದೆ ಎನ್ನುತ್ತಾರೆ ಅವರು.ಶುಂಠಿ ಬೆಳೆಯುವ ಬಗ್ಗೆ ಮಾಹಿತಿ ಬೇಕಾದಲ್ಲಿ ರೈತ ಶ್ರೀನಿವಾಸ್‌ ಅವರ ಮೊಬೈಲ್‌ 72593 22051 ಸಂಪರ್ಕಿಸಬಹುದು.

*

ಪ್ರತಿ ವರ್ಷ ಮೆಕ್ಕೆಜೋಳ ಬೆಳೆಯುತ್ತಿದ್ದ ನಾವು ಈ ಬಾರಿ ಹೊಸ ಪ್ರಯೋಗಕ್ಕೆ ಕೈ ಹಾಕಿದ್ದೇವೆ.  ಉತ್ತಮ ಇಳುವರಿ ಬಂದು, ಸೂಕ್ತ ಬೆಲೆ ಸಿಕ್ಕರೆ ಸಾಕು.

–ತಿಮ್ಮೇಶ್‌,

ಶುಂಠಿ ಬೆಳೆಗಾರ, ದಾಸಯ್ಯನ ಹಟ್ಟಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.