ಬಯಲುಸೀಮೆಗೆ ಅಘನಾಶಿನಿ, ಶರಾವತಿ ನೀರು!

7
ಲಂಡನ್ ನಿವಾಸಿ ಡಾ. ಮಧುಸೀತಪ್ಪ ವರದಿ ಸರ್ಕಾರಕ್ಕೆ ಸಲ್ಲಿಕೆ

ಬಯಲುಸೀಮೆಗೆ ಅಘನಾಶಿನಿ, ಶರಾವತಿ ನೀರು!

Published:
Updated:

ಚಿಕ್ಕಬಳ್ಳಾಪುರ: ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸುವ ವಿಷಯವು ಹಲವು ದಿನಗಳ ನಂತರ ಈಗ ಮತ್ತೆ ಚರ್ಚೆಗೆ ಗ್ರಾಸವಾಗಿದೆ.ರಾಜ್ಯ ಸರ್ಕಾರವು ಎತ್ತಿನಹೊಳೆ ನೀರಾವರಿ ಯೋಜನೆಗೆ ಆದ್ಯತೆ ನೀಡುತ್ತಿರುವ ಮತ್ತು ಜಿಲ್ಲೆಯ ನೀರಾವರಿ ಹೋರಾಟ ಸಮಿತಿ ಸದಸ್ಯರು ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿ­ಸುತ್ತಿರುವ ಬೆನ್ನಲ್ಲೇ ಮತ್ತೊಂದು ನೀರಾವರಿ ಯೋಜನೆ ಬಗ್ಗೆ ರಾಜ್ಯ ಸರ್ಕಾರ ಆಸಕ್ತಿ ತಳೆದಿರುವುದು ಕುತೂಹಲ ಕೆರಳಿಸಿದೆ. ಲಂಡನ್‌ ನಿವಾಸಿ, ವೈದ್ಯ ಡಾ. ಮಧುಸೀತಪ್ಪ ಅವರು ರಾಜ್ಯ ಸರ್ಕಾರಕ್ಕೆ ವರದಿಯೊಂದನ್ನು ಸಲ್ಲಿಸಿದ್ದು, ಅಘನಾಶಿನಿ ನದಿ ಮತ್ತು ಲಿಂಗನಮಕ್ಕಿ ಜಲಾಶಯದ ಮೂಲಕ ನಿರಾತಂಕವಾಗಿ ಯಾವುದೇ ತೊಂದರೆಯಿಲ್ಲದೇ ಬಯಲುಸೀಮೆ ಜಿಲ್ಲೆಗಳಿಗೆ ನೀರು ಹರಿಸಬಹುದು. ಯೋಜನೆಯ ಖರ್ಚು 10 ಸಾವಿರ ಕೋಟಿ ರೂಪಾಯಿ ಮೀರುವುದಿಲ್ಲ ಎಂದು ತಿಳಿಸಿದ್ದಾರೆ.ಸಚಿವ ರಾಮಲಿಂಗಾರೆಡ್ಡಿ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ಉನ್ನತಮಟ್ಟದ ಸಭೆಯಲ್ಲಿ ತಮ್ಮ ವರದಿಯ ಪ್ರಾತ್ಯಕ್ಷಿಕೆ ನೀಡಿರುವ ಅವರು ಬೃಹತ್‌ ನೀರಾವರಿ ಸಚಿವ ಎಂ.ಬಿ.ಪಾಟೀಲ ಜೊತೆಗೂ ಚರ್ಚಿಸಿದ್ದಾರೆ.ಇದರ ಹಿನ್ನೆಲೆಯಲ್ಲಿ ಪಾಟೀಲರು,  ಯೋಜನೆಯ ಕುರಿತು ವಿಸ್ತ್ರತ ವರದಿ ನೀಡುವಂತೆ ಕರ್ನಾಟಕ ವಿದ್ಯುತ್‌ ನಿಗಮಕ್ಕೆ (ಕೆಪಿಸಿಎಲ್‌) ಪತ್ರ ಬರೆದಿದ್ದಾರೆ. ಯೋಜನೆಯ ಸಾಧಕ–ಬಾಧಕಗಳ ಬಗ್ಗೆ ಅಧ್ಯಯನ ನಡೆಸಿ, ಕರ್ನಾಟಕ ನೀರಾವರಿ ನಿಗಮಕ್ಕೆ ಸಮಗ್ರ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.ಡಾ. ಮಧುಸೀತಪ್ಪ ಅವರು ಸರ್ಕಾರಕ್ಕೆ ಸಲ್ಲಿಸಿರುವ ವರದಿಯ ಪ್ರಮುಖಾಂಶಗಳು ‘ಪ್ರಜಾವಾಣಿ’ಗೆ ಲಭ್ಯವಾಗಿದ್ದು,  ಅಘನಾಶಿನಿ ಮತ್ತು ಲಿಂಗನಮಕ್ಕಿ ಜಲಾಶಯದಿಂದ ಬಯಲು­ಸೀಮೆ ಜಿಲ್ಲೆಗಳಿಗೆ ನೀರು ಹೇಗೆ ಹರಿಸಬಹುದು ಎಂಬುದರ ಬಗ್ಗೆ ಮಾಹಿತಿ ನೀಡಲಾಗಿದೆ.ಯೋಜನಾ ವರದಿಯಲ್ಲಿ ಏನಿದೆ?

* ಯಾವುದೇ ಹೊಸ ಅಣೆಕಟ್ಟೆ ನಿರ್ಮಿಸದೇ, ಅರಣ್ಯ ನಾಶಪಡಿಸದೇ, ಪರಿಸರ ಮತ್ತು ವಿದ್ಯುತ್‌ ಪೂರೈಕೆಗೂ ಧಕ್ಕೆ ಉಂಟು ಮಾಡದೇ 50 ಟಿಎಂಸಿಯಷ್ಟು ನೀರನ್ನು ಪ್ರತಿ ವರ್ಷ 27 ಬರಪೀಡಿತ ತಾಲ್ಲೂಕುಗಳಿಗೆ ಮತ್ತು ಬೆಂಗಳೂರಿಗೆ ಹರಿಸಬಹುದು.* ಶರಾವತಿ, ಅಘನಾಶಿನಿ ಮತ್ತು ಬೇಡ್ತಿ ನದಿಗಳಿಂದ ಪ್ರತಿ ವರ್ಷ 550 ಟಿಎಂಸಿಯಷ್ಟು ನೀರು ಅರಬ್ಬಿ ಸಮುದ್ರ ಸೇರುತ್ತದೆ. ಲಿಂಗನಮಕ್ಕಿ ಜಲಾಶಯದಿಂದ ಪ್ರತಿ ವರ್ಷ ಸರಾಸರಿ 180 ಟಿಎಂಸಿಯಷ್ಟು ನೀರು ವಿದ್ಯುತ್‌ಗೆ ಬಳಕೆಯಾದ ನಂತರ ಸಮುದ್ರಕ್ಕೆ ಸೇರುತ್ತಿದ್ದು, ಅದು ಕುಡಿಯಲು ಅಥವಾ ನೀರಾವರಿಗಾಗಲಿ ಬಳಕೆಯಾಗುತ್ತಿಲ್ಲ.* ಅಘನಾಶಿನಿ ನದಿಯ 35 ಟಿಎಂಸಿಯಷ್ಟು ಮತ್ತು ಶರಾವತಿಯ 15 ಟಿಎಂಸಿಯಷ್ಟು ನೀರನ್ನು ಲಿಂಗನಮಕ್ಕಿ ಜಲಾಶಯದಲ್ಲಿ ಸಂಗ್ರಹಿಸಿ ಒಟ್ಟು 50 ಟಿಎಂಸಿಯಷ್ಟು ನೀರನ್ನು ಏತ ನೀರಾವರಿ ಮೂಲಕ ಶಿವಮೊಗ್ಗ, ಚಿತ್ರದುರ್ಗ, ತುಮಕೂರು ಜಿಲ್ಲೆಗಳ ಮೂಲಕ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಮತ್ತು ರಾಮನಗರ ಜಿಲ್ಲೆಗಳಿಗೆ ಹರಿಸಬಹುದು.* ಲಿಂಗನಮಕ್ಕಿಯಿಂದ ಹರಿದು ಬರುವ ನೀರಿನಿಂದ ಒಟ್ಟು 27 ತಾಲ್ಲೂಕುಗಳ 5415 ಕೆರೆಗಳು ಅಲ್ಲದೇ ಹೆಸರುಘಟ್ಟ, ತಿಪ್ಪಗೊಂಡನಹಳ್ಳಿ ಜಲಾಶಯ ತುಂಬಿಸಬಹುದು.* ಲಿಂಗನಮಕ್ಕಿಯಲ್ಲಿ  ಸಂಗ್ರಹ ವಾಗುವ ನೀರಿನಿಂದ ಪ್ರತಿ ವರ್ಷ ಸರಾಸರಿ 5440 ದಶಲಕ್ಷ ಯೂನಿಟ್‌ಗಳಷ್ಟು ವಿದ್ಯುತ್‌ ಉತ್ಪಾದನೆಯಾಗುತ್ತದೆ. ಪ್ರತಿ ಟಿಎಂಸಿಗೆ ಪ್ರತಿ ವರ್ಷ 30 ದಶಲಕ್ಷ ಯೂನಿಟ್‌ ವಿದ್ಯುತ್‌ ಉತ್ಪಾದನೆಯಾಗುತ್ತದೆ. ಅಲ್ಲಿಂದ 15 ಟಿಎಂಸಿಯಷ್ಟು ನೀರನ್ನು  ಪಡೆದುಕೊಂಡರೆ, ವರ್ಷಕ್ಕೆ 450 ದಶಲಕ್ಷ ಯೂನಿಟ್‌ ವಿದ್ಯುತ್‌ ಉತ್ಪಾದನೆ ಕಡಿಮೆಯಾಗುತ್ತದೆ. ಅಲ್ಲದೇ 50 ಟಿಎಂಸಿಯಷ್ಟು ನೀರನ್ನು ಎತ್ತಿ ಬರಪೀಡಿತ ಜಿಲ್ಲೆಗಳಿಗೆ ಹರಿಯುವಂತೆ ಮಾಡಲು 1200  ದಶಲಕ್ಷ ಯೂನಿಟ್‌ ಬೇಕಾಗುತ್ತದೆ. ಇದರಿಂದ ವಿದ್ಯುತ್‌ ಪೂರೈಕೆಗೆ ತೊಂದರೆಯಾಗುವ ಹಿನ್ನೆಲೆಯಲ್ಲಿ ಪರ್ಯಾಯ ಮಾರ್ಗ ಅನುಸರಿಸಬೇಕು.* ಲಿಂಗನಮಕ್ಕಿ ಪಕ್ಕದಲ್ಲೇ ಹಾದು ವ್ಯರ್ಥವಾಗಿ ಸಮುದ್ರಕ್ಕೆ ಸೇರುತ್ತಿರುವ ಅಂಜಕ್ಕಿ ಹಳ್ಳ ಮತ್ತು ಮಾವಿನಗುಂಡಿ ಹಳ್ಳದಿಂದ 15 ಟಿಎಂಸಿಯಷ್ಟು ನೀರನ್ನು ಲಿಂಗನಮಕ್ಕಿ ಜಲಾಶಯಕ್ಕೆ ತಿರುಗಿಸ­ಬೇಕು. ಬೇಡ್ತಿಯ 180 ಟಿಎಂಸಿ ನೀರಿನಲ್ಲಿ 25 ಟಿಎಂಸಿಯಷ್ಟು ನೀರನ್ನು ಗುರುತ್ವಾಕರ್ಷಣೆಯ ಮೂಲಕ ಕಾಳಿ ನದಿ ವಿದ್ಯುತ್‌ ಸಂಕೀರ್ಣದ ಅಂಗವಾಗಿರುವ ತಟ್ಟಿಹಳ್ಳಿ ಜಲಾಶಯಕ್ಕೆ ತಿರುಗಿಸಬೇಕು. ಇದರಿಂದ ವಿದ್ಯುತ್‌ ಉತ್ಪಾ­ದನೆಗೆ ತೊಂದರೆಯಾಗುವುದಿಲ್ಲ. ಅಲ್ಲದೇ ನೀರನ್ನು ಸಾಗಿಸಲು ಬೇಕಾದ ಹೆಚ್ಚುವರಿ ವಿದ್ಯುತ್‌ ಸಹ ಉತ್ಪದಿಸಬಹುದು. ಸೌರಶಕ್ತಿ, ಪವನ ಶಕ್ತಿ ಮತ್ತು ಥರ್ಮಲ್‌ ಘಟಕ­ಗಳಿಂದಲೂ ವಿದ್ಯುತ್ ಉತ್ಪಾದಿಸಬಹುದು.* 50 ಟಿಎಂಸಿಯಷ್ಟು ನೀರನ್ನು ಎತ್ತಿ ಬರಪೀಡಿತ ಜಿಲ್ಲೆಗಳಿಗೆ ಹರಿಸಲು ಪ್ರತಿ ವರ್ಷ ವಿದ್ಯುತ್‌ಗಾಗಿಯೇ 500 ರಿಂದ 600 ಕೋಟಿ ರೂಪಾಯಿ ವೆಚ್ಚವಾಗಬಹುದು. ಆದರೆ 1200 ಅಡಿಗಳಿಂದ 6 ಲಕ್ಷ ಕೊಳವೆಬಾವಿಗಳ ಮೂಲಕ ನೀರು ಎತ್ತಲು ಸರ್ಕಾರವು ಪ್ರತಿ ವರ್ಷ ರೈತರಿಗೆ ಬರಪೀಡಿತ ಜಿಲ್ಲೆಗಳ ರೈತರಿಗೆ 2000 ಕೋಟಿ ರೂಪಾಯಿ ಮೌಲ್ಯದ 5000 ದಶಲಕ್ಷ ಯೂನಿಟ್‌ ವಿದ್ಯುತ್‌ ಸಬ್ಸಿಡಿ ಮೂಲಕ ಉಚಿತವಾಗಿ ನೀಡುತ್ತಿದೆ.27 ತಾಲ್ಲೂಕುಗಳ ಎಲ್ಲ 5415 ಕೆರೆಗಳು ಪ್ರತಿ ವರ್ಷ ತುಂಬಿದರೆ, ಅಂತರ್ಜಲ ಮಟ್ಟವು ಕೆಲ ವರ್ಷಗಳಲ್ಲಿ 150 ರಿಂದ 200 ಅಡಿಗೆ ಏರಿಕೆಯಾಗುತ್ತದೆ. ವಿದ್ಯುತ್‌ ಸಬ್ಸಿಡಿಯಲ್ಲಿ 1500 ಕೋಟಿ ರೂಪಾಯಿ ಜೊತೆ ಸುಮಾರು 3500 ದಶಲಕ್ಷ ಯೂನಿಟ್‌ ವಿದ್ಯುತ್‌ ಬಳಕೆ ಕಡಿಮೆ ಮಾಡಬಹುದು. ಜಿಲ್ಲೆಗಳ 6 ಲಕ್ಷ ವ್ಯವಸಾಯ ಕೊಳವೆ ಬಾವಿಗಳ ರೈತ ಮಾಲೀಕರು ಪ್ರತಿ ವರ್ಷ 10 ಸಾವಿರ ರೂಪಾಯಿ ನೀಡಿದರೆ, 600 ಕೋಟಿ ರೂಪಾಯಿ ಸಂಗ್ರಹಿಸಬಹುದು.* ಅಲ್ಲದೇ 10 ಟಿಎಂಸಿಯಷ್ಟು ನೀರನ್ನು ಬೆಂಗಳೂರಿಗೆ ಪೂರೈಸುವುದರಿಂದ  ಯೋಜನೆಗೆ ತಗುಲುವ 600 ಕೋಟಿ ರೂಪಾಯಿ ವಿದ್ಯುತ್‌ ಶುಲ್ಕ ಪಾವತಿಸಲು ಕಷ್ಟವಾಗಲಿಕ್ಕಿಲ್ಲ.ವಿರೋಧ ಇರುವುದು ಗೊತ್ತೇ ಇಲ್ಲ–ಎಚ್.ಕೆ.ಪಾಟೀಲ್‌

ಮಂಗಳೂರು:
‘ರಾಜ್ಯದ ಬಯಲು ಸೀಮೆಯ ಬರಪೀಡಿತ ಜಿಲ್ಲೆಗಳಿಗೆ ನೇತ್ರಾವತಿ ನದಿ ನೀರನ್ನು ಹರಿಸುವ ಎತ್ತಿನಹೊಳೆ ಯೋಜನೆಗೆ ಕರಾವಳಿ ಭಾಗದಲ್ಲಿ ವಿರೋಧ ಇರುವ ವಿಷಯ ನನ್ನ ಗಮನಕ್ಕೆ ಬಂದೇ ಇಲ್ಲ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಎಚ್‌.ಕೆ.ಪಾಟೀಲ್‌ ಹೇಳಿದ್ದಾರೆ.ಕಾಂಗ್ರೆಸ್‌ ಪಕ್ಷದ ಇಲ್ಲಿನ ಜಿಲ್ಲಾ ಕಚೇರಿ­ಯಲ್ಲಿ ಸೋಮವಾರ ಪತ್ರಕರ್ತ­ರೊಂದಿಗೆ ಮಾತನಾಡಿದ ಅವರು, ‘ಎತ್ತಿನ­ಹೊಳೆ ಯೋಜ­ನೆಗೆ ವಿರೋಧ ಇದೆ ಎಂಬುದು ಇದೇ ಪ್ರಥಮ ಬಾರಿಗೆ ನನ್ನ ಗಮನಕ್ಕೆ ಬಂದಿದೆ. ವಿಧಾನಮಂಡಲದಲ್ಲಿ ಸಹ ಯೋಜನೆಗೆ ವಿರೋಧ ವ್ಯಕ್ತವಾಗಿರುವುದು ನನ್ನ ಗಮನಕ್ಕೆ ಬಂದಿಲ್ಲ. ಯೋಜನೆಗೆ ವಿರೋಧ ಇರುವುದರ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚಿಸಲಾಗುವುದು’ ಎಂದರು.ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಎತ್ತಿನಹೊಳೆ ಯೋಜನೆಯ ಸಾಧಕ, ಬಾಧಕಗಳ ಬಗ್ಗೆ ಸಮಿತಿಯೊಂದರ ಮೂಲಕ ಅಧ್ಯಯನ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಅದರ ಫಲಿತಾಂಶ ಬಂದ ತಕ್ಷಣ ಮಾಧ್ಯಮ­ದವರ ಗಮನಕ್ಕೆ ತರಲಾಗುವುದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry