ಬಯಲುಸೀಮೆಗೆ ನೀರಾವರಿ: ಸಿಎಂ ಸಮ್ಮತಿ

7

ಬಯಲುಸೀಮೆಗೆ ನೀರಾವರಿ: ಸಿಎಂ ಸಮ್ಮತಿ

Published:
Updated:
ಬಯಲುಸೀಮೆಗೆ ನೀರಾವರಿ: ಸಿಎಂ ಸಮ್ಮತಿ

ಬೆಂಗಳೂರು: ಬಯಲುಸೀಮೆಗೆ ಶಾಶ್ವತ ನೀರು ಒದಗಿಸಲು ನೀರಾವರಿ ತಜ್ಞ ಬಿ.ಎಸ್.ಪರಮಶಿವಯ್ಯ ವರದಿಯ ಶಿಫಾರಸುಗಳನ್ನು ಯಥಾವತ್ತಾಗಿ ಜಾರಿಗೊಳಿಸಲು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ ಎಂದು ಕೇಂದ್ರ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಮಂಗಳವಾರ ಗೃಹ ಕಚೇರಿ `ಕೃಷ್ಣಾ'ದಲ್ಲಿ ಬಯಲುಸೀಮೆಯ ಜಿಲ್ಲೆಗಳಿಗೆ ಅನುಕೂಲ ಕಲ್ಪಿಸುವ ಶಾಶ್ವತ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಆ ಭಾಗದ ಚುನಾಯಿತ ಪ್ರತಿನಿಧಿಗಳು ಮತ್ತು ಶಾಶ್ವತ ನೀರಾವರಿ ಹೋರಾಟ ಸಮಿತಿ ಪದಾಧಿಕಾರಿಗಳ ಜೊತೆ ಸಭೆ ನಡೆಸಿದರು. ಸಭೆಯ ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಮುನಿಯಪ್ಪ, `ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಶಾಶ್ವತವಾಗಿ ನೀರು ಒದಗಿಸುವ ಯೋಜನೆಯ ಕಾಮಗಾರಿಗೆ ಶೀಘ್ರದಲ್ಲೇ ಶಿಲಾನ್ಯಾಸ ಮಾಡುವುದಾಗಿ ಮುಖ್ಯಮಂತ್ರಿಯವರು ನಮಗೆ ಭರವಸೆ ನೀಡಿದ್ದಾರೆ' ಎಂದರು.ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಬಹುಭಾಗಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆಯನ್ನೂ ಆದಷ್ಟು ಬೇಗ ಪೂರ್ಣಗೊಳಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಅಲ್ಲಿನ ಎಲ್ಲ ಭಾಗಗಳಿಗೂ ಕುಡಿಯುವ ನೀರು ಪೂರೈಕೆ ಆದರೆ, ಬಯಲುಸೀಮೆಗೆ ನೀರು ಒದಗಿಸುವ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ತುಮಕೂರು ಸಂಸದ ಜಿ.ಎಸ್.ಬಸವರಾಜು ಮಾತನಾಡಿ, `ಮುಳಬಾಗಿಲಿನಿಂದ ಕನಕಪುರದವರೆಗೆ ವಿಸ್ತರಿಸಿಕೊಂಡಿರುವ ಬಯಲುಸೀಮೆಯ ಭಾಗಕ್ಕೆ ಶಾಶ್ವತ ನೀರಾವರಿ ಯೋಜನೆಯ ಮೂಲಕ 300 ಟಿಎಂಸಿ ಅಡಿ ನೀರು ಹರಿಸಲು ಸರ್ಕಾರ ಒಪ್ಪಿಕೊಂಡಿದೆ. ಪರಮಶಿವಯ್ಯ ಅವರು ನೀಡಿದ್ದ ವರದಿಯಲ್ಲಿನ ಶಿಫಾರಸುಗಳನ್ನು ಸಂಪೂರ್ಣವಾಗಿ ಅನುಷ್ಠಾನಕ್ಕೆ ತರಲು ರಾಜ್ಯ ಸರ್ಕಾರ ಮುಂದಾಗಿರುವುದು ಆ ಭಾಗದ ಜನತೆಗೆ ಸಂತಸ ತಂದಿದೆ' ಎಂದರು.ಸಭೆಯಲ್ಲಿ  ಪರಮಶಿವಯ್ಯ, ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ, ಜವಳಿ ಸಚಿವ ವರ್ತೂರು ಪ್ರಕಾಶ್, ಶಾಸಕರಾದ ಜಿ.ಕೆ.ವೆಂಕಟಶಿವಾ ರೆಡ್ಡಿ, ಎಸ್.ಎನ್.ಕೃಷ್ಣಯ್ಯ ಶೆಟ್ಟಿ, ವಿ.ಮುನಿಯಪ್ಪ, ಡಾ.ಎಂ.ಸಿ.ಸುಧಾಕರ್, ವೈ.ಸಂಪಂಗಿ, ಎಂ.ವಿ.ನಾಗರಾಜು, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ವೀರಯ್ಯ, ವೈ.ಎ.ನಾರಾಯಣಸ್ವಾಮಿ ಸೇರಿದಂತೆ ಬಯಲುಸೀಮೆ ಜಿಲ್ಲೆಗಳ ಚುನಾಯಿತ ಪ್ರತಿನಿಧಿಗಳು ಪಾಲ್ಗೊಂಡಿದ್ದರು.ಕಾಂಗ್ರೆಸ್ ಶಾಸಕರ ಕಿತ್ತಾಟ

ನೀರಾವರಿ ಯೋಜನೆಗೆ ಸಂಬಂಧಿಸಿದಂತೆ `ಕೃಷ್ಣಾ'ದಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಶಾಸಕರಾದ ಶಿಡ್ಲಘಟ್ಟದ ವಿ.ಮುನಿಯಪ್ಪ ಮತ್ತು ಚಿಂತಾಮಣಿಯ ಡಾ.ಎಂ.ಸಿ.ಸುಧಾಕರ್ ಕಿತ್ತಾಡಿಕೊಂಡಿದ್ದಾರೆ. ಶಾಸಕರಿಬ್ಬರ ನಡುವೆ ಹಲವು ದಿನಗಳಿಂದ ನಡೆಯುತ್ತಿರುವ ವೈಯಕ್ತಿಕ ವಾಕ್ಸಮರ ಈ ಸಭೆಯಲ್ಲೂ ಪ್ರತಿಧ್ವನಿಸಿದೆ. ಮಂಗಳವಾರದ ಸಭೆ ಆರಂಭಕ್ಕೂ ಮುನ್ನ ಮುನಿಯಪ್ಪ ಅವರು ಸುಧಾಕರ್ ವಿರುದ್ಧ ಹರಿಹಾಯ್ದಿದ್ದಾರೆ. ತಕ್ಷಣ ಪ್ರತಿಕ್ರಿಯಿಸಿದ ಸುಧಾಕರ್, ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ವಿಷಯವನ್ನು ಮತ್ತೆ ಪ್ರಸ್ತಾಪಿಸಿದ್ದಾರೆ. ಇಬ್ಬರ ನಡುವೆ ಕೆಲಕಾಲ ಆರೋಪ-ಪ್ರತ್ಯಾರೋಪ ನಡೆದಿದೆ. ತಕ್ಷಣವೇ ಕೆಲ ಶಾಸಕರು ಮಧ್ಯ ಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸಿದರು ಎಂದು ಮೂಲಗಳು ತಿಳಿಸಿವೆ.`ಡಿಪಿಆರ್ ಸಿದ್ಧವಾಗುತ್ತಿದೆ'

`ಪರಮಶಿವಯ್ಯ ವರದಿಯ ಶಿಫಾರಸುಗಳಂತೆ ಬಯಲುಸೀಮೆಯ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಒದಗಿಸುವ ಯೋಜನೆಯ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧವಾಗುತ್ತಿದೆ. ವರದಿ ಕೈಸೇರಿದ ತಕ್ಷಣವೇ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳುತ್ತದೆ' ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಮಂಗಳವಾರದ ಸಭೆಯಲ್ಲಿ ಭರವಸೆ ನೀಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry