ಬಯಲುಸೀಮೆಯಲ್ಲಿ ಜಲದೇವತೆಯ ಮುನಿಸು

ಭಾನುವಾರ, ಜೂಲೈ 21, 2019
22 °C

ಬಯಲುಸೀಮೆಯಲ್ಲಿ ಜಲದೇವತೆಯ ಮುನಿಸು

Published:
Updated:

ಕಲ್ಲಹಳ್ಳಿ ಚಿತ್ರದುರ್ಗ ತಾಲ್ಲೂಕಿನ ಪುಟ್ಟ ಗ್ರಾಮ. ನಗರದಿಂದ 10 ಕಿಲೋ ಮೀಟರ್ ದೂರದಲ್ಲಿರುವ ಈ ಗ್ರಾಮ ಈರುಳ್ಳಿ ಬೆಳೆಯುವುದಕ್ಕೆ ಪ್ರಸಿದ್ಧ. ಅಂದಾಜು 120 ಮನೆಗಳನ್ನು ಹೊಂದಿರುವ ಈ ಗ್ರಾಮದಲ್ಲಿ ಪ್ರತಿಯೊಬ್ಬರೂ ಈರುಳ್ಳಿ ಬೆಳೆಗಾರರೇ. ಸೀಸನ್‌ನಲ್ಲಿ ಈ ಗ್ರಾಮದ ಮೂಲಕ ಹಾದು ಹೋದರೆ ಸಾಕು. ಈರುಳ್ಳಿಯ `ಘಾಟು~ ಮೂಗಿಗೆ ಬಡಿದೇ ತೀರುತ್ತದೆ. ಎಲ್ಲರ ಮನೆಯ ಅಂಗಳ, ಹಿತ್ತಿಲು, ಗೋದಾಮುಗಳ ಚೀಲಗಳಲ್ಲಿ ಭರಪೂರ ಮೈ ಚೆಲ್ಲಿಕೊಂಡ ಈ ಘಮ್ಮನೆಯ ಈರುಳ್ಳಿ ದೇಶದ ಮಹಾನಗರಗಳಿಗೇ ಮೀಸಲು.ಈ ಗ್ರಾಮಸ್ಥರು 1998ರಲ್ಲಿ ಈರುಳ್ಳಿ ಬೆಳೆದು ಗಳಿಸಿದ ಲಾಭವನ್ನು ಯಾವತ್ತೂ ಮರೆಯುವಂತೆಯೇ ಇಲ್ಲ. ಒಂದು ಕ್ವಿಂಟಲ್ ಈರುಳ್ಳಿಗೆ ಮಾರುಕಟ್ಟೆಯಲ್ಲಿ ರೂ. 2,500-3,000ರಷ್ಟಿದ್ದ ದರ ಇವರ ಅದೃಷ್ಟವನ್ನು ಖುಲಾಯಿಸಿಬಿಟ್ಟಿತ್ತು. ಆವತ್ತು ಇಲ್ಲಿನ ರೈತರೆಲ್ಲಾ ಹಣದ ಥೈಲಿಗಳನ್ನೇ ಬಗಲಲ್ಲಿಟ್ಟುಕೊಂಡು ಸಂಭ್ರಮಿಸಿದ್ದರು.  ದಿನ ಬೆಳಗಾಗುವುದರಲ್ಲಿ ಈರುಳ್ಳಿ ಬೆಳೆದ ಭಾಗ್ಯವಂತರೆಲ್ಲಾ ಬ್ಯಾಂಕ್‌ಗಳಲ್ಲಿ ಲಕ್ಷಾಂತರ ರೂಪಾಯಿ ಠೇವಣಿ ಇಟ್ಟರು. ಗ್ರಾಮಕ್ಕೆ ಹೊಸ ಹೊಸ ಬೈಕ್‌ಗಳು ಬಂದವು. ಗಂಡಸರು, ಹೆಂಗಸರ ಜೀವನ ಶೈಲಿ ಎಲ್ಲರ ಕಣ್ಣು ಕುಕ್ಕುವ ಹಾಗೆ ಬದಲಾಯಿತು. ರೈತರ ಸಣ್ಣಸಣ್ಣ ಸಡಗರಗಳ ಹಿಂದೆ ಈರುಳ್ಳಿಯ ದುಡ್ಡು ಝಣ ಝಣ ಎನ್ನುತ್ತಿತ್ತು. ಜನ ಇವರನ್ನು ನೋಡಿ ಹೊಟ್ಟೆಕಿಚ್ಚುಪಡುವಷ್ಟು ಸುಧಾರಣೆ ಕಂಡುಬಂದಿತ್ತು.ಅಲ್ಲಿಂದ ಇಲ್ಲಿ ತನಕ ಅಲ್ಪಸ್ವಲ್ಪ ಕಷ್ಟ-ಸುಖಗಳ ನಡುವೆ ಚೆಂದನೆಯ ಸುಖಜೀವನ ಮಾಡುತ್ತಿದ್ದ ಕಲ್ಲಹಳ್ಳಿ ಗ್ರಾಮದ ರೈತರು ಇದುವರೆಗೂ ಬರದ ಬಿಸಿಗೆ ಬೆಚ್ಚಗಾಗಿರಲೇ ಇಲ್ಲ. ಕಳೆದ ವರ್ಷ ಆರ್ಭಟಿಸಿದ್ದ ಬರವೂ ಇವರ ಮೇಲೆ ಅಂತಹ ಗಾಢ ಪರಿಣಾಮ ಬೀರಿರಲಿಲ್ಲ. ಗ್ರಾಮದ ಕೆರೆ ಭರ್ತಿಯಾಗಿದ್ದರಿಂದ ಕೃಷಿಗೆ ಪೂರ್ಣ ಆಸರೆಯಾಗಿತ್ತು.ಸುಮಾರು 300 ಎಕರೆಯ ವಿಸ್ತಾರ ಪ್ರದೇಶದಲ್ಲಿ ಹರಡಿಕೊಂಡಿದ್ದ ವಿಶಾಲ ಕೆರೆ ಗ್ರಾಮದ ಜೀವಸೆಲೆಯೇ ಆಗಿತ್ತು. ಎಲ್ಲ ಸಂದರ್ಭಗಳಲ್ಲೂ ಇವರ ಕೈ ಹಿಡಿದಿತ್ತು. ಈ ಕೆರೆಯ ತೂಬು ಎತ್ತಿದ ಉದಾಹರಣೆಗಳೇ ವಿರಳ ಎನ್ನುವಂತಿತ್ತು.ಇಂತಹ ಮೈದುಂಬಿದ ಕೆರೆಯ ಸುತ್ತಮುತ್ತ ಜಮೀನುಗಳಲ್ಲಿ ಸುಮಾರು ಒಂದು ಸಾವಿರ ಕೊಳವೆ ಬಾವಿಗಳನ್ನು ಕೊರೆಯಿಸಲಾಗಿತ್ತು. ಕನಿಷ್ಠ 400-500 ಅಡಿ ಆಳಕ್ಕೆ ಕೊರೆದಿದ್ದ ಈ ಕೊಳವೆ ಬಾವಿಗಳೇ ರೈತರ ನೀರಾವರಿಯ ಮೂಲವಾಗಿದ್ದವು. ಆದರೆ, ಇಂತಹ ಆರೋಗ್ಯಪೂರ್ಣ ಕೆರೆ ಈ ವರ್ಷ ಕಡೆಗೂ ಬರಿದಾಗೇ ಬಿಟ್ಟಿತು. ನೀರೆಲ್ಲಾ ಇಂಗಿ ಹೋಗಿ ತಳದಲ್ಲಿನ ಮಣ್ಣ ಚಕ್ಕಳಗಳು ಪರಿಸ್ಥಿತಿಯ ಭೀಕರತೆಯನ್ನು ಸಾರತೊಡಗಿದವು. ಜಿಲ್ಲೆಯಲ್ಲಿ ಕೈಕೊಟ್ಟ ಮುಂಗಾರು ತನ್ನ ಕಷ್ಟಗಳ ಅಧ್ಯಾಯದಲ್ಲಿ ಕಲ್ಲಹಳ್ಳಿಯನ್ನೂ ತೆಕ್ಕೆಗೆ ಎಳೆದುಕೊಂಡಿತು. ಗ್ರಾಮದ ಅಂತರ್ಜಲ ಕುಸಿದು ಕೊಳವೆ ಬಾವಿಗಳೆಲ್ಲಾ ಬರಿದಾದವು. ಬೆಳೆಗಳು ಬಾಡಿ ಜಮೀನುಗಳು ಭಣಗುಟ್ಟತೊಡಗಿದವು.ಇದೇ ಗ್ರಾಮದ ಚಂದ್ರಣ್ಣ ಎಂಬುವವರು ತಮ್ಮ 18 ಎಕರೆ ಜಮೀನಿನಲ್ಲಿ 12 ಕೊಳವೆ ಬಾವಿಗಳನ್ನು ಕೊರೆಯಿಸಿದ್ದರೂ ಎರಡರಲ್ಲಿ ಮಾತ್ರ ನೀರು ದೊರೆಯಿತು! ಈ ಎರಡು ಕೊಳವೆ ಬಾವಿಗಳ ಪೈಕಿ ಒಂದರಲ್ಲಿ ಒಂದು ಇಂಚು, ಮತ್ತೊಂದರಲ್ಲಿ ಒಂದೂವರೆ ಇಂಚು ನೀರು ದೊರೆಯಿತು!!  ತನ್ನ 4 ಎಕರೆ ಜಮೀನಿನಲ್ಲಿ ಈರುಳ್ಳಿ ಬೀಜ ಚೆಲ್ಲಿದ್ದ ಚಂದ್ರಣ್ಣನ ಜಮೀನಿಗೆ ನೀರು ತುರ್ತಾಗಿ ಬೇಕಿತ್ತು. ಭೂ ತಾಯಿಯ ಒಡಲಿಗೆ ಲಕ್ಷಾಂತರ ರೂಪಾಯಿ ಬಂಡವಾಳ ಸುರುವಿದ್ದ ಆತ, ಈರಳ್ಳಿಯನ್ನು ಬೆಳೆದು ಪ್ರತಿಫಲ ಪಡೆದೇ ತೀರುತ್ತೇನೆಂದು ಹಟ ಹಿಡಿದಿದ್ದ. ಆದರೇನು? ಜಮೀನಿಗೆ ಉಣಿಸುವಷ್ಟು ನೀರೇ ಇರಲಿಲ್ಲ. ಮತ್ತೊಂದೆಡೆ ನಾಲ್ಕೂವರೆ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬಾಳೆಯೂ ನಿಧಾನವಾಗಿ ಒಣಗುತ್ತಿದ್ದುದನ್ನು ನೋಡಿ ಸುಮ್ಮನಿರಲು ಆತನ ಮನಸ್ಸು ತಯಾರಿರಲಿಲ್ಲ. ಹೀಗಾಗಿ, ಆತ 12 ಕೊಳವೆಬಾವಿ ಕೊರೆಯಿಸುವಷ್ಟು ಮಟ್ಟಕ್ಕೆ ಹತಾಶನಾಗಿ ಹೋಗಿದ್ದ. ಹಿಂದಿನ ವರ್ಷ ಚಂದ್ರಣ್ಣ ಇದೇ ಜಮೀನಿನ ಒಂದೂ ಮುಕ್ಕಾಲು ಎಕರೆಯಲ್ಲಿ 6 ಟನ್ ಬಾಳೆ ಪಡೆದಿದ್ದ. ಆದರೆ, ಈ ವರ್ಷ ಬಾಳೆ ಗೊನೆಯನ್ನೇ ನೋಡಲು ಆತನಿಗೆ ಸಾಧ್ಯವಾಗಿಲ್ಲ.ಕಲ್ಲಳ್ಳಿಯ ಮತ್ತೊಬ್ಬ ರೈತ ತಿಪ್ಪೇಸ್ವಾಮಿಯ ಕಥೆಯೂ ಇವನಿಗಿಂತ ಭಿನ್ನವಿಲ್ಲ. ತಿಪ್ಪೇಸ್ವಾಮಿ ತಮ್ಮ ಮೂರೂವರೆ ಎಕರೆಯಲ್ಲಿ 5 ಕೊಳವೆ ಬಾವಿ ಕೊರೆಯಿಸಿದ್ದಾರೆ. ಈಗ ಎಲ್ಲ ಕೊಳವೆ ಬಾವಿಗಳೂ ಜೀವ ಕಳೆದುಕೊಂಡಿವೆ. ನೆಲ ಬಂಜೆಯಾಗಿ ಕುಳಿತಿದೆ. ಜಮೀನು ಬಿತ್ತನೆಯಾಗದೆ ಪಾಳು ಬಿದ್ದಿದೆ.ಸದ್ಯ ಚಿತ್ರದುರ್ಗ ಜಿಲ್ಲೆಯ ಯಾವುದೇ ದಿಕ್ಕಿಗೆ ಹೋದರೂ ಇಂತಹುದೇ ಬರಪೀಡಿತ ಜನರ ಪಡಿಪಾಟಲುಗಳು ನಮ್ಮ ಕಣ್ಣಿಗೆ ಢಾಳಾಗಿ ರಾಚುತ್ತವೆ. ಮೇಲಿನವು ಕೇವಲ ಬೆರಳಣಿಕೆಯ ಉದಾಹರಣೆಗಳು ಮಾತ್ರ. ಭೂಮಿಯ ಆಳಕ್ಕೆ ಕೊಳವೆ ಬಾವಿಗಳನ್ನು ಕೊರೆದೂ ಕೊರೆದೂ ನೀರು ಪಡೆದ ರೈತರಿಗೆ ಈಗ ಕೆರೆ ಸುತ್ತಮುತ್ತಲು ಇರುವ ಜಮೀನುಗಳಲ್ಲೇ ತೇವಾಂಶ ಕಾಣುತ್ತಿಲ್ಲ. ಅಂತರ್ಜಲ ಪಾತಾಳಕ್ಕೆ ಇಳಿದು ಹೋಗಿದ್ದು ಇವರ ಬದುಕಿನ ಪಸೆಯನ್ನೇ ಆರಿಸಿದೆ. ಆಗೊಂದು ಕಾಲಕ್ಕೆ ಮಲೆನಾಡು ಎಂದು ಕರೆಸಿಕೊಳ್ಳುತ್ತಿದ್ದ ಇಂದಿನ ಈ ಬಯಲುಸೀಮೆಯಲ್ಲಿ ಈಗ ಜಲದೇವತೆ ಅಕ್ಷರಶಃ ಮುನಿಸಿಕೊಂಡಿದ್ದಾಳೆ.ರಾಜ್ಯದಲ್ಲೇ ಅತ್ಯಂತ ಹಿಂದುಳಿದ ಪ್ರದೇಶಗಳೆನಿಸಿರುವ ಜಿಲ್ಲೆಯ ಮೊಳಕಾಲ್ಮುರು ಮತ್ತು ಚಳ್ಳಕೆರೆಯಂತಹ ಬಿರುಬಿಸಿಲ ತಾಲ್ಲೂಕುಗಳ ಜನತೆಗೆ ಬರ ಎನ್ನುವುದು ಗರಬಡಿಸುವ ಸಂಗತಿಯೇ ಅಲ್ಲ ಎನ್ನುವಂತಾಗಿದೆ. ಈ ಜನರ ಪಾಲಿಗೆ ಇದೊಂದು ಸಾಮಾನ್ಯ ಪ್ರಕ್ರಿಯೆಯಾಗಿ ಪರಿಣಮಿಸಿಬಿಟ್ಟಿದೆ. ವರ್ಷದಲ್ಲಿ ಒಂದೇ ಬೆಳೆ ಬೆಳೆಯುವ ಈ ಭಾಗದ ರೈತರು ಅಗಸ್ಟ್ ತಿಂಗಳವರೆಗೂ ಮಳೆರಾಯನಿಗೆ ಕಾದು ಬಿತ್ತಿದ ಉದಾಹರಣೆಗಳಿವೆ. ತಡವಾಗಿ ಬಿತ್ತಿದ ಬೆಳೆಯಿಂದ ಇಳುವರಿ ಕುಸಿದರೂ ಬದುಕುವ ಉತ್ಸಾಹವನ್ನು ಮಾತ್ರ ಇವರೆಂದೂ ಕಳೆದುಕೊಂಡಿಲ್ಲ.ಕಳೆದ 100 ವರ್ಷಗಳಲ್ಲಿ 50ಕ್ಕೂ ಹೆಚ್ಚು ಬಾರಿ ಬರ ಎದುರಿಸುವ ಚಿತ್ರದುರ್ಗ ಜಿಲ್ಲೆ ಈಗ ಮತ್ತೊಂದು ಬರದ ಸವಾಲು ಎದುರಿಸಲು ಏದುಸಿರು ಬಿಡುತ್ತಿದೆ. ಸತತ ಎರಡನೇ ವರ್ಷಕ್ಕೆ ಕಾಲಿಟ್ಟಿರುವ ಪ್ರಕೃತಿಯ ಮುನಿಸು ಜನರ ಆತ್ಮಸ್ಥೈರ್ಯವನ್ನು ನಿಧಾನವಾಗಿ ಕುಂದಿಸುತ್ತಿದೆ. ಈ ಹಿಂದೆ ಬರ ಬಂದಾಗ ನಿರ್ಮಿಸಿದ್ದ ಹಲವು ಗೋಶಾಲೆಗಳು ಈಗ ಮತ್ತೆ ಗಿಜಿಗುಡಲು ಆರಂಭಿಸಿವೆ. ಜಾನುವಾರುಗಳು ಈ ಗೋಶಾಲೆಗಳತ್ತ ಅಂಬಾ... ಎನ್ನುವ ಕೀರಲು ದನಿಯಲ್ಲಿ ಪುನಃ ಹೆಜ್ಜೆ ಹಾಕುತ್ತಿವೆ. ಆದರೆ, ರೈತನ ಗಂಟಲಲ್ಲಿ ಮಾತ್ರ ಆ ಕೀರಲು ದನಿಗೂ ತ್ರಾಣವಿಲ್ಲದಂತಾಗಿದೆ. ಮೌನರೋದನದಲ್ಲಿ ಮುಗಿಲು ನೋಡುತ್ತಿದ್ದಾನೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry