ಬಯಲುಸೀಮೆ ಮಂಡಳಿಗೆ ಕೇವಲ 10 ಕೋಟಿ .ಕೋಟೆ ನಾಡಿಗೆ ಸಿಹಿ-ಕಹಿ ಬಜೆಟ್

7

ಬಯಲುಸೀಮೆ ಮಂಡಳಿಗೆ ಕೇವಲ 10 ಕೋಟಿ .ಕೋಟೆ ನಾಡಿಗೆ ಸಿಹಿ-ಕಹಿ ಬಜೆಟ್

Published:
Updated:

ಚಿತ್ರದುರ್ಗ: ಪ್ರಸಕ್ತ ಸಾಲಿನ ಬಜೆಟ್ ಜಿಲ್ಲೆಯಮಟ್ಟಿಗೆ  ಸಿಹಿ-ಕಹಿ ಎರಡನ್ನೂ ತಂದಿದೆ. ಆದರೆ, ನಿರೀಕ್ಷೆಯಷ್ಟು ಹೊಸ ಯೋಜನೆಗಳು ಜಾರಿಯಾಗುತ್ತವೆ ಎನ್ನುವ ಜನರ ಆಸೆಗೆ ತಣ್ಣೀರರೆಚಿದಂತಾಗಿದೆ.ಚಿತ್ರದುರ್ಗದಲ್ಲಿ ಕೇಂದ್ರ ಕಚೇರಿ ಹೊಂದಿರುವ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಗೆ ಈ ಬಾರಿಯೂ ತಾರತಮ್ಯ ಮಾಡಲಾಗಿದೆ. 14 ಜಿಲ್ಲೆಗಳು, 57 ತಾಲ್ಲೂಕುಗಳ 70 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿ ಒಳಗೊಂಡಿರುವ ಬಯಲುಸೀಮೆ ಅಭಿವೃದ್ಧಿ ಮಂಡಳಿಗೆ ಈ ಬಾರಿ ಬಜೆಟ್‌ನಲ್ಲಿ ಕೇವಲ 10 ಕೋಟಿ ರೂ ಅನುದಾನ ಹಂಚಿಕೆಯಾಗಿರುವುದು ಅಸಮಾಧಾನ ಮೂಡಿಸಿದೆ.ನಗರದ ಹೊರವಲಯದ ಜೋಗಿಮಟ್ಟಿಯಲ್ಲಿ ಪರಿಸರ ಪ್ರವಾಸೋದ್ಯಮ ಯೋಜನೆ ಪ್ರಕಟಿಸಿರುವುದು ಜನರಿಗೆ ಅಲ್ಪಮಟ್ಟಿಗೆ ಸಂತಸ ತಂದಿದೆ. ಈ ಹಿಂದೆ ಪ್ರಕಟಿಸಿದಂತೆ ನಿಜಲಿಂಗಪ್ಪ ಸ್ಮಾರಕ ಮೂಲಕ ಸಂಶೋಧನೆ ಚಟುವಟಿಕೆ ಕೈಗೊಳ್ಳಲು 5 ಕೋಟಿ ರೂ ನೀಡಲಾಗಿದೆ.ರಾಜ್ಯದಲ್ಲಿ ಒಟ್ಟಾರೆ ಕೃಷಿ, ಕೃಷಿಸಂಬಂಧಿತ ಮತ್ತು ನೀರಾವರಿ ವಲಯಗಳಿಗಾಗಿ 17,857 ಕೋಟಿ ರೂ ಹಂಚಿಕೆ ಮಾಡುವ ಮೂಲಕ ಭದ್ರಾ ಮೇಲ್ದಂಡೆ ಯೋಜನೆಯನ್ನು ಪೂರ್ಣಗೊಳಿಸುವ ಭರವಸೆಯನ್ನು ಬಜೆಟ್‌ನಲ್ಲಿ ನೀಡಿರುವುದು ಜಿಲ್ಲೆಯಲ್ಲಿ ಸಮಾಧಾನ ತಂದಿದೆ.ಜಿಲ್ಲೆಯಲ್ಲಿ ಪುಷ್ಪ ಕೃಷಿ ವಿಪುಲವಾಗಿದ್ದರೂ ಸರ್ಕಾರ ವಿಶೇಷ ಯೋಜನೆಗಳನ್ನು ಜಿಲ್ಲೆಗೆ ಪ್ರಕಟಿಸದಿರುವುದು ಹೂವು ಬೆಳೆಗಾರರಲ್ಲಿ ನಿರಾಸೆ ಮೂಡಿಸಿದೆ.ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಆದ್ಯತೆ: ಜಿಲ್ಲೆಯ ಚಳ್ಳಕೆರೆ ತಾಲ್ಲೂಕನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಸಂಪನ್ಮೂಲ  ಕೇಂದ್ರವನ್ನಾಗಿಸಲು ಕ್ರಮಕೈಗೊಳ್ಳಲಾಗಿದೆ. ಜತೆಗೆ ಆಧುನಿಕ ವಸತಿ ಯೋಜನೆಗಾಗಿ ‘ವೇದಾವತಿ ನಗರ’ವನ್ನು ಕೈಗೆತ್ತಿಕೊಳ್ಳಲು ಕರ್ನಾಟಕ ಗೃಹ ಮಂಡಳಿಗೆ 50 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಉಳಿದಂತೆ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಅಥವಾ ಯೋಜನೆಗಳನ್ನು ಸರ್ಕಾರ ಪ್ರಕಟಿಸಿಲ್ಲ ಎನ್ನುವುದು ಜಿಲ್ಲೆಯ ಜನತೆಯ ಅಭಿಪ್ರಾಯ.ಬಜೆಟ್ ಸಮಾಧಾನ ತಂದಿಲ್ಲ

ರಾಜ್ಯ ಬಜೆಟ್ ಸಮಾಧಾನ ತಂದಿಲ್ಲ. ಕೃಷಿಗೆ ಪ್ರಾತಿನಿಧ್ಯ ನೀಡುತ್ತೇವೆ ಎನ್ನುವುದು ಕೇವಲ ಪ್ರಚಾರಕ್ಕೆ ಸೀಮಿತವಾಗಿದೆ. ಮಹತ್ವದ ಸಂಗತಿ ಯಾವುದೂ ಇಲ್ಲ ಎಂದು ಜಿಲ್ಲಾ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಎಂ. ಜಯಣ್ಣ ಪ್ರತಿಕ್ರಿಯಿಸಿದ್ದಾರೆ.ಈ ಬಾರಿ ನೀರಾವರಿ ಯೋಜನೆಗಳಿಗೆ ಹೆಚ್ಚಿಗೆ ಅನುದಾನ ನೀಡಿರುವುದರಿಂದ ಮಧ್ಯ ಕರ್ನಾಟಕದ ಮಹತ್ವಾಕಾಂಕ್ಷಿ ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನವಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಸಮಾಜ ಕಲ್ಯಾಣ ಇಲಾಖೆಗೆ ಹೆಚ್ಚು ಹಣ ನೀಡಬೇಕು ಎಂದು ಕೋರಲಾಗಿತ್ತು. ಪರಿಶಿಷ್ಟ ಜಾತಿ ಮತ್ತು ಪಂಗಡದ ಜನಸಂಖ್ಯೆ ಆಧಾರದ ಮೇಲೆ ಅನುದಾನ ಹಂಚಿಕೆಯಾಗಿಲ್ಲ ಎಂದು ವಿವರಿಸಿದ್ದಾರೆ.ಕೃಷಿಗೆ ಆದ್ಯತೆ ಸ್ವಾಗತಾರ್ಹಈ ಬಾರಿ ಅಸಾಂಪ್ರದಾಯಿಕ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಕೃಷಿ ವಲಯವನ್ನು ವಿಶೇಷವಾಗಿ ಗುರುತಿಸಲಾಗಿದೆ ಎನ್ನುವುದನ್ನು ತಿಳಿಸಲು ಹಲವಾರು ಕಸರತ್ತುಗಳನ್ನು ಮಾಡಿರುವುದು ಸ್ವಾಗತಾರ್ಹ ಎಂದು ಆರ್ಥಿಕ ತಜ್ಞ ಜಿ.ಎನ್. ಮಲ್ಲಿಕಾರ್ಜುನಪ್ಪ ಅಭಿಪ್ರಾಯಪಟ್ಟಿದ್ದಾರೆ.ವಿಶೇಷವೇನೆಂದರೆ ಕೃಷಿ ಉತ್ಪಾದನೆಯಲ್ಲಿ ಹೆಚ್ಚಳ ತರಲು ಗ್ರಾಮೀಣ ಅಭಿವೃದ್ಧಿಗೆ ಮೂಲ ಸವಲತ್ತುಗಳನ್ನು ಗಟ್ಟಿಗೊಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ದೀರ್ಘ ಕಾಲದ ಅಭಿವೃದ್ಧಿಯ ದೃಷ್ಟಿಯಿಂದ ಕೈಗೊಂಡಿರುವ ಕ್ರಮಗಳು ನಿಜಕ್ಕೂ ರೈತರಿಗೆ ತಲುಪಿದಲ್ಲಿ ಅವರ ಉದ್ದೇಶ ಈಡೇರಿದಂತಾಗುತ್ತದೆ ಎಂದು ತಿಳಿಸಿದ್ದಾರೆ.

-ಜಿ.ಎನ್. ಮಲ್ಲಿಕಾರ್ಜುನಪ್ಪ

ಆರ್ಥಿಕ ತಜ್ಞ.ದೂರದೃಷ್ಟಿ ಇಲ್ಲದ ಬಜೆಟ್

ಕೃಷಿ ಬಜೆಟ್‌ಗೆ ದೂರದೃಷ್ಟಿ ಇಲ್ಲ. ಕೇವಲ ಹೆಸರು ಮಾತ್ರ ನೀಡಿದ್ದಾರೆ. ಕೃಷಿ ಸಮಸ್ಯೆಯನ್ನು ಪರಿಪೂರ್ಣವಾಗಿ ಅರ್ಥ ಮಾಡಿಕೊಂಡು ಮಂಡಿಸಿಲ್ಲ. ಕೃಷಿ ಕ್ಷೇತ್ರಕ್ಕೆ ಮುಖ್ಯವಾಗಿರುವ ಗ್ರಾಮೀಣ ರಸ್ತೆ, ಮಾರುಕಟ್ಟೆ, ವಿದ್ಯುತ್, ಉಗ್ರಾಣಗಳ, ಉತ್ತಮ ಬೀಜ ಮತ್ತು ಗೊಬ್ಬರಗಳ ಬಗ್ಗೆ ಹೆಚ್ಚು ಒತ್ತು ನೀಡಿಲ್ಲ. ಹೊಸದಾಗಿ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಂಡಿಲ್ಲ. ಕೈಗಾರಿಕೆಗಳಿಗೂ ಉತ್ತೇಜನ ಇಲ್ಲ. ಒಟ್ಟಾರೆ ಇದು ಅಭಿವೃದ್ಧಿ ಪರ ಬಜೆಟ್ ಅಲ್ಲ.

-ಎಚ್.ಪಿ. ರಮೇಶ್, ಲೆಕ್ಕಪರಿಶೋಧಕರು.

‘ಹಣದುಬ್ಬರ ಹೆಚ್ಚಾಗುವ ಆತಂಕ’

ರಾಜ್ಯ ಬಜೆಟ್‌ನಲ್ಲಿ ಮೂಲಸೌಕರ್ಯಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ಚಳ್ಳಕೆರೆಯನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಸಂಪನ್ಮೂಲ ಕೇಂದ್ರವನ್ನಾಗಿ ಮಾಡಲು ಪ್ರಕಟಿಸಿರುವುದು ಸ್ವಾಗತಾರ್ಹ. ಜ್ಞಾನ ಆಯೋಗಕ್ಕೆ ಮತ್ತು ಅಸಂಘಟಿತ ಕಾರ್ಮಿಕರಿಗೆ ವಿಶೇಷ ನೆರುವು ನೀಡುವ ಕ್ರಮ ಶ್ಲಾಘನೀಯ. ಆದರೆ, ರಾಜ್ಯ ಅಬಕಾರಿ ತೆರಿಗೆ ಹೆಚ್ಚಿಸಲಾಗಿದೆ. ಇದರಿಂದ ಔಷಧಿಗಳ ಬೆಲೆ ಹೆಚ್ಚಾಗುವುದರಿಂದ ಬಡವರಿಗೆ ಹೊರೆಯಾಗುತ್ತದೆ. ಮೋಟಾರ್ ವಾಹನ ತೆರಿಗೆ ಹೆಚ್ಚಳ ಮಾಡಿರುವುದರಿಂದ ಸಾಗಾಣಿಕೆ ವೆಚ್ಚ ಹೆಚ್ಚಾಗಿ ಸರಕುಗಳ ಬೆಲೆ ಹೆಚ್ಚಾಗುತ್ತದೆ. ಈಗಾಗಲೇ ಹಣದುಬ್ಬರ ಹೆಚ್ಚಾಗಿರುವುದರಿಂದ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗುತ್ತದೆ. ಇದೊಂದು ಮೈಲಿಗಲ್ಲು ಬಜೆಟ್ ಎನಿಸಿದರೂ ಹಣದುಬ್ಬರ ಹೆಚ್ಚಾಗುವ ಆತಂಕವಿದೆ. ಕೃಷಿ ಬಜೆಟ್ ಉತ್ತಮವಾಗಿದೆ. ರೈತರ ಪರವಾಗಿ ಬಜೆಟ್ ಮಂಡಿಸಲಾಗಿದೆ. ಆದರೆ, ಎಷ್ಟರಮಟ್ಟಿಗೆ ಅನುಷ್ಠಾನವಾಗುತ್ತದೆ ಎನ್ನುವುದು ಕಾದು ನೋಡಬೇಕು.

-ಜಿ.ಟಿ. ಚಂದ್ರಶೇಖರ್.

ಅರ್ಥಶಾಸ್ತ್ರ ಉಪನ್ಯಾಸಕ, ಚಳ್ಳಕೆರೆ.‘ಸಕಾಲಕ್ಕೆ ಅನುದಾನ ಬಿಡುಗಡೆಯಾಗಲಿ’

ಕೃಷಿ ಬಜೆಟ್ ಸ್ವಾಗತಾರ್ಹ. ಆದರೆ, ಕಾರ್ಯರೂಪಕ್ಕೆ ಬಂದರೆ ಮಾತ್ರ ರೈತರಿಗೆ ಅನುಕೂಲವಾಗುತ್ತದೆ. ಸಕಾಲಕ್ಕೆ ಅನುದಾನ ಬಿಡುಗಡೆ ಮಾಡಿದರೆ ಮಾತ್ರ ಕೃಷಿ ಬಜೆಟ್‌ಗೆ ಅರ್ಥ ಬರುತ್ತದೆ.

-ಕೆ.ಪಿ. ಭೂತಯ್ಯ. ರೈತ ಮುಖಂಡ.

ಅಗತ್ಯ ವಸ್ತುಗಳ ಬೆಲೆ ಹೆಚ್ಚಳ

ವ್ಯಾಟ್ ಹೆಚ್ಚಳದಿಂದ ಅಗತ್ಯ ವಸ್ತುಗಳ ಬೆಲೆಗಳು ಏರಿಕೆಯಾಗಲಿವೆ. ಇದರಿಂದ ಸಾಮಾನ್ಯ ಜನರ ಸಂಕಷ್ಟಗಳು ಹೆಚ್ಚಾಗಲಿವೆ. ಕೃಷಿ ಬಜೆಟ್ ರೈತ ಸಮುದಾಯಕ್ಕೆ ಹರ್ಷವನ್ನುಂಟು ಮಾಡಲಿದೆ. ಈ ಮೂಲಕ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕಾದ ಅನಿವಾರ್ಯತೆ ಇದೆ.

-ಕೆ. ರಾಮರಾವ್

ಮುಖ್ಯಸ್ಥರು, ವಾಣಿಜ್ಯಶಾಸ್ತ್ರ ವಿಭಾಗ,

ಸರ್ಕಾರಿ ಕಲಾ ಕಾಲೇಜು. ಚಿತ್ರದುರ್ಗ‘ತೃಪ್ತಿ ತಂದಿಲ್ಲ’

ಕೃಷಿ ಬಜೆಟ್ ತೃಪ್ತಿ ತಂದಿಲ್ಲ. ಸಹಕಾರ ಸಂಘಗಳ ಮೂಲಕ ನೀಡುವ ಸಾಲ ಯಾವುದಕ್ಕೂ ಸಾಕಾಗುವುದಿಲ್ಲ. ಇದು ಕಣ್ಣೊರೆಸುವ ತಂತ್ರವಷ್ಟೇ. ಜಿಲ್ಲೆಗೆ ತೋಟಗಾರಿಕೆ ಉತ್ತೇಜನಕ್ಕೆ ಸಂಬಂಧಿಸಿದಂತೆ ಯಾವುದೇ ವಿಶೇಷ ಯೋಜನೆ ಪ್ರಕಟವಾಗಿಲ್ಲ. ಜಿಲ್ಲೆಯಲ್ಲಿ ತೋಟಗಾರಿಕೆ ಉತ್ಪನ್ನಗಳನ್ನು ಬೆಳೆಯುವುದರಿಂದ ಶೈತ್ಯಾಗಾರ ನಿರ್ಮಾಣ ಮತ್ತು ಮಾರುಕಟ್ಟೆ ವ್ಯವಸ್ಥೆ ಬಗ್ಗೆ ವಿಶೇಷ ಯೋಜನೆ ರೂಪಿಸಬಹುದಿತ್ತು. ನಗರದ ಮಧ್ಯದಲ್ಲಿ ‘ರೈತರ ಸಂತೆ’ಯ ಮಾದರಿಯಲ್ಲಿ ಮಾರುಕಟ್ಟೆಗಳನ್ನು ಸ್ಥಾಪಿಸಿದರೆ ರೈತರಿಗೆ ಅನುಕೂಲವಾಗುತ್ತದೆ. ರೈತರು ಬೆಳೆದ ಉತ್ಪನ್ನಗಳಿಗೆ ಅನುಕೂಲವಾಗುವ ಯೋಜನೆಗಳನ್ನು ಪ್ರಕಟಿಸಿದ್ದರೆ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಅವಕಾಶ ದೊರೆಯುತ್ತದೆ. ಈಗ ನಾವು ಮಧ್ಯವರ್ತಿಗಳಿಗೆ ಮಾರಾಟ ಮಾಡಬೇಕಾಗಿದೆ. ಈ ಅಂಶಗಳನ್ನು ಕೃಷಿ ಬಜೆಟ್‌ನಲ್ಲಿ ಸೇರಿಸಬೇಕಾಗಿತ್ತು.

-ಡಾ.ಮಧು ಸಣ್ಣತಮ್ಮಣ್ಣ, ಕೃಷಿಕರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry