ಬಯಲುಸೀಮೆ ಶಾಸಕರ ಕ್ಷೇತ್ರಕ್ಕೆ ತಲಾ 22.70 ಲಕ್ಷ

7

ಬಯಲುಸೀಮೆ ಶಾಸಕರ ಕ್ಷೇತ್ರಕ್ಕೆ ತಲಾ 22.70 ಲಕ್ಷ

Published:
Updated:

ಬೆಂಗಳೂರು: ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೆ ತಲಾ 22.70 ಲಕ್ಷ ರೂಪಾಯಿ ಅನುದಾನ ಹಂಚಿಕೆ ಮಾಡಲಾಗಿದೆ ಎಂದು ಯೋಜನಾ ಸಚಿವ ಎಸ್.ಆರ್.ಪಾಟೀಲ ಬುಧವಾರ ಇಲ್ಲಿ ತಿಳಿಸಿದರು.2013-14ನೇ ಸಾಲಿನ ಮಂಡಳಿಯ ಪ್ರಥಮ ಸಭೆ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, 14 ಜಿಲ್ಲೆಗಳ 57 ವಿಧಾನಸಭಾ ಕ್ಷೇತ್ರಗಳು ಮಂಡಳಿ ವ್ಯಾಪ್ತಿಯಲ್ಲಿವೆ. ಈ ವರ್ಷ ಮಂಡಳಿಗೆ ರೂ 17.30 ಕೋಟಿ ಅನುದಾನ ನಿಗದಿಯಾಗಿದೆ. ಹಿಂದಿನ ವರ್ಷಗಳಲ್ಲಿ ಖರ್ಚಾಗದೆ ಇರುವ ಹಣವೂ ಸೇರಿ ಒಟ್ಟು ರೂ19.26 ಕೋಟಿ ಅನುದಾನ ಬಳಕೆಗೆ ಲಭ್ಯವಾಗಲಿದೆ ಎಂದರು.ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ನಿಗದಿ ಮಾಡಿರುವ 22.70 ಲಕ್ಷ ರೂಪಾಯಿ ತುಂಬಾ ಕಡಿಮೆ. ಇನ್ನೂ ಹೆಚ್ಚಿನ ಅನುದಾನ ನೀಡಬೇಕು ಎಂದು ಶಾಸಕರು ಒತ್ತಾಯಿಸಿದ್ದಾರೆ. ಮಂಡಳಿ ವ್ಯಾಪ್ತಿಯಲ್ಲಿ ಬರುವ ಶಾಸಕರ ನಿಯೋಗವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಕರೆದುಕೊಂಡು ಹೋಗಿ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡುವುದಾಗಿ ತಿಳಿಸಿದರು.ಈಗ ನಿಗದಿ ಮಾಡಿರುವ ಅನುದಾನದಲ್ಲಿ ಯಾವ ಯಾವ ಕಾಮಗಾರಿಗಳನ್ನು ತೆಗೆದುಕೊಳ್ಳಬಹುದು ಎಂಬ ಪಟ್ಟಿಯನ್ನು ಹತ್ತು ದಿನಗಳಲ್ಲಿ ನೀಡುವಂತೆ ಶಾಸಕರಿಗೆ ಮನವಿ ಮಾಡಲಾಗಿದೆ. ಪಟ್ಟಿ ಬಂದ ನಂತರ ಅನುಮೋದನೆ ನೀಡಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದರು.ವಿಶೇಷ ಘಟಕ ಯೋಜನೆ, ಗಿರಿಜನ ಉಪ ಯೋಜನೆ, ನಬಾರ್ಡ್ ಯೋಜನೆಯಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಜಲಸಂಪನ್ಮೂಲ ಅಭಿವೃದ್ಧಿ, ಭೂ ಸಂರಕ್ಷಣೆ, ಕುಡಿಯುವ ನೀರು ಇತ್ಯಾದಿಗಳಿಗೆ ಒತ್ತು ನೀಡಲಾಗುವುದು ಎಂದು ತಿಳಿಸಿದರು.ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಮಾತನಾಡಿ, ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು. ಈಗ ನಿಗದಿಯಾಗಿರುವ ಅನುದಾನ ತುಂಬಾ ಕಡಿಮೆ ಎಂಬುದು ಗೊತ್ತಿದೆ ಎಂದರು. ಶಾಸಕರಾದ ಕೆ.ಬಿ.ಕೋಳಿವಾಡ, ಎಂ.ಕೃಷ್ಣಾರೆಡ್ಡಿ, ಕೆ.ಎನ್.ರಾಜಣ್ಣ ಮೊದಲಾದವರು ಹೆಚ್ಚಿನ ಅನುದಾನ ನೀಡಬೇಕು. ತ್ವರಿತವಾಗಿ ಕಾಮಗಾರಿಗಳಿಗೆ ಅನುಮೋದನೆ ನೀಡಬೇಕು ಎಂದು ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry