ಬಯಲು ರಂಗಮಂದಿರದಲ್ಲಿ ನೃತ್ಯ ಸಂಭ್ರಮ

7

ಬಯಲು ರಂಗಮಂದಿರದಲ್ಲಿ ನೃತ್ಯ ಸಂಭ್ರಮ

Published:
Updated:

ಮೈಸೂರು: ದಸರಾ ಮಹೋತ್ಸವದ ಆಕರ್ಷಣೀಯ ಕಾರ್ಯಕ್ರಮಗಳಲ್ಲಿ ಒಂದಾದ `ಯುವ ಸಂಭ್ರಮ~ದಲ್ಲಿ ಐದನೇ ದಿನವಾದ ಭಾನುವಾರ ಯುವ ಸಮೂಹ ಸಾಕಷ್ಟು ಸಂಖ್ಯೆಯಲ್ಲಿ ನೆರೆದಿತ್ತು. ಅತ್ತ ವೇದಿಕೆಯಲ್ಲಿ ನೃತ್ಯ ಪ್ರದರ್ಶನವಾದರೆ ಇತ್ತ ನೆರೆದಿದ್ದ ಪ್ರೇಕ್ಷಕರೆಲ್ಲಾ ಎದ್ದು ಕುಣಿಯುತ್ತಿದ್ದರು.ಅಬ್ಬರದ ಸಂಗೀತ ಕೇಳಿಬಂದಾಗ ಯುವಕರ ಸಂಭ್ರಮಕ್ಕೆ ಪಾರವೇ ಇರುತ್ತಿರಲಿಲ್ಲ. ಕೇಕೆ, ಶಿಳ್ಳೆ ಹಾಕಿ ಹೆಜ್ಜೆ ಹಾಕುತ್ತಾ ಕುಣಿಯುತ್ತಿದ್ದರು. ಈ ನಡುವೆ ಚೇಷ್ಟೆ ಮಾಡುವವರು ಅದೆಷ್ಟೊ ಮಂದಿ. ಹುಡುಗರಿಗಿಂತ ನಾವೇನು ಕಡಿಮೆ ಇಲ್ಲ ಎಂಬಂತೆ ಹುಡುಗಿಯರು ಸಹ ಅಲ್ಲಲ್ಲಿ ಗುಂಪಾಗಿ ನರ್ತಿಸುವ ಜೊತೆಗೆ ಶಿಳ್ಳೆ ಹಾಕುತ್ತಿದ್ದರು.ಕೀನ್ಯ, ಮಯನ್ಮಾರ್‌ನ ವಿದೇಶಿ ವಿದ್ಯಾರ್ಥಿಗಳ ತಂಡ ಫ್ಯೂಷನ್ ನೃತ್ಯ ಕಾರ್ಯಕ್ರಮ ನಡೆಸಿ ಕೊಟ್ಟಿತು. ಆಂಗ್ಲ ಹಾಡಿಗೆ ವಿದೇಶಿ ವಿದ್ಯಾರ್ಥಿಗಳು ವಿಭಿನ್ನವಾಗಿ ನೃತ್ಯ ಕಾರ್ಯಕ್ರಮ   ನಡೆಸಿ ಕೊಟ್ಟರೆ, ಇತ್ತ ನೆರೆದಿದ್ದವರು ಅವರನ್ನೇ ಅನುಸರಿಸುತ್ತಿದ್ದರು.ಕೆ.ಆರ್.ನಗರ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಕಾಡು ಜನರ ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟು ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿದರು. ಕೊಳ್ಳೇಗಾಲದ ಮಾನಸ ಪ್ರಥಮ ದರ್ಜೆ ಕಾಲೇಜಿನ ತಂಡ ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸಿತು.ಮಂಡ್ಯ ಪಿಇಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳ ತಂಡ ನಡೆಸಿ ಕೊಟ್ಟ ಡೊಳ್ಳು ಕುಣಿತ ಆಕರ್ಷಕವಾಗಿತ್ತು. ಪ್ರೇಕ್ಷಕರು ಚಪ್ಪಾಳೆ ತಟ್ಟಿ, ಚೀರಾಡಿ ಕುಣಿತಕ್ಕೆ ಪ್ರೋತ್ಸಾಹ ನೀಡಿದರು.ಕುಕ್ಕೆ ಸುಬ್ರಹ್ಮಣ್ಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕಾಲೇಜಿನ ತಂಡ ಸಾಂಪ್ರದಾಯಿಕ ನೃತ್ಯ ಕಾರ್ಯ ಕ್ರಮ ನಡೆಸಿಕೊಟ್ಟು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರ ವಾಯಿತು. ಹೊಳೆ ನರಸೀಪುರ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ತಂಡ ಜನಪದ ನೃತ್ಯ ಪ್ರದರ್ಶನ ಕಾರ್ಯಕ್ರಮ ನಡೆಸಿಕೊಟ್ಟಿತು.ನೃತ್ಯ ಪ್ರದರ್ಶಿಸಿದ ತಂಡಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮೈಸೂರು ವಿಶ್ವವಿದ್ಯಾ ನಿಲಯ ಕುಲಸಚಿವ (ಪರೀಕ್ಷಾಂಗ) ಬಿ.ರಾಮು, ಮೇಯರ್ ಎಂ.ಸಿ.ರಾಜೇಶ್ವರಿ, ದಸರಾ ಯುವ ಸಂಭ್ರಮ ಉಪ ಸಮಿತಿ ಅಧ್ಯಕ್ಷ ಬಿ.ವಿ.  ಮಂಜುನಾಥ್, ಕಾರ್ಯಾಧ್ಯಕ್ಷ   ಎಂ.ಎನ್.ನಟರಾಜ್, ಉಪಾಧ್ಯಕ್ಷರಾದ ಕೆ.ಆರ್.ಚಿದಂಬರ, ವರುಣಾ ಮಂಜುನಾಥ್, ಗೀತಾಶ್ರೀ ಕೆ.ಎಸ್.ರಾವ್ ಬಹುಮಾನ ವಿತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry