ಭಾನುವಾರ, ನವೆಂಬರ್ 17, 2019
24 °C

ಬಯಲು ಸೀಮೆಯಲ್ಲಿ ನೀರಿನ ರಾಜಕೀಯ

Published:
Updated:

ಚಿತ್ರದುರ್ಗ: ಜಿಲ್ಲೆಯಲ್ಲಿ ಬರ ತಾಂಡವವಾಡುತ್ತಿದೆ. ಚುನಾವಣೆಯಲ್ಲಿ ಮಾತ್ರ ನೀರಿನ ರಾಜಕೀಯಕ್ಕೆ ಮಾತ್ರ ಬರ ಇಲ್ಲ. ಪ್ರತಿಯೊಬ್ಬ ಅಭ್ಯರ್ಥಿ ಮತ್ತು ರಾಜಕೀಯ ಪಕ್ಷಗಳಿಗೆ ನೀರಿನ ವಿಷಯವೇ ಕಾರ್ಯಸೂಚಿ.ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ನಿಜಲಿಂಗಪ್ಪ ಅವರ ಕನಸಿನ ಕೂಸಾದ ಮಹತ್ವಾಕಾಂಕ್ಷಿ ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ನಗರ ಮತ್ತು ಪಟ್ಟಣಗಳಿಗೆ ಕುಡಿಯುವ ನೀರು ಪೂರೈಸುವ ವಿಷಯಗಳು ಇಲ್ಲಿ ಚರ್ಚಾ ವಸ್ತುಗಳು. ಎದುರಾಳಿಗಳನ್ನು ಟೀಕಿಸಲು ಇದೇ ಪ್ರಮುಖ ಅಸ್ತ್ರ. ಪ್ರತಿಯೊಂದು ರಾಜಕೀಯ ವೇದಿಕೆಯಲ್ಲಿ ನೀರಿನ ವಿಷಯವಿಲ್ಲದೇ ಚರ್ಚೆ ಮುಕ್ತಾಯವಾಗುವುದಿಲ್ಲ.್ಙ 5,980 ಕೋಟಿ ಮೊತ್ತದ ಭದ್ರಾ ಮೇಲ್ದಂಡೆ ಯೋಜನೆಗೆ ಅನುಮೋದನೆ ನೀಡಿ ಚಾಲನೆಗೊಳಿಸಲು ಕಾಂಗ್ರೆಸ್ ಮತ್ತು ಜೆಡಿಎಸ್ ಕಾರಣ ಎಂದು ಎರಡೂ ಪಕ್ಷಗಳು ತಮ್ಮ ಬೆನ್ನು ತಟ್ಟಿಕೊಳ್ಳುತ್ತಿದ್ದರೆ, ನನೆಗುದಿಗೆ ಬಿದ್ದಿದ್ದ ಈ ಯೋಜನೆಯನ್ನು ಅನುಷ್ಠಾನಗೊಳಿಸಿದ್ದೇ ಬಿಜೆಪಿ ಸರ್ಕಾರ ಎಂದು ಆಡಳಿತ ಪಕ್ಷ ಬೀಗುತ್ತಿದೆ.ಈ ಯೋಜನೆಗೆ ಈಗಾಗಲೇ ಸುಮಾರು ರೂ 750 ಕೋಟಿ ಖರ್ಚಾಗಿದೆ. ನಗರದಲ್ಲಿ ಯೋಜನೆಯ ಮುಖ್ಯ ಕಚೇರಿಯ ಬೃಹತ್ ಕಟ್ಟಡವೂ ನಿರ್ಮಾಣವಾಗಿದೆ. ಆದರೆ, ನೀರು ಮಾತ್ರ ಬಯಲುಸೀಮೆಗೆ ಹರಿಯಲಿಲ್ಲ. ಐದು ವರ್ಷಗಳಲ್ಲೇ ಯೋಜನೆಯನ್ನು ಮುಗಿಸಿಯೇ ತೀರುತ್ತೇವೆ ಎಂದು ಬಹಿರಂಗವಾಗಿ ಘೋಷಿಸಿಕೊಂಡಿದ್ದ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಮತ್ತು ಸಚಿವರ ಆಶ್ವಾಸನೆಯೂ ಹಾಗೆಯೇ ಉಳಿಯಿತು.ಭದ್ರಾ ಮೇಲ್ದಂಡೆ ಯೋಜನೆಯ `ಎ' ಸ್ಕೀಂನಲ್ಲೇ ಹಿರಿಯೂರು ಬಳಿಯ ವಾಣಿವಿಲಾಸ ಸಾಗರ ಜಲಾಶಯಕ್ಕೆ 5 ಟಿಎಂಸಿ ನೀರು ತರುವ ಸ್ಥಳೀಯ ಜನರ ಬೇಡಿಕೆಯೂ ಈಗ ರಾಜಕೀಯದ ವಸ್ತು. ಹಿರಿಯೂರು ಕ್ಷೇತ್ರದ ಮತದಾರದಲ್ಲೂ ಚರ್ಚಾ ವಿಷಯಗಳಲ್ಲಿ ಇದು ಒಂದು.`ಮಾರಿಕಣಿವೆಗೆ (ವಾಣಿವಿಲಾಸ ಸಾಗರ) ನೀರು ತರುವವರಿಗೆ ಮಾತ್ರ ನಮ್ಮ ಓಟು. ಮಾರಿಕಣಿವೆಯಿಂದ ನಮ್ಮ ತೋಟ 4 ಕಿ.ಮೀ. ದೂರದಲ್ಲಿದ್ದರೂ ನಮಗೆ ನೀರಿಲ್ಲ. ಇಲ್ಲಿ ಕಾಲುವೆ ಸಹಾ ಇಲ್ಲ. ಕುಡಿಯುವ ನೀರಿಗೂ ಪರದಾಡಬೇಕು. ತೋಟಗಳಿಂದ ಕುಡಿಯುವ ನೀರು ಕೊಂಡೊಯ್ಯಬೇಕು. 600 ಅಡಿ ಕೊರೆದರೂ ನೀರು ಸಿಗುತ್ತಿಲ್ಲ' ಎನ್ನುತ್ತಾರೆ ಹಿರಿಯೂರು ತಾಲ್ಲೂಕಿನ ಬಳಗಟ್ಟೆ ಗ್ರಾಮದ ತಿಪ್ಪೇಸ್ವಾಮಿ ಮತ್ತು ಚಂದ್ರಪ್ಪ.ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಯಿಂದ ಹೊರಗುಳಿದಿರುವ ಹೊಳಲ್ಕೆರೆ ಮತ್ತು ಮೊಳಕಾಲ್ಮುರು ತಾಲ್ಲೂಕುಗಳನ್ನು `ಎ' ಸ್ಕೀಂಗೆ ಸೇರಿಸಬೇಕು ಎನ್ನುವ ಜನರ ಬೇಡಿಕೆಯೂ ರಾಜಕಾರಣಿಗಳಿಗೂ ಬಂಡವಾಳ. ಭದ್ರಾ ಮೇಲ್ದಂಡೆ `ಎ' ಸ್ಕೀಂನಲ್ಲಿ ಮೊಳಕಾಲ್ಮುರು ತಾಲ್ಲೂಕಿನ ರಂಗಯ್ಯನ ದುರ್ಗ ಜಲಾಶಯಕ್ಕೆ ಮತ್ತು ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ 20 ಕೆರೆಗಳಿಗೆ ನೀರು ತರುತ್ತೇವೆ ಎಂದು ಅಭ್ಯರ್ಥಿಗಳು ಭರವಸೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ.ಜಿಲ್ಲೆಯ ಏಕೈಕ ನದಿ ವೇದಾವತಿ ಸಂಪೂರ್ಣ ಬತ್ತಿ ಜಾಲಿಗಿಡಗಳು ಬೆಳೆದಿವೆ. ಸತತ ಮೂರು ವರ್ಷಗಳ ಬರ ಜಿಲ್ಲೆಯ ರೈತರನ್ನು ಕಂಗೆಡಿಸಿದೆ. ಫ್ಲೋರೈಡ್ ನೀರಿಗೂ ಜನತೆ ತತ್ತರಿಸಿದ್ದಾರೆ. ಆದರೆ, ಶುದ್ಧ ಕುಡಿಯುವ ನೀರು ದೊರಕಿಸಿಕೊಡುವ ರಾಜಕಾರಣಿಗಳ ಭರವಸೆಯ ಮಹಾಪೂರಗಳು ಮಾತ್ರ ಬೇಸರ ಮೂಡಿಸಿವೆ ಎನ್ನುವುದು ಮತದಾರನ ಅಳಲು.

ಪ್ರತಿಕ್ರಿಯಿಸಿ (+)