ಶುಕ್ರವಾರ, ಜೂನ್ 25, 2021
29 °C

ಬಯಲು ಸೀಮೆಯ ಸಾಹಸಿಗರು...

ಹರ್ಷವರ್ಧನ ಪಿ.ಆರ್‌ Updated:

ಅಕ್ಷರ ಗಾತ್ರ : | |

ಜಾಗತಿಕ  ಮಹಾಯುದ್ಧದ ಸಂದರ್ಭದಲ್ಲಿ ರಸ್ತೆಯೇತರ ಹಾದಿಯಲ್ಲಿ ಸಾಗುವ ತುರ್ತಿನಿಂದ ಪ್ರಚಲಿತಕ್ಕೆ ಬಂದ ವಾಹನ ‘ಜೀಪ್‌’  20ನೇ ಶತಮಾನದ ದ್ವಿತೀಯಾರ್ಧದಲ್ಲಿ ನಾಗರಿಕರ ಸಂಚಾರದ ಬಳಕೆಗೂ ಬಂತು. ಎಲ್ಲ ನಾಲ್ಕೂ ಚಕ್ರಗಳ ಮೇಲೆ ಎಂಜಿನ್‌ (ಫೋರ್‌ ವೀಲ್ಹರ್‌ ಗೇರ್‌ ಸಿಸ್ಟಮ್‌) ನಿಯಂತ್ರಣ ಹೊಂದಿದ ಜೀಪ್‌ ಪಾಶ್ಚಾತ್ಯ ದೇಶಗಳ ಬಳಿಕ ಭಾರತದ ಕಠಿಣ, ದುರ್ಗಮ ಹಾದಿಯಲ್ಲಿ ಜನಪ್ರಿಯತೆ ಪಡೆಯಿತು.ಹೀಗೆ ಬಂದ ಜೀಪ್‌ ರಾಜ್ಯದ ಪಶ್ಚಿಮ ಘಟ್ಟದ ಆಸುಪಾಸಿನ ಪ್ರದೇಶಗಳಾದ ಮಡಿಕೇರಿ,ಚಿಕ್ಕ­ಮಗಳೂರು, ಕರಾವಳಿಯ ಪ್ರದೇಶಗಳಲ್ಲಿ ಜನಜನಿತವಾ ಯಿತು. ಅಲ್ಲಿನ ಕಠಿಣ ಹಾದಿಗಳಲ್ಲಿ ಸಾಹಸದ ಚಾಲನಾ ಸ್ಪರ್ಧೆಗೂ ವೇದಿಕೆ ನೀಡಿತು. ಆದರೆ ಸಮತಟ್ಟಾದ ಬಯಲು ಸೀಮೆಗೆ ಅಪರೂಪವಾಗಿತ್ತು. ಇಲ್ಲಿ ಸಾಹಸ ಸ್ಪರ್ಧೆಯೂ ವಿರಳವಾಗಿತ್ತು.ಈ ಬೆಳವಣಿಗೆಗೆ ಅಪವಾದ ಎಂಬಂತೆ ಗುಲ್ಬರ್ಗದ ಯುವ ತಂಡವೊಂದು ಜೀಪ್‌ ಕ್ರೇಜ್‌ ಬೆಳೆಸಿಕೊಂಡಿದೆ. ‘ಗುಲ್ಬರ್ಗ ನೇಚರ್‌ ಅವೇರ್‌ನೆಸ್‌ ಆ್ಯಂಡ್‌ ಅಡ್ವೆಂಚರ್‌ ಸ್ಪೋರ್ಟ್ಸ್‌ ಕ್ಲಬ್‌’ (ಜಿಎನ್‌ಎಎಎಸ್‌ಸಿ) ಹೆಸರಿನ ಈ ತಂಡವು ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು ಮಾತ್ರವಲ್ಲ, ಆಫ್‌ರೋಡ್‌ ಸಾಹಸ ಸ್ಪರ್ಧೆಯನ್ನೂ ಆಯೋಜಿಸುತ್ತಿದೆ.ದೇಶದಲ್ಲಿ ‘ಟೀಮ್‌ ಬಿಎಚ್‌ಪಿ’ಯು ಈ ರೀತಿಯ ಸ್ಪರ್ಧೆಗಳನ್ನು ಪ್ರೋತ್ಸಾಹಿಸುತ್ತಾ ಬಂದಿದೆ. ಇವರ ಜೊತೆ ಜಿಎನ್‌ಎಎಎಸ್‌ಸಿ ಗುರುತಿಸಿಕೊಂಡಿದೆ. ದೇಶದ ವಿವಿಧೆಡೆ ನಡೆದ ಪ್ರತಿಷ್ಠಿತ ‘4x4 ಆಫ್‌ ರೋಡ್‌ ಇವೆಂಟ್‌’ ಸ್ಪರ್ಧೆಗಳಲ್ಲಿ ಸಾಹಸ ಪ್ರದರ್ಶಿಸಿ ಪ್ರಶಸ್ತಿ ಜಯಿಸಿದೆ. 2012ರಿಂದ ಗುಲ್ಬರ್ಗದಲ್ಲಿ  ‘GEEP– off road event’ (Gulbarga Expeditions, Escapades & Promotions) ಹೆಸರಿನಲ್ಲಿ ಸ್ಪರ್ಧೆಯನ್ನು ಹಮ್ಮಿಕೊಂಡು ಬಂದಿದೆ. ಭಾರತದ ‘ಜೀಪ್‌ ಗುರು’ ಎಂದೇ ಖ್ಯಾತಿ ಪಡೆದ ಪಶ್ಚಿಮ ಬಂಗಾಳದ ಹೌರಾದ ಲ್ಯೂಹ್‌ನ ಉದಯಭಾನ್‌ ಸಿಂಗ್‌ ಗುಲ್ಬರ್ಗದಲ್ಲಿ ಸ್ವತಃ ಹಾಜರಿದ್ದು ಸ್ಪರ್ಧೆಯನ್ನು ಪ್ರೋತ್ಸಾಹಿಸಿದ್ದಾರೆ. ವಿದೇಶಿಗರೂ ಬಂದಿದ್ದಾರೆ.ಆಫ್‌ರೋಡ್‌:  ಮರುಭೂಮಿ, ಘಟ್ಟಗಳು, ನದಿ ಹರಿವಿನ ಹಾದಿ, ಬೆಟ್ಟಗುಡ್ಡಗಳು, ತೊರೆಗಳು, ಬಂಡೆ ಕಲ್ಲುಗಳು,  ತಗ್ಗು–ದಿಣ್ಣೆಗಳು ಸೇರಿದಂತೆ ಮನುಷ್ಯ  ಸಂಚಾರಕ್ಕೆ ಕಷ್ಟಕರವಾದ ರಸ್ತೆಯಿಲ್ಲದ ಹಾದಿಗಳೇ ‘ಆಫ್‌ರೋಡ್‌’. ಇಲ್ಲಿ ವಾಹನ ಚಲಾಯಿ ಸುವ ಸ್ಪರ್ಧೆಗಳು ‘ಆಫ್‌ರೋಡ್‌ ಇವೆಂಟ್‌’. ಅಸಾಧ್ಯವಾದುದನ್ನು (ಟಿಡಿಎಸ್‌) ನಿಗದಿತ ಸಮಯ, ದೂರ ಹಾಗೂ ವೇಗದಲ್ಲಿ ಚಲಾಯಿಸಿ ತೋರಿಸುವ ಬಂಡ ಸಾಹಸ.ಸ್ಪರ್ಧೆ:  ಜಿಎನ್‌ಎಎಎಸ್‌ಸಿನ ಮಲ್ಲಿಕಾರ್ಜುನ ಸಜ್ಜನ ಶೆಟ್ಟಿ, ಕುಶಾಲ್‌ ಗುತ್ತೇದಾರ್‌ ಹಾಗೂ ಮತೀನ್‌ ಪಟೇಲ್‌ ಚೆನ್ನೈ ಪಾಲಾರ್‌ನ 400 ಕಿ.ಮೀ ಕಾಡು ಹಾಗೂ ನದಿ ತೀರದಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಗೆದ್ದಿದ್ದಾರೆ.

ವೈಭವ್‌ರೆಡ್ಡಿ, ಕುಶಾಲ್‌ ಗುತ್ತೇದಾರ್‌, ಮತಿನ್‌ ಪಟೇಲ್‌ ಅವರು ಮಹಾರಾಷ್ಟ್ರದ ಅಕ್ಲುಜ್‌ ಹಾಗೂ ಹೈದರಾಬಾದ್‌ನಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ಅಲ್ಲದೇ ದೇಶದ ವಿವಿಧೆಡೆ ನಡೆದ ಸ್ಪರ್ಧೆಗಳಲ್ಲಿ ಭಾಗವಹಿಸಿ ಶಹಭಾಸ್‌ ಎನಿಸಿಕೊಂಡಿದ್ದಾರೆ. ಈ ತಂಡದಲ್ಲಿ ಮಹ್ಮದ್‌ ಇದ್ರಿಸ್‌ ಭಾಗವಾನ್‌, ಸೈಯ್ಯದ್‌ ಜಾಫರ್‌ ಹುಸೇನ್‌ ಮತ್ತಿತರರು ಇದ್ದಾರೆ.ಗುಲ್ಬರ್ಗದಲ್ಲಿ:  ಇವರೆಲ್ಲ ಜೊತೆಗೂಡಿಕೊಂಡು ನಗರದ ಶಿವಶರಣ ಉಪ್ಪಿನ ತೋಟದಲ್ಲಿ ನಿರ್ಮಿಸಿದ ಕೃತಕ ಟ್ರ್ಯಾಕ್‌ ಹಾಗೂ ಕಮಲಾಪುರದ ಕುದುರೆಮುಖ ಗುಡ್ಡದಲ್ಲಿ 2012 ಹಾಗೂ 2013ರಲ್ಲಿ ಸ್ಪರ್ಧೆ ಆಯೋಜಿಸಿದ್ದಾರೆ. ಕೋಲ್ಕತ್ತ, ಮುಂಬೈ, ಚೆನ್ನೈ, ಹೈದರಾಬಾದ್‌, ಸತಾರ್‌, ರಾಜಸ್ತಾನ, ಈಶಾನ್ಯ ಭಾರತದ ರಾಜ್ಯಗಳ ತಂಡಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು. ಪೆಟ್ರೋಲ್‌ ಹಾಗೂ ಡೀಸೆಲ್‌ ವಾಹನಗಳ ವಿಭಾಗದಲ್ಲಿ ಸ್ಪರ್ಧೆ ನಡೆದಿತ್ತು. ಟ್ರ್ಯಾಕ್‌:  ಬಿರುಬಿಸಿಲಿನ ಗುಲ್ಬರ್ಗದಲ್ಲಿ ಸ್ಪರ್ಧೆಗೆ ಬೇಕಾದ ಟ್ರ್ಯಾಕ್‌ ನಿರ್ಮಿಸುವುದೇ ಸವಾಲು. ಇದ್ದ ಕೆಲ ಗುಡ್ಡಬೆಟ್ಟಗಳಲ್ಲಿ, ಮಳೆಗಾಲದ ನೀರು ಹರಿವಿನಿಂದ ಉಂಟಾದ ಕಡಿದಾದ ದಾರಿ ಬಳಸಿಕೊಳ್ಳುವುದು ಹಾಗೂ ಕೃತಕ ಟ್ರ್ಯಾಕ್‌ ನಿರ್ಮಿಸಬೇಕಾಗಿದೆ. ಸ್ಪರ್ಧೆಗೆ ಸೀಮಿತವಲ್ಲ: ಖಾಜಾ ಕೋಟನೂರ ಕೆರೆಯಲ್ಲಿ ತೆಪ್ಪ ಮುಳುಗಿ 9 ಜನ ಮೃತಪಟ್ಟ ಘಟನೆ, ಚಿತ್ತಾಪುರದಲ್ಲಿ ಭಾರಿ ಮಳೆಗೆ  ಬಸ್‌ ನೀರಿನಲ್ಲಿ ಸಿಲುಕಿಕೊಂಡ ದುರ್ಘಟನೆ ಸೇರಿದಂತೆ ಅನೇಕ ಅನಾಹುತಗಳಲ್ಲಿ ಈ ತಂಡವು ರಕ್ಷಣಾ ಕಾರ್ಯದಲ್ಲಿ ನೆರವಾಗಿದೆ. ಅಗ್ನಿಶಾಮಕ, ಪೊಲೀಸ್‌ ಇಲಾಖೆಯಿಂದ ಶಹಭಾಸ್‌ಗಿರಿಯನ್ನೂ ಪಡೆದಿದೆ.‘ನಾವು ಕೇವಲ ಸ್ಪರ್ಧೆಗಾಗಿ ಮಾತ್ರ ಸಾಹಸ ಮಾಡುತ್ತಿಲ್ಲ. ಈ ಭಾಗದಲ್ಲಿ ಅನಾಹುತ ಸಂಭವಿಸಿದಾಗ ಹೋಗಿ ನೆರವು ನೀಡುತ್ತೇವೆ. ಸ್ಪರ್ಧೆ ಹಾಗೂ ಸಹಾಯಕ್ಕಾಗಿ ಸಾಹಸ ಮಾಡುವುದು ನಮ್ಮ ಪ್ರವೃತ್ತಿ’ ಎಂದು ತಂಡದ ವೈಭವ್‌ ರೆಡ್ಡಿ (9845444767) ಹೇಳುತ್ತಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.