ಶುಕ್ರವಾರ, ಫೆಬ್ರವರಿ 28, 2020
19 °C

ಬಯಲೇ ಆಲಯ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಿಯಲ್ ಎಸ್ಟೇಟ್ ಮತ್ತು ಗೃಹ ನಿರ್ಮಾಣದಲ್ಲಿ ಕುರೂಪ ಎನ್ನುವುದು ನಿಷೇಧಿತ ಶಬ್ದ. ಇಲ್ಲಿ ಎಲ್ಲವೂ ಒಪ್ಪ ಓರಣವಾಗಿ, ಚೆಂದವಿರಬೇಕು ಎನ್ನುವ ನಿಯಮವಿದೆ. ಆದರೆ, ಮನೆಯ ವಿಷಯಕ್ಕೆ ಬಂದರೆ, ಇನ್ನೆರಡು ವರ್ಷಗಳಲ್ಲಿ  ಈ ಕುರೂಪವೇ ವಾಸ್ತುವಿನ್ಯಾಸದ ಪ್ರಮುಖ ಅಂಶವಾಗಲಿದೆ ಎನ್ನುತ್ತಾರೆ ನ್ಯೂಯಾರ್ಕ್ ಮೂಲದ ವಾಸ್ತುವಿನ್ಯಾಸಕಾರ ಡೊನಾಲ್ಡ್ ಬ್ಲಿಂಕಾಫ್.

 ಕಾಲಕ್ಕೆ ತಕ್ಕಂತೆ ಮನೆ ವಿನ್ಯಾಸದ ಚೌಕಟ್ಟು ಹೇಗೆ ಬದಲಾಗುತ್ತಾ ಹೋಗುತ್ತಿದೆ ಎನ್ನುವುದನ್ನು  ವಿವರಿಸುವ ಅವರು, ಭವಿಷ್ಯದ ದಿನಗಳಲ್ಲಿ ಬಯಲೇ ಆಲಯವಾಗಲಿದೆ ಎಂದೂ ವಿವರಿಸುತ್ತಾರೆ.

ಗುಡ್ಡದ ತುತ್ತ ತುದಿಯಲ್ಲೊಂದು ಮನೆ. ಮನೆಯ ಗೋಡೆಯನ್ನು ಒರಟಾದ ಬಿಳಿಯ ಇಟ್ಟಿಗೆಗಳಿಂದ ಕಟ್ಟಲಾಗಿದೆ. ಅದರ ನಡುವೆ ಮಣ್ಣು ಮೆತ್ತಿದಂತಿರುವ ಗಾರೆ. ಮನೆಯ ಕಿಟಕಿಗಳು ಗಾತ್ರದಲ್ಲಿ ದೊಡ್ಡದಾಗಿ, ಚಿಕ್ಕದಾಗಿ, ಸಮಾನಾಂತರವಾಗಿದೆ ಎಲ್ಲೆಲ್ಲೋ, ಹೇಗೇಗೊ ಜೋಡಿಸಲಾಗಿದೆ.

ಕೋಣೆಗಳ ನಡುವೆ ಗೋಡೆಗಳಿಲ್ಲ. ಅಂಗಳದ ಮುಂದಿರುವ ಹುಲ್ಲುಹಾಸನ್ನು ಕತ್ತರಿಸದೆ ಹಾಗೇ ಬಿಡಲಾಗಿದೆ. ಶಯನ ಕೋಣೆಗಳು ಪಾರ್ಟಿ ಹಾಲ್‌ಗಳಿಗಿಂತ ವಿಶಾಲವಾಗಿವೆ. ಕಾರಿಡಾರ್‌ನಲ್ಲಿ ಅಲ್ಲೊಂದು ಇಲ್ಲೊಂದು ಪ್ಲೊರೊಸೆಂಟ್ ಲೈಟ್‌ಗಳು. ಊಟದ ಕೋಣೆಯಲ್ಲಿ ಹಳೆಯ ಲೋಟಗಳು, ಪಿಂಗಾಣಿ ತಟ್ಟೆಗಳು. ಸುಮಾರು ಐದು ಎಕರೆ ವಿಶಾಲ ವಿಸ್ತೀರ್ಣದಲ್ಲಿ ಈ ಮನೆಯ ವ್ಯಾಪ್ತಿ  ಹರಡಿಕೊಂಡಿದೆ. ಇದು ಮುಂದಿನ ಶತಮಾನದ ದೇಸಿ ಮನೆಗಳ ಚಿತ್ರಣ ಎನ್ನುತ್ತಾರೆ ಬ್ಲಿಂಕಾಫ್.

ಆಧುನಿಕ ದೇಸಿ ಮನೆಗಳು ಹೇಗಿರಬೇಕು ಎಂದರೆ, ಅದು ಹೀಗಿದೆ ಎಂದು ವರ್ಣಿಸಲು ಸಾಧ್ಯವಾಗುವಂತಿರಬಾರದು. ಅದನ್ನು ನೋಡಿಯೇ ಅನುಭವಿಸಬೇಕು ಎನ್ನುವ ಅವರು, ಅಡುಗೆ ಕೋಣೆ, ಶಯನ ಕೋಣೆ, ಪಡಸಾಲೆ ಎಲ್ಲವೂ ಒಂದೇ ಕಡೆ ಇದ್ದರೂ, ಪ್ರತ್ಯೇಕವಾಗಿ ಕಾಣುವಂತೆ ವಿನ್ಯಾಸಗೊಳಿಸಬೇಕು ಎನ್ನುತ್ತಾರೆ.

ಇಂತಹ ಆಧುನಿಕ ಬಯಲು ಮನೆಗಳಿಗೆ ಭಾರಿ ವೆಚ್ಚ ತಗಲುತ್ತದೆ. ಇದರ ನವೀಕರಣಕ್ಕೂ ಹೆಚ್ಚೂ ಕಡಿಮೆ ಅಷ್ಟೇ ಖರ್ಚಾಗುತ್ತದೆ. ಆದರೆ, ಇಂತಹ ಪರಿಸರ ಸ್ನೇಹಿ ಮನೆಗಳನ್ನು ಯುವ ತಲೆಮಾರು ತುಂಬಾ ಇಷ್ಟಪಡುತ್ತದೆ ಎನ್ನುವ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಇಂತಹ ಬಯಲು ಆಲಯಗಳಿಗೆ ಸಾಂಪದ್ರಾಯಿಕ ಮನೆಗಳಂತೆ ಮುಂಬಾಗಿಲು ಮತ್ತು ಹಿಂಬಾಗಿಲು ಇರುವುದಿಲ್ಲ. ಕಿಟಕಿಗಳಿಗೆ ಪರದೆ ಇರುವುದಿಲ್ಲ. ಯಥೇಚ್ಚ ಗಾಳಿ ಬೆಳಕು ಸುಳಿದಾಡುತ್ತಿರುತ್ತದೆ. ಪಂಜರದಂತಿರುವ ಕೋಣೆಗಳು ಇಲ್ಲಿರುವುದಿಲ್ಲ ಎನ್ನುತ್ತಾರೆ.

ಮನೆ, ಮಹಲುಗಳಿಗೆ ಹೇರಳವಾಗಿ ಶುದ್ಧ, ಸ್ವಚ್ಛ ಗಾಳಿ ಬರುವಂತೆ ಇರಬೇಕೆಂಬುದು ವಾಸ್ತು ನಿಯಮ. ಇಲ್ಲೂ ಇದೇ ಪ್ರಮುಖವಾಗಿ ಅನ್ವಯವಾಗುತ್ತದೆ ಎಂದು ವಿವರಿಸುವ ಬ್ಲಿಂಕಾಫ್, ಇಂತಹ ಕನಸಿನ ಮನೆಗಳ ನಿರ್ಮಾಣ ವೆಚ್ಚ ದುಬಾರಿ ಎಂದು ಹೇಳಲು ಮರೆಯುವುದಿಲ್ಲ.

ಗುಡ್ಡದ ಇಳಿಜಾರಿನ ಎದುರಿಗಿರುವ ಬಯಲು ಹೊಸ ಲೋಕವೊಂದನ್ನು ತೆರೆದಿಡುತ್ತದೆ. ದೂರದಲ್ಲಿ ಕಾಣುವ ಮರಗಳು, ಒಂದೆರಡು ಮನೆಗಳು, ಸಂಜೆಯ ತಂಪಾದ ಗಾಳಿ, ಹಕ್ಕಿಗಳ ಕಲರವ, ಎಲ್ಲಿ ನೋಡಿದರೂ ಹರಡಿಕೊಂಡಿರುವ ಹಸಿರು. ಇವೆಲ್ಲವೂ  ನಿಮಗೆ ಬಯಲು ಮನೆಯಲ್ಲಿ ಅಲ್ಲದೆ, ಮತ್ತೆಲ್ಲಿಯೂ ಸಿಗುವುದಿಲ್ಲ ಎನ್ನುತ್ತಾರೆ ಈ ವಿನ್ಯಾಸಕಾರ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)