ಗುರುವಾರ , ಜನವರಿ 23, 2020
19 °C

ಬಯೊಮೆಟ್ರಿಕ್ ಪಾಸ್‌ವರ್ಡ್‌

ವಿಶ್ವನಾಥ್ ಎಸ್.ಶರ್ಮಾ Updated:

ಅಕ್ಷರ ಗಾತ್ರ : | |

ಬಯೊಮೆಟ್ರಿಕ್ ಪಾಸ್‌ವರ್ಡ್‌

ಅತಿಯಾದರೆ ಅಮೃತವೂ ವಿಷವಂತೆ. ಈ ಮಾತು ಇದೀಗ ಅಂತರ್ಜಾಲದ ಬಳಕೆಗೂ ಅನ್ವಯಿಸುತ್ತಿದೆ. ಅಂತರ್ಜಾಲದ ಮೇಲಿನ ಅತಿಯಾದ ಅವಲಂಬನೆ ಸೈಬರ್ ಅಪರಾಧಗಳಿಗೆ ಕಾರಣವಾಗುತ್ತಿದೆ. ನಾಗರಿಕರ ವೈಯಕ್ತಿಕ ಮಾಹಿತಿಯನ್ನಷ್ಟೇ ಅಲ್ಲದೆ, ದೇಶದ ರಕ್ಷಣಾ ಮಾಹಿತಿಗಳೂ ಕಳುವಾಗುತ್ತಿವೆ. ಇದು ವಿವಿಧ ದೇಶಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.ಇಂತಹ ಸೈಬರ್ ಅಪರಾಧಗಳಿಗೆ  ಪಾಸ್‌ವರ್ಡ್‌ ಬಳಕೆಯಲ್ಲಿನ ಲೋಪವೂ ಒಂದು ಪ್ರಮುಖ ಕಾರಣ ಎಂಬುದನ್ನು  ಅಮೆರಿಕದ ಪೆರ್ಡ್ಯೂ ವಿಶ್ವವಿದ್ಯಾಲಯದ ಸಂಶೋಧಕರು ಕಂಡುಕೊಂಡಿದ್ದಾರೆ. ಅಲ್ಲದೆ, ಪಾಸ್‌ವರ್ಡ್‌ಗೆ ಪರ್ಯಾಯವಾಗಿ ಬಯೋಮೆಟ್ರಿಕ್ ವ್ಯವಸ್ಥೆಯನ್ನೇ ಎಲ್ಲಕ್ಕೂ ಅಳವಡಿಸುವ ನಿಟ್ಟಿನಲ್ಲಿ ಅಧ್ಯಯನ ನಡೆಸುತ್ತಿದ್ದಾರೆ.ಕಂಪ್ಯೂಟರ್ ಲಾಗಿನ್ ಆಗುವುದರಿಂದ ಆರಂಭಿಸಿ ಗ್ಯಾಜೆಟ್‌ ಲೋಕದ ಬಹಳಷ್ಟು ಕೆಲಸಗಳಿಗೆ, ನೆಟ್‌ಬ್ಯಾಂಕಿಂಗ್‌, ಕ್ರೆಡಿಟ್‌/ಡೆಬಿಟ್‌ ಕಾರ್ಡ್‌ ಬಳಕೆ ಸಂದರ್ಭದಲ್ಲೆಲ್ಲಾ ಪಾಸ್‌ವರ್ಡ್‌ ಬಳಕೆ ಅನಿವಾರ್ಯ. ಈ ಎಲ್ಲ ಕೆಲಸಗಳಿಗೂ ಪ್ರತ್ಯೇಕ ಪಾಸ್‌ವರ್ಡ್‌ಗಳಿದ್ದರೆ ಅವುಗಳನ್ನು ನೆನಪಿಟ್ಟುಕೊಳ್ಳುವುದು ಕಷ್ಟ ಎಂಬ ಕಾರಣಕ್ಕೆ ಒಂದೇ ರೀತಿಯ ಅಥವಾ ಒಂದೇ ಪಾಸ್‌ವರ್ಡನ್ನು ಎಲ್ಲದಕ್ಕೂ ಕೊಡುತ್ತೇವೆ.ಇಂತಹ ಸಂದರ್ಭಗಳಲ್ಲಿ ಯಾರು ಬೇಕಾದರೂ ಪಾಸ್‌ವರ್ಡ್‌ ಕಂಡುಕೊಂಡು ದುರ್ಬಳಕೆ ಮಾಡಿಕೊಳ್ಳಬಹುದಾದ ಸಾಧ್ಯತೆಯೂ ಇರುತ್ತದೆ. ಈ ಸಮಸ್ಯೆಯಿಂದ ಹೊರಬರಲು ಬಯೋಮೆಟ್ರಿಕ್   ಮಾತ್ರವೇ ಸರಿಯಾದ ಪರಿಹಾರ ಎನ್ನುತ್ತಾರೆ ವಿಶ್ವವಿದ್ಯಾಲಯದ ಬಯೋಮೆಟ್ರಿಕ್ ಸಂಶೋಧನೆಯ ಅಂತರರಾಷ್ಟ್ರೀಯ ಕೇಂದ್ರದ ನಿರ್ದೇಶಕ ಸ್ಟೀಫನ್ ಏಲಿಯಟ್.ಪಾಸ್‌ವರ್ಡ್‌ಗೆ ಬದಲಾಗಿ  ಬೆರಳಚ್ಚು (fingerprint), ಕಣ್ಣಿನ ಚಿತ್ರದ (iris images) ಸ್ಕ್ಯಾನ್ ಹಾಗೂ ಮುಖದ ಚಿತ್ರ(facial photos) ಗ್ರಹಿಸಿ ಹೋಲಿಕೆ ಮಾಡಿ ಗ್ಯಾಜೆಟ್‌ ಬಳಕೆಗೆ ಅವಕಾಶ ನೀಡುವಂತಹ ಲಾಗಿನ್‌ ಪ್ರಕ್ರಿಯೆ ದತ್ತಾಂಶಗಳ ಸುರಕ್ಷತೆಗೆ ಹೆಚ್ಚು ಉಪಯುಕ್ತವಾಗಿದೆ ಎನ್ನುವುದು ಏಲಿಯಟ್ ಅವರ ಅಭಿಪ್ರಾಯ.ಪಾಸ್‌ವರ್ಡ್‌ಗಳ ಕಿರಿಕಿರಿಯಿಂದ ಬೇಸತ್ತವರಿಗೆ  ಬಯೋಮೆಟ್ರಿಕ್ ಹೆಚ್ಚು ಉಪಯುಕ್ತವಾಗಲಿದೆ. ಕಂಪ್ಯೂಟರ್ ಲಾಗಿನ್‌ನಿಂದ ಆರಂಭಿಸಿ ಇ ಮೇಲ್, ನೆಟ್ ಬ್ಯಾಂಕಿಂಗ್, ಆನ್‌ಲೈನ್ ರೀಚಾರ್ಜ್, ಟಿಕೆಟ್‌ ಬುಕಿಂಗ್, ಷಾಪಿಂಗ್‌ ಮೊದಲಾದ ಕೆಲಸಗಳಿಗೆಲ್ಲಾ ಬಯೋಮೆಟ್ರಿಕ್ ಪ್ರಕ್ರಿಯೆಯನ್ನೇ ಪಾಸ್‌ವರ್ಡ್‌ ರೀತಿ ಬಳಸಬಹುದು ಎನ್ನುತ್ತಾರೆ ಅವರು.ಸದ್ಯ ಅಮೆರಿಕದ ಲಫೆಯೆಟೆಯಲ್ಲಿರುವ (Lafayette) ಕೆಎಫ್‌ಸಿ ರೆಸ್ಟೋರೆಂಟ್‌ಗಳಲ್ಲಿ ನಗದು ಸ್ವೀಕಾರ ಕೌಂಟರ್‌ಗೆ (ಕ್ಯಾಶ್ ರಿಜಿಸ್ಟ್ರಿ) ಬಯೋಮೆಟ್ರಿಕ್ ಬಳಸಲಾಗುತ್ತಿದೆ. ಕ್ಯಾಶ್ ಕೌಂಟರಿಗೆ ಇನ್ನೊಬ್ಬ ಕೂರುವಾಗ ಬೆರಳಚ್ಚು ಸ್ಕ್ಯಾನರಿನಲ್ಲಿ ತನ್ನ ಬೆರಳಿಟ್ಟು ಹಾಜರಿ ದಾಖಲಿಸಿದರೆ ಮಾತ್ರ ವ್ಯವಹರಿಸಲು ಸಾಧ್ಯ.ಪಾಸ್‌ವರ್ಡ್ ಬಳಕೆ ಕೆಲವೊಮ್ಮೆ ಕೆಲಸಗಾರರಲ್ಲಿ ಜಗಳಕ್ಕೂ ಕಾರಣವಾಗುತ್ತಿತ್ತು. ಆದರೆ ಬಯೋಮೆಟ್ರಿಕ್‌ನಿಂದಾಗಿ ನಗದು ಕೌಂಟರ್‌ ಭದ್ರತೆ ಹೆಚ್ಚುತ್ತಿದೆ ಎನ್ನುತ್ತಾರೆ ರೆಸ್ಟೋರೆಂಟ್‌ನ ಸಹಾಯಕ ನಿರ್ವಾಹಕ ಕ್ರಿಸ್ಸ್ಮಿತ್.ಶತ್ರು ಪತ್ತೆಗೂ ಅವಕಾಶ

ಮಿತ್ರರು ಯಾರು? ಶತ್ರುಗಳು ಯಾರು? ಎಂಬುದನ್ನು ಗುರುತಿಸಲು ಆಫ್ಘಾನಿಸ್ತಾನದ ನೌಕಾದಳದಲ್ಲಿ ಬಯೋಮೆಟ್ರಿಕ್ ಬಳಕೆಯಲ್ಲಿದೆ. ಇರಾಕ್  ಸೈನಿಕರು ಅತ್ಯಂತ ಕಡಿಮೆ ತೂಕವುಳ್ಳ ಬಯೋಮೆಟ್ರಿಕ್ ಸಾಧನವನ್ನು ಸದಾ ತಮ್ಮೊಂದಿಗೆ ಒಯ್ಯುತ್ತಾರೆ.ಬಯೋಮೆಟ್ರಿಕ್ ಎನ್ರೋಲ್‌ಮೆಂಟ್ ಆ್ಯಂಡ್ ಸ್ಕ್ರೀನಿಂಗ್ ಡಿವೈಸ್ (ಬಿಇಎಸ್‌ಡಿ) ಸಹಾಯದಿಂದ ವ್ಯಕ್ತಿಗಳ ಗುರುತನ್ನು ಪಡೆದು ತಮ್ಮಲ್ಲಿರುವ ದತ್ತಾಂಶ ದಾಖಲೆಗಳೊಂದಿಗೆ ಹೋಲಿಸಿ ನೋಡುವ ಮೂಲಕ ಅವರ ನಿಜವಾದ  ಗುರುತನ್ನು ಪತ್ತೆ ಹಚ್ಚುವ ಪ್ರಕ್ರಿಯೆಯೂ ನಡೆಯುತ್ತಿದೆ.ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ದ್ವಾರದ ಬಿಗಿ ಭದ್ರತಾ ವ್ವವಸ್ಥೆಯಿಂದ  ಊಟದ ತಟ್ಟೆಯವರೆಗೂ ಬಯೋ ಮೆಟ್ರಿಕ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ.ಚಲಿಸುವ ರೀತಿ ಮತ್ತು ಪಾದದ ಗುರುತಿನ ಮೂಲಕ ವ್ಯಕ್ತಿಯನ್ನು ಪತ್ತೆ ಹಚ್ಚಲು  ಪೀಟರ್ಸ್‌ಬರ್ಗ್‌ನ ಕಾರ್ನೆಗಿ ಮೆಲಾನ್ ವಿಶ್ವವಿದ್ಯಾಲಯ ಬಯೋ ಸೋಲ್ (ಜೈವಿಕ ಕಾಲುಚೀಲ) ತಂತ್ರಾಂಶ ಬಳಸಿ ಅಧ್ಯಯನ ನಡೆಸಿದೆ.ಹೀಗಿದ್ದೂ ಕೆಲವು ಪ್ರಾಥಮಿಕ ದೋಷಗಳಿಂದಾಗಿ ಈ ಬಯೋಮೆಟ್ರಿಕ್ ವ್ಯವಸ್ಥೆ ಸಂಪೂರ್ಣ ಯಶಸ್ವಿಯಾಗಿಲ್ಲ. ಅದರಲ್ಲಿ ಈಗ ಕಂಡುಬಂದಿರುವ ಲೋಪಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಅಧ್ಯಯನ ಮುಂದುವರಿದಿದ್ದು, ಶೀಘ್ರವೇ ಅಂಕಿ, ಅಕ್ಷರಗಳನ್ನು ಅವಲಂಬಿಸಿದ ಪಾಸ್‌ವರ್ಡ್ ಎಂಬುದು ಕಾಲಗರ್ಭದಲ್ಲಿ ಸೇರಿಹೋಗಲಿದೆ ಎಂದು ಏಲಿಯಟ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಭಾರತದಲ್ಲಿ ಬಯೋಮೆಟ್ರಿಕ್ ಬಳಕೆ

* ಸರ್ಕಾರಿ ಕಚೇರಿಗಳಲ್ಲಿ ನೌಕರರ ಕೆಲಸದ ಸಮಯ ಮತ್ತು ಹಾಜರಾತಿಗೆ* ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳ ಹಾಜರಿ ಮತ್ತು ಊಟಕ್ಕೆ ಬೆರಳಚ್ಚು ಸಂಗ್ರಹಿಸಲಾಗುತ್ತಿದೆ. ರಾಜ್ಯದಲ್ಲಿ  ಮಾಹಿತಿ ಸಂಗ್ರಹ ಸೇರಿದಂತೆ ಕೆಲವು ಮೂಲಭೂತ ಸಮಸ್ಯೆಗಳಿಂದಾಗಿ ಕೆಲವೇ ಕಡೆಗಳಲ್ಲಿ ಮಾತ್ರ ಯಶಸ್ವಿಯಾಗಿದೆ.* ಉಳಿದಂತೆ ಕೆಲವು ಖಾಸಗಿ ಕಂಪೆನಿಗಳಲ್ಲಿ ಉದ್ಯೋಗಿಗಳ ಹಾಜರಾತಿಗೆ ಬೆರಳು ಗುರುತು  ಸಂಗ್ರಹ (ಫಿಂಗರ್ ಪ್ರಿಂಟ್) ಜಾರಿಯಲ್ಲಿದೆ.ಶಿಕ್ಷಕರ ಸಮಯ ಪಾಲನೆ ಮತ್ತು ಹಾಜರಾತಿಗೆ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೆ ತರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ಪ್ರತಿಕ್ರಿಯಿಸಿ (+)