ಗುರುವಾರ , ಜೂನ್ 24, 2021
29 °C

ಬಯೋಗ್ಯಾಸ್‌ಗೆ ರಬ್ಬರ್ ಶೀಟ್

ಪ್ರಕಾಶ ಭಟ್ ಕರ್ಕಿ Updated:

ಅಕ್ಷರ ಗಾತ್ರ : | |

ಹಲವು ವರ್ಷಗಳಿಂದ ರಬ್ಬರ್ ಕೃಷಿ ಏರುಗತಿಯಲ್ಲಿದೆ. ನೈಸರ್ಗಿಕ ರಬ್ಬರ್ ಉತ್ಪಾದನೆ ಮತ್ತು ಬಳಕೆಯಲ್ಲಿ ನಮ್ಮ ದೇಶ ಮುಂಚೂಣಿಯಲ್ಲಿದೆ. ದಿನಂಪ್ರತಿ ಲಕ್ಷಾಂತರ ರಬ್ಬರ ಶೀಟ್‌ಗಳು ತಯಾರಾಗುತ್ತಿವೆ.ಆದರೆ,  ರಬ್ಬರ್ ಶೀಟ್ (ರಶೀ)  ತಯಾರಿಸಿದ ನಂತರ ಸಿಗುವ ರಬ್ಬರ್  ಶೀಟ್ ದ್ರವತ್ಯಾಜ್ಯ (ರಶೀತ್ಯಾ) ಎಲ್ಲಿ ಹೋಗುತ್ತಿದೆ, ಅದರ ಪರಿಣಾಮವೇನು? ಅತ್ತ ನಮ್ಮ ಗಮನ ಹರಿದಿಲ್ಲ.ಸಾಮಾನ್ಯವಾಗಿ ರಬ್ಬರ್ ಮರಗಳಿಂದ ಶೇಖರಿಸಿದ ಹಾಲನ್ನು ತಿಳಿಗೊಳಿಸಿದ ಫಾರ್ಮಿಕ್ ಆಸಿಡ್‌ನಲ್ಲಿ ಒಂದು ದಿನ ಇಟ್ಟು ಘನೀಕೃತಗೊಳಿಸಲಾಗುತ್ತದೆ. ನಂತರ ಚೆನ್ನಾಗಿ ನೀರಿನಲ್ಲಿ ತೊಳೆದು, ಒಣಗಿಸಿ, ಹೊಗೆಮನೆಗಳಲ್ಲಿ ಶೇಖರಿಸಿಡುತ್ತಾರೆ. ಈ ಸಂಸ್ಕರಣೆಯುದ್ದಕ್ಕೂ ಸಿಗುವ ರಶೀತ್ಯಾ ಆಸಿಡ್‌ಮಯವಾಗಿರುತ್ತದೆ ಎಂಬುದು ನಿಸ್ಸಂಶಯ.ಬಂಟ್ವಾಳ ತಾಲ್ಲೂಕು ಇಡ್ಕಿದು ಗ್ರಾಮದ ಕೃಷಿಕ ಉದಯ ಗೋವಿಂದಯ್ಯ ರಶೀತ್ಯಾವನ್ನು ತಿಳಿಗೊಳಿಸಿ ನೇರವಾಗಿ ಗಿಡಕ್ಕೆ ಬಿಟ್ಟಿದ್ದರು. ಅಂತಹ ಗಿಡಗಳ ಚಿಗುರುಗಳು ನಾಲ್ಕೇ ದಿನದಲ್ಲಿ ಒಣಗಿ ಕರಕಲಾದವು! ತೆಂಗಿನ ಮರದ ಬುಡಕ್ಕೆ ಬಿಟ್ಟಾಗ ಗರಿಗಳು ಕೆಂಪಾಗಿದ್ದನ್ನು ಸುಳ್ಯದ ಪ್ರಭಾಕರ ರೈ ಸಹ ಗಮನಿಸಿದ್ದಾರೆ.  ರಶೀತ್ಯಾ ಮಾಲಿನ್ಯಕಾರಕ ಎಂದು ಸ್ವತಃ ಭಾರತೀಯ ರಬ್ಬರ್‌ ಸಂಶೋಧನಾ ಸಂಸ್ಥೆಯೇ ಹೆಳುತ್ತದೆ. ಇದಕ್ಕೆ ಫಾರ್ಮಾಲ್ ಡಿಹೈಡ್ ರಾಸಾಯನಿಕದ ಕೆಟ್ಟ ವಾಸನೆಯೂ ಇದೆ. ಇದು ರಶೀ ಘಟಕಗಳ ಸುತ್ತಮುತ್ತ ಮಾಲಿನ್ಯ ಹರಡುತ್ತದೆ.ಬಹುತೇಕ ಕೃಷಿಕರು ರಶೀ ಘಟಕವನ್ನು ಮನೆಗೆ ಹತ್ತಿರದಲ್ಲೋ, ತೋಟಗಳಲ್ಲೋ ಮಾಡಿಕೊಂಡಿದ್ದಾರೆ. ಒಂದೇ ಕಡೆಗೆ ಸತತವಾಗಿ ರಶೀತ್ಯಾವನ್ನು ಮಣ್ಣಿಗೆ ಬಿಡುವುದರಿಂದ ಸುತ್ತಮುತ್ತಲಿನ ಮಣ್ಣು ಕ್ರಮೇಣ ಆಮ್ಲೀಯವಾಗುತ್ತದೆ. ಅಂತಹ ಮಣ್ಣಿನಲ್ಲಿ ವಿಷಕಾರಿ ಭಾರಲೋಹಗಳ ಪ್ರಮಾಣ ಅಧಿಕಗೊಳ್ಳಬಹುದು. ಅಂತ ಜಾಗದಲ್ಲಿ ಬೆಳೆ ತೆಗೆಯುವುದೂ ಕಷ್ಟ. ಅಂತರ್ಜಲ ಮಾಲಿನ್ಯದ ಸಮಸ್ಯೆಯೂ ಇಲ್ಲದಿಲ್ಲ.ತ್ಯಾಜ್ಯದಿಂದ ಬಯೋಗ್ಯಾಸ್

ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ರೈತರು ಸ್ವಪ್ರೇರಣೆಯಿಂದ ಇಂತಹ ರಶೀತ್ಯಾದಿಂದ ಬಯೋಗ್ಯಾಸ್ ಉತ್ಪಾದನೆಗೆ ಪ್ರಯತ್ನಿಸಿ  ಯಶಸ್ವಿ ಆಗಿದ್ದಾರೆ.

ಮೂಡಬಿದಿರೆ ಸಮೀಪದ ತಾಳಿಪಡ್ಪು ಗೋಪಾಲಕೃಷ್ಣ ಭಟ್  ಒಂಬತ್ತು ವರ್ಷಗಳಿಂದ ಕೇವಲ ರಶೀತ್ಯಾ ಬಳಸಿ ಬಯೋಗ್ಯಾಸ್ ಉತ್ಪತ್ತಿ ಮಾಡುತ್ತಿದ್ದಾರೆ.  ‘ರಶೀ ತಯಾರಿಯ ದಿನಗಳಲ್ಲಿ ಬಯೋಗ್ಯಾಸ್ ನಮ್ಮ ಉರುವಲಿನ ಖರ್ಚನ್ನು ಅರ್ಧದಷ್ಟಾದರೂ ಉಳಿಸುತ್ತದೆ’ ಎಂದು ತೃಪ್ತಿ ವ್ಯಕ್ತಪಡಿಸುತ್ತಾರೆ.ಸುಳ್ಯ ತಾಲ್ಲೂಕು ಜಾಲಸೂರಿನ ಸುದೇಶ ಶೆಟ್ಟಿ ಎರಡು ವರ್ಷದಿಂದ ತಮ್ಮ  ತೋಟದಲ್ಲಿ ರಶೀತ್ಯಾ ಸಂಸ್ಕರಣೆ ಮಾಡುತ್ತಿದ್ದಾರೆ. ತೋಟದಲ್ಲೇ ವಸತಿಯಿರುವ ಕಾರ್ಮಿಕರೆಲ್ಲರಿಗೂ ಪೈಪ್ ಮೂಲಕ ಬಯೋಗ್ಯಾಸಿನ ಉರುವಲಿನ ವ್ಯವಸ್ಥೆ ಮಾಡಿದ್ದಾರೆ. ಈ ಗ್ಯಾಸ್, ಗೋಬರ್ ಗ್ಯಾಸ್‌ಗಿಂತಲೂ ಹೆಚ್ಚು ತಾಪ ನೀಡುತ್ತದೆ. ಒಳ್ಳೆ ಸಿಪಿವಿಸಿ ಪೈಪ್ ಬಳಸಿದರೆ ಸಾಕಷ್ಟು ದೂರ ಸಹ ಇದನ್ನು ಕೊಂಡು ಹೋಗಬಹುದು. ಈಗ   ಮಾಲಿನ್ಯ, ಕೆಟ್ಟ ವಾಸನೆ ಕಡಿಮೆಯಾಗಿದೆ ಎಂಬ ಹೆಮ್ಮೆ ಅವರಿಗೆ. ಗ್ರಾಮ ಪಂಚಾಯಿತಿಗಳಿಂದ ಬಯೋಗ್ಯಾಸ್ ಘಟಕಗಳಿಗಾಗಿ ಸಿಗುವ ₨ ೧೧,೫೦೦ ಸಬ್ಸಿಡಿಯನ್ನು  ಅವರು ಬಳಸಿಕೊಂಡಿದ್ದಾರೆ.ಸುದೇಶರನ್ನು ಗಮನಿಸಿ ಆರಂತೊಡಿನ ಹಿರಿಯ ಕೃಷಿಕ ಪ್ರಭಾಕರ್ ರೈ ಸಹ ಇಂತಹ ಘಟಕ ಆರಂಭಿಸಿದ್ದಾರೆ. ದ.ಕ. ಜಿಲ್ಲೆಯ ಆಲಂಗಾರು ಮತ್ತು ಸಿದ್ಧಕಟ್ಟೆಯ  ಕಾನ್ವೆಂಟುಗಳಲ್ಲಿಯೂ ಇಂತಹ ವ್ಯವಸ್ಥೆಯಿದೆ.ಕಾರ್ಯ ವಿಧಾನ

ರಶೀತ್ಯಾ ಬಯೋಗ್ಯಾಸ್ ಘಟಕ ಸಾಮಾನ್ಯ ಗೋಬರ್ ಗ್ಯಾಸ್ ಘಟಕದಂತೇ ಕಾರ್ಯ ನಿರ್ವಹಿಸುತ್ತದೆ. ಹಾಗೆ ನೋಡಿದರೆ ಸೆಗಣಿ ಗ್ಯಾಸಿಗಿಂತ ಇಲ್ಲಿ ಕೆಲಸ ಹಗುರ, ನಿರ್ವಹಣೆ ಶ್ರಮ ಕಡಿಮೆ ಎನ್ನುತ್ತಾರೆ ಗೋಪಾಲಕೃಷ್ಣ ಭಟ್. ಅವರು ಕೇವಲ ರಶೀತ್ಯಾ ಬಳಸುತ್ತಾರೆ, ಸೆಗಣಿ ಇಲ್ಲವೇ ಇಲ್ಲ.ಪುತ್ತೂರು ಸಮೀಪದ ಕಂಚಿನಡ್ಕ ಶಂಕರನಾರಾಯಣ ಭಟ್ ರಶೀತ್ಯಾವನ್ನು ಸೆಗಣಿ ಬಳಕೆ ಮಾಡುವ ಬಯೋಗ್ಯಾಸಿನ ತೊಟ್ಟಿಗೇ ಬಿಡುತ್ತಾರೆ. ಹೀಗೆ ಮಾಡುವುದರಿಂದ ಗ್ಯಾಸ್ ಉತ್ಪಾದನೆಯಲ್ಲಿ ಹೆಚ್ಚಳವಾಗಿದೆ ಅನ್ನುತ್ತಾರೆ.ಉಜಿರೆ ಸಮಿಪದ ಅತ್ತಾಜೆ ರಮೇಶ ಭಟ್ ರಬ್ಬರ್ ಉದ್ಯಮದಲ್ಲಿರುವ ಅನುಭವಿಗಳು. ರಶೀತ್ಯಾದೊಂದಿಗೇ ಸೆಗಣಿ ಅಥವಾ ಯಾವುದಾದರೂ ಜೈವಿಕ ವಸ್ತು ಬಳಸಿದರೆ ಗ್ಯಾಸ್ ಉತ್ಪಾದನೆಯನ್ನು ಇನ್ನಷ್ಟು ಚುರುಕುಗೊಳಿಸಬಹುದು ಎನ್ನುತ್ತಾರೆ.ತ್ಯಾಜ್ಯಕ್ಕೇಕೆ ಅನಾದರ?

ಇಂದು ಅವ್ಯಾಹತವಾಗಿ ಈ ವಾಣಿಜ್ಯ ಬೆಳೆಯ ವಿಸ್ತರಣೆಯಾಗುತ್ತಿದೆ.  ದಿನಂಪ್ರತಿ ಲಕ್ಷಾಂತರ ರಶೀಗಳು ತಯಾರಾಗುತ್ತಿವೆ. ಅದರ ಹತ್ತು ಪಟ್ಟು ಆಸಿಡ್‌ಮಯ ರಶೀತ್ಯಾ ಭೂಮಿಯನ್ನು ಸೇರುತ್ತಿದೆ. ಆದರೆ ಮಾಲಿನ್ಯ ಮತ್ತು ಉರುವಲಿನ ಲಾಭದ ವಿಚಾರವನ್ನು ಬೆಳೆಗಾರರಾಗಲಿ, ರಬ್ಬರ್ ಮಂಡಳಿಯಾಗಲಿ ಗಮನಿಸುತ್ತಿಲ್ಲ. ಯಾಕೆ?ಮುಖ್ಯವಾಗಿ ಈ ನಿಟ್ಟಿನಲ್ಲಿ ಯಾವುದೇ ಪ್ರಚಾರ, ಪ್ರಸಾರ, ಅರಿವು ಮೂಡಿಸುವ ಪ್ರಯತ್ನಗಳು ಆಗುತ್ತಿಲ್ಲ. ಕೆಲಮಟ್ಟಿಗೆ ಬೆಳೆಗಾರರ ಔದಾಸೀನ್ಯವೂ ಇದೆ. ರಬ್ಬರ ಮಂಡಳಿ ಇದಕ್ಕಾಗಿ ಯಾವುದೇ ಸಬ್ಸಿಡಿ ನೀಡುತ್ತಿಲ್ಲ ಎಂಬುವರೂ ಇದ್ದಾರೆ.ಬಯೋಗ್ಯಾಸ್ ತೊಟ್ಟಿಯಿಂದ ಹೊರಬರುವ ತ್ಯಾಜ್ಯದ ನೀರಿಗೆ ಫಾರ್ಮಿಕ್ ಆಸಿಡ್‌ನ ಕೆಟ್ಟ ವಾಸನೆಯಿಲ್ಲ. ಎಷ್ಟೋ ವರ್ಷಗಳಿಂದ ಇಂತಹ ತ್ಯಾಜ್ಯವನ್ನು ತೋಟಕ್ಕೆ ಬಿಡುತ್ತಿದ್ದರೂ ಗೋಪಾಲಕೃಷ್ಣರ ತೋಟದ ಹಸಿರು ಮಾಸಿಲ್ಲ. ಪರಿಸರ ಮಾಲಿನ್ಯ ನಿಯಂತ್ರಣ ಹಾಗೂ ಪರಿಸರ ಸ್ನೇಹಿ ಇಂಧನ ಉತ್ಪಾದನೆ  ದೃಷ್ಟಿಯಿಂದ ರಬ್ಬರ್‌ ಬೆಳೆಗಾರರಲ್ಲಿ ರಶೀತ್ಯಾ ಮರುಬಳಕೆ ಕುರಿತು ಜಾಗೃತಿ ಮೂಡಬೇಕಾಗಿದೆ. ಈ ವಿಷಯದಲ್ಲಿ ಒಂದು ವ್ಯವಸ್ಥಿತ ಅಧ್ಯಯನವೂ ಆಗಬೇಕಿದೆ.  ಸಾಮೂಹಿಕ ಬಯೋಗ್ಯಾಸ್ ಉತ್ಪಾದನೆ ಆಗುವಲ್ಲಿ ಅದನ್ನು ಹೊಗೆಮನೆಗಳಿಗಾಗಿ ಮಾತ್ರ ಬಳಸಲಾಗುತ್ತಿದೆ. ರೈತರೇ ಉತ್ಪಾದಿಸಿದರೆ ಇಷ್ಟು ಉತ್ತಮ ಗುಣಮಟ್ಟದ ಉರುವಲನ್ನು ಮನೆ ಬಳಕೆಗೇ ಉಪಯೋಗಿಸಿಕೊಳ್ಳಬಹುದು. ಸಂಪರ್ಕಕ್ಕೆ ತಾಳಿಪಡಪು ಗೋಪಾಲಕೃಷ್ಣ ಭಟ್  ೦೮೨೫೬ ೨೦೬೨೧೨; ಸುದೇಶ ಶೆಟ್ಟಿ, ಜಾಲಸೂರು ೦೯೫೩೫೫೩೯೪೫೨.ರಬ್ಬರ್ ಮಂಡಳಿ ಸ್ಪಂದಿಸಲಿ

ಬೆಳೆಯ ವಿಸ್ತರಣೆ, ಅಭಿವೃದ್ಧಿಗಾಗಿ ರಬ್ಬರ್ ಮಂಡಳಿಗೆ ತೀವ್ರ ಕಳಕಳಿಯಿದೆ. ಆದರೆ, ಪರಿಸರ ಸಂರಕ್ಷಿಸುವ ಮತ್ತು ರೈತರಿಗೆ ಉರುವಲಿನ ಲಾಭವನ್ನೂ ಕೊಡುವ ರಶೀತ್ಯಾ ನಿರ್ವಹಣೆಯನ್ನು ಜನರ ಬಳಿ ಕೊಂಡೊಯ್ಯಲು ಅದು ಗಮನಹರಿಸುತ್ತಿಲ್ಲ.   ಸ್ವಪ್ರೇರಣೆಯಿಂದ ಇಂತಹ ವ್ಯವಸ್ಥೆಗೆ ಮುಂದಾಗಿರುವ ಬೆಳೆಗಾರರ ವಿವರಗಳೂ ಅವರಲ್ಲಿ ಲಭ್ಯವಿಲ್ಲ.ರಶೀತ್ಯಾದಿಂದ ಪರಿಸರದ ಮೇಲೆ ಅದರಿಂದಾಗುವ ಪರಿಣಾಮ, ಉರುವಲವಾಗಿ ಬಯೋಗ್ಯಾಸ್ ಬಳಕೆ ಕುರಿತು ನಮ್ಮಲ್ಲಿ ವಿಶೇಷ ಅಧ್ಯಯನ ಆಗಿಲ್ಲ. ಈ ಕುರಿತು ಮಂಡಳಿಯ ಗಮನಕ್ಕೆ ತರಲಾಗುವುದು ಎನ್ನುತ್ತಾರೆ ಡಿ. ಅನಿಲಕುಮಾರ, ಜಾಯಿಂಟ್ ರಬ್ಬರ್ ಪ್ರೊಡಕ್ಷನ್ ಕಮಿಶನರ್ (ವಿಸ್ತರಣೆ).ಸಾಮೂಹಿಕವಾಗಿ ರಶೀ ಉತ್ಪಾದಿಸುವಲ್ಲಿ ಮಾತ್ರ ಸೊಸೈಟಿಗಳಿಗೆ ಬಯೋಗ್ಯಾಸ್ ಉತ್ಪಾದನೆಗೆ ಸಬ್ಸಿಡಿ ನೀಡಲಾಗುತ್ತಿದೆ. ಅಂತಹ ಸೊಸೈಟಿಗಳು ಬೆರಳೆಣಿಕೆಯಷ್ಟಿವೆ. ರಬ್ಬರ್‌ ಹಾಲು ಹಾಕಲು ದೂರದೂರವರೆಗೆ ಹೋಗಲು ಸಾಧ್ಯವಾಗದೇ ಇರುವುದು ನಮ್ಮ ರೈತರ ಸಮಸ್ಯೆ. ಇಂಥ ಪ್ರದೇಶಗಳಿಗಾದರೂ ಮಂಡಳಿ ವೈಯಕ್ತಿಕವಾಗಿ ಸಹಾಯಧನ ನೀಡಬೇಕು ಎನ್ನುತ್ತಾರೆ ಕೆಯ್ಯೂರು-ಕೆದಂಬಾಡಿ ರಬ್ಬರ್ ಉತ್ಪಾದಕರ ಸೊಸೈಟಿಯ ಸ್ಥಾಪಕಾಧ್ಯಕ್ಷ ಎ ಕೆ ಜಯರಾಮ ರೈ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.