ಬಯೋಗ್ಯಾಸ್ ಉತ್ಪಾದಿಸಲು ಯೋಜನೆ: ಅಶೀಸರ

6

ಬಯೋಗ್ಯಾಸ್ ಉತ್ಪಾದಿಸಲು ಯೋಜನೆ: ಅಶೀಸರ

Published:
Updated:

 


ಶಿರಸಿ: ಶಾಲೆಗಳು, ದೇವಾಲಯಗಳಲ್ಲಿ ಉತ್ಪತ್ತಿಯಾಗುವ ಅಡುಗೆ ತಾಜ್ಯದಿಂದ ಬಯೋಗ್ಯಾಸ್ ಉತ್ಪಾದಿಸುವ ಯೋಜನೆ ರೂಪಿಸಲಾಗುತ್ತಿದೆ. ಇದರಿಂದ ಇಂಧನ ಉಳಿತಾಯದ ಜೊತೆಗೆ ಮಾಲಿನ್ಯ ಕಡಿಮೆಯಾಗುತ್ತದೆ. ಈ ಕುರಿತು ಸಾಮೂಹಿಕ ಅಭಿಪ್ರಾಯ ರೂಪಿಸಲು ಜನವರಿ ತಿಂಗಳಿನಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಅಶೀಸರ ತಿಳಿಸಿದರು. 

 

ನಗರದಲ್ಲಿ ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಯೋಗ್ಯಾಸ್ ಘಟಕ ನಿರ್ಮಾಣಕ್ಕೆ ಸಹಾಯಧನ ನೀಡುವಂತೆ ಸರ್ಕಾರಕ್ಕೆ ವಿನಂತಿಸಲಾಗಿದೆ ಎಂದರು. 

 

`ಪಶ್ಚಿಮಘಟ್ಟದ 15 ಸ್ಥಳಗಳಲ್ಲಿ ರಾಂಪತ್ರೆಜಡ್ಡಿ ಸಂರಕ್ಷಣಾ ಯೋಜನೆ ಜಾರಿಯಾಗಲಿದ್ದು, ಸುಮಾರು 1ಸಾವಿರ ಎಕರೆ ಪ್ರದೇಶದಲ್ಲಿ ಈ ವಿಶಿಷ್ಟ ಪರಿಸರ ಸಂರಕ್ಷಣೆಗೆ ಅರಣ್ಯ ಸಮಿತಿಗಳ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಹಸಿರು ಆರೋಗ್ಯ ಅಭಿಯಾನವನ್ನು ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳಲ್ಲಿ ವಿಸ್ತರಿಸಲಾಗುತ್ತಿದೆ. ರಾಜ್ಯದ ಅರಣ್ಯ ಪರಿಸ್ಥಿತಿ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕಿ ವಿಶ್ಲೇಷಿಸಿ ಅರಣ್ಯ ಪರಿಸ್ಥಿತಿ ಸಿದ್ಧಪಡಿಸಲು ತಜ್ಞರು, ಅಧಿಕಾರಿಗಳ ತಂಡ ರಚಿಸಿ ಮೂರು ತಿಂಗಳಲ್ಲಿ ಅರಣ್ಯ ವರದಿ ಪ್ರಕಟಿಸಲಾಗುವುದು.ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಜೀವವೈವಿಧ್ಯ ದಾಖಲಾತಿ ಕಾರ್ಯಕ್ರಮವನ್ನು ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳ 100 ಪ್ರೌಢಶಾಲೆಗಳಲ್ಲಿ ನಡೆಸಲಾಗುತ್ತಿದ್ದು, ಇದರಿಂದ 100 ಗ್ರಾಮಗಳ ಜೀವವೈವಿಧ್ಯ ದಾಖಲಾತಿ ವರದಿ ಸಿದ್ಧವಾಗಲಿದೆ' ಎಂದರು. 

`ಹಸಿರು ಸಮೃದ್ಧಿ ಗ್ರಾಮ ಯೋಜನೆ ರಾಜ್ಯದ 36 ಗ್ರಾಮಗಳಲ್ಲಿ ಅನುಷ್ಠಾನಗೊಳಿಸಲಾಗಿದೆ. ಕರಾವಳಿಯ ಮೂರು ಜಿಲ್ಲೆಗಳಲ್ಲಿ ಕರಾವಳಿ ಹಸಿರುವ ಕವಚ ಯೋಜನೆ ಮೂರು ವರ್ಷಗಳಿಂದ ಜಾರಿಯಾಗುತ್ತಿದೆ. ಐದು ಜಿಲ್ಲೆಗಳಲ್ಲಿ ದೇವರಕಾಡು ಯೋಜನೆ ಅನುಷ್ಠಾನಗೊಂಡಿದೆ' ಎಂದರು.

 

`ಪಶ್ಚಿಮಘಟ್ಟದಲ್ಲಿ ರೈತರು-ವನವಾಸಿಗಳ ಸಹಭಾಗಿತ್ವದಲ್ಲಿ ವಿಶೇಷ ಅರಣ್ಯ ಸಂರಕ್ಷಣೆ ಸಂವರ್ಧನೆಯ ಯೋಜನೆ ಜಾರಿಗೊಳಿಸಬೇಕು. ಪಶ್ಚಿಮಘಟ್ಟದಲ್ಲಿ ಬೃಹತ್ ಗಣಿಗಾರಿಕೆ ಯೋಜನೆಗಳಿಗೆ ಸಕ್ರಾ ಅನುಮತಿ ನೀಡಬಾರದು. ಪಶ್ಚಿಮಘಟ್ಟದ ದಟ್ಟ ನದಿ ಕಣಿವೆಗಳಲ್ಲಿ ಜಲವಿದ್ಯುತ್ ಯೋಜನೆಗೆ ಅನುಮತಿ ನೀಡದಿರುವ ನೀತಿಯನ್ನು ಈ ಹಿಂದಿನ ನಾಲ್ಕು ವರ್ಷದಂತೆ ಮುಂದುವರಿಸಬೇಕು.ಅರಣ್ಯದ ಅಂಚಿನ ಹಳ್ಳಿಗಳಲ್ಲಿ ಅರಣ್ಯ ಜನ ಸಂಪರ್ಕ ಸಭೆ ನಡೆಸಿ ಜನರ ವಿಶ್ವಾಸಗಳಿಸುವ ಪ್ರಯತ್ನಕ್ಕೆ ಫಲ ದೊರೆತಿದೆ. ಇಂತಹ ಸಭೆಗಳನ್ನು ನಿಗದಿತವಾಗಿ ನಡೆಸಬೇಕು. ವನ್ಯಪ್ರಾಣಿಗಳಿಂದ ಉಂಟಾಗುವ ಬೆಳೆಹಾನಿ ಪರಿಹಾರ ಮೊತ್ತ ಹೆಚ್ಚಿಸಬೇಕು ಹಾಗೂ ಬೆಳೆವಿಮೆ ಯೋಜನೆ ರೂಪಿಸಿ ಜಾರಿಗೊಳಿಸಬೇಕು. ನಕ್ಸಲ್ ಪೀಡಿತ ಪ್ರದೇಶ ಪ್ಯಾಕೇಜ್‌ನ ಅನುದಾನದ ಅಡಿಯಲ್ಲಿ ರಾಜ್ಯದ ಇಡೀ ಪಶ್ಚಿಮಘಟ್ಟ ಅರಣ್ಯದ ನಡುವೆ ಬದುಕುತ್ತಿರುವ ವನವಾಸಿಗಳಿಗೆ ಮೂಲ ನಾಗರಿಕ ಸೌಲಭ್ಯ ದೊರಕಿಸುವ ನೀತಿ ರೂಪಿಸಬೇಕು ಎಂದು ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ' ಎಂದು ಅಶೀಸರ ಹೇಳಿದರು. ಪ್ರೊ.ಆರ್. ವಾಸುದೇವ ಉಪಸ್ಥಿತರಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry