ಶನಿವಾರ, ಮೇ 15, 2021
26 °C

ಬರಕ್ಕೆ ನೆರವು: ಕೇಂದ್ರಕ್ಕೆ ಕಾಂಗ್ರೆಸ್ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳು ಭೀಕರ ಬರ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಪರಿಹಾರ ಕಾರ್ಯಕ್ರಮಕ್ಕಾಗಿ `ರಾಷ್ಟ್ರೀಯ ಪ್ರಕೃತಿ ವಿಕೋಪ ಪರಿಹಾರ ಸಂಚಿತ ನಿಧಿ~ಯಿಂದ (ಎನ್‌ಸಿಸಿಎಫ್) ಹೆಚ್ಚಿನ ಹಣವನ್ನು ರಾಜ್ಯ ಸರ್ಕಾರಕ್ಕೆ ಬಿಡುಗಡೆ ಮಾಡಬೇಕು ಎಂದು ಪ್ರದೇಶ ಕಾಂಗ್ರೆಸ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.ರಾಜ್ಯ ಪ್ರವಾಸದಲ್ಲಿದ್ದ ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರನ್ನು ಭಾನುವಾರ ರಾತ್ರಿ ಭೇಟಿ ಮಾಡಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಬರ ಪರಿಹಾರಕ್ಕೆ ಹೆಚ್ಚಿನ ನೆರವು, ಹೈದರಾಬಾದ್ ಕರ್ನಾಟಕಕ್ಕೆ ಶೀಘ್ರದಲ್ಲಿ ವಿಶೇಷ ಸ್ಥಾನಮಾನ ಘೋಷಣೆ, ಅಡಿಕೆ ಮತ್ತು ರೇಷ್ಮೆ ಬೆಳಗಾರರಿಗೆ ನೆರವು ಕೋರಿ ನಾಲ್ಕು ಪ್ರತ್ಯೇಕ ಮನವಿಗಳನ್ನು ಸಲ್ಲಿಸಿದರು.`ಬರ ಪರಿಹಾರಕ್ಕೆ ಎನ್‌ಸಿಸಿಎಫ್ ಮೂಲಕ 2,600 ಕೋಟಿ ರೂಪಾಯಿ ನೀಡುವಂತೆ ರಾಜ್ಯ ಸರ್ಕಾರ ಈಗಾಗಲೇ ಮನವಿ ಸಲ್ಲಿಸಿದೆ. ಕೇಂದ್ರ ಸರ್ಕಾರ ಅಗತ್ಯ ಇರುವಷ್ಟು ಹಣವನ್ನು ತಕ್ಷಣವೇ ಬಿಡುಗಡೆ ಮಾಡಬೇಕು. ಯುದ್ಧೋಪಾದಿಯಲ್ಲಿ ಬರ ಪರಿಹಾರ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಲು ಸಂವಿಧಾನದ 371ನೇ ವಿಧಿಗೆ ತಿದ್ದುಪಡಿ ತರುವ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಪ್ರತ್ಯೇಕ ಮನವಿಯಲ್ಲಿ ಒತ್ತಾಯಿಸಲಾಗಿದೆ. ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅಡಿಕೆ ತೋಟಗಳಿಗೆ ಹಳದಿ ಎಲೆ ರೋಗ ತಗುಲಿರುವುದರಿಂದ ಸಮಸ್ಯೆಗೆ ಸಿಲುಕಿರುವ ಬೆಳೆಗಾರರ ನೆರವಿಗೆ ಬರುವಂತೆಯೂ ಕೇಂದ್ರಕ್ಕೆ ಮನವಿ ಮಾಡಲಾಗಿದೆ.ಕೇಂದ್ರ ಸರ್ಕಾರ ನೇಮಿಸಿದ್ದ ಡಾ.ಗೋರಕ್ ಸಿಂಗ್ ನೇತೃತ್ವದ ಸಮಿತಿ ನೀಡಿದ್ದ ವರದಿಯನ್ನು ಮನವಿ ಜೊತೆ ಸಲ್ಲಿಸಿರುವ ಕಾಂಗ್ರೆಸ್, ನಾಲ್ಕು ಹೆಕ್ಟೇರ್‌ವರೆಗಿನ ಅಡಿಕೆ ತೋಟ ಹೊಂದಿರುವ ಬೆಳೆಗಾರರ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿದೆ.ಪ್ರವಾಸ ಆರಂಭ: ಕಾಂಗ್ರೆಸ್ ನಾಯಕರ ಮೂರು ತಂಡಗಳು ಮಂಗಳವಾರದಿಂದ ಬರಪೀಡಿತ ಪ್ರದೇಶಗಳ ಪ್ರವಾಸ ಕೈಗೊಳ್ಳಲಿವೆ. ಪರಮೇಶ್ವರ್ ನೇತೃತ್ವದ ತಂಡ ಕೋಲಾರದಿಂದ ಪ್ರವಾಸ ಆರಂಭಿಸಲಿದೆ.  ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಬರ ಕುರಿತು ಪರಿಶೀಲನೆ ನಡೆಸಲಿದೆ.ಸಿದ್ದರಾಮಯ್ಯ ನೇತೃತ್ವದ ತಂಡ ಬಳ್ಳಾರಿ ಜಿಲ್ಲೆಯಿಂದ ಪ್ರವಾಸ ಆರಂಭಿಸಲಿದೆ. ರಾಯಚೂರು, ಕೊಪ್ಪಳ, ವಿಜಾಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಈ ತಂಡ ಪ್ರವಾಸ ಕೈಗೊಳ್ಳಲಿದೆ. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕಿ ಮೋಟಮ್ಮ ನೇತೃತ್ವದ ತಂಡ ಬೀದರ್, ಗುಲ್ಬರ್ಗ, ಯಾದಗಿರಿ, ಚಿಕ್ಕಮಗಳೂರು, ಹಾಸನ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.