ಬರಗಾಲಕ್ಕೆ ಹೊಸ ತೆರಿಗೆ ವಿಧಿಸಿ

ಶುಕ್ರವಾರ, ಜೂಲೈ 19, 2019
22 °C

ಬರಗಾಲಕ್ಕೆ ಹೊಸ ತೆರಿಗೆ ವಿಧಿಸಿ

Published:
Updated:

ಮಂಡ್ಯ: ಬರಗಾಲದಲ್ಲಿ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು, ಬರಗಾಲಕ್ಕೆ ಸಂಬಂಧಿಸಿದಂತೆ ಹೊಸ ತೆರಿಗೆ ವಿಧಿಸಬೇಕು ಎಂದು ರೈತ ಸಂಘದ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.ಆ ಮೂಲಕ 15 ಸಾವಿರ ಕೋಟಿ ರೂಪಾಯಿ ಸಂಗ್ರಹಿಸಬೇಕು. ಅದನ್ನು ಬರ ಕಾಮಗಾರಿಗಳಿಗಾಗಿ ಬಳಸಿಕೊಳ್ಳುವ ಮೂಲಕ ಜನ, ಜಾನುವಾರುಗಳೊಂದಿಗೆ ವಲಸೆ ಹೋಗುವುದನ್ನು ತಪ್ಪಿಸಬೇಕು. ಜತೆಗೆ ಪರಿಸ್ಥಿತಿಯನ್ನು ಸಮರೋಪಾದಿಯಾಗಿ ಎದುರಿಸಲು ಸಾಧ್ಯ ಆಗಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯದಲ್ಲಿ, ಈ ಸಂಬಂಧ ಹೊಸ ಅಧ್ಯಾಯ ಆರಂಭವಾಗಬೇಕು. ತೆರಿಗೆ ಮೂಲಕ ಹಣ ಸಂಗ್ರಹಿಸಬೇಕು. ಈ ಬಗೆಗೆ ಶೀಘ್ರವೇ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.3,000 ರೂ. ಬೆಲೆ ನೀಡಿ: ಪ್ರಸಕ್ತ ಹಂಗಾಮಿನಲ್ಲಿ ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆಗಳಿಗೆ ಪೂರೈಸುವ ಪ್ರತಿ ಟನ್ ಕಬ್ಬಿಗೆ ಸರ್ಕಾರ 3,000 ರೂಪಾಯಿ ಬೆಲೆ ನಿಗದಿ ಮಾಡಬೇಕು. ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು, ತಕ್ಷಣ ಕಬ್ಬು ಬೆಳೆಗಾರರ ಸಭೆ ಕರೆದು, ಕಬ್ಬು ಬೆಲೆ ನಿಗದಿ ಬಗೆಗೆ ಚರ್ಚಿಸಬೇಕು.ಕಬ್ಬಿನ ಬೆಲೆ ನಿಗದಿಗೆ ಸಂಬಂಧಿಸಿದಂತೆ ಅವಶ್ಯಕತೆ ಬಿದ್ದರೆ ಬಿಜೆಪಿ ಸರ್ಕಾರವು, ಕೇಂದ್ರ ಸರ್ಕಾರದೊಂದಿಗೆ ರಾಜ್ಯ ರೈತರ ಪರವಾಗಿ ಹೋರಾಟ ನಡೆಸಬೇಕು ಎಂದರು.ನೀರನ್ನು ಸಮರ್ಪಕವಾಗಿ ಬಳಸಿ: ಜಿಲ್ಲೆಯ ಒಣಗತ್ತಿರುವ ಬೆಳೆಗಳನ್ನು ಉಳಿಸುವ ನಿಟ್ಟಿನಲ್ಲಿ, ಕೃಷ್ಣರಾಜ ಸಾಗರ ಜಲಾಶಯದಿಂದ ನಾಲೆಗಳಿಗೆ ನೀರು ಹರಿಯಬಿಡಲಾಗಿದ್ದು, ಪೋಲಾಗದಂತೆ ಸಮರ್ಪಕವಾಗಿ ರೈತರು ಬಳಸಿ ಕೊಳ್ಳಬೇಕು ಎಂದು ಕೋರಿದರು.ನೀರನ್ನು ಒಣಗುತ್ತಿರುವ ಬೆಳೆಗಳ ರಕ್ಷಣೆಗೆ ಬಳಸಿಕೊಳ್ಳಬೇಕೆ ವಿನಾಃ, ಹೊಸದಾಗಿ ಬೆಳೆ ಬೆಳೆಯಲು ಅಥವಾ ತೆಕ್ಕಲು ಭೂಮಿಗೆ ನೀರುಣಿಸಲು ಬಳಸಬಾರದು.ರೈತರೇ ಪರಸ್ಪರ ಸಹಕಾರದಿಂದ ಹಗಲು-ರಾತ್ರಿ ಎನ್ನದೇ ನೀರನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದ ಅವರು, ನೀರು ಬಿಡುವ ನಿರ್ಧಾರ ಕೈಗೊಂಡ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತವನ್ನು ಅಭಿನಂದಿಸಿದರು.ನೀರು ಬಿಡುವುದು ನಿರ್ಧಾರವಾದ ಮೇಲೆ, ಪ್ರತಿಭಟನೆ ನಡೆಸಿದ ಜೆಡಿಎಸ್ ಶಾಸಕರ ವರ್ತನೆಯನ್ನು ತೀವ್ರವಾಗಿ ತರಾಟೆ ತೆಗೆದುಕೊಂಡ ಅವರು, ಷೋಕಿ ಚಳವಳಿಗಳನ್ನು ಜನರು ನೋಡುತ್ತಾ ಬಂದಿದ್ದಾರೆ, ಜನಪ್ರತಿನಿಧಿಗಳ ವರ್ತನೆಗೆ ತಕ್ಕ ಪಾಠ ಕಲಿಸುತ್ತಾರೆ. ಇದು, ರೈತರ ಪರ ಕಾಳಜಿ ಇಲ್ಲದ, ಪ್ರಚಾರಕ್ಕಾಗಿ ನಡೆಸಿದ ಬೂಟಾಟಿಕೆಯ ಚಳವಳಿ ಎಂದು ಟೀಕಿಸಿದರು.ಶ್ವೇತಪತ್ರ ಹೊರಡಿಸಿ: ನಾಲೆಗಳ ಆಧುನೀಕರಣ ಸಂಬಂಧ `ಶ್ವೇತಪತ್ರ~ ಹೊರಡಿಸಬೇಕು. ರೈತರಿಗೆ ತಿಳವಳಿಕೆ ನೀಡುವ ಸಂಬಂಧ ಕರಪತ್ರಗಳನ್ನು ಪ್ರಕಟಿಸಬೇಕು ಎಂದು ಹೇಳಿದರು.ರಾಜ್ಯದಲ್ಲಿ ಗೊಂದಲದ ರಾಜಕಾರಣ ಮುಂದುವರಿದಿರುವ ಕಾರಣ, ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರು, ಸರ್ಕಾರ ವಿಸರ್ಜಿಸಿ, ಹೊಸದಾಗಿ ಜನಾದೇಶ ಪಡೆಯುವುದು ಸೂಕ್ತ. ಈ ಸಂಬಂಧ ರಾಜ್ಯಪಾಲ ಎಚ್.ಆರ್. ಭಾರದ್ವಾಜ ಅವರಿಗೆ ಪತ್ರ ನೀಡುವುದು ಒಳಿತು ಎಂದರು.ಮುಖಂಡರಾದ ಎಸ್.ಸುರೇಶ್, ಕೆ.ಎಸ್.ಬಾಲಚಂದ್ರ, ಬೊಮ್ಮೇಗೌಡ, ಮರಿಲಿಂಗೇಗೌಡ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry