ಬರಗಾಲದಲ್ಲಿ ಗುಲಾಬಿ

ಬುಧವಾರ, ಜೂಲೈ 24, 2019
28 °C

ಬರಗಾಲದಲ್ಲಿ ಗುಲಾಬಿ

Published:
Updated:

ಜೀವ ಸೆಲೆಗಳಾದ ಕೆರೆ ಕುಂಟೆಗಳು ಬತ್ತಿವೆ. ಅಂತರ್ಜಲ ಕುಸಿತದಿಂದ ಮಾಲೂರು ತಾಲ್ಲೂಕಿನ ರೈತರು ಕಂಗಾಲಾಗಿದ್ದಾರೆ. ಹಲವು ಮಂದಿ ಕೃಷಿ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಗುಳೆ ಹೋಗುವ ಹಂತ ತಲುಪಿದ್ದಾರೆ.ಆದರೆ ಅಂಥ ಹಲವು ರೈತರಲ್ಲಿ ವಿಶ್ವಾಸದ ಬೆಳ್ಳಿಚುಕ್ಕೆ ಮೂಡಿದೆ. ಅದಕ್ಕೆ ಕಾರಣ ಗುಲಾಬಿ. ಬರಗಾಲದಲ್ಲೂ ಗುಲಾಬಿಯು ಪರ್ಯಾಯ ವಾಣಿಜ್ಯ ಬೆಳೆಯಾಗಿ ರೈತರ ಕೈಹಿಡಿದಿದೆ.ತಾಲ್ಲೂಕಿನ ಲಕ್ಕೂರು, ತೊರ‌್ನಹಳ್ಳಿ ಮತ್ತು ಜಯಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹುತೇಕ ಹಳ್ಳಿಗಳು ಸೇರಿದಂತೆ ತಾಲ್ಲೂಕಿನಾದ್ಯಂತ ಗುಲಾಬಿ ಬೆಳೆಯುವುದನ್ನೇ ರೈತರು ಮುಖ್ಯ ಕಸಬನ್ನಾಗಿಸಿಕೊಂಡಿದ್ದಾರೆ. ಶ್ರಮಕ್ಕೆ ತಕ್ಕಂತೆ ಲಾಭವನ್ನೂ ಪಡೆಯುತ್ತಿದ್ದಾರೆ.ತಾಲ್ಲೂಕಿನಾದ್ಯಂತ 985 ಎಕರೆ ಪ್ರದೇಶದಲ್ಲಿ ಗುಲಾಬಿ ಬೆಳೆಯಲಾಗುತ್ತಿದೆ. ಇಲ್ಲಿ ಬೆಳೆಯುವ ಗುಲಾಬಿ ಹೂಗಳಿಗೆ ರಾಜ್ಯದ ಹಲವು ಜಿಲ್ಲೆಗಳು ಸೇರಿದಂತೆ ತಮಿಳುನಾಡು, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದ ಹೂವಿನ ಮಾರುಕಟ್ಟೆಗಳಲ್ಲಿ ಹೆಚ್ಚಿನ ಬೇಡಿಕೆ ದೊರಕಿದೆ. ಒಂದು ವರ್ಷಕ್ಕೆ ಸುಮಾರು 7 ಕೋಟಿಗೂ ಹೆಚ್ಚು ಗುಲಾಬಿ ಹೂವುಗಳು ರಾಜ್ಯ ಮತ್ತು ಅಂತರರಾಜ್ಯ ಹೂವಿನ ಮಾರುಕಟ್ಟೆಗಳಿಗೆ  ಸರಬರಾಜಾಗುತ್ತಿದೆ.ಇತ್ತೀಚಿನ ದಿನಗಳಲ್ಲಿ ಇಲ್ಲಿನ ರೈತರು ಕೃಷಿ ಚಟುವಟಿಕೆಗಳಿಗೆ ಮಳೆ ಮತ್ತು ಕೊಳವೆ ಬಾವಿ ಆಧಾರವಾಗಿಸಿಕೊಂಡಿದ್ದಾರೆ.

1200 ಅಡಿ ಕೊಳವೆ ಬಾವಿ ಕೊರೆದರೂ ನೀರು ಸಿಗುವುದು ಖಚಿತವಿಲ್ಲ. ಅದೃಷ್ಟವಶಾತ್ ನೀರು ದೊರೆತರೆ ಎಷ್ಟು ದಿನ ಇರುತ್ತದೆ ಎಂಬುದು ಸ್ಪಷ್ಟವಿಲ್ಲ. ತರಕಾರಿ ಹೆಚ್ಚಾಗಿ ಬೆಳೆಯುತ್ತಿದ್ದ ಇಲ್ಲಿನ ರೈತರು ನೀರಿನ ಕೊರತೆಯಿಂದ ಈಗ ಗುಲಾಬಿ ಹೂವಿನ ವ್ಯಾಪಾರಕ್ಕೆ ಮಾರುಹೋಗಿದ್ದಾರೆ.ವ್ಯಾಪಾರ: ಸರ್ಕಾರವೂ ಪ್ರೋತ್ಸಾಹ ಧನ ನೀಡುತ್ತಿರುವುದರಿಂದ ಗುಲಾಬಿ ಬೆಳೆಯುವವರ ಸಂಖ್ಯೆಯೂ ಹೆಚ್ಚುತ್ತಿದೆ. ಡಚ್ ತಳಿಯ ಬರೋಡ, ಬ್ಲಾಕ್ ಮ್ಯೂಸಿಕ್ ತಳಿಗಳ ರೋಜಾ ಕಡ್ಡಿ ನಾಟಿ ಮಾಡಿದರೆ ಸುಮಾರು 5 ವರ್ಷ ಸತತವಾಗಿ ಹೂವು ದೊರಕುತ್ತದೆ. ವರ್ಷಕ್ಕೊಮ್ಮೆ ಗಿಡ ಕತ್ತರಿಸಿ ಗೊಬ್ಬರ ನೀಡಬೇಕಾಗುತ್ತದೆ. ವರ್ಷದ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಮಂಜು ಬೀಳುವುದರಿಂದ ರೋಗಕ್ಕೆ ತುತ್ತಾಗುವ ಸಂಭವವಿರುತ್ತದೆ.ಬ್ಲಾಕ್ ಮ್ಯೂಸಿಕ್ ತಳಿ ಬೆಂಗಳೂರಿನ ಹೂ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಹೊಂದಿದೆ. 3 ದಿನಗಳ ಕಾಲ ಬಾಡದೇ ಉಳಿಯುವ ಹೂವನ್ನು ಲಾರಿಗಳ ಮುಖಾಂತರ ತಮಿಳುನಾಡಿನ ಸೇಲಂ, ಮದ್ರಾಸ್ ಹಾಗೂ ಆಂಧ್ರ ಪ್ರದೇಶದ ವಿಜಯವಾಡ ಮಾರುಕಟ್ಟೆಗೆ ಪೂರೈಸಲಾಗುತ್ತದೆ. ರೋಜಾ ಹೂವಿನ ಒಂದು ಕಟ್ಟಿನಲ್ಲಿ 12 ಹೂವುಗಳಿದ್ದು, ಒಂದು ಕಟ್ಟಿಗೆ 20 ರೂಪಾಯಿಯಂತೆ ತೋಟಕ್ಕೇ ಬಂದು ಹೂವಿನ ವ್ಯಾಪಾರಿಗಳು ಖರೀದಿ ಮಾಡುತ್ತಾರೆ !ಒಂದು ತಿಂಗಳಿಗೆ ಕನಿಷ್ಠ 5 ಸಾವಿರ ರೋಜಾ ಹೂವು ಕಟ್ಟುಗಳು ಮಾರಾಟವಾಗುತ್ತದೆ. ಕನಿಷ್ಠ ಬಂಡವಾಳ ಮತ್ತು ನೀರಿನಿಂದ ಹೆಚ್ಚು ಲಾಭ ಪಡೆಯಲು ಸಾಧ್ಯವಿದೆ. ಆ ಮೂಲಕ ರೈತರು ಆರ್ಥಿಕ ಸಧೃಢತೆ ಸಾಧಿಸಬಹುದು ಎನ್ನುತ್ತಾರೆ ರೈತ ಮತ್ತು ವ್ಯಾಪಾರಿ ಪ್ರಕಾಶ್. 

ಮಾರುಕಟ್ಟೆಯಲ್ಲಿ ಬೇಡಿಕೆಗೆ ತಕ್ಕಂತೆ ಗುಲಾಬಿ ಹೂವಿನ ಒಂದು ಕಟ್ಟಿನ ಬೆಲೆ 40 ರಿಂದ 60 ರೂಪಾಯಿವರೆಗೂ ಇರುತ್ತದೆ ಎಂದು ತಮಿಳುನಾಡಿನ ಹೂವಿನ ವ್ಯಾಪಾರಿ ರಮೇಶ್ ಹೇಳುತ್ತಾರೆ.ಇಲ್ಲಿನ ರೈತರು ಬೆಳೆಯುವ ಗುಲಾಬಿ ಬೆಳೆಗೆ ಸರ್ಕಾರದಿಂದ ಒಂದು ಎಕರೆಗೆ 9 ಸಾವಿರ ರೂಪಾಯಿ ಸಹಾಯಧನ ನೀಡಲಾಗುತ್ತಿದೆ. ರೈತರು ಸರ್ಕಾರದಿಂದ ದೊರಕುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ತಮ ಲಾಭ ಪಡೆಯಬಹುದು ಎಂಬುದು ತೋಟಗಾರಿಕೆ ಇಲಾಖೆ ಸಹಾಯಕ ಅಧಿಕಾರಿ ವಿ.ಸುಬ್ರಮಣ್ಯಂ ಅವರ ಅಭಿಮತ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry