ಗುರುವಾರ , ನವೆಂಬರ್ 21, 2019
20 °C

ಬರಗಾಲದಲ್ಲಿ ಬತ್ತದ ಸಿಹಿ ನೀರು ಬಾವಿ...

Published:
Updated:

ಶಿರಹಟ್ಟಿ: ಎಂತಹ ಭೀಕರ ಬರಗಾಲದಲ್ಲಿಯೂ ಬತ್ತದ ನೀರು. ನೂರಾರು ವರ್ಷಗಳ ಇತಿಹಾಸ ಹೊಂದಿದ ಮತ್ತು ಸಂಸ್ಕರಣ ಮಾಡಿದ ನೀರಿಗಿಂತಲೂ ಹೆಚ್ಚು ಶುಚಿ ರುಚಿ ಪರಿಶುದ್ಧ ನೀರು ಕುಡಿಯಬೇಕೆ ? ಹಾಗಾದರೆ ಬನ್ನಿ ಬೆಳ್ಳಟ್ಟಿಗೆ.  ನಿತ್ಯ ಬೆಳಗಾಯಿತೆಂದರೆ ಅದರ ಮುಂದೆ ಜನರ ಉದ್ದನೆಯ ಸಾಲು ಸಾಲು. ಇಂತಥದೊಂದು ತಾಲ್ಲೂಕಿನ ಬೆಳ್ಳಟ್ಟಿ ಗ್ರಾಮದ ಸಿಹಿನೀರು ಭಾವಿಯ ವೈಶಿಷ್ಟ್ಯ ಮತ್ತು ವಿಶೇಷ.   ಸುಮಾರು 12 ರಿಂದ 15 ಸಾವಿರ ಜನಸಂಖ್ಯೆ ಹೊಂದಿರುವ ಹಾಗೂ ಸದ್ಯದಲ್ಲಿ ಪಟ್ಟಣದ ಪಂಚಾಯಿತಿ ಆಗಲಿರುವ ತಾಲ್ಲೂಕಿನ ಪ್ರಮುಖ ಎರಡನೆ ವಾಣಿಜ್ಯ ಗ್ರಾಮ ಬೆಳ್ಳಟ್ಟಿ ಜನತೆಗೆ ನೂರಾರು ವರ್ಷಗಳಿಂದಲೂ ಏಕೈಕ ಶುದ್ಧಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಿರುವ ಬಾವಿಯ ಹೆಸರೇ `ಸಿಹಿನೀರು ಬಾವಿ'.ತಲಾತಲಾಂತರಗಳಿಂದ ಗ್ರಾಮದ ಜನತೆಗೆ ಸಿಹಿಯನ್ನು ಉಣಬಡಿಸುವ ಮತ್ತು ನಿಸರ್ಗದತ್ತ ಕೊಡುಗೆಯಾಗಿರುವ ಇದು ನಮ್ಮ ಗ್ರಾಮಕ್ಕೆ ವರದಾನ ಎಂದೇ ಗ್ರಾಮಸ್ಥರ ಬಲವಾದ ನಂಬಿಕೆ.ಆಧುನಿಕ ತಂತ್ರಜ್ಞಾನದ ಅವಶ್ಯಕತೆಯಿಲ್ಲ. ಸಂಸ್ಕರಣಗೊಂಡ ನೀರನ್ನು ಕುಡಿಯುವ ಅಗತ್ಯವೂ ಇಲ್ಲ. ಎಲ್ಲ ಅಂಶಗಳು ಈ ಬಾವಿಯಲ್ಲಿ ಅಡಕವಾಗಿದ್ದು, ಈ ನೀರಿನಿಂದ ಆರೋಗ್ಯಯುತ ಜೀವನವನ್ನು ನಡೆಸುತ್ತಿದ್ದೇವೆ ಎಂಬದು ಗ್ರಾಮದ ಯುವಕರ ಸ್ಪಷ್ಟ ನುಡಿಗಳು.

ಮಾಚೇನಹಳ್ಳಿ ರಸ್ತೆಯ ಹನುಮಂತ ದೇವಸ್ಥಾನದ ಹತ್ತಿರ ಮೂರು ಬೋರವೆಲ್‌ಗಳು ಕಾರ್ಯನಿರ್ವಹಿಸುತ್ತಿದ್ದರೂ ಎರಡು ಪಂಪಸೆಟ್‌ಗಳು ಕಾರ್ಯ ಅಷ್ಟಕಷ್ಟೆ. ಉಳಿದ ಒಂದರಲ್ಲಿ ಸಂಪೂರ್ಣ ಗ್ರಾಮದ ಜನತೆಗೆ ಗ್ರಾಮ ಪಂಚಾಯ್ತಿ ನೀರನ್ನು ಸರಬರಾಜು ಮಾಡಬೇಕು. ಗ್ರಾಮದಲ್ಲಿ ಹಲವಾರು ಬಾವಿಗಳಿದ್ದರೂ ಕುಡಿಯಲು ಬಾರದ ಸ್ಥಿತಿ.ಇಲ್ಲಿರುವ ಬಾವಿ ಎಷ್ಟೊಂದು ಪ್ರಸಿದ್ಧಿ ಪಡೆದಿದೆ ಎಂದರೆ ಸಿಹಿನೀರು ಹೋಟೆಲ್, ಸಿಹಿನೀರು ಪಾನ್‌ಶಾಪ್ ಹೀಗೆ ಹಲವಾರು ರೀತಿಯಲ್ಲಿ ಅಂಗಡಿಗಳಿಗೆ ಫಲಕವನ್ನು ಹಾಕಿರುವ ದೃಶ್ಯಗಳು ಇಲ್ಲಿ ಕಾಣಸಿಗುತ್ತವೆ. ಗ್ರಾಮದ ಪ್ರತಿ ಮನೆಯಲ್ಲಿ ಇಲ್ಲಿಯ ನೀರು ಸಂಗ್ರಸಿಕೊಂಡೇ ನಂತರ ಉಳಿದ ಕೆಲಸಗಳಿಗೆ ಚಾಲನೆ. ಸಿಹಿನೀರು ಬಾವಿ ನಮ್ಮ ಗ್ರಾಮದ ವರದಾನ ಎಂದೇ ಗ್ರಾಮಸ್ಥರ ಬಲವಾದ ನಂಬಿಕೆ.ಬೆಳ್ಳಟ್ಟಿ, ಸುಗ್ನಳ್ಳಿ, ಮಾಚೇನಹಳ್ಳಿ, ನಾರಾ ಯಣಪೂರ, ಹೆಬ್ಬಾಳ, ಕನಕವಾಡ, ತಂಗೋಡ ಸೇರಿದಂತೆ ಹಲವಾರು ಗ್ರಾಮಗಳ ನೀರಿನಲ್ಲಿ ಫ್ಲೋರೈಡ್‌ಯುಕ್ತ ಅಂಶ ಹೆಚ್ಚಾಗಿರುವದರಿಂದ ಜನರು ಅನಿವಾರ್ಯವಾಗಿ ಹಲವಾರು ರೋಗಗಳಿಗೆ ಕಾರಣರಾಗುತ್ತಿದ್ದಾರೆ.

ಬೆಳ್ಳಟ್ಟಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ನೀರಿನ ಗುಣಮಟ್ಟ ಸರಿಯಿಲ್ಲ ಎಂಬುದಂತೂ ಸ್ಪಷ್ಟ. ಆದರೆ ಇದಕ್ಕೆ ಪರಿಹಾರ ಹುಡುಕುವತ್ತ ಅಧಿಕಾರಿಗಳಿಗೆ ಮತ್ತು ಪ್ರತಿನಿಧಿಗಳಿಗೆ ಆಸಕ್ತಿ ಇಲ್ಲದಿರುವದು ದುರದೃಷ್ಟಕರ ಸಂಗತಿ.ತಾಲ್ಲೂಕಿನ ಹೊಳೆ ಇಟಗಿ ಗ್ರಾಮದಿಂದ ಬೆಳ್ಳಟ್ಟಿ, ಶಿರಹಟ್ಟಿ ಮತ್ತು ಮುಳಗುಂದ ಗ್ರಾಮಗಳಿಗೆ ತುಂಗಭದ್ರಾ ಕುಡಿಯುವ ನೀರು ಪೂರೈಕೆಯ ಕಾಮಗಾರಿ ಪೂರ್ಣಗೊಂಡರೆ ಜನತೆ ಕೊಂಚ ನಿಟ್ಟುಸಿರು ಬಿಡಬಹುದು.   

 

ಪ್ರತಿಕ್ರಿಯಿಸಿ (+)