ಭಾನುವಾರ, ಜನವರಿ 19, 2020
28 °C

ಬರಗಾಲ ಎದುರಿಸಲು ಸಕಲ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೇಡಂ: ಈಗಾಗಲೇ ಕಳೆದ 3 ತಿಂಗಳುಗಳಿಂದ ಬರಗಾಲದ ಛಾಯೆ ಮೂಡಿದೆ. ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಬವಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ತಾಲ್ಲೂಕಿನ ಹೆಚ್ಚಿನ ಸಮಸ್ಯೆ ಎದುರಿಸುವ ಗ್ರಾಮಗಳಲ್ಲಿ ಯುದ್ಧೋಪಾದಿಯಲ್ಲಿ ಕೆಲಸ ನಿರ್ವಹಿಸುವಂತೆ ಜಲಸಂಪನ್ಮೂಲ ಮತ್ತು ಗುಲ್ಬರ್ಗ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ತಾಕೀತು ಮಾಡಿದರು.ಅವರು ಗುರುವಾರ ತಾಲ್ಲೂಕು ಪಂಚಾಯಿತಿ ಕಾರ್ಯಾಲಯ ಸಭಾಂಗಣದಲ್ಲಿ ತಾಲ್ಲೂಕಿನ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ತಾಲ್ಲೂಕು, ಜಿಲ್ಲಾ ಆಡಳಿತ ಯಂತ್ರ ಪರಸ್ಪರ ಮತ್ತು ಸಾಮೂಹಿಕ ಸಹಭಾಗಿತ್ವದಲ್ಲಿ ಚುರುಕಾಗಿ ಕೆಲಸ ನಿರ್ವಹಿಸುವುದು ಅಗತ್ಯ ಎಂದರು.ಬರಗಾಲ ಹಿನ್ನೆಲೆಯಲ್ಲಿ ರೈತರ ಸಂಕಷ್ಟಗಳಿಗೆ ಸ್ಪಂದಿಸಲು ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ತಾಲ್ಲೂಕಿನ ಪ್ರಮುಖ ಬೆಳೆಗಳ ಬಿತ್ತನೆ, ಉತ್ಪಾದನೆ ಮತ್ತು ಅನುಭವಿಸಿದ ನಷ್ಟ ಕುರಿತು ಮಾಹಿತಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದರು.ಬೇಸಿಗೆ ದಿನಗಳಲ್ಲಿ ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಆಹಾರ ಪೂರೈಕೆಗೆ ವಿಶೇಷ ಗಮನ ಹರಿಸಬೇಕು. ರೈತರಿಗೆ ಮೇವಿನ ಬೀಜ ವಿತರಿಸಿ ನೀರಾವರಿ ಸೌಲಭ್ಯ ಇದ್ದಲ್ಲಿ ಮೇವು ಬೆಳೆಸಬೇಕು ಎಂದರು.ತೊಗರಿ ಬೆಂಬಲ ಬೆಲೆಗಿಂತ ಕಡಿಮೆ ದರದಲ್ಲಿ ಬಂದಲ್ಲಿ ಉದ್ಬವಿಸುವ ಸಮಸ್ಯೆಯನ್ನು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಕೈಕೊಳ್ಳುವುದಾಗಿ ಭರವಸೆ ನೀಡಿದರು. ಜಿಲ್ಲೆಯ ವಿವಿಧ ತಾಲ್ಲೂಕುಗಳ ಮಾರುಕಟ್ಟೆಗೆ ಎಷ್ಟು ಪ್ರಮಾಣದಲ್ಲಿ ತೊಗರಿ ಬಂದಿದೆ, ಗುಣಮಟ್ಟ ಮಾಹಿತಿ ಕೂಡಲೇ ಸಲ್ಲಿಸಲು ಆದೇಶಿಸಿದರು.ತಾಲ್ಲೂಕಿನ ರೈತರು ಎರಡು ಹಂತದ ನಷ್ಟ ಅನುಭವಿಸಿದ್ದಾರೆ. ಉದ್ದು, ಹೆಸರು ಬೆಳೆ ಬರದ ಕಾರಣ ಬಿತ್ತಿದ ಬೆಳೆಯನ್ನು ನಾಶ ಮಾಡಿ ತೊಗರಿ ಬಿತ್ತಿದ್ದಾರೆ ಎಂದು ಶಾಸಕ ಡಾ. ಶರಣಪ್ರಕಾಶ ಪಾಟೀಲ ಊಡಗಿ ಗಮನ ಸೆಳೆದರು.ಕುಡಿಯುವ ನೀರಿನ ಸಮಸ್ಯೆ ಕುರಿತು ಸಚಿವರು ವೆಾದಲು ಜಿಪಂ ಸದಸ್ಯರನ್ನು ವಿಚಾರಿಸಿದಾಗ ಈರಾರೆಡ್ಡಿ ಹೂವಿನಬಾವಿ ಬಟಗೇರಾ ಅವರು ನೀರಿನ ಮೂಲ ಇದ್ದು ವಿದ್ಯುತ್ ಸರಬರಾಜಿನ ತೊಂದರೆಯಿಂದ ಕುಡಿಯುವ ನೀರು ಲಭ್ಯವಾಗುತ್ತಿಲ್ಲ ಎಂದರು.

 

ಶಾಸಕರು ತಾಲ್ಲೂಕಿನ 155 ಗ್ರಾಮ ಮತ್ತು ತಾಂಡಾಗಳಲ್ಲಿ ಪ್ರಸ್ತುತ ಕಡಚರ್ಲಾ ಗ್ರಾಮಸ್ಥರು ಸಮಸ್ಯೆ ಎದುರಿಸುತ್ತಿದ್ದಾರೆ.  ಕೋನಾಪೂರ ಮತ್ತು ಜಾಕನಪಲ್ಲಿ ತಾಂಡಾದಲ್ಲೂ ಸಮಸ್ಯೆ ಆರಂಭಗೊಂಡಿದೆ ಈ ನಿಟ್ಟಿನಲ್ಲಿ ಬರುವ 11ರ ಕೆಡಿಪಿ ಸಭೆಯಲ್ಲಿ ಗ್ರಾಮ ಮತ್ತು ಪಂಚಾಯತವಾರು ಸಂಪೂರ್ಣ ಮಾಹಿತಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದರು.

 

ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಜಯಕುಮಾರ ಸೇಡಂ ತಾಲ್ಲೂಕಿಗೆ 55 ಕೊಳವೆ ಬಾವಿಗಳು ಮಂಜೂರಾಗಿವೆ. ಇದರಲ್ಲಿ 11 ಸಂಪೂರ್ಣಗೊಂಡಿವೆ.  ಮುಂದೆ 61 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉದ್ಬವಿಸಬಹುದು. ಸಮಸ್ಯೆಗಳ ನಿವಾರಣೆಗೆ 55 ಲಕ್ಷ ರೂಪಾಯಿ  ಕಾಯ್ದಿರಿಸಲಾಗಿದೆ ಎಂದರು. ಶಾಸಕರು ಯಾವ ಕಾರಣಕ್ಕೂ ಈ ಅನುದಾನವನ್ನು ಬೇರೆ ಬಾಬತ್ತಿಗೆ ಖರ್ಚು ಮಾಡದಿರಲು ತಿಳಿಸಿದರು.ಜಿಪಂ ಸದಸ್ಯ ಶರಣಪ್ಪ ಪಾಟೀಲ ತೆಲಕೂರ, ಈರಾರೆಡ್ಡಿ ಹೂವಿನಬಾಬಿ, ತಾಪಂ ಉಪಧ್ಯಕ್ಷೆ ಯಾದಮ್ಮ ಕೊಳ್ಳಿ, ಕೆಡಿಪಿ ಸದಸ್ಯೆ ಗಂಗಮ್ಮ ನಿಷ್ಠಿ, ಹೆಚ್‌ಕೆಡಿಬಿ ಅಧ್ಯಕ್ಷ ಅಮರನಾಥ ಪಾಟೀಲ, ನಗರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ವಿದ್ಯಾಸಾಗರ ಕುಲಕರ್ಣಿ ಇದ್ದರು. ಕೃಷಿ ಇಲಾಖೆ, ಪಶು ಸಂಗೋಪನೆ, ತಾಪಂ, ತೋಟಗಾರಿಕೆ, ಶಿಕ್ಷಣ, ಅರಣ್ಯ, ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಸಹಕಾರ, ಆರೋಗ್ಯ, ಎಂಜನಿಯರಿಂಗ ಒಳಗೊಂಡಂತೆ ತಾಲ್ಲೂಕು ಮತ್ತು ಜಿಲ್ಲೆಯ ಅನುಷ್ಠಾನ ಅಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)