ಬರಡು ನೆಲದಲ್ಲಿ ಚಮತ್ಕಾರ

7

ಬರಡು ನೆಲದಲ್ಲಿ ಚಮತ್ಕಾರ

Published:
Updated:

ಹದಿನೈದು ವರ್ಷಗಳ ಹಿಂದೆ ಬರಡಾಗಿದ್ದ ಹದಿನೇಳು ಎಕರೆ ಪ್ರದೇಶ ಈಗ ಜೀವವೈವಿಧ್ಯದ ತಾಣ. ಮಳೆನೀರು ಸಂಗ್ರಹಣೆ ಹಾಗೂ ಪರಿಸರ ಸ್ನೇಹಿ ಕೃಷಿಯ ಮೂಲಕ ಇಲ್ಲಿ ಪ್ರಕೃತಿಗೆ ಚಿಕಿತ್ಸೆ ನೀಡಿದ್ದಾರೆ ಧಾರವಾಡದ ವೈದ್ಯ ಸಂಜೀವ ಕುಲಕರ್ಣಿ.ಅದು 1996ನೇ ಇಸವಿಯ ಒಂದು ದಿನ. ಧಾರವಾಡದಿಂದ ಅಳ್ನಾವರ ರಸ್ತೆಯಲ್ಲಿ ಹತ್ತು ಕಿಲೋಮೀಟರ್ ದೂರದ ದಡ್ಡಿ ಕಮಲಾಪುರ ಗ್ರಾಮದ ಕೆಲ ಹಿರಿಯರಿಗೆ ಏನೋ ತಳಮಳ. `ಪ್ಯಾಟೆಯ ಯಾರೋ ಡಾಕ್ಟ್ರು ನಮ್ಮೂರಲ್ಲಿರೋ ಹೊಲಾ ತೊಗೊಂಡಾರಂತ, ಆ ಬೀಳು ಭೂಮ್ಯಾಗ ಒಕ್ಕಲುತನ  ಆಗಾಕಿಲ್ಲ. ಅಲ್ಲಿ ಏನು ಮಾಡಾಕ ಹೊಂಟಾರೊ, ಯಾವ್ದಾದ್ರೂ ಫ್ಯಾಕ್ಟ್ರಿ ಗೀಕ್ಟ್ರಿ ಹಾಕ್ತಾರೊ... ನಮ್ಗೆಲ್ಲಾ ಏನಾರಾ ತ್ರಾಸ್ ಮಾಡ್ತಾರೊ~ ಎಂಬ ಆತಂಕ.ನೇಗಿಲು ಕಂಡು ದಶಕಗಳೇ ಕಳೆದಿದ್ದ ಆ ಭೂಮಿಯನ್ನು ಕೊಂಡ ಪ್ರಸೂತಿ ತಜ್ಞ ಡಾ. ಸಂಜೀವ ಕುಲಕರ್ಣಿ ಅವರಿಗೆ ಮಾತ್ರ ಯಾವುದೇ ಗೊಂದಲಗಳಿರಲಿಲ್ಲ. ಅಲ್ಲಿ ರಾಸಾಯನಿಕ ರಹಿತವಾದ, ಪರಿಸರ ಸ್ನೇಹಿಯಾದ ಸ್ವಾಭಾವಿಕ ಕೃಷಿ ಕೈಗೊಳ್ಳಬೇಕು; ಜೀವವೈವಿಧ್ಯತೆಗೆ ಒತ್ತು ನೀಡಬೇಕು ಎನ್ನುವುದು ಅವರ ಮೂಲ ಉದ್ದೇಶವಾಗಿತ್ತು. ನಗರದ ಸದ್ದುಗದ್ದಲದಿಂದ ದೂರವಾಗಿರುವ ಜಾಗದ ಹುಡಕಾಟದಲ್ಲಿದ್ದ ಅವರಿಗೆ ದಡ್ಡಿ ಕಮಲಾಪುರದ ಹೊಲಸೂಕ್ತವೆನಿಸಿತ್ತು.ಈ ಹೊಲ ಹೆಚ್ಚೂ ಕಡಿಮೆ ಇಳಿಜಾರು ಪ್ರದೇಶ. ಕೆಳಭಾಗದಲ್ಲಿ ಸ್ವಲ್ಪ ಸಮತಟ್ಟಾದ ನೆಲ. ಉತ್ತಮ ಕೆಂಪು ಮಸಾರಿ ಮಣ್ಣು ಇದ್ದರೂ ನೀರಿನ ಸೆಲೆ ಇರಲಿಲ್ಲ. ಮಳೆಗಾಲ ಕಳೆದು ಒಂದೆರಡು ತಿಂಗಳವರೆಗೆ ಮಾತ್ರ ಒಂದು ಮೊಳಕಾಲು ಮಟ್ಟದಷ್ಟು ನೀರು ನಿಲ್ಲುತ್ತಿದ್ದ ಚಿಕ್ಕ ಹೊಂಡವೊಂದು ಜಮೀನಿನ ಕೆಳಭಾಗದಲ್ಲಿತ್ತು ಅಷ್ಟೆ. ಕುರುಚಲು ಕಾಡು, ಮುಳ್ಳು ಕಂಟಿಗಳು ಬೆಳೆದ ನೆಲ. ಮೇಲ್ನೋಟಕ್ಕಂತೂ ಏನೂ ಬೆಳೆಯಲಾಗದ ಬಂಜರು ಭೂಮಿ. ಮುಂದಿನ ಹಾದಿಯ ಕುರಿತು ಸ್ಪಷ್ಟತೆಯಿದ್ದ ಕುಲಕರ್ಣಿ ಅವರು ಅದಕ್ಕಿಟ್ಟ ಹೆಸರು `ಸುಮನ ಸಂಗಮ~.ಮೊದಲ ವರ್ಷ ಅವರು ನೆಟ್ಟ ಮಾವು, ಪೇರಲ, ತೆಂಗು ಇತ್ಯಾದಿ ಸಸಿಗಳಲ್ಲಿ ಬಹುಪಾಲು ನೀರಿನ ಆಶ್ರಯವಿಲ್ಲದೇ ಸತ್ತು ಹೋಗಿದ್ದವು. ಅದಕ್ಕಾಗಿ ಮಳೆ ನೀರು ಸಂಗ್ರಹದ ಅಗತ್ಯ ಗಮನಕ್ಕೆ ಬಂದ ಕೂಡಲೇ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರು. ಅಲ್ಲಿ ಬೀಳುವ ವಾರ್ಷಿಕ ಮಳೆಯ ಪ್ರಮಾಣ ಸುಮಾರು 700 ಮಿಲಿಮೀಟರು. ಮಳೆಯ ನೀರನ್ನು ಪೂರ್ತಿಯಾಗಿ ಉಪಯೋಗಿಸಿಕೊಳ್ಳಲು ಮೊದಲ ವರ್ಷದಲ್ಲಿಯೇ ಕಾಂಟೂರ್ ಬಂಡಿಂಗ್ (ಸಮಪಾತಳಿ) ವಿಧಾನ ಅನುಸರಿಸಿದರು. ಜಮೀನಿನಲ್ಲಿ ಇಳಿಜಾರಿಗೆ ಅಡ್ಡಲಾಗಿ ಐದಾರು ಕಿರುಗಾಲುವೆ ತೆಗೆಸಿ ಐವತ್ತಕ್ಕೂ ಹೆಚ್ಚು ಇಂಗು ಗುಂಡಿ ನಿರ್ಮಿಸಿಕೊಂಡರು.ಮೊದಲ ಮಳೆಗೆ ಬಹುತೇಕ ಎಲ್ಲ ಗುಂಡಿಗಳು ತುಂಬಿದವು. ಹೆಚ್ಚಾದ ನೀರು ಕೆಳಗೆ ಹರಿದು ಒಂದೆಡೆ ಸಂಗ್ರಹವಾಗುವಂತೆ ಹಂತ ಹಂತವಾಗಿ ಹಲವು ಚಿಕ್ಕ, ದೊಡ್ಡ ಕೆರೆಗಳನ್ನು ತೋಡಿಸಿದರು. ಮೇಲ್ಮಟ್ಟದ ಕೆರೆ ತುಂಬಿದೊಡನೆ ಕೆಳಗಿನ ಹಂತದಲ್ಲಿರುವ ಇನ್ನೊಂದು ಕೆರೆಗೆ ನೀರು ಹರಿಯುವಂತೆ ನೋಡಿಕೊಂಡರು.ಹೀಗೆ ಅವರು ತೋಡಿಸಿದ ಕೆರೆಗಳು 30 ಅಡಿ ಸುತ್ತಳತೆಯಿಂದ ಹಿಡಿದು 100 ಅಡಿ ಉದ್ದ, 150 ಅಡಿ ಅಗಲದವರೆಗೆ ವಿಸ್ತಾರ ಹೊಂದಿವೆ. ಕವಿ ಹೃದಯದ ಕುಲಕರ್ಣಿಯವರು ಇಂತಹ ಒಂದೊಂದು ಕೆರೆಗೂ ಒಂದೊಂದು ಹೆಸರಿಟ್ಟರು. ಇಲ್ಲಿ ಇಂಗಿದ ನೀರು ಬೆಳೆಗಳಿಗೆ ಆಸರೆಯಾಯಿತು. ಇದರ ನಡುವೆ ಸತತ ಮೂರು ವರ್ಷ ಬರಗಾಲ ಬಂದಿತ್ತು. ಆಗ ತಾವು ನೆಟ್ಟ ಗಿಡಗಳನ್ನು ಉಳಿಸಿಕೊಳ್ಳಲು 250 ಅಡಿ ಆಳದ ಕೊಳವೆ ಬಾವಿ ಕೊರೆಸಿದರು. ಅಲ್ಲಿಯೂ ಮಳೆನೀರು ಇಂಗಿಸುವ ವ್ಯವಸ್ಥೆ ಮಾಡಿದರು.ಇದೆಲ್ಲದರ ಪರಿಣಾಮವಾಗಿ ಭೂಮಿಯಲ್ಲಿ ತೇವಾಂಶ ಮಳೆಗಾಲದ ನಂತರವೂ ಹೆಚ್ಚು ಕಾಲ ಉಳಿಯುವಂತಾಯಿತು. ಜೊತೆಜೊತೆಗೇ ಮಾವು, ಚಿಕ್ಕು, ಪೇರಲ, ತೆಂಗು, ಚಕ್ಕೋತ, ಬೇಲ, ಕರಿಮಾದಲ, ನಿಂಬೆ ಇತ್ಯಾದಿ ಗಿಡಗಳು ಹಸಿರು ಸೂಸತೊಡಗಿದವು.ಹೊಲ ಖರೀದಿಸುವಾಗ ಅಲ್ಲಿದ್ದ  ಗಿಡಮರಗಳನ್ನೂ ಕುಲಕರ್ಣಿಯವರು ಹಾಗೆಯೇ ಬೆಳೆಯಲು ಬಿಟ್ಟರು. ಕವಳಿ ಪೊದೆ, ನೇರಲು, ನೆಲ್ಲಿ ಇತ್ಯಾದಿ ಜಾತಿಯ ಗಿಡಗಳು ಈ ರೀತಿಯಲ್ಲಿ ಬೆಳೆಯತೊಡಗಿದವು. ಮತ್ತಿ, ಕಿಂದಳ, ತೇಗ, ಹೆಬ್ಬೇವು, 3-4 ಜಾತಿಯ ಬಿದಿರು, ಹೊಂಗೆ ಮುಂತಾದ ಸ್ವಾಭಾವಿಕ ಅರಣ್ಯದಲ್ಲಿರುವ ಹಲವಾರು ಜಾತಿಯ ಮರಗಳು ಬೆಳೆದುಕೊಂಡವು.ಇದರ ಜೊತೆಗೇ ಇಲ್ಲಿನ ನೈಜ ಪರಿಸರ ಕಂಡು ನರಿ, ಮುಂಗುಸಿ, ಕೊಕ್ಕರೆ ಇತ್ಯಾದಿ ಪ್ರಾಣಿ ಪಕ್ಷಿಗಳು ಬಂದು ನೆಲೆಸತೊಡಗಿದವು. ಜೇನ್ನೊಣಗಳ ಝೇಂಕಾರ ಹೆಚ್ಚತೊಡಗಿತು. ಪ್ರಾಣಿ ಪಕ್ಷಿಗಳು ಹೊತ್ತು ತಂದ ಹಲವಾರು ಜಾತಿಯ ವೃಕ್ಷಗಳ ಬೀಜಗಳು ಸಹಜವಾಗಿಯೇ ಇಲ್ಲಿ ಹುಟ್ಟಿ ಬೆಳೆಯತೊಡಗಿದವು. ಸದ್ಯ ಅವರ ತೋಟದಲ್ಲಿ 70ಕ್ಕೂ ಹೆಚ್ಚು ಸಸ್ಯ ಪ್ರಭೇದಗಳು, 20ಕ್ಕೂ ಹೆಚ್ಚು ಜಾತಿಯ ಪ್ರಾಣಿ ಪಕ್ಷಿಗಳು ಮನೆ ಮಾಡಿಕೊಂಡಿವೆ.ಹೊಲದಲ್ಲಿ ಕೆಲ ದೇಸೀ ಜಾತಿಯ ಭತ್ತ ಬೆಳೆಯುತ್ತಿದ್ದಾರೆ. ಅಲ್ಲದೇ ನವಿಲುಕೋಸು, ಮೂಲಂಗಿ, ಬಾಳೆ ಕಬ್ಬು ಇತ್ಯಾದಿ ಬೆಳೆಗಳೂ ಇವೆ. ರಾಸಾಯನಿಕ ಬಳಸದೆ ಬೆಳೆದ ಈ ಉತ್ಪನ್ನಗಳನ್ನು ಧಾರವಾಡದ ಸಾವಯವ ಮಾರುಕಟ್ಟೆಯಲ್ಲಿ ಮಾರುತ್ತಾರೆ. ಅವರ ಕನಸಿಗೆ ಪತ್ನಿ ಪ್ರಭಾ ಊರುಗೋಲಾಗಿದ್ದಾರೆ.`ಜೇನ್ನೊಣಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಸಂಜೀವಣ್ಣನ ತೋಟದಲ್ಲಿ ಮಾತ್ರವಲ್ಲದೇ ಕೆಳಭಾಗದಲ್ಲಿ ಇರುವ ನನ್ನ ಭತ್ತದ ಗದ್ದೆಯಲ್ಲಿ ಕೂಡ ಪರಾಗಸ್ಪರ್ಶ ಕ್ರಿಯೆಯಿಂದಾಗಿ ಈಗ ಏಳೆಂಟು ವರ್ಷಗಳಿಂದ ಫಸಲು ಹೆಚ್ಚುತ್ತಿದೆ. ಅವರು ತೋಡಿಸಿದ ನೀರಿನ ಕೆರೆಗಳ ಪರಿಣಾಮವೂ ಇದಕ್ಕೆ ಕಾರಣ ಎಂದು ಖಚಿತವಾಗಿ ಹೇಳಬಲ್ಲೆ~ ಎನ್ನುತ್ತಾರೆ ಪಕ್ಕದ ತೋಟದ ಚಂದಪ್ಪ ಹುಚ್ಚಣ್ಣನವರ್.ಈಗ ದಡ್ಡಿ ಕಮಲಾಪುರದ ಹಿರಿಯರಿಗೆ ಸಂಜೀವ ಕುಲಕರ್ಣಿಯವರು `ಪೇಟೆಯಿಂದ ಬಂದ ಯಾವುದೋ ಡಾಕ್ಟ್ರು ಅಲ್ಲ. ಬದಲಿಗೆ ಸುಮನ ಸಂಗಮ ಕಾಡಿನ ತೋಟದ ನಮ್ಮ ಸಂಜೀವಣ್ಣ. ಅವರ ತೋಟ ನೋಡಲು, ಅಧ್ಯಯನ ಮಾಡಲು, ಪಕ್ಷಿಗಳ ಕಲರವ ಆಸ್ವಾದಿಸಲು, ಸ್ವಾಭಾವಿಕ ವಾಗಿಯೇ ಬೆಳೆದ ಹಣ್ಣುಗಳ ರುಚಿ ಅನುಭವಿಸಲು, ಕೆರೆಯಲ್ಲಿ ಈಜಾಡಲು ಪ್ಯಾಟೆ ಮಂದಿ ಅಷ್ಟೇ ಅಲ್ಲದೇ ಸುತ್ತಲ ಹಳ್ಳಿಯ ಜನರೂ  ಸುಮನ ಸಂಗಮಕ್ಕೆ ಬರುತ್ತಾರೆ.ಕುಲಕರ್ಣಿಯವರ ಸಂಪರ್ಕ ಸಂಖ್ಯೆ 94481 43100.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry