ಬರಡು ಭೂಮಿಯಲ್ಲಿ ನಿತ್ಯಹರಿದ್ವರ್ಣದ ಮೇಘ ಸಂದೇಶ

7

ಬರಡು ಭೂಮಿಯಲ್ಲಿ ನಿತ್ಯಹರಿದ್ವರ್ಣದ ಮೇಘ ಸಂದೇಶ

Published:
Updated:

ಮಳೆಯ ಜೂಜಾಟ, ವಿದ್ಯುತ್‌ನ ಕಣ್ಣಾಮುಚ್ಚಾಲೆ, ಕಾರ್ಮಿಕರ ಸಮಸ್ಯೆ, ಗಗನಮುಖಿಯಾಗಿರುವ ರಸಗೊಬ್ಬರ ಬೆಲೆ, ಬೆಳೆದ ಬೆಳೆಗೆ ದೊರಕದ ವೈಜ್ಞಾನಿಕ ಬೆಲೆ, ಕುಸಿಯುತ್ತಿರುವ ಅಂತರ್ಜಲ.... ಒಕ್ಕಲುತನದ ಕಾಯಕ ಪರಂಪರೆಯನ್ನು ತೊರೆಯಲು ಕಾರಣಗಳು ನೂರಾರು.ಇದಕ್ಕೆ ಅಪವಾದ ಎಂಬಂತೆ, ಸಮಸ್ಯೆಯ ಸುಳಿಯಲ್ಲಿ ಸಿಲುಕಿ ಅಳಿವು-ಉಳಿವಿನ ಮಧ್ಯೆ ಹೋರಾಟ ನಡೆಸುತ್ತಿರುವ ಒಕ್ಕಲುತನದ ಕಾಯಕದಲ್ಲಿ ತೊಡಗಿಸಿಕೊಂಡು, ಅತ್ಯಂತ ಶ್ರದ್ಧೆ ಹಾಗೂ ಶ್ರಮದ ಬೆವರು ಬಸಿಯುವ ಮೂಲಕ ದೇಸಿಯ ಮಾದರಿಯ ಕೃಷಿ ಪದ್ಧತಿಯಲ್ಲಿ ಯಶಸ್ಸಿನ ಮೆಟ್ಟಿಲೇರಿದ ಯುವರೈತರೊಬ್ಬರ ಯಶೋಗಾಥೆ ಚಿತ್ರಣ ಇದು.ಹರಪನಹಳ್ಳಿ ಪಟ್ಟಣದ ಹೊರವಲಯದ ಹೊಸಪೇಟೆ ರಸ್ತೆಯ ಕಾಯಕದಹಳ್ಳಿ ಕ್ರಾಸ್ ಮೂಲಕ ಮೂರ‌್ನಾಲ್ಕು ಕಿ.ಮೀ. ದೂರ ಕ್ರಮಿಸುತ್ತಿದ್ದಂತಿಯೇ ನಿತ್ಯೋತ್ಸವದ ಹಸಿರಿನ ಸೊಬಗು ಮೈದುಂಬಿಕೊಂಡು ನೂರಾರು ಜಾತಿಯ ವೃಕ್ಷ ಪ್ರಬೇಧಗಳ `ಮೇಘಸಂದೇಶ~ ಫಾರ್ಮ್ ಕಾಲಿನ ವೇಗಕ್ಕೆ ಕಡಿವಾಣ ಹಾಕುತ್ತದೆ.

ತೋಟದಲ್ಲಿನ ವೃಕ್ಷಗಳು ಸೂಸುವ ಘಮಘಮಿಸುವ ಸುಗಂಧ ಮೈಮನಸಿಗೆ ಕ್ಷಣಕಾಲ ಮುದನೀಡುತ್ತದೆ. ಒಳಗೆ ಕಾಲಿಡುತ್ತಿದ್ದಂತಿಯೇ ಶಾಂತಿಯ ಸಂಕೇತವಾದ ಪಾರಿವಾಳ `ಗುಟು...ಗುಟು...ಗುಟುಮ್....~ ಎನ್ನುತ್ತಲೇ ಪ್ರಾಂಜಲ ಮನಸ್ಸಿನಿಂದ ಸ್ವಾಗತಿಸುತ್ತವೆ.ತೋಟದ ಒಡಲಾಳದ ತುಂಬೆಲ್ಲಾ ನಡೆದಾಡುತ್ತಿದ್ದಂತಿಯೇ ಎತ್ತರದ ಕಲ್ಪವೃಕ್ಷದಲ್ಲಿ ಹೊಂಬಾಳೆ ಚಿಗುರೊಡೆದು ಸೂಸುವ ಘಮ, ಶ್ರೀಗಂಧದ ಮರದಿಂದ ಹೊರ ಬರುವ ಸುಮಧುರ ಸುವಾಸನೆ, ಕರಿಬೇವಿನ ಮಧುರತೆ, ಮಾವು, ಹಲಸು, ಹುಣುಸೆ, ಪಪ್ಪಾಯಿ, ಬಿಲ್ವಪತ್ರೆ, ನೇರಳೆಯ ಮಾಧುರ್ಯತೆ ತೋಟದ ತುಂಬೆಲ್ಲಾ ಹರಿದಾಡುತ್ತದೆ.ಶೂನ್ಯಬಂಡವಾಳದ ಮೂಲಮಂತ್ರವನ್ನೇ ಕೃಷಿಯ ಜೀವಾಳವಾಗಿಸಿಕೊಂಡಿರುವ ಮೇಘಸಂದೇಶದ ರೂವಾರಿ ಕೆ.ಎಂ. ಬಸವರಾಜಯ್ಯ. ಪದವಿಯವರೆಗೂ ವ್ಯಾಸಂಗ ಮಾಡಿರುವ ಇವರಿಗೆ ಸರ್ಕಾರಿ ನೌಕರಿಗೆ ಹೋಗುವುದು ದೊಡ್ಡಮಾತೇನು ಆಗಿರಲಿಲ್ಲ.  ತಂದೆ ಕೆ.ಎಂ. ವಾಮದೇವಯ್ಯ ಬ್ಯಾಂಕ್ ಒಂದರ ಉದ್ಯೋಗದಲ್ಲಿದ್ದರು. ಜತೆಗೆ, ಘಟನಾಘಟಿ ರಾಜಕಾರಣಿಗಳ ಸಂಪರ್ಕವೂ ಅವರಿಗೆ ಇತ್ತು. ಆದರೆ, ಬಸವರಾಜಯ್ಯ ದೊರಕಬಹುದಾದ ಅವಕಾಶಗಳನ್ನು ನಯವಾಗಿಯೇ ತಿರಸ್ಕರಿಸುವ ಮೂಲಕ ಕೃಷಿಯಲ್ಲಿ ತೊಡಗಿಸಿಕೊಂಡು, ಪಕ್ಕಾ ಸಾವಯವ ಕೃಷಿಯಲ್ಲಿಯೇ ದೇಸಿತನ ಮೆರೆದಿದ್ದಾರೆ.ಪಿತ್ರಾರ್ಜಿತವಾಗಿ ಬಂದಿರುವ 12.50 ಎಕರೆ ಭೂಮಿಯಲ್ಲಿ 1978ರಲ್ಲಿಯೇ ಕೊಳವೆಬಾವಿ ಕೊರಸಿದರು. ಪ್ರಾಯಶಃ ಕೊಳವೆಬಾವಿ ಮೂಲಕ ನೀರಾವರಿ ಮಾಡಿದ ಈ ಭಾಗದ ಮೊದಲ ರೈತ ಅವರು. ಆರಂಭದಲ್ಲಿ ಮೆಕ್ಕೆಜೋಳ, ಶೇಂಗಾ, ಸೂರ್ಯಕಾಂತಿಯಂತ ಸಂಪ್ರದಾಯಿಕ ಬೆಳೆ ಬೆಳೆದರು. ಬಳಿಕ ರೇಷ್ಮೆ  ಹಾಗೂ ಸೇವಂತಿಗೆ, ಕನಕಾಂಬರ ಹಾಗೂ ಮೈಸೂರು ಮಲ್ಲಿಗೆಯಂತ ಪುಷ್ಪಕೃಷಿಯತ್ತಲೂ ಮಗ್ಗಲು ಬದಲಾಯಿಸಿದರು. ಕೆಲ ಕಾಲ ಕುಂಬಳಕಾಯಿ, ಹಗಲಕಾಯಿ, ಮಿಡಿಸೌತೇ ಯಂತಹ ಬೀಜೋತ್ಪದನೆಯಲ್ಲಿಯೂ ತೊಡಗಿಸಿಕೊಂಡರು. ಎಲ್ಲಾ ಕೃಷಿಕರಂತೆ ಇವರಿಗೂ ಕಾರ್ಮಿಕರ ಸಮಸ್ಯೆಯಿಂದಾಗಿ, ನಿರ್ವಹಣೆ ಗಂಭೀರವಾಗಿ ಪರಿಣಮಿಸಿತು. ಹೀಗಾಗಿಯೇ ಸಂಪ್ರದಾಯಿಕ, ಬೀಜೋತ್ಪದನೆ ಹಾಗೂ ಪುಷ್ಪಕೃಷಿಗೆ ವಿಧಾಯ ಹೇಳಿದ ಬಸವರಾಜಯ್ಯ ಸದ್ಯಕ್ಕೆ ತೋಟಗಾರಿಕೆ ಬೆಳೆಗಳತ್ತ ಮಾತ್ರ ದೃಷ್ಟಿಹರಿಸಿದ್ದಾರೆ.ತೋಟದ ಭೂಪ್ರದೇಶದ ಒಟ್ಟು ವಿಸ್ತ್ರೀರ್ಣ ಪೈಕಿ, ಎರಡೂವರೆ ಎಕರೆಯಲ್ಲಿ ಬಾಗನ್‌ಪಲ್ಲಿ, ಸೇಂದೋರ್(ಸೀಡ್‌ಲೆಸ್), ಮಲ್ಲಿಕಾ, ಬೇನಿಷ್, ರತ್ನಗಿರಿ ಸೇರಿದಂತೆ ವಿವಿಧ ತಳಿಯ ಮಾವು, ಹೈಬ್ರಿಡ್ ಹಾಗೂ ತಿಪಟೂರು ತಳಿಯ ತಲಾ 250 ತೆಂಗಿನಗಿಡದ ಮಧ್ಯದಲ್ಲಿ ಅಂತರ ಬೆಳೆಯಾಗಿ ನಾಲ್ಕು ಎಕರೆಯ ಒಂದು ಪ್ಲಾಟ್‌ನಲ್ಲಿ ಸಪೋಟ ಬೆಳೆದರೆ, ಎರಡೂವರೆ ಎಕರೆ ಮತ್ತೊಂದು ಪ್ಲಾಟ್‌ನಲ್ಲಿ ತೆಂಗು ಹಾಗೂ ಅಡಿಕೆಯ ಮಿಶ್ರ ಬೆಳೆ ಬೆಳೆದಿದ್ದಾರೆ.ತೋಟದ ವಿವಿಧ ಭಾಗದಲ್ಲಿ 100ಕ್ಕೂ ಅಧಿಕ ಕರಿಬೇವು, 8 ಹಲಸು, 50 ಪೇರಲ, 10 ಬಿಲ್ವಪತ್ರೆ, 75 ಶ್ರೀಗಂಧ, ತೇಗ, ಹುಣುಸೆ, ಬೇವು, ಬೆಟ್ಟದ ನೆಲ್ಲಿ ಹಾಗೂ ಕಿರುನೆಲ್ಲಿ, ಮರಗಳನ್ನು ಬೆಳೆಸಿದ್ದಾರೆ. ಜತೆಗೆ, 350 ಲಿಂಬೆ ಗಿಡಗಳನ್ನು ನಾಟಿಮಾಡಿದ್ದಾರೆ. ಸಮೃದ್ಧವಾಗಿ ಬೆಳೆದುನಿಂತಿರುವ ತೆಂಗು, ಮಾವು ಹಾಗೂ ಸಪೋಟ ಸೇರಿದಂತೆ ವಿವಿಧ ಬೆಳೆ  ಈಗಾಗಲೇ ಫಲ ನೀಡುತ್ತಿರುವ ಪರಿಣಾಮ ವರ್ಷದ ಎಲ್ಲಾ ಹಂಗಾಮಿನಲ್ಲಿಯೂ ಪ್ರತಿ ಬೆಳೆಯಿಂದಲೂ ಲಕ್ಷಾಂತರ ರೂಗಳ ಆದಾಯ ಗಳಿಸುವ ಮೂಲಕ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾರೆ.ಎರಡು ದಶಕಗಳ ಕಾಲದ ಒಕ್ಕಲುತನದಲ್ಲಿ ಬಸವರಾಜಯ್ಯ ಆರಂಭದಲ್ಲಿ ಸಾಂಪ್ರದಾಯಿಕ ಹಾಗೂ ಬೀಜೋತ್ಪದನಾ ಕೃಷಿಯಲ್ಲಿ ಮಾತ್ರ ಕೃತಕ ಗೊಬ್ಬರ ಬಳಸುತ್ತಿದ್ದರು. ಆ ನಂತರ ತೋಟಗಾರಿಕೆ ಬೆಳೆಯಲ್ಲಿ ಹೆಚ್ಚು ಆಸಕ್ತಿ ಮೂಡಿದ ಬಳಿಕ, ಮಾರುಕಟ್ಟೆಯ ಗೊಬ್ಬರದತ್ತ ತಿರುಗಿಯೂ ನೋಡಿಲ್ಲ. ಔಷಧಿಯನ್ನೂ  ಉಪಯೋಗಿಸಿಲ್ಲ. ತೋಟದಲ್ಲಿಯೇ ಸಿಗುವ ಹಸಿರೆಲೆಗೊಬ್ಬರದ ಹಾಗೂ ಎರೆಹುಳು ಗೊಬ್ಬರ, ಬಯೋಡೈಜೆಸ್ಟ್ ವಿಧಾನದ ಮೂಲಕ ಬೆಳೆಗಳಿಗೆ ಪೌಷ್ಠಿಕಾಂಶ ಒದಗಿಸುತ್ತಾರೆ. ಬೇಸಿಗೆಯ ಹಂಗಾಮಿನಲ್ಲಿ ಸಮೀಪದ ಬಾಗಳಿ ಕೆರೆಯಲ್ಲಿ ಸಿಗುವ ಉತ್ಕೃಷ್ಟದರ್ಜೆಯ ಹೂಳನ್ನು ಸಂಗ್ರಹಿಸಿ ಬೆಳೆಗಳಿಗೆ ಕೊಡುತ್ತಾರೆ. ಜತೆಗೆ, ಹಳ್ಳಿಹಳ್ಳಿ ತಿರುಗಿ ನೂರಾರು ಟ್ರ್ಯಾಕ್ಟರ್ ಕೊಟ್ಟಿಗೆ ಗೊಬ್ಬರ ಖರೀದಿಸಿ ಬೆಳೆಗಳಿಗೆ ಹಾಕುತ್ತಾರೆ. 

ನಾಲ್ಕು ಎಚ್‌ಎಫ್ ತಳಿಯ ಆಕಳುಗಳನ್ನು ಸಾಕಾಣಿಕೆ ಮಾಡುತ್ತಿರುವ ಬಸವರಾಜಯ್ಯ, ಅದರಿಂದ ನಿತ್ಯವೂ 25 ಲೀಟರ್‌ಗೂ ಅಧಿಕ ಹಾಲಿನ ಇಳುವರಿ ಪಡೆಯುತ್ತಿದ್ದಾರೆ. ಹಸುಗಳಿಗೆ ಆಹಾರಕ್ಕೆ ಅಗತ್ಯವಾದ ಹುಲ್ಲನ್ನು ಒಂದು ಎಕರೆ ಪ್ರದೇಶದಲ್ಲಿ ಬೆಳೆದಿದ್ದಾರೆ.ಹೈನುಗಾರಿಕೆ ವಿಸ್ತಾರ ಸೇರಿದಂತೆ ಕೃಷಿಗೆ ಪೂರಕವಾದ ಇತರೆ ಉದ್ಯಮಗಳನ್ನು ವಿಸ್ತರಿಸುವ ಹಂಬಲ ಇದೆ. ಆದರೆ, ಕಾರ್ಮಿಕರ ಸಮಸ್ಯೆ ಇವರನ್ನು ಬಾಧಿಸುತ್ತಿದೆ. ಹೀಗಾಗಿ ತೋಟದ ಉಸ್ತುವಾರಿಗಾಗಿ ಪಕ್ಕದ ಹಳ್ಳಿಯ ಕುಟುಂಬವೊಂದನ್ನು ಕಾಯಂ ವೇತನದ ಆಧಾರದ ಮೇಲೆ ಇಟ್ಟುಕೊಂಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆ.ಎಂ. ಬಸವರಾಜಯ್ಯ ಮೊಬೈಲ್: 94481 63103 ಸಂಪರ್ಕಿಸಬಹುದು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry