ಮಂಗಳವಾರ, ಮೇ 18, 2021
22 °C

ಬರದಲ್ಲೂ ಕಲರವ !

ಚಿತ್ರ-ಲೇಖನ ಎಂ.ಆರ್.ಮಂಜುನಾಥ್ Updated:

ಅಕ್ಷರ ಗಾತ್ರ : | |

ಬರಗಾಲದ ನಾಡುಗಳಲ್ಲಿ ಈಗ ಫ್ಲೆಮಿಂಗೊಗಳ ಆಟ. ವಿಜಾಪುರ ಜಿಲ್ಲೆಯ ಆಲಮಟ್ಟಿಯ ಕೃಷ್ಣಾ ನದಿಯ ಹಿನ್ನೀರಿನ ದಂಡೆ, ಬಾಗಲಕೋಟೆಗೆ ಸೇರಿಕೊಂಡಿರುವ ಕೃಷ್ಣಾ ನದಿ ತೀರ ಹಾಗೂ ರಾಯಚೂರಿನ ಮಂಚಲಾಪುರ ಕೆರೆ ಕುಂಟೆಗಳಲ್ಲಿ ಈಗ ಈ ವಲಸೆ ಹಕ್ಕಿಗಳ ಚೆಲ್ಲಾಟ. ಜನವರಿಯಿಂದ ಜೂನ್‌ವರೆಗೂ ಇವುಗಳ ಕಲರವ. ಸಾವಿರಾರು ಮೈಲಿ ದೂರದಿಂದ ವಲಸೆ ಬಂದು ಸಂತಾನಾಭಿವೃದ್ಧಿ ಮಾಡಿ ಮರಳಿ ಮನೆಗೆ ಹಿಂತಿರುಗುವ ದೃಶ್ಯ ಆಶ್ಚರ್ಯಕರ.ಉತ್ತರ ಕರ್ನಾಟಕದ ಹವಾಗುಣಕ್ಕೆ ಈ ಪಕ್ಷಿಗಳು ಹೊಂದಿಕೊಳ್ಳುತ್ತವೆ. ಅವು ಬೆದೆಗೆ ಬರುವ ಕಾಲ ಕುತೂಹಲಕಾರಿ. ಎಲ್ಲಿಲ್ಲದ ಸ್ಪರ್ಧೆ, ಉತ್ಸಾಹ, ಜಗಳ, ವಿಲಾಸ, ಒಲುಮೆಗಳ ದಿನ ಇವು. ತಮ್ಮ ಜತೆಗಾರರನ್ನು ಆಯ್ದುಕೊಳ್ಳುವುದು, ಅವುಗಳ ಜೊತೆ ಸರಸವಾಡುವುದು, ಜೊತೆಗೂಡಿ ಆಹಾರ ಸಂಪಾದನೆ ಮಾಡುವುದು, ಆತ್ಮ ರಕ್ಷಣೆಯ ಸಂದರ್ಭಗಳಲ್ಲಿ ಒಂದಕ್ಕೊಂದು ಸಹಕರಿಸುವುದು, ಎಚ್ಚರಿಕೆ ನೀಡುವ ದೃಶ್ಯಗಳು ಅದ್ಭುತವಾದವು. ಪಕ್ಷಿ ಪ್ರೇಮಿಗಳಿಗೆ ಇವುಗಳ ಬಗ್ಗೆ ಅಧ್ಯಯನಕ್ಕೆ ತೊಡಗುವ ದಿನಗಳಾದರೆ, ಛಾಯಾಗ್ರಾಹಕರಿಗೆ ಕ್ಯಾಮೆರಾ ಕಣ್ಣಲ್ಲಿ ಹಕ್ಕಿಗಳ ಮಿಲನ ಮಹೋತ್ಸವ ದಾಖಲು ಮಾಡಿಕೊಳ್ಳುವ ಸಮಯ. ಇನ್ನು ಕೆಲವರಿಗೆ ಫೋಟೊ ತೆಗೆದು ಹಣ ಮಾಡಲು ಅನುಕೂಲಕರ ವಾತಾವರಣ ಕಲ್ಪಿಸುವ ದಿನವೂ ಹೌದು!ಈ ಹಕ್ಕಿಯು ಸಾಕು ಬಾತಿನಷ್ಟು ದೊಡ್ಡ ಶರೀರದ ಹಕ್ಕಿ, ಆದರೆ ಇದರ ಉದ್ದ ಕಾಲುಗಳಿಂದ ಕುತ್ತಿಗೆಯವರೆಗೆ ಸುಮಾರು ನಾಲ್ಕೂವರೆ ಅಡಿ ಇದ್ದು ಇವುಗಳು ಎತ್ತರಕ್ಕೆ ನಿಂತು ಶತ್ರುಗಳನ್ನು ಗಮನಿಸಲು ಅನುಕೂಲಕರವಾಗಿರುತ್ತದೆ. ಇದು ಗುಲಾಬಿ ಕೆಂಪು ಮತ್ತು ಬಿಳಿ ಮಿಶ್ರಿತ ಬಣ್ಣ ಕಂಡು ಬರುತ್ತದೆ. ಇದರ ಕೊಕ್ಕು ಕೆಂಪುಬಣ್ಣದ್ದಾಗಿದ್ದು ಅರ್ಧಕ್ಕೆ ಸರಿಯಾಗಿ ಕೆಳಕ್ಕೆ ಬಾಗಿರುವುದನ್ನು ಕಾಣಬಹುದು. ಇವುಗಳಲ್ಲಿ ಗಂಡು ಹೆಣ್ಣು ಎರಡಕ್ಕೂ ವ್ಯತ್ಯಾಸವಿಲ್ಲ. ಎರಡೂ ನೋಡಲು ಒಂದೇ ತೆರನಾಗಿವೆ.ಹಾರುವಾಗ ಉಜ್ವಲ ಕೆಂಪು ರೆಕ್ಕೆಗಳು ಪ್ರಧಾನವಾಗಿ ಕಾಣಿಸುತ್ತವೆ. ಇವುಗಳು ಹೆಚ್ಚಾಗಿ ಬಾಂಗ್ಲಾದೇಶ, ಸಿಲೊನ್, ಭಾರತ, ಪಾಕಿಸ್ತಾನಗಳಲ್ಲಿ ಕಂಡು ಬರುತ್ತದೆ. ಈ ಹಕ್ಕಿಗಳು ಜಲಾಶಯಗಳ ಹಿನ್ನೀರಿನಲ್ಲಿ ಗುಂಪುಗುಂಪಾಗಿ ಜಲಚರಗಳನ್ನು ಹಿಡಿದು ತಿನ್ನುವುದನ್ನು ಗಮನಿಸಬಹುದು.ತನ್ನ ಕೊಂಕಿರುವ ಕೊಕ್ಕಿನ ಸಹಾಯದಿಂದ ತಳದ ಕೆಸರನ್ನು ಜರಡಿಯಾಡಿ ನೀರಿನ ಅತಿ ಸೂಕ್ಷ್ಮ ಜೀವಿಗಳನ್ನು ಹಿಡಿಯುತ್ತದೆ. ಗುಂಪುಗಳಲ್ಲಿ ಹಾರುವಾಗ ತ್ರಿಕೋನಾಕಾರದ ವ್ಯೆಹ ರಚಿಸಿಕೊಂಡು ಹಾರುವುದನ್ನು ಗಮನಿಸಿದರೆ ಅದರ ಮೈ ಬಣ್ಣ ಕಂಡು ರೋಮಾಂಚನವಾಗುತ್ತದೆ. ಶಿಸ್ತು, ಒಗ್ಗಟ್ಟಿಗೆ ಇದು ಹೆಸರುವಾಸಿ. ಹಂಸದ ನಡಿಗೆ. ಸೂರ್ಯಾಸ್ತದ ನಂತರ ಒಂಟಿ ಕಾಲಿನಿಂದ ನಿಂತು ನಿದ್ರಿಸುತ್ತದೆ.ಸಂತಾನದ ಸಮಯದಲ್ಲಿ ಈ ಹಕ್ಕಿಗಳು ಮಣ್ಣಿನ ಗುಡ್ಡೆಗಳನ್ನು ರಚಿಸಿ ನೆಲಮಟ್ಟದಲ್ಲಿ ಮೊಟ್ಟೆ ಇಟ್ಟು ಮರಿ ಮಾಡಿ ಕೊಂಡು ತಮ್ಮ ಗೂಡಿಗೆ ಸಂತಸದಿಂದ ತೆರಳುವುದನ್ನು ನೋಡಿ ಆನಂದಿಸಬಹುದು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.