ಬರದಲ್ಲೂ ಬಂಪರ್ ಈರುಳ್ಳಿ ಬೆಳೆ

7

ಬರದಲ್ಲೂ ಬಂಪರ್ ಈರುಳ್ಳಿ ಬೆಳೆ

Published:
Updated:

ಜಗಳೂರು: ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆ ಎನಿಸಿರುವ ಈರುಳ್ಳಿಗೆ ಪ್ರಸ್ತುತ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಇದ್ದು, ಹಲವು ವರ್ಷಗಳಿಂದ ದರ ಕುಸಿತದಿಂದ ಹೈರಾಣಾಗಿದ್ದ ಈರುಳ್ಳಿ ಬೆಳೆಗಾರರಲ್ಲಿ ಸಂತಸಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲೇ ಅತಿಹೆಚ್ಚು ಈರುಳ್ಳಿಯನ್ನು ತಾಲ್ಲೂಕಿನಲ್ಲಿ ಬೆಳೆಯಲಾಗುತ್ತದೆ.ಕೊಳವೆಬಾವಿ ಹಾಗೂ  ಮಳೆ ಆಧಾರಿತ ಒಣ ಭೂಮಿ ಸೇರಿದಂತೆ ಸುಮಾರು 8 ಸಾವಿರ ಎಕರೆಯಲ್ಲಿ ಈರುಳ್ಳಿ ಸಮೃದ್ಧವಾಗಿ ಬೆಳೆದು ನಿಂತಿದೆ. ಮಳೆ ಕೊರತೆ ಹಾಗೂ ಅಂತರ್ಜಲ ಸಮಸ್ಯೆ ನಡುವೆಯೂ ರೈತರು ಜತನದಿಂದ ಈರುಳ್ಳಿ ಬೆಳೆದಿದ್ದು, ಬಹುತೇಕ ಕಟಾವಿನ ಹಂತದಲ್ಲಿದೆ. ಕಸಬಾ ಹೋಬಳಿಯಲ್ಲಿ ಪ್ರತಿ ವರ್ಷ ವ್ಯಾಪಕವಾಗಿ ಈರುಳ್ಳಿ ಬೆಳೆಯಲಾಗುತ್ತಿದೆ.ಇಲ್ಲಿನ ಉತ್ತಮವಾದ ವಾತಾವರಣ ಹಾಗೂ ಫಲವತ್ತಾದ ಕಪ್ಪುಮಣ್ಣಿನಲ್ಲಿ ಬೆಳೆಯುವ ಉತ್ಕೃಷ್ಟ ಗುಣಮಟ್ಟದ ಈರುಳ್ಳಿಗೆ ರಾಜ್ಯದ ಪ್ರಮುಖ ಮಾರುಕಟ್ಟೆಯಾಗಿರುವ ಬೆಂಗಳೂರು ಹಾಗೂ ಕೋಲ್ಕತ್ತಾ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇದೆ. ಪ್ರತಿವರ್ಷದಂತೆ ಈ ವರ್ಷ ಬೆಳೆಗೆ ರೋಗ ಹೆಚ್ಚಾಗಿ ಬಾಧಿಸದ ಹಿನ್ನೆಲೆಯಲ್ಲಿ ಪ್ರತಿ ಎಕರೆಗೆ 100ರಿಂದ 120 ಕ್ವಿಂಟಲ್ ಇಳುವರಿ ಬರುವ ನಿರೀಕ್ಷೆ ಇದೆ.ಕಳೆದ ಐದಾರು ವರ್ಷ ಸೂಕ್ತ ಬೆಲೆ ಇಲ್ಲದೆ ಮತ್ತು ಅತಿಯಾದ ಮಳೆಯ ಹಾವಳಿಯಿಂದ ಬೆಳೆನಾಶವಾಗಿ ಈರುಳ್ಳಿ ರೈತರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ.  ಮಾರುಕಟ್ಟೆಗೆ ಹೆಚ್ಚು ಈರುಳ್ಳಿ ಪುರೈಕೆಯಾಗುವ ಮಹಾರಾಷ್ಟ್ರ ರಾಜ್ಯದಲ್ಲಿ ಈ  ಈ ಬಾರಿ ಪ್ರಕೃತಿ ವಿಕೋಪದಿಂದ ಬೆಳೆನಾಶವಾಗಿ  ದೇಶಾದ್ಯಂತ  ದಾಖಲೆ ಮಟ್ಟದಲ್ಲಿ ಬೆಲೆ ಏರಿಕೆಯಾಗಿದೆ.ಪ್ರಸ್ತುತ ಕ್ವಿಂಟಲ್‌ಗೆ ರೂ.2 ಸಾವಿರಂದ ರೂ.4ಸಾವಿರದವರೆಗೆ ಬೆಲೆ ಇದೆ.  ಸ್ವಲ್ಪ ಏರುಪೇರು ಆಗುತ್ತಿದ್ದರೂ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಇದು ರೈತರಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಮುಂದಿನ ಒಂದು ತಿಂಗಳವರೆಗೆ ಕಟಾವು ಕಾರ್ಯ ನಡೆಯಲಿದ್ದು, ಇದೇ ಬೆಲೆ ಇದ್ದಲ್ಲಿ ತಾಲ್ಲೂಕಿನ ಈರುಳ್ಳಿ ಬೆಳೆಗಾರರಿಗೆ  ಬಂಪರ್ ಬೆಲೆ ಸಿಗುವ ಸಾಧ್ಯತೆ ಇದೆ.`ಕೊಳವೆಬಾವಿಗಳಲ್ಲಿ ನೀರು ಕಡಿಮೆಯಾಗಿದ್ದರೂ ಕಷ್ಟಪಟ್ಟು 8 ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದೇನೆ. ಎಕರೆಗೆ ರೂ. 50 ಕೆಜಿಯ 200 ಪಾಕೆಟ್ ಇಳುವರಿ ನಿರೀಕ್ಷೆ ಇದೆ. ಐದು, ಹತ್ತು ವರ್ಷಕ್ಕೊಮ್ಮೆ ಮಾತ್ರ ಈರುಳ್ಳಿಗೆ ಈ ರೀತಿ ಒಳ್ಳೆ ಬೆಲೆ ಸಿಗಬಹುದು. ಪ್ರತಿ ವರ್ಷ ಬೆಲೆ ಇಲ್ಲದೆ ನಷ್ಟ ಅನುಭವಿಸಿ ಸಾಕಷ್ಟು ಸಾಲ ಮಾಡಿದ್ದೇವೆ. ಈ ಬಾರಿ ಸಾಲದಿಂದ ಮುಕ್ತವಾಗುವ ನಿರೀಕ್ಷೆ ಇದೆ' ಎಂದು ತಾಲ್ಲೂಕಿನ ಭರಮಸಮುದ್ರ ಗ್ರಾಮದ ಕೆ.ಇ. ಮಂಜಣ್ಣ `ಪ್ರಜಾವಾಣಿ'ಯೊಂದಿಗೆ ತಮ್ಮ  ಅಭಿಪ್ರಾಯ ಹಂಚಿಕೊಂಡರು.`ಇಲ್ಲಿನ ಉತ್ತಮ ಹವಾಗುಣದ ಕಾರಣ ಈರುಳ್ಳಿ ಗುಣಮಟ್ಟದಿಂದ ಕೂಡಿರುತ್ತದೆ. ತಾಲ್ಲೂಕಿನಲ್ಲಿ ಈ ವರ್ಷ 8 ಸಾವಿರ ಎಕರೆಯಲ್ಲಿ ಉತ್ತಮ ಇಳುವರಿ ಬಂದಿದ್ದು, ಬಹುತೇಕ  ಕಟಾವಿನ ಹಂತದಲ್ಲಿದೆ. ಈ ಬಾರಿ  ಈರುಳ್ಳಿ ರೈತರ ಕೈಹಿಡಿಯಲಿದೆ' ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿ ಕಿರಣ್ ಕುಮಾರ್ ಹೇಳುತ್ತಾರೆ.ಮಾರುಕಟ್ಟೆಯಲ್ಲಿ ಬೆಲೆ ದಿಢೀರ್ ಕುಸಿತ ಕಾಣಬಹುದು ಎಂಬ ಧಾವಂತದಿಂದ ಕೆಲವು ರೈತರು ಅವಧಿಗೂ ಮುನ್ನವೇ ಹಸಿ ಈರುಳ್ಳಿಯನ್ನು ಕಿತ್ತು ಚೀಲಗಳಿಗೆ ತುಂಬುತ್ತಿದ್ದು, ಕೆಲವೆಡೆ ಈರುಳ್ಳಿ ಗಡ್ಡೆಗಳು ಕೊಳೆಯುವ ಆತಂಕ ಎದುರಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry