ಬರದಲ್ಲೂ ಸಲುಹಿದ ಸೀಮೆ ಹಸು

7

ಬರದಲ್ಲೂ ಸಲುಹಿದ ಸೀಮೆ ಹಸು

Published:
Updated:

ಎರಡು ವರ್ಷಗಳಿಂದ ಸರಿಯಾದ ಮಳೆ ಇಲ್ಲದೇ ಉಳಿದ ರೈತರು ಕಂಗಾಲಾಗಿರುವ ಕಾಲದಲ್ಲಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲೊಂದು ರೈತ ಕುಟುಂಬ ಸಂತೃಪ್ತ ಜೀವನ ಸಾಗಿಸುತ್ತಿದೆ.ಬರಗಾಲದಲ್ಲಿ ಅವರ ಕೈಹಿಡಿದಿರುವುದು ಸೀಮೆ ಹಸು! ಗಾಂಧಿನಗರ ಹೊರವಲಯದಲ್ಲಿ ಗುಡಿಸಲು ನಿರ್ಮಿಸಿಕೊಂಡು ನಾಲ್ಕು ಸೀಮೆ ಹಸುಗಳನ್ನು ಸಾಕುತ್ತಾ ಅದರಿಂದ ಬರುವ ಹಾಲು ಉತ್ಪನ್ನದಲ್ಲಿ ತಿಂಗಳಿಗೆ ರೂ 30 ಸಾವಿರದಿಂದ ರೂ 35ಸಾವಿರ ಸಂಪಾದನೆ ಮಾಡುತ್ತಿದ್ದಾರೆ ರೈತ ಚಂದ್ರಪ್ಪ.ಇಲ್ಲಿಯ ಗಂಜಿಗುಂಟೆ ಗ್ರಾಮದ ಚಂದ್ರಪ್ಪ ಒಂದು ವರ್ಷದ ಹಿಂದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮ ನೀಡುವ ಸಹಾಯ ಧನದಿಂದ ಒಂದು ಹಸು ಪಡೆದರು. ಇದರ ಜತೆಗೆ ಸಂಬಂಧಿಕರ ಹತ್ತಿರ ಸಾಲ ಮಾಡಿ 3 ಎಚ್‌ಎಫ್ ತಳಿಯ ಹಸುಗಳನ್ನು ತಂದು, ಈ  ನಾಲ್ಕು ಹಸುಗಳನ್ನು ಚಳ್ಳಕೆರೆ ಹತ್ತಿರ ತನ್ನ ಅಳಿಯನ ಖಾಲಿ ಜಾಗದಲ್ಲಿ ಗುಡಿಸಲು ನಿರ್ಮಿಸಿಕೊಂಡು ಸಾಕಲು ಪ್ರಾರಂಭಿಸಿದರು.ಸ್ವಂತ ಊರಿನಿಂದ ಹಾಲು ಮಾರಾಟ ಮಾಡಲು ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಹಾಲು ಮಾರಾಟ ಕೇಂದ್ರಕ್ಕೆ ಸಮೀಪದಲ್ಲಿರುವ ಅಳಿಯನ ಜಾಗದಲ್ಲಿ ಇವರು ಹಸು ಸಾಕುತ್ತಿದ್ದಾರೆ. ಮಳೆ ಇಲ್ಲದೇ ಮೇವಿಗೆ ರೈತರು ಪರದಾಡುತ್ತಿರುವಾಗ ಚಂದ್ರಪ್ಪ ಮಾತ್ರ ಕಷ್ಟು ಪಟ್ಟು ಸಿಕ್ಕ ಕಡೆಗಳಲ್ಲಿ ಮೇವು ಸಂಗ್ರಹಿಸುತ್ತಾ ಜೀವನಕ್ಕೆ ಆಧಾರವಾಗಿದ್ದ ಹಸುಗಳನ್ನು ಸಲುಹಿದರು. ಪರಿಣಾಮ ಪ್ರತೀ ಮುಂಜಾನೆ ಮತ್ತು ಸಂಜೆಗೆ ನಾಲ್ಕೂ ಹಸುಗಳಿಂದ 50ರಿಂದ 65ಲೀಟರ್ ವರೆಗೂ ಹಾಲು ಕರೆದು ಹತ್ತಿರದಲ್ಲೇ ಇರುವ ನಗರಂಗೆರೆ ಹಾಲು ಸಹಕಾರಿ ಒಕ್ಕೂಟಕ್ಕೆ ಮಾರಾಟ ಮಾಡುತ್ತಾರೆ.ಒಂದು ಲೀಟರ್ ಹಾಲಿಗೆ ರೂ 22ರಂತೆ ಮಾರಾಟ ಮಾಡುವ ಇವರು ದಿನವೊಂದಕ್ಕೆ ರೂ1,100ರಿಂದ ರೂ 1,400ಗಳವರೆಗೆ ಹಣ ಗಳಿಸುತ್ತಾರೆ. ಇದರಂತೆ ತಿಂಗಳಿಗೆ ರೂ 40ರಿಂದ ರೂ 43ಸಾವಿರ ಸಂಪಾದನೆ ಮಾಡುತ್ತಾರೆ. ಇದರಲ್ಲಿ ವಾರಕ್ಕೆ ಒಮ್ಮೆ ಬೂಸಾ, ಹಿಂಡಿಗಳನ್ನು ಕೊಂಡು ತಂದು ಹಸುವಿಗೆ ತಿನ್ನಿಸುತ್ತಾರೆ. ಇದಕ್ಕೆ ತಿಂಗಳಿಗೆ ರೂ 8ರಿಂದ ರೂ 10ಸಾವಿರ ಖರ್ಚು ಮಾಡುತ್ತಾರೆ.ರೈತ ಚಂದ್ರಪ್ಪ ತನ್ನ ಸ್ವಂತ ಊರು ಗಂಜಿಗುಂಟೆಯಲ್ಲಿರುವ 3ಎಕರೆ ನೀರಾವರಿ ಜಮೀನಿನಲ್ಲಿ ಮಳೆ ಇಲ್ಲದೇ ಅಂತರ್ಜಲ ಬತ್ತಿಹೋಗಿದ್ದರಿಂದ ಪಂಪ್‌ಸೆಟ್‌ನಲ್ಲಿ ನೀರು ಬಾರದೇ ಇಟ್ಟ ಫಸಲು ಕೈಗೆ ಬರುತ್ತಿರಲಿಲ್ಲ. ಇದರಿಂದ ಇವರು ಹಸು ಸಾಕಾಣೆಗೆ ನಿಂತಿದ್ದರು. ಇದೀಗ ಪಂಪ್‌ಸೆಟ್‌ನಲ್ಲಿ ಬರುವ ಅಷ್ಟಿಷ್ಟು ನೀರಿನಲ್ಲೇ ಹಸುವಿಗೆ ಬೇಕಾಗುವ ಹಸಿಹುಲ್ಲನ್ನೂ ಬೆಳೆಯುತ್ತಿದ್ದಾರೆ.ಎರಡು, ಮೂರು ದಿನಗಳಿಗೊಮ್ಮೆ ಎತ್ತಿನ ಗಾಡಿಯಲ್ಲಿ ಮೇವನ್ನು ತರುತ್ತಾರೆ. ದಿನಾಲೂ ಹಸುಗಳ ಪೋಷಣೆಯಲ್ಲಿ ನಿರತರಾಗಿರುವ ಇವರು ತಿಂಗಳಿಗೆ ಏನಿಲ್ಲಾ ಎಂದರೂ ರೂ 30ರಿಂದ ರೂ 35ಸಾವಿರ ಸಂಪಾದನೆ ಮಾಡುತ್ತಿದ್ದಾರೆ. ಇದರ ಜತೆಗೆ ಹಸುಗಳಿಂದ ಬರುವ ಗೊಬ್ಬರವೂ ಸಹ ಇವರಿಗೆ ಆದಾಯ ತಂದುಕೊಡುತ್ತಿದೆ.ಕಳೆದ ಎರಡು ವರ್ಷಗಳಿಂದ ಮಳೆ ಇಲ್ಲದೇ ಕಂಗಾಲಾಗಿರುವ ಗ್ರಾಮೀಣ ಪ್ರದೇಶದ ಸಣ್ಣ ರೈತರು ಜಮೀನಿನಲ್ಲಿ ಬಿತ್ತನೆ ಆಗದೇ ಇರುವುದರಿಂದ ಜೀವನ ಸಾಗಿಸಲು ಪರದಾಡುತ್ತಿರುವಾಗ ಚಂದ್ರಪ್ಪನಂತಹ ರೈತ ಪ್ರಾರಂಭದಲ್ಲಿ ಒಂದಿಷ್ಟು ಬಂಡವಾಳ ಹೂಡಿ ಮಳೆ ಇಲ್ಲದ ಕಾಲದಲ್ಲೂ ಕೈತುಂಬಾ ಹಣ ಸಂಪಾದನೆ ಮಾಡುವ ಮೂಲಕ ಇತರ ರೈತರಿಗೆ ಮಾದರಿಯಾಗಿದ್ದಾರೆ.  ಮಳೆ ಇಲ್ಲದ ಇಂತಹ ಕಾಲದಲ್ಲಿ ಸರ್ಕಾರ ರೈತರಿಗೆ ಜೀವನ ನಿರ್ವಹಿಸಲು ಇಂತಹ  ಉಪಕಸುಬುಗಳನ್ನು ಮಾಡಲು ಸಹಾಯಧನ ನೀಡಿದರೆ ಆರ್ಥಿಕವಾಗಿ ಸಬಲರಾಗಬಹುದು ಎನ್ನುತ್ತಾರೆ ರೈತ ಚಂದ್ರಪ್ಪ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry