ಸೋಮವಾರ, ಮೇ 17, 2021
22 °C

ಬರದಿಂದ ತತ್ತರ; ಲಂಬಾಣಿಗರು ಗುಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬರದಿಂದ ತತ್ತರ; ಲಂಬಾಣಿಗರು ಗುಳೆ

ಚಿಂಚೋಳಿ: ತಾಲ್ಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ತಾಂಡಾಗಳಲ್ಲಿ ಜನರ ವಲಸೆ ಇನ್ನೂ ನಿಂತಿಲ್ಲ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಬಂದರೂ ಜನರ ವಲಸೆ ತಡೆಯುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂಬ ಆರೋಪ ಕೇಳಿ ಬಂದಿದೆ.ಪ್ರತಿ ವರ್ಷ ಉದ್ಯೋಗಕ್ಕಾಗಿ ಜನರ ಗುಳೆ ಹೋಗುತ್ತಿದ್ದರು. ಈ ಬಾರಿ ಬಳೆಗಾಲದಲ್ಲಿ ಮಳೆ ಬಾರದೇ ಬರಗಾಲ ಎದುರಾಗಿದ್ದರಿಂದ ಜಾನುವಾರುಗಳನ್ನು ಮಾರಾಟ ಮಾಡಿ ತಾಂಡಾಗಳನ್ನೇ ಖಾಲಿ ಮಾಡಿ ಜನರು ಉದ್ಯೋಗಕ್ಕಾಗಿ ಊರು ತೊರೆದಿದ್ದಾರೆ.ತಾಲ್ಲೂಕಿನ ಯಾವ ತಾಂಡಾಗಳಿಗೆ ಹೊರಟರೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಕಾಣ ಸಿಗುವುದಿಲ್ಲ ಇದಕ್ಕೆ ಕಾರಣ ಕೇಳಿದಾಗ ದುಡಿಯುವ ಕೈಗೆ ಕೆಲಸವಿಲ್ಲ ಅದಕ್ಕಾಗಿ ಜನರು ದುಡಿಮೆ ಅರಸಿ ಕುಟುಂಬ ಸಮೇತ ಗುಳೆ ಹೋಗಿದ್ದಾರೆ.ಪುಟ್ಟ ಮಕ್ಕಳು ಹಾಗೂ ಕೈಲಾಗದ ಅಜ್ಜಅಜ್ಜಿಯರು ಮಾತ್ರ ತಾಂಡಾಗಳಲ್ಲಿ ಇದ್ದಾರೆ. ಒಮ್ಮೆ ವಿದ್ಯುತ್ ಬಂದರೆ ವಾರಗಟ್ಟಲೇ ಬರುವುದಿಲ್ಲ. ಕುಡಿವ ನೀರಿಗೂ ತತ್ವಾರ ಎದುರಾಗಿದೆ. ಹೀಗಾಗಿ ಜನರು ಇಲ್ಲೇ ಇದ್ದು ಮಣ್ಣು ತಿನ್ನೋದಕ್ಕಿಂತ ಬೇರೆ ಊರುಗಳಿಗೆ ಹೋಗಿ ಒಂದಿಷ್ಟು ಹಣ ಗಳಿಸಿಕೊಂಡು ಬರುವುದು ಇವರಿಗೆ ಅನಿವಾರ್ಯ ಹಾಗೂ ರೂಢಿ ಯಾಗಿ ಬಿಟ್ಟಿದೆ.

 

ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ದುಡಿದರೆ ತಿಂಗಳಾನುಗಟ್ಟಲೇ ಹಣ ಬರುವುದೇ ಇಲ್ಲ ಹೀಗಿರುವಾಗ ಇಲ್ಲಿ ದುಡಿಯುವುದಕ್ಕಿಂತ ಮಳೆಗಾಲದ ವರೆಗೆ ಮಹಾ ನಗರಗಳಲ್ಲಿ ದುಡಿದರೆ ನಮ್ಮ ಮುಂದಿನ ಜೀವನಕ್ಕೆ ಅನುಕೂಲವಾಗುತ್ತದೆ ಎನ್ನುತ್ತಾರೆ ಒಂಟಿಗುಡ್ಸಿ ತಾಂಡಾದ ಗೋಪಾಲ.ಇಲ್ಲಿನ ಲಂಬಾಣಿಗರಿಗೆ ವಲಸೆ ಸಮಸ್ಯೆಯಾಗಿ ಕಾಣಿಸಿಲ್ಲ. ಇದಕ್ಕೆ ಜನರು ಒಗ್ಗಿಕೊಂಡಿದ್ದಾರೆ ಹೀಗಾಗಿ ಅವರು ಮಾಗಿಯ ಕಾಲ ಬಂದರೆ ಸಾಕು ಇಲ್ಲಿಂದ ಗುಳೆ ಹೋಗುತ್ತಾರೆ. ಮಳೆಗಾಲ ಶುರುವಾಗಿ ಮಿರ್ಗಾ ಮಿಂಚಿದರೆ ಮತ್ತೆ ವಾಪಸ್ಸಾಗುತ್ತಾರೆ.ಹೀಗೆ ನಡೆಯುವ ಲಂಬಾಣಿಗರ ಬದುಕು ಕರಕಷ್ಟವಾಗಿದ್ದು, ವಲಸೆ ಇವರಿಗೆ ರೂಢಿ ಯಾಗಿ ಬಿಟ್ಟಿದೆ. ಹೀಗಾಗಿ ಇದನ್ನು ತಪ್ಪಿಸುವುದು ಸುಲಭದ ಮಾತಲ್ಲ. ಪ್ರಸಕ್ತ ವರ್ಷ ತಾಲ್ಲೂಕಿನ 32 ಗ್ರಾಮ ಪಂಚಾಯಿತಿಗಳಲ್ಲಿ ಉದ್ಯೋಗ ಖಾತರಿ ಯೋಜನೆ ಅನುಷ್ಠಾನಗೊಳಿಸಿ ಸಾಮಗ್ರಿ ಸಹಿತ 11 ಕೋಟಿ ರೂ. ವೆಚ್ಚ ಮಾಡಿ 5,59,022 ಮಾನವ ದಿನಗಳನ್ನು ಸೃಷ್ಟಿಸಲಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಮೂಲಗಳು ತಿಳಿಸಿವೆ.ತಾಲ್ಲೂಕಿನ ಕೊಂಚಾವರಂ ಹಾಗೂ ಐನಾಪೂರ ಸುತ್ತಮುತ್ತಲಿನ ನೂರಾರು ತಾಂಡಾಗಳ ಜನರು ಗುಳೇ ಹೋಗಿದ್ದು ಮನೆಯಲ್ಲಿ ಉಳಿದ ವಯೋವೃದ್ಧರ ನರಕ ಯಾತನೆಯ ಜೀವನ ಮನ ಕಲಕುತ್ತದೆ.

ಜಗನ್ನಾಥ ಶೇರಿಕಾರ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.