ಬರದಿಂದ ಬೇಸತ್ತು ಗುಳೆ ಹೊರಟ ಜನತೆ

ಅಮೀನಗಡ: ಹುನಗುಂದ ತಾಲ್ಲೂಕಿನ ಅಮೀನಗಡ ವ್ಯಾಪ್ತಿಯ ಜನತೆ ಬರದ ಹಿನ್ನೆಲೆಯಲ್ಲಿ ಗಂಟು ಮೂಟೆಕಟ್ಟಿಕೊಂಡು ಕುಟುಂಬದೊಂದಿಗೆ ಉದ್ಯೋಗ ಅರಿಸಿ ದೂರದ ಊರುಗಳಿಗೆ ಹೆಜ್ಜೆ ಹಾಕ ತೊಡಗಿದ್ದಾರೆ.
ಅಮೀನಗಡ ಬಸ್ ನಿಲ್ದಾಣದಲ್ಲಿ ದೊಡ್ಡ ದೊಡ್ಡ ಗಂಟು ಮೂಟೆ ಹೊತ್ತುಕೊಂಡು ದೂರದ ನಗರಗಳತ್ತ ವಲಸೆ ಹೋಗಲು ಬಸ್ಸಿಗಾಗಿ ಕಾಯುತ್ತಿರುವ ದೃಶ್ಯ ಕಂಡುಬರುತ್ತಿದೆ.
ಗೋವಾ ರಾಜ್ಯದ ಮಡಗಾಂವ, ವಾಸ್ಕೋ, ಪಣಜಿ, ಮಹಾರಾಷ್ಟ್ರದ ರತ್ನಗಿರಿ, ಪುಣೆ, ಮಂಗಳೂರು, ಉಡುಪಿ, ಬೆಂಗಳೂರು ಕಡೆಗಳಿಗೆ ಹೋಗುವ ಬಸ್ಗಳನ್ನು ಏರುವ ದೃಶ್ಯ ಕಂಡುಬರುತ್ತಿದೆ.
ಮಳೆಯನ್ನೇ ಅವಲಂಬಿಸಿಕೊಂಡು ಕೃಷಿಯನ್ನು ಮಾಡುವ ಅಮೀನಗಡ ಹೋಬಳಿ ರೈತರಿಗೆ ಈ ವರ್ಷ ಮಳೆ ಕೈಕೊಟ್ಟಿದ್ದರಿಂದ ತೀವ್ರ ತೊಂದರೆಗೆ ಸಿಲುಕಿಕೊಂಡಿದ್ದಾರೆ. ಬಡ, ಮಧ್ಯಮ ರೈತಾಪಿ ವರ್ಗವು ಸಾಲ ಮಾಡಿಕೊಂಡು ಬೀಜಗಳನ್ನು ಖರೀದಿಸಿ, ಬಿತ್ತನೆ ಮಾಡಿದ್ದರು.
ಭೂಮಿಗೆ ಹಾಕಿದ ಬೀಜವು ಹೋಯಿತು. ನೀರೀಕ್ಷೆ ಮಾಡಿದ್ದ ಇಳು ವರಿಯೂ ಹೋಯಿತು ಈಗೇನು ಮಾಡುವದು ಎಂಬ ಚಿಂತೆಯಲ್ಲಿ ನೊಂದಿರುವ ಜನತೆ ಇದೀಗ ಹೊತ್ತು ಕೂಳಿಗಾಗಿ ವಲಸೆ ಹೊರಟಿದ್ದಾರೆ.
ಮಳೆರಾಯ ಮುನಿಸಿಕೊಂಡಿದ್ದರ ಪರಿಣಾಮ ನಮ್ಮ ಕೂಲಿ ಕೆಲಸಕ್ಕೂ ಕುತ್ತು ಬಂತು, ಇಲ್ಲದ್ದರೆ ಹೊಟ್ಟೆ ತುಂಬಿಕೊಳ್ಳಲಾಗದು ಎಂದು ಹತಾಸೆಯ ಮನೋಭಾವನೆಯಿಂದ ಅಮೀನಗಡ ಸುತ್ತಮುತ್ತ ಲಿನ ಅನೇಕ ಹಳ್ಳಿಗಳ ಕೂಲಿಕಾರ್ಮಿಕರು ಊರನ್ನು ತೊರೆದು ಗುಳೆ ಹೊರಟ್ಟಿದ್ದಾರೆ.
ಉದ್ಯೋಗ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯನ್ನು ಜಾರಿಗೊಳಿಸಿದೆ. ಆದರೆ ಈ ಯೋಜನೆ ಹೆಸರಿಗೆ ಮಾತ್ರ ಕೂಲಿಕಾರ್ಮಿಕರನ್ನು ಗುರುತಿಸಿ, ಅವರ ಹೆಸರಿನಲ್ಲಿ ಬ್ಯಾಂಕಿನಲ್ಲಿ ಖಾತೆಯನ್ನು ತೆರೆದು ಹಣವನ್ನು ಜಮಾ ಮಾಡಲಾಗುತ್ತದೆ. ವಿಚಿತ್ರವೆಂದರೆ ಈ ಯೋಜನೆಯ ಹಣವು ಕೂಲಿಕಾರ್ಮಿಕರಿಗೆ ಸಿಗದೇ ಬೇರೆಯವರ ಜೇಬು ಸೇರುತ್ತದೆ ಎಂಬುದು ಗುಳೇ ಹೊರಟವರ ನೋವಿನ ನುಡಿ.
ದುಡ್ಯಾಕ ಹೊಂಟಿವಿರ್ರೀ: ಕಮತಗಿ ಬಸ್ ನಿಲ್ದಾಣದಲ್ಲಿ ಗಂಟುಮೂಟೆ ಕಟ್ಟಿಕೊಂಡು ಗುಳೇ ಹೊರಟಿದ್ದ ಮುಗನೂರ ಗ್ರಾಮದ ಯಲ್ಲಪ್ಪ ಹರದೊಳ್ಳಿ, ಅಂಬ್ಲಿಕೊಪ್ಪ ಗ್ರಾಮದ ಹನಮಂತ ಭಾವಿ, ಬಸರಿಕಟ್ಟಿ ಗ್ರಾಮದ ಮಹಿಳೆ ಮಂಜುಳಾ ಅವರನ್ನು `ಪ್ರಜಾವಾಣಿ~ ಮಾತನಾಡಿಸಿದಾಗ `ಮಳಿನೂ ಇಲ್ಲರ್ರೀ, ಕೆಲಸಾನೂ ಇಲ್ಲರ್ರೀ ಅದಕ್ಕ ಊರ ಬಿಟ್ಟ ಉಡುಪಿಗೆ ದುಡ್ಯಾಕ ಹೊಟ್ಟಿವಿರ್ರೀ~ ಎಂದು ಹೇಳಿದರು.
ಕಮತಗಿಯಿಂದ ಪ್ರತಿನಿತ್ಯ ಮಧ್ಯಾಹ್ನ 3.15ಕ್ಕೆ ಉಡುಪಿಗೆ ತೆರಳುವ ಕೆ.ಎಸ್.ಆರ್.ಟಿ.ಸಿ ಬಸ್ನಲ್ಲಿ 8 ರಿಂದ 10 ಕುಟುಂಬಗಳು ಉದ್ಯೋಗಕ್ಕಾಗಿ ಗುಳೆ ಹೋಗುವುದು ಕಂಡು ಬರುತ್ತದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.