ಬರದ ಕರಿನೆರಳಿನಲ್ಲೂ ಬಂಪರ್ ಬೆಳೆ

7

ಬರದ ಕರಿನೆರಳಿನಲ್ಲೂ ಬಂಪರ್ ಬೆಳೆ

Published:
Updated:

ಲಿಂಗಸುಗೂರ: ರಾಯಚೂರು ಜಿಲ್ಲೆಯ ಲಿಂಗಸುಗೂರ ತಾಲ್ಲೂಕನ್ನು ಬರಗಾಲ ಪೀಡಿತ ಪ್ರದೇಶ ಎಂದು ಸರ್ಕಾರ ಘೋಷಣೆ ಮಾಡಿದೆ. ನೀರಾವರಿ ಹೊರತು ಪಡಿಸಿ ತಾಲ್ಲೂಕಿನ 55520 ಹೆಕ್ಟೇರ್ ಪ್ರದೇಶದ ಪೈಕಿ 43018 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಮುಂಗಾರು ಮಳೆ ಸಕಾಲಕ್ಕೆ ಬಾರದೆ ಹೋಗಿದ್ದರಿಂದ ಭಾಗಶಃ ಬೆಳೆ ನಷ್ಟಕ್ಕೊಳಗಾಗಿದೆ ಎಂಬ ವರದಿ ಸರ್ಕಾರಕ್ಕೆ ಹಾಕಲಾಗಿತ್ತು ಎಂದು ಕೃಷಿ ಇಲಾಖೆ ಮೂಲಗಳು ಸ್ಪಷ್ಟಪಡಿಸಿವೆ.ಆದರೆ, ದೈವಬಲವೊ? ಭೂತಾಯಿಯ ಆಶೀರ್ವಾದವೊ? ಜುಲೈ, ಆಗಸ್ಟ್, ಸೆಪ್ಟಂಬರ್ ತಿಂಗಳಲ್ಲಿ ಪೂರ್ಣ ಪ್ರಮಾಣದ ಮಳೆ ಬೀಳದಿದ್ದರು ಕೂಡ ಅಲ್ಪಸ್ವಲ್ಪ ಬಿದ್ದ ಮಳೆಗೆ ಜೀವ ಹಿಡಿದಿವೆ. ಹೀಗಾಗಿ ತಾಲ್ಲೂಕಿನಾದ್ಯಂತ ಸಜ್ಜೆ, ತೊಗರಿ, ಸೂರ್ಯಕಾಂತಿ, ಹತ್ತಿ ಬೆಳೆ ಬರಗಾಲದ ಕರಿನೆರಳಿನಲ್ಲೂ ಅಬ್ಬರದಿಂದ ಬೆಳೆದು ನಿಂತಿದೆ. ಬೆಳೆದು ನಿಂತಿರುವ ಫಸಲು ನೋಡಿದರೆ ಇಳುವರಿ ಕೂಡ ನಿರೀಕ್ಷಿತ ಪ್ರಮಾಣದಲ್ಲಿ ದೊರಕುವ ಆಶಾ ಭಾವನೆಯನ್ನು ಕೃಷಿ ಇಲಾಖೆ ಸಿಬ್ಬಂದಿ ವ್ಯಕ್ತಪಡಿಸಿವೆ.ಆದರೆ, ಈ ಭಾಗದ ಪ್ರಮುಖ ಬೆಳೆಗಳಾದ, ರೈತರ ಕುಟುಂಬಗಳ ಆಶಾದಾಯಕ ಬೆಳೆಗಳಾದ ಜೋಳ, ಮೆಕ್ಕೆಜೋಳ, ನವಣಿ, ಭಾಗಶಃ ತೊಗರಿ, ಹೆಸರು, ಅಲಸಂದಿ, ಹುರಳಿ, ಶೇಂಗಾ, ಎಳ್ಳು ಸೇರಿದಂತೆ ಇತರೆ ಬೆಳೆಗಳು ಸಂಪೂರ್ಣ ನಷ್ಟಕ್ಕೊಳಗಾಗಿರುವುದು ಪರಿಶೀಲನೆಯಿಂದ ತಿಳಿದು ಬರುತ್ತದೆ. ಹೋಬಳಿವಾರು ನೋಡಲಾಗಿ ಲಿಂಗಸುಗೂರ- ಶೇ. 79, ಮುದಗಲ್ಲ- ಶೇ. 64, ಗುರುಗುಂಟಾ- ಶೇ. 111, ಮಸ್ಕಿ- ಶೇ. 86ರಷ್ಟು ಬಿತ್ತನೆಯಾಗಿರುವುದು ವರದಿಯಾಗಿದೆ.ಈ ಕುರಿತು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಎನ್. ಸರಸ್ವತಿ ಅವರನ್ನು ಸಂಪರ್ಕಿಸಿದಾಗ, ವಾಸ್ತವವಾಗಿ ಮುಂಗಾರು ಆರಂಭದಲ್ಲಿ ಮಳೆ ಅಭಾವದಿಂದ ರೈತರು ಸಂಕಷ್ಟದಲ್ಲಿದ್ದರು. ರೈತರು ಸಾಕಷ್ಟು ತಡವಾಗಿ ಬಿತ್ತನೆ ಮಾಡಿಕೊಂಡಿದ್ದರು ಕೂಡ ಆಗಾಗ ಬಿದ್ದ ಮಳೆಯಿಂದ ಬೆಳೆಗಳು ಚೇತರಿಸಿಕೊಳ್ಳುತ್ತಿವೆ. ಸಜ್ಜೆ, ಸೂರ್ಯಕಾಂತಿ, ಹತ್ತಿ ಬೆಳೆ ಭಾಗಶಃ ಉತ್ತಮ ಇಳುವರಿ ಬರುವ ನಿರೀಕ್ಷೆ ಹೊಂದಲಾಗಿದೆ. ಉಳಿದ ಬೆಳೆ ನಷ್ಟಕ್ಕೊಳಗಾಗಿವೆ ಎಂದು ಹೇಳಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry