ಮಂಗಳವಾರ, ಏಪ್ರಿಲ್ 13, 2021
23 °C

ಬರದ ಘೋರ ರೂಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದ ಸ್ಥಿತಿ ಈಗ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ. ತೀವ್ರ ಬರ ಅಡರಿಕೊಂಡ ನಂತರ ಮಳೆಯೊಂದೇ ನಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ ಎಂಬ ನಿರೀಕ್ಷೆಯಿತ್ತು. ಆದರೆ ಎಲ್ಲ ನಿರೀಕ್ಷೆಗಳೂ ಹುಸಿಯಾಗಿವೆ.

 

ರಾಜ್ಯದಲ್ಲಿ ಮಳೆ ಸಂಪೂರ್ಣವಾಗಿ ವಿಫಲವಾಗಿದೆ. 25 ಜಿಲ್ಲೆಗಳಲ್ಲಿ ಮಳೆ ಕೊರತೆಯಾಗಿ ಬರ ಬಂದೆರಗಿ ಆತಂಕದ ಸ್ಥಿತಿ ತಲೆದೋರಿದೆ. ನಾಲ್ಕು ದಶಕಗಳಲ್ಲಿ ಇಂತಹ ಸ್ಥಿತಿ ಎದುರಾಗಿರಲಿಲ್ಲ. ಉತ್ತರ ಕರ್ನಾಟಕ ಭಾಗದ್ಲ್ಲಲಂತೂ ಮಳೆ ಸೂಚನೆಯೇ ಇಲ್ಲ. 2,544 ಕೆರೆಗಳು ಪೂರ್ಣ ಬತ್ತಿಹೋಗಿವೆ.ಮೇವಿನ ತೀವ್ರ ಕೊರತೆ ಇರುವ ಹತ್ತು ಜಿಲ್ಲೆಗಳಿಗೆ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶಗಳಿಂದ ಮೇವು ತರಿಸಬೇಕಾದ ಸ್ಥಿತಿ ಒದಗಿದೆ. ಆಹಾರ ಧಾನ್ಯಗಳ ಉತ್ಪಾದನೆ ಕುಸಿದಿದೆ. ಮಳೆ ಕೊರತೆಯಿಂದ ಜೋಳ, ಸಜ್ಜೆ, ಮೆಕ್ಕೆಜೋಳ, ರಾಗಿ, ನವಣೆಯಂತಹ ಧಾನ್ಯಗಳ ಬಿತ್ತನೆಗೆ ಈಗಾಗಲೇ ಧಕ್ಕೆಯಾಗಿದೆ.ಉತ್ತರ ಒಳನಾಡಿನಲ್ಲಿ  ಶೇ 47ರಷ್ಟು ಮಳೆ ಕೊರತೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ ಮಳೆ ಕೊರತೆ ಶೇ 51ರಷ್ಟಿದೆ. ನೆರೆಯ ಮಹಾರಾಷ್ಟ್ರವೂ ಬರದ ದವಡೆಗೆ ಸಿಲುಕಿದೆ. ಕಳೆದ ವರ್ಷವೂ ರಾಜ್ಯದಲ್ಲಿ ಮಳೆ ಕೊರತೆಯಾಗಿತ್ತು. ಈಗಾಗಲೇ ರಾಜ್ಯದ 123 ತಾಲ್ಲೂಕುಗಳಲ್ಲಿ ಬರ ಪರಿಹಾರ ಕಾಮಗಾರಿಗಳು ಜಾರಿಯಲ್ಲಿವೆ.

 

ಹೊಸದಾಗಿ ಇತ್ತೀಚೆಗೆ 19 ತಾಲ್ಲೂಕುಗಳು ಬರಪೀಡಿತ ಪ್ರದೇಶ ಪಟ್ಟಿಗೆ ಸೇರಿವೆ. ಜಲಾಶಯಗಳಲ್ಲಿ ನೀರಿನ ಮಟ್ಟವೂ ಕಡಿಮೆಯಾಗುತ್ತಾ ಸಾಗುತ್ತಿದೆ. ಕುಡಿಯುವ ನೀರಿನ ಕೊರತೆ ನಿವಾರಣೆಗೆ ಆದ್ಯತೆ ನೀಡಿ, ಎಲ್ಲಾ ಜಿಲ್ಲೆಗಳಲ್ಲೂ ಸಮರೋಪಾದಿಯಲ್ಲಿ ಬರ ಪರಿಹಾರ ಕಾಮಗಾರಿಗಳನ್ನ್ನು ಜಾರಿಗೊಳಿಸಬೇಕಿದೆ.ಕುಡಿಯುವ ನೀರಿಗೆ 12 ಕೋಟಿ ಸೇರಿದಂತೆ 224 ಕೋಟಿ ರೂಪಾಯಿ `ಪರಿಹಾರ ಪ್ಯಾಕೇಜನ್ನು~ ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ನೀಡಿದೆ. ಬರದಿಂದ ತತ್ತರಿಸುತ್ತಿರುವ ಪ್ರದೇಶಗಳಿಗೆ ಇದು ಯಾವ ಲೆಕ್ಕ? ಬರದ ಹಿನ್ನೆಲೆಯಲ್ಲಿ ಸಂಕಷ್ಟ ಸೂತ್ರವೊಂದನ್ನು ಸಿದ್ಧಪಡಿಸಲಾಗಿದ್ದು ಅದನ್ನು ರಾಜ್ಯಗಳ ಸಹಕಾರದೊಂದಿಗೆ ಜಾರಿಗೆ ತರಲಾಗುವುದು ಎಂದು ಕೇಂದ್ರ ಭರವಸೆ ನೀಡಿದೆ.ವಾಸ್ತವ ಸ್ಥಿತಿ ಆಧರಿಸಿ ರಾಜ್ಯ ಸರ್ಕಾರ ಕೇಂದ್ರದ ನೆರವಿಗೆ ಮನವಿ ಸಲ್ಲಿಸಬಹುದು ಎಂದಿರುವ ಕೇಂದ್ರ, ರಾಜ್ಯದ ಮನವಿ ಬಳಿಕ  ತಜ್ಞರ ತಂಡ ಕಳುಹಿಸುವುದಾಗಿ ತಿಳಿಸಿದೆ. ಅಂತಹ ಕೆಲಸಗಳಿಗೆ ಕಾಲ ಮಿಂಚಿದೆ ಎನ್ನುವುದನ್ನು ಕೇಂದ್ರ ಅರಿತುಕೊಳ್ಳುವುದು ಸೂಕ್ತ. ಇಂತಹ ಕ್ರಮಗಳು ಶೀಘ್ರ ಪರಿಹಾರ ಕೊಡಲಾರವು. ವಿಳಂಬ ನೀತಿಯಿಂದ ಜನರಿಗೆ ತೊಂದರೆಯೇ ಹೆಚ್ಚು.ಕೇಂದ್ರಕ್ಕೆ 9,206 ಕೋಟಿ ರೂಪಾಯಿ ನೆರವಿಗೆ ಮನವಿ ಸಲ್ಲಿಸಿರುವುದು ಹಾಗೂ ಬರ ಸ್ಥಿತಿ ಮನವರಿಕೆ ಮಾಡಿಕೊಡಲು ಮಾತುಕತೆ ಆರಂಭಿಸಿರುವುದು ಮೆಚ್ಚತಕ್ಕ ಕೆಲಸ. ಮಳೆ ಕೊರತೆಯಿಂದ ಜೀವನ ನಡೆಸುವುದೇ ದುಸ್ತರವಾದ ರೈತರು ಕೂಲಿ ಹುಡುಕಿಕೊಂಡು ನಗರಗಳಿಗೆ ಗುಳೆ ಹೊರಡುವ ಸಂದರ್ಭಗಳನ್ನು ಸರ್ಕಾರಕ್ಕೆ ತಡೆಯಲಾಗುತ್ತಿಲ್ಲ.ಬೆಳೆ ಸಾಲ ಮನ್ನಾ ಮಾಡಿರುವುದೊಂದೇ ಸಾಲದು. ರಾಜ್ಯ ಸರ್ಕಾರ ಉಳಿದೆಲ್ಲ ಕೆಲಸಗಳನ್ನೂ ಬದಿಗಿಟ್ಟು, ಬರಪೀಡಿತ ಪ್ರದೇಶಗಳ ಜನರ ನೆರವಿಗೆ ಮುಂದಾಗಬೇಕು. ಬರ ಪರಿಹಾರ ಕಾಮಗಾರಿಗಳನ್ನು ತುರ್ತಾಗಿ ಯೋಜಿಸಬೇಕು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.