ಬುಧವಾರ, ನವೆಂಬರ್ 13, 2019
22 °C

ಬರದ ಜಿಲ್ಲೆಯಲ್ಲಿ ಹಳೆ ಹುಲಿಗಳ ಸಮರ

Published:
Updated:
ಬರದ ಜಿಲ್ಲೆಯಲ್ಲಿ ಹಳೆ ಹುಲಿಗಳ ಸಮರ

ಗದಗ: ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲೂ ಮತ್ತೆ ಹಳೆ ಹುಲಿಗಳೇ ಅಖಾಡಕ್ಕೆ ಇಳಿದಿದ್ದಾರೆ. ಮಾಜಿ ಸಚಿವರಾದ ಎಚ್.ಕೆ.ಪಾಟೀಲ, ಸಿ.ಸಿ.ಪಾಟೀಲ, ಬಿ.ಆರ್.ಯಾವಗಲ್, ಮಾಜಿ ಶಾಸಕ ಜಿ.ಎಸ್.ಪಾಟೀಲ, ಶಾಸಕರಾದ ಶ್ರೀಶೈಲಪ್ಪಬಿದರೂರ ಮತ್ತು ರಾಮಣ್ಣ ಲಮಾಣಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದರೆ, ಇಡೀ ಜಿಲ್ಲೆಯಲ್ಲಿ ಕಳೆದ ಬಾರಿ ಬಿಜೆಪಿ ಬಾವುಟ ಹಾರಲು ಕಾರಣರಾದ ಶ್ರೀರಾಮುಲು ಅವರ ಬಿಎಸ್‌ಆರ್ ಕಾಂಗ್ರೆಸ್ ಪಕ್ಷ ಮತ್ತು ಕೆಜೆಪಿಗಳೂ ಸ್ಪರ್ಧೆಯಲ್ಲಿವೆ, ಬಲವಾದ ಪೈಪೋಟಿ ನೀಡುತ್ತಿವೆ.ಗದಗ ಕ್ಷೇತ್ರ: ಎರಡು ದಶಕಗಳ ಕಾಲ ವಿಧಾನ ಪರಿಷತ್ ಸದಸ್ಯರಾಗಿದ್ದ ಎಚ್.ಕೆ.ಪಾಟೀಲ ಅವರು ಬಿಎಸ್‌ಆರ್ ಕಾಂಗ್ರೆಸ್‌ನ ಅನಿಲ ಮೆಣಸಿನಕಾಯಿ ಅವರಿಂದ ತೀವ್ರ ಸ್ಪರ್ಧೆ ಎದುರಿಸುತ್ತಿದ್ದಾರೆ. ಬಿಜೆಪಿಯಿಂದ ಶಾಸಕ ಶ್ರೀಶೈಲಪ್ಪ ಬಿದರೂರ ಸ್ಪರ್ಧಿಸಿದ್ದರೆ, ಎರಡು ಬಾರಿ ಸ್ಪರ್ಧಿಸಿ ಸೋತಿದ್ದ ಎಸ್.ಬಿ. ಸಂಕಣ್ಣನವರ ಈ ಬಾರಿ ಕೆಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಅನುಕಂಪದ ಲಾಭ ಗಿಟ್ಟಿಸಿಕೊಳ್ಳುವ ಕಸರತ್ತು ನಡೆಸುತ್ತಿದ್ದಾರೆ.ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಕಾಂಗ್ರೆಸ್‌ಗೆ ಗೆಲುವಿನ ಆತ್ಮವಿಶ್ವಾಸ ಹೆಚ್ಚಿಸಿದೆ. ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಿ ಕಡಿಮೆ ದರದಲ್ಲಿ ಶುದ್ಧ ಜಲ ಪೂರೈಕೆ ಮಾಡುತ್ತಿರುವುದು ಪಾಟೀಲ ಅವರಿಗೆ ವರವಾಗಿ ಪರಿಣಮಿಸಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಎಚ್‌ಕೆ ವಿರುದ್ಧ ಏಕ ಅಭ್ಯರ್ಥಿ ಕಣಕ್ಕಿಳಿಸಲು ಕೊನೆಗಳಿಗೆಯಲ್ಲಿ ಕಾಂಗ್ರೆಸ್ಸೇತರ ಪಕ್ಷಗಳು ಮಾಡಿದ ಪ್ರಯತ್ನ ವಿಫಲಗೊಂಡಿದೆ.ಕೆಜೆಪಿ ಜತೆ ಗುರುತಿಸಿಕೊಂಡಿದ್ದ ಶಾಸಕ ಶ್ರೀಶೈಲಪ್ಪ ಬಿದರೂರಗೆ ಮತ್ತೆ ಬಿಜೆಪಿ ಟಿಕೆಟ್ ನೀಡಿದ್ದಕ್ಕೆ ಪಕ್ಷದಲ್ಲಿ ಭಿನ್ನಮತ ಉದ್ಭವಿಸಿತ್ತು. ರಾಜ್ಯ ಬಿಜೆಪಿ ಅಧ್ಯಕ್ಷ ಪ್ರಹ್ಲಾದ ಜೋಶಿ ಅವರು ಮುಖಂಡರ ಜತೆ ಚರ್ಚಿಸಿ ತಕ್ಕ ಮಟ್ಟಿಗೆ ಭಿನ್ನಮತ ಶಮನಗೊಳಿಸಿದ್ದಾರೆ.ಬಿಎಸ್‌ಆರ್ ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಅನಿಲ ಮೆಣಸಿನಕಾಯಿ ಸಹ ಮತದಾರರನ್ನು ಸೆಳೆಯಲು ಕೊಳಚೆ ಪ್ರದೇಶದಲ್ಲಿ ವಾಸ್ತವ್ಯ ಹೂಡುವ ಮೂಲಕ ವಿಭಿನ್ನ ತಂತ್ರಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ. ಜಿಸಿಎಲ್ ಕ್ರಿಕೆಟ್ ಪಂದ್ಯಾವಳಿ ಮೂಲಕ ಯುವಕರಲ್ಲಿ ಸಂಚಲನ ಮೂಡಿಸಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷದ ಸಾಧನೆ ಹಾಗೂ ಶ್ರೀರಾಮುಲು ಜನಪ್ರಿಯತೆ  ಗೆಲುವಿಗೆ ಪೂರಕವಾಗಲಿದೆ ಎಂಬ ಲೆಕ್ಕಚಾರ ಮೆಣಸಿನಕಾಯಿ ಅವರದ್ದು.ಬಿಜೆಪಿ ಮತ್ತು ಕೆಜೆಪಿ ಅಭ್ಯರ್ಥಿಗಳು ಲಿಂಗಾಯತ ಪಂಚಮಸಾಲಿ ಬಣಕ್ಕೆ ಸೇರಿದವರು. ಕ್ಷೇತ್ರದಲ್ಲಿ ಲಿಂಗಾಯತ ಪಂಚಮಸಾಲಿ ಪ್ರಾಬಲ್ಯವಿದ್ದರೂ ಮುಸ್ಲಿಮರು ಮತ್ತು ಇತರೆ ಹಿಂದುಳಿದ ಜಾತಿಗಳ ಮತಗಳು ಗೆಲುವಿನ ಅಭ್ಯರ್ಥಿಯನ್ನು ನಿರ್ಣಯಿಸಲಿವೆ.ರೋಣ ಕ್ಷೇತ್ರ

ಬಿಜೆಪಿ ಪ್ರಾಬಲ್ಯವಿರುವ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಅತ್ಯಂತ ದೊಡ್ಡ ಕ್ಷೇತ್ರ ರೋಣ. ಬಿಜೆಪಿ ಅಭ್ಯರ್ಥಿಯಾಗಿ ಎರಡು ಬಾರಿ ಗೆಲುವು ಸಾಧಿಸಿದ ಸಚಿವ ಕಳಕಪ್ಪ ಬಂಡಿ, ಮೂರನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಎರಡು ಬಾರಿ ಆಯ್ಕೆಯಾಗಿ ಕಳೆದ ಬಾರಿ ಕೂದಲೆಳೆ ಅಂತರದಲ್ಲಿ ಸೋತಿದ್ದ ಕಾಂಗ್ರೆಸ್‌ನ ಜಿ.ಎಸ್. ಪಾಟೀಲ ಮತ್ತೆ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್-ಬಿಜೆಪಿ ನಡುವೆ ನೇರ ಹಣಾಹಣಿ ಇದ್ದಂತೆ ತೋರುತ್ತಿದೆ. ಜೆಡಿಎಸ್ ಕೂಡ ಕಾಂಗ್ರೆಸ್ ಬತ್ತಳಿಕೆಯಿಂದಲೇ ಸೆಳೆದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮುಂಡರಗಿಯ ಹೇಮಗೀರಿಶ ಹಾವಿನಾಳರನ್ನು ಕಣಕ್ಕಿಳಿಸಿರುವುದು ಎರಡು ಪಕ್ಷಗಳಿಗೂ ಸಮಸ್ಯೆಯಾಗಿ ಕಾಡುತ್ತಿದೆ.`ಕಳಕಪ್ಪ ಬಂಡಿ ಸಚಿವರಾಗಿದ್ದರೂ ಗಜೇಂದ್ರಗಡಕ್ಕೆ (ಸ್ವಂತ ಊರು) ಮಾತ್ರ ಸೀಮಿತಗೊಂಡರು. ಆದರೆ ಜಿಲ್ಲೆಯ ಅಭಿವೃದ್ಧಿಗೆ ಗಮನಹರಿಸಲಿಲ್ಲ' ಎಂಬ ಆರೋಪ ಇದೆ. ಜಿ.ಎಸ್.ಪಾಟೀಲರು ಸರ್ಕಾರಿ ಶಾಲೆಗಳ ಐದನೇ ತರಗತಿ ಮಕ್ಕಳಿಗೆ `ಶಿಕ್ಷಣಕ್ಕಾಗಿ ಬೆಳಕು' ಎಂಬ ಕಾರ್ಯಕ್ರಮದಲ್ಲಿ ಉಚಿತವಾಗಿ ಸೋಲಾರ್ ದೀಪ ವಿತರಣೆ ಮಾಡುವ ಮೂಲಕ ಪೋಷಕ ಮತದಾರರನ್ನು ಸೆಳೆಯುವ ತಂತ್ರ ಹೂಡಿದ್ದಾರೆ.ಲಿಂಗಾಯತರ ನಂತರ ಕುರುಬ ಜನಾಂಗದ ಅಧಿಕ ಮತದಾರರು ಇಲ್ಲಿದ್ದು, ಪುನರ್ ವಿಂಗಡಣೆಯಿಂದಾಗಿ ಸೇರಿದ ಮುಂಡರಗಿ ತಾಲ್ಲೂಕಿನ ಗ್ರಾಮಗಳ ಮತಗಳು ನಿರ್ಣಾಯಕ ಪಾತ್ರ ವಹಿಸಲಿವೆ.ನರಗುಂದ ಕ್ಷೇತ್ರ

ನರಗುಂದದಲ್ಲಿ ಸತತವಾಗಿ ಎರಡು ಬಾರಿ ಆಯ್ಕೆಯಾಗಿರುವ ಶಾಸಕ ಸಿ.ಸಿ.ಪಾಟೀಲ ಬಿಜೆಪಿಯಿಂದ ಮೂರನೇ ಬಾರಿಗೆ ಕಣಕ್ಕಿಳಿದಿದ್ದಾರೆ. ಅವರಿಗೆ ಪ್ರಬಲ ಎದುರಾಳಿ ಆಗಿರುವ ಕಾಂಗ್ರೆಸ್‌ನ ಬಿ.ಆರ್.ಯಾವಗಲ್ ಗೆಲುವಿನ ಓಟಕ್ಕೆ ತಡೆಯೊಡ್ಡಲು ಹವಣಿಸುತ್ತಿದ್ದಾರೆ.ಕಳಸಾ ಬಂಡೂರಿ ನಾಲಾ ಜೋಡಣೆ ಯೋಜನೆ ಕಾಂಗ್ರೆಸ್- ಬಿಜೆಪಿ ಅಭ್ಯರ್ಥಿಗಳಿಬ್ಬರಿಗೂ `ನೆಗಟಿವ್' ಆಗಿದೆ. `ಯಾವ ಸರ್ಕಾರ ಬಂದರೂ ಯೋಜನೆ ಪೂರ್ಣಗೊಳ್ಳಲಿಲ್ಲ' ಎಂಬ ಅಸಮಾಧಾನ ಒಂದೆಡೆಯಾದರೆ, `ಅಧಿಕಾರದಲ್ಲಿದ್ದರೂ ರೈತರ ಹಿತರಕ್ಷಣೆ ಮಾಡಲು ಬಿಜೆಪಿಗೆ ಸಾಧ್ಯವಾಗಲಿಲ್ಲ' ಎಂಬ ಅಭಿಪ್ರಾಯ ಮತ್ತೊಂದೆಡೆ.ರೋಣ ತಾಲ್ಲೂಕಿನ ಮೆಣಸಗಿ ಗ್ರಾಮದಲ್ಲಿ ಆಕಸ್ಮಿಕವಾಗಿ ಸಿಡಿದ ಗುಂಡಿನಿಂದ  ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿ.ಸಿ.ಪಾಟೀಲ ಪರವಾಗಿ ಅವರ ಪತ್ನಿ ಶೋಭಾ ಪಾಟೀಲ ಮತ್ತು ಮಕ್ಕಳು ಮತಯಾಚಿಸುತ್ತಿದ್ದಾರೆ. ಗುಂಡೇಟು ಪ್ರಕರಣದ ಅನುಕಂಪ ಅಲೆ ಸೃಷ್ಟಿಸಿ ಲಾಭ ಪಡೆದುಕೊಳ್ಳಲು ಬಿಜೆಪಿ ಯತ್ನಿಸುತ್ತಿದೆ. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಆಸ್ಪತ್ರೆಯಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಸಿ.ಸಿ.ಪಾಟೀಲ ಮತಯಾಚಿಸಿದ್ದಾರೆ.ರಾಜಕೀಯ ಜೀವನದ ಕೊನೆ ಚುನಾವಣೆ ಎದುರಿಸುತ್ತಿರುವ ಬಿ.ಆರ್.ಯಾವಗಲ್  ಅವರನ್ನು ಗೆಲ್ಲಿಸಲೇಬೇಕು ಎಂದು ಅಭಿಮಾನಿಗಳು ಮತ್ತು ಕಾರ್ಯಕರ್ತರು ಬೆವರು ಸುರಿಸುತ್ತಿದ್ದಾರೆ.ಮಾಜಿ ಮತ್ತು ಹಾಲಿ ಶಾಸಕರ ಓಟಕ್ಕೆ ತೊಡರುಗಾಲು ಹಾಕಲು ಕಣದಲ್ಲಿರುವ ಜೆಡಿಎಸ್ ಅಭ್ಯರ್ಥಿ ಪ್ರಕಾಶ ಕರಿ, ಬಿಎಸ್‌ಆರ್ ಕಾಂಗ್ರೆಸ್‌ನಿಂದ ಶ್ರೀರಾಮುಲು ಆಪ್ತ ಸಹಾಯಕ ಎಸ್.ಶಿವನಗೌಡರ, ಕೆಜೆಪಿಯಿಂದ ಕುಬೇರಗೌಡ, ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಕುಂತಲಾ ಕೊಂಡಾ ಬಿಂಗಿ ಸಹ ಮತದಾರರ ಓಲೈಕೆಗೆ ಮಂದಾಗಿದ್ದಾರೆ.ಶಿರಹಟ್ಟಿ ಕ್ಷೇತ್ರ

ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾದ ಶಿರಹಟ್ಟಿಯಲ್ಲಿ ಮೊದಲ ಸಲ ಬಿಜೆಪಿಯಿಂದ ಗೆದ್ದಿದ್ದ  ರಾಮಣ್ಣ ಲಮಾಣಿ ಈ ಬಾರಿಯೂ ಅಖಾಡಕ್ಕಿಳಿದಿದ್ದಾರೆ. ಅನುದಾನ ಸದ್ಬಳಕೆ, ಸರ್ಕಾರದ ಸಾಧನೆ, ಹಿಂದುಳಿದ ವರ್ಗಗಳ ಬೆಂಬಲ ನೆಚ್ಚಿಕೊಂಡಿರುವ ರಾಮಣ್ಣ ಲಮಾಣಿ  ಅವರಿಗೆ ಕಾಂಗ್ರೆಸ್‌ನ ರಾಮಕೃಷ್ಣ ದೊಡ್ಡಮನಿ, ಕಳೆದ ಬಾರಿ ಪಕ್ಷೇತರರಾಗಿ ಸ್ಪರ್ಧಿಸಿ ಈಗ ಬಿಎಸ್‌ಆರ್ ಕಾಂಗ್ರೆಸ್ ಹುರಿಯಾಳಾಗಿರುವ ಜಯಶ್ರೀ ಹಳ್ಳೆಪ್ಪನವರ ಪ್ರಬಲ ಎದುರಾಳಿಗಳು.ಕೆಜೆಪಿ ಅಭ್ಯರ್ಥಿ ಶೋಭಾ ಲಮಾಣಿ, ಜೆಡಿಎಸ್ ಅಭ್ಯರ್ಥಿ ಗುರಪ್ಪ ವಡ್ಡರ ಹಾಗೂ ಪಕ್ಷೇತರರು ಕಣದಲ್ಲಿದ್ದು, ಲಮಾಣಿ ಗೆಲುವಿನ ಓಟಕ್ಕೆ ತಡೆಯೊಡ್ಡಲು ಸಜ್ಜಾಗಿದ್ದಾರೆ.

ಪ್ರತಿಕ್ರಿಯಿಸಿ (+)