ಬರದ ನಡುವೆಯೂ ಬೆಳೆ...

7

ಬರದ ನಡುವೆಯೂ ಬೆಳೆ...

Published:
Updated:
ಬರದ ನಡುವೆಯೂ ಬೆಳೆ...

ಗಜೇಂದ್ರಗಡ:  ಭೀಕರ ಬರದಿಂದ ಉತ್ತರ ಕರ್ನಾಟಕ ತತ್ತರಿಸಿ ಹೋಗಿದೆ. ಆದರೆ, ಈ ಭಾಗದ ಆರಾಧ್ಯ ದೈವ, ದಕ್ಷಿಣ ಕಾಶಿ ಪ್ರಸಿದ್ಧಿಯ ಕಾಲಕಾಲೇಶ್ವರನ ರುದ್ರ ಭೂಮಿ ಎಂದು ಪರಿಗಣಿಸಲ್ಪಡುವ 20 ಕ್ಕೂ ಅಧಿಕ ಗ್ರಾಮಗಳಲ್ಲಿ ಮಳೆನಾಡು ಮಾದರಿಯ ತುಂತುರು ಮಳೆ ಸುರಿಯುತ್ತಿದ್ದು ಬರದ ನಡುವೆಯೂ ಉತ್ತಮ ಬೆಳೆಗಳನ್ನು ಬೆಳೆದು ರೈತರು ಅಚ್ಚರಿ ಮೂಡಿಸಿದ್ದಾರೆ.ರೋಣ ತಾಲ್ಲೂಕಿನಾದ್ಯಂತ ಬರ ಪರಿಸ್ಥಿತಿ ಎದುರಾಗಿದ್ದರೂ ಗಜೇಂದ್ರಗಡ ವ್ಯಾಪ್ತಿಯ 20 ಕ್ಕೂ ಅಧಿಕ ಗ್ರಾಮಗಳಲ್ಲಿ ಬರದ ಸುಳಿವೆ ಇಲ್ಲದಂತೆ ಭಾಸವಾಗುತ್ತಿರುವುದು ಅಶ್ಚರ್ಯವಾದರೂ ಸತ್ಯ.ಗಜೇಂದ್ರಗಡ ಸೇರಿದಂತೆ ಸುತ್ತಮುತ್ತಲ ಬಹುತೇಕ ಗ್ರಾಮಗಳ ಕೃಷಿ ಪ್ರದೇಶ ಕೆಂಪು ಮಿಶ್ರಿತ ಜವಗು (ಮಸಾರಿ) ಪ್ರದೇಶವಾಗಿದೆ. ಈ ಭಾಗದಲ್ಲಿ ಅಲ್ಪ ಮಳೆ ಸುರಿದರೂ ಬೆಳೆಗಳಿಗೆ ಅನುಕೂಲವಾಗುತ್ತದೆ. ಅಲ್ಲದೆ, ಜವಗು ಮಿಶ್ರಿತ ಪ್ರದೇಶವಾದ್ದರಿಂದ ಬೆಳೆಗಳಿಗೆ ಅವಶ್ಯವಿರುವ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಗುಣವನ್ನು ಕೃಷಿ ಪ್ರದೇಶ ಹೊಂದಿದೆ.ಕ್ಷೀಣಿಸದ ಇಳುವರಿ: ತೇವಾಂಶದ ಕೊರತೆಯ ಮಧ್ಯೆಯೂ ಬಿತ್ತನೆಗೆ ಮುಂದಾದ ಈ ಭಾಗದ ರೈತರಿಗೆ ಆರಂಭದಲ್ಲಿ ವರುಣ ದೇವನ ಮುನಿಸು ನಿದ್ದೆಗೆಡಿಸಿತ್ತು. ಆದರೆ, ಕೆಲವೇ ದಿನಗಳಲ್ಲಿ ವರುಣ ದೇವ ಮುನಿಸಿನಿಂದ ಹೊರ ಬಂದು ಕೃಪೆ ತೋರಿದೆ. ಪರಿಣಾಮ ವಾಡಿಕೆಯ ಪ್ರಮಾಣದಲ್ಲಿ ಮಳೆ ಸುರಿಯದಿದ್ದರೂ ದಿನಕ್ಕೆ ಒಂದೆರಡು ಬಾರಿ ಸುರಿಯುವ ಮಳೆ ಫಸಲಿಗೆ ಅಗತ್ಯವಿರುವ ತೇವಾಂಶವನ್ನು ನೀಡುತ್ತಲೇ ಇದೆ. ಹೀಗಾಗಿಯೇ ಕುಷ್ಕಿ ಬೇಸಾಯದಲ್ಲಿ ಬೆಳೆಯಲಾದ 185 ಹೆಕ್ಟೇರ್ ಹೈಬ್ರಿಡ್‌ಜೋಳ, 2,403 ಹೆಕ್ಟೇರ್ ಮೆಕ್ಕೆಜೋಳ, 1,940 ಹೆಕ್ಟೇರ್ ಸಜ್ಜಿ, 489 ಹೆಕ್ಟೇರ್ ತೊಗರಿ, 2,527 ಹೆಕ್ಟೇರ್ ಹೆಸರು, 1,506 ಹೆಕ್ಟೇರ್ ಶೇಂಗಾ, 246 ಹೆಕ್ಟೇರ್ ಎಳ್ಳು, 5,891 ಹೆಕ್ಟೇರ್ ಸೂರ್ಯಕಾಂತಿ, 98 ಹೆಕ್ಟೇರ್ ಗುರೆಳ್ಳು ಸೇರಿದಂತೆ ಒಟ್ಟು 15,292 ಹೆಕ್ಟೇರ್ ನಲ್ಲಿ ಬೆಳೆಯಲಾದ ಬೆಳೆಗಳು ಅನ್ನದಾತನ ನಿರೀಕ್ಷಗೂ ಮೀರಿ ಇಳುವರಿ ಬಂದಿದೆ.  ಕೃಪೆ ತೋರಿದ ಕಾಲಕಾಲೇಶ್ವರ:  ಈ ಭಾಗದ ಆರಾಧ್ಯ ದೈವ ಶ್ರೀಕಾಲಕಾಲೇಶ್ವರನನ್ನು ಸ್ಮರಿಸಿದ ಈ ಭಾಗದ ಅನ್ನದಾತನಿಗೆ ಕೊನೆಗೂ ಕಾಲಕಾಲೇಶ ಕೈಬಿಡಲಿಲ್ಲ. ಚಂದ್ರಮಾನ ಯುಗಾದಿ ಹಬ್ಬದಂದು ಕಾಲಕಾಲೇಶ್ವರನ ಸನ್ನಿಧಿಯಲ್ಲಿ ನಡೆಯುವ ಮಳೆ-ಬೆಳೆ ಭವಿಷ್ಯವಾಣಿಯಲ್ಲಿ  `ಈ ಭಾಗದಲ್ಲಿ ಉತ್ತಮವೂ ಅಲ್ಲ, ಕನಿಷ್ಟವೂ ಅಲ್ಲದ ಮಳೆಯಾಗುತ್ತದೆ. ನೇಗಿಲಯೋಗಿ ಸಂಕಷ್ಟ ನಿವಾರಣೆಯಾಗುತ್ತದೆ~ ಎಂಬ ಶ್ರೀಕ್ಷೇತ್ರದ ಭವಿಷ್ಯವಾಣಿ ಕೊನೆಗೂ ಹುಸಿಯಾಗಲಿಲ್ಲ ಎಂಬ ಅಭಿಮತವನ್ನು ರೈತ ವಿರೂಪಾಕ್ಷಪ್ಪ ಹಪ್ಪಳದ `ಪ್ರಜಾವಾಣಿ~ ಗೆ ವ್ಯಕ್ತಪಡಿಸಿದರು.  ಅಂತರ್ಜಲ ಮಟ್ಟ ಕುಸಿತ 

 ಬರವಿದ್ದರೂ ಈ ಭಾಗದಲ್ಲಿ ಬೆಳೆಗಳು ಹಸಿರಿನಿಂದ ಕಂಗೊಳಿಸುತ್ತಿವೆಯಾದರೂ ನೇಗಿಲ ಯಯೋಗಿಯ ಜೀವನಾಡಿ ಎಂದೇ ಪರಿಗಣಿಸಲ್ಪಟ್ಟ ಕೊಳವೆ ಬಾವಿಗಳು, ಹಳ್ಳ-ಕೊಳ್ಳ, ಕೆರೆ-ಕುಂಟಿಗಳು ಮಾತ್ರ ಭರ್ತಿಯಾಗಿಲ್ಲ. ಕಾರಣ, ವಾಡಿಕೆ ಪ್ರಮಾಣದಲ್ಲಿ ಮಳೆ ಸುರಿಯದಿದ್ದರೂ ದಿನಕ್ಕೊಮ್ಮೆ ಸುರಿಯುವ ಅಲ್ಪ ಪ್ರಮಾಣದ ಮಳೆ ಕೇವಲ ಬೆಳೆಗಳಿಗೆ ಮಾತ್ರ ತೇವಾಂಶವನ್ನು ನೀಡುತ್ತಿವೆಯೇ ಹೊರತು, ಅಂತರ್ಜಲ ಮಟ್ಟ ಹೆಚ್ಚಿಸುವಲ್ಲಿ ವಿಫಲವಾಗಿದೆ. ಇದೇ ಕಾರಣಕ್ಕಾಗಿಯೇ ನೀರಾವರಿ ಆಶ್ರಿತ ಬೇಸಾಯಕ್ಕೆ ಭಾರಿ ಹಿನ್ನೆಡೆ ಉಂಟಾಗಿದೆ ಎನ್ನುತ್ತಾರೆ ಪ್ರಗತಿಪರ ರೈತ ಕಳಕಪ್ಪ ಮಾಗಿ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry