ಬರದ ನಾಡಲ್ಲಿ ಕೊರಲೆ ಕಲರವ

7

ಬರದ ನಾಡಲ್ಲಿ ಕೊರಲೆ ಕಲರವ

Published:
Updated:

ಗಜೇಂದ್ರಗಡ: ಬರದ ನಾಡಲ್ಲಿ ಶ್ರೀಮಂತರ ಪಾಲಿನ ಪ್ರಮುಖ ಆಹಾರ ಪದಾರ್ಥ ಎಂದೇ ಬಿಂಬಿತಗೊಂಡ ~ಕೊರೆಲೆ~ಗೆ ಕ್ಷೇತ್ರೋತ್ಸವದ ಸಂಭ್ರಮ....ಹೌದು! ಒಂದಾನೊಂದು ಕಾಲದಲ್ಲಿ ಬಡವರ, ಶ್ರಮಿಕರ ತುತ್ತಿನ ಚೀಲ ತುಂಬಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದ `ಕೊರಲೆ~ ಬೆಳೆ ಇಂದು ಬಡ ವರ ಕೈಗೆ ಎಟುಕದ ಎತ್ತರಕ್ಕೆ ಬೆಳೆದು ಶ್ರೀಮಂತರ ಹಸಿವು ತಣಿಸುತ್ತಿದೆ.ಭೀಕರ ಬರದ ಹಿನ್ನೆಲೆಯಲ್ಲಿ ಈ ಭಾಗದ ಕೃಷಿ ಪ್ರದೇಶ ಬರಡಾಗಿದ್ದರೂ ಗಜೇಂದ್ರಗಡ ಸಮೀಪದ ವೀರಾಪುರ ಗ್ರಾಮದ ಹೊರ ವಲಯದಲ್ಲಿನ ಹೊಲವೊಂದರಲ್ಲಿನ `ಕೊರಲೆ~ ಬೆಳೆ ಸಮೃದ್ಧವಾಗಿ ಬೆಳೆದು ನಿಂತು ಅಚ್ಚರಿ ಮೂಡಿಸಿದೆ.ಅಂತರ್ಜಲ ಅಭಿವೃದ್ದಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಬಳಸಿ ಅಭೂತ ಪೂರ್ಣ ಸಾಧನೆಗೈದ ಜುಮ್ನಲಾಲ್ ಬಜಾಜ್ ರಾಷ್ಟ್ರ ಪ್ರಶಸ್ತಿ ವಿಜೇತ ರೋಣ ತಾಲ್ಲೂಕಿನ ನಾಗರಾಳ ಗ್ರಾಮದ ಪ್ರಗತಿ ಪರ ರೈತ ಅಯ್ಯಪ್ಪ ಮಸಗಿ ಅವರೇ ತಮ್ಮ ವೀರಾಪೂರ ಗ್ರಾಮದ 6 ಎಕರೆ ಜಮೀನಿನಲ್ಲಿ ಬರ ಸಹಿಷ್ಣುತೆಯ ಪ್ರಮುಖ ಬೆಳೆಯಾದ `ಕೊರಲೆ~ಯನ್ನು ಸಮೃದ್ಧವಾಗಿ ಬೆಳೆದು ಬರದ ನಡುವೆಯೂ ಬೆಳೆಯನ್ನು ಬೆಳೆಯಬಹುದು ಎಂಬುದನ್ನು ಸಾಬೀತು ಪಡಿಸಿದ್ದಾರೆ.ಬೀಜ ಚಲ್ಲಿದರೆ ಸಾಕು:
ನೀರಾವರಿ ರಹಿತ ಬೇಸಾಯದಲ್ಲಿ ಕಾಡು ಆಧಾರಿತ ಕೃಷಿ ಮತ್ತು ಬರಗಾದಲ್ಲಿಯೂ

ಅನ್ನ ನೀಡುವ ಬೆಳೆ ಎಂದೇ ಕರೆಯಲ್ಪಡುವ `ಕೊರಲೆ~ ಯನ್ನು  ರಾಜ್ಯದ ತುಮಕೂರು, ಚಿತ್ರದುರ್ಗ ಭಾಗಗಳಲ್ಲಿ ವ್ಯಾಪಕವಾಗಿ ಬೆಳೆಯ ಲಾಗುತ್ತದೆ. ಆದರೆ, ಈ ಭಾಗದ ಕೃಷಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ `ಕೊರಲೆ~ ಯನ್ನು ಬೆಳೆದು ಕುಸಿದು ಬಿದ್ದಿದ್ದ ನೇಗಿಲಯೋಗಿಯ ಆತ್ಮ ವಿಶ್ವಾಸವನ್ನು ಇಮ್ಮಡಿಗೊಳಿಸಿದ್ದಾರೆ.ಕಳೆ ನಿರ್ವಹಣೆ, ಕೀಟ ಭಾದೆ, ರೋಗಗಳ ಹಾವಳಿ ಇಲ್ಲದಿರುವ ಕೊರಲೆಗೆ ಖರ್ಚಿನ ಮಾತೇ ಇಲ್ಲ. ಒಟ್ಟು 2.5 ತಿಂಗಳ ಬೆಳೆ ಇದಾಗಿದೆ. ಫಲ ವತ್ತಾದ ಭೂಮಿ ಇದ್ದರೆ ಎಕರೆಗೆ 6 ಕ್ವಿಂಟಲ್ ಬೆಳೆಯಬಹುದು. ಕೊರಲೆ ಅಕ್ಕಿಗೆ ಮಾರುಕಟ್ಟೆಯಲ್ಲಿ ಕೆಜಿಗೆ 40 ರಿಂದ 70 ರೂ. ಬೆಲೆ ಇದೆ. ಒಂದು ಕಾಲದಲ್ಲಿ ಬಡವರ ಪಾಲಿನ ಬಂಗಾರ ದಂತಿದ್ದ ಕೊರಲೆ ಇಂದು ಬಡವರಿಗೆ ನಿಲುಕದ ಮಟ್ಟದ ಎತ್ತರಕ್ಕೆ ಬೆಳೆದು `ಶ್ರೀಮಂತ~ ಬೆಳೆಯಾಗಿ ಮೆರೆಯುತ್ತಿದೆ.ಕೊರಲೆಯನ್ನು ಮುಂಗಾರು, ಹಿಂಗಾರು ಎರಡು ಅವಧಿಯಲ್ಲಿಯೂ ಬೆಳೆಯಬಹುದು. ಕೊರಲೆ ಮೇವು ಜಾನುವಾರುಗಳ ಪಾಲಿನ ಹೊಳಿಗೆಯೇ ಸರಿ.ಕ್ಷೇತ್ರೋತ್ಸವ ಇಂದು: ಇದೇ 3ರ ಬುಧವಾರ ಬೆಳಗ್ಗೆ 11 ಗಂಟೆಗೆ ಸಮೀಪದ ವೀರಾಪುರ ಗ್ರಾಮದ ಹೊರವಲಯದಲ್ಲಿ ಜಮೀನಿನಲ್ಲಿ ಕೊರಲೆ ಕ್ಷೇತ್ರೋತ್ಸವ ಕಾರ್ಯಕ್ರಮ ಜರುಗಲಿದೆ.ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ರೈತ ಮುಖಂಡ ಕೂಡ್ಲೆಪ್ಪ ಗುಡಿಮನಿ ಅಧ್ಯಕ್ಷತೆ ವಹಿಸುವರು. ಸಂಪನ್ಮೂಲ ವ್ಯಕ್ತಿಗಳಾಗಿ ತುಮಕೂರ ಧಾನ್ಯ ಸಂಸ್ಥೆಯ ನಿರ್ದೇಶಕ ಮಲ್ಲಿಕಾರ್ಜುನ ಹೊಸಪಾಳ್ಯ, ಬೆಂಗಳೂರ ಸಹಜ ಸಮೃದ್ಧಿ ನಿರ್ದೇಶಕ ಜಿ.ಕೃಷ್ಣಪ್ರಸಾದ ಆಗಮಿಸಲಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry