ಗುರುವಾರ , ನವೆಂಬರ್ 14, 2019
23 °C

ಬರದ ನಾಡಲ್ಲಿ ಜಾತ್ರೆ ವೈಭವ

Published:
Updated:

ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲ್ಲೂಕಿನ ಗಡಿಭಾಗ `ಸಿರಿಗೇರಿ' ಗ್ರಾಮದಲ್ಲೆಗ ಜಾತ್ರಾ ಸಂಭ್ರಮ. ನಾಗನಾಥೇಶ್ವರ ಜಾತ್ರಾ ಮಹೋತ್ಸವ ನಡೆದಿರುವ ಬೆನ್ನಲ್ಲೇ ಈಗ ರಾಮನವಮಿಯಂದು ಸಿರಿಗೇರೆಮ್ಮ ಜಾತ್ರೆಯ ವೈಭವ.ತುಂಗಭದ್ರಾ ನದಿ ಅಂಚಿನಿಂದ ಕೇವಲ 7 ಕಿ.ಮೀ. ಅಂತರದಲ್ಲಿದೆ ಈ ಗ್ರಾಮ. ನಾಗನಾಥೇಶ್ವರ ಸಿರಿಗೇರಿ ಗ್ರಾಮದ ಆರಾಧ್ಯ ದೈವ. ಈ ದೇವಾಲಯಕ್ಕೆ ಕರ್ನಾಟಕದಾದ್ಯಂತ ಅಷ್ಟೇ ಅಲ್ಲದೆ ನೆರೆಯ ಆಂಧ್ರ, ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳಿಂದ ಭಕ್ತಾದಿಗಳು ಬರುತ್ತಾರೆ. ಭಕ್ತಾದಿಗಳಿಗೆ ವಸತಿ ವ್ಯವಸ್ಥೆ ಕೂಡ ಇದೆ. ದೇವಾಲಯದ ಆವರಣದಲ್ಲಿ ಕಲ್ಯಾಣ ಮಂಟಪವಿದೆ.ಜಿಲ್ಲಾ ಕೇಂದ್ರವಾದ ಬಳ್ಳಾರಿಯಿಂದ 40 ಕಿ.ಮೀ, ತಾಲ್ಲೂಕು ಕೇಂದ್ರವಾದ ಸಿರುಗುಪ್ಪದಿಂದ 26 ಕಿ.ಮೀ. ಅಂತರದಲ್ಲಿ ಸಿಗುತ್ತದೆ ಈ ಗ್ರಾಮ. ತುಂಗಭದ್ರಾ ನದಿ ಅಂಚಿನಲ್ಲಿ ಇದ್ದರೂ ನೀರಿಗೆ ಮಾತ್ರ ಎಂದಿಗೂ ಹಾಹಾಕಾರ. `ಅಂಗೈಲಿ ಬೆಣ್ಣೆ ಇದ್ದರೂ, ತುಪ್ಪ ಮಾಡಿಕೊಳ್ಳಲಾಗದ ಪರಿಸ್ಥಿತಿ ಸಿರಿಗೇರಿ ಗ್ರಾಮಸ್ಥರದು.ತುಂಗಭದ್ರಾ ನದಿಯ ನೀರನ್ನು ನೂರಾರು ಕಿ.ಮೀ. ಅಂತರದಲ್ಲಿರುವ ಖಾಸಗಿ ಕಾರ್ಖಾನೆಗಳು, ಕೈಗಾರಿಕೆಗಳು ಬಳಸಿಕೊಳ್ಳುತ್ತಿದ್ದರೂ `ಸಿರಿಗೇರಿ' ಗ್ರಾಮಸ್ಥರಿಗೆ ನೀರಿನ ಭಾಗ್ಯವಿಲ್ಲ. ಕೇವಲ ಹೆಸರಲ್ಲಿ `ಸಿರಿ' ಇದೆಯೇ ಹೊರತೂ ಗ್ರಾಮಕ್ಕೆ ಯಾವುದೇ ರೀತಿಯ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಪೂರೈಸಲು ಸಾಧ್ಯವಾಗಿಲ್ಲ. ಇವೆಲ್ಲ ನೋವಿನ ಮಧ್ಯೆಯೂ ಜನರು ಜಾತ್ರಾ ಉತ್ಸವಕ್ಕೆ ಏನೂ ಕಮ್ಮಿ ಮಾಡಿಲ್ಲ.

ಪ್ರತಿಕ್ರಿಯಿಸಿ (+)