ಬರದ ನಾಡಲ್ಲಿ ಬಗೆಹರಿಯದ ನೀರಿನ ಸಮಸ್ಯೆ

7

ಬರದ ನಾಡಲ್ಲಿ ಬಗೆಹರಿಯದ ನೀರಿನ ಸಮಸ್ಯೆ

Published:
Updated:

ಚಿತ್ರದುರ್ಗ: ನಗರದಲ್ಲಿ ಕುಡಿಯುವ ನೀರಿಗೆ ಮತ್ತೆ ಹಾಹಾಕಾರ ಉಂಟಾಗುತ್ತಿದೆ.ಶಾಂತಿಸಾಗರದಿಂದ ಬರುವ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾದ್ದರಿಂದ ಸಾರ್ವಜನಿಕರು ಪರದಾಡುವ ಸ್ಥಿತಿ ಉಂಟಾಗಿದೆ. ಕಳೆದ ಒಂದು ವಾರದಿಂದ ಈ ಸಮಸ್ಯೆ ಬಿಗಡಾಯಿಸಿದೆ. ಇನ್ನೂ ಕೆಲವು ಬಡಾವಣೆಗಳಲ್ಲಿ  15 ದಿನಗಳಿಂದ ನೀರು ಪೂರೈಕೆಯಾಗಿಲ್ಲ.ನಾಗರಿಕರು ಬೈಕ್, ಬೈಸಿಕಲ್, ಎತ್ತಿನಗಾಡಿ ಹಾಗೂ ಆಟೋರಿಕ್ಷಾಗಳಲ್ಲಿ ತಮ್ಮ ಕೆಲಸಕಾರ್ಯಗಳನ್ನು ಕೈ ಬಿಟ್ಟು ಕುಡಿಯುವ ನೀರು ದೊರೆಯುವ ಸ್ಥಳಗಳಿಗೆ ತೆರಳಿ ಒಂದೆರಡು ಬಿಂದಿಗೆಗಾಗಿ ಗಂಟೆಗಳ ಕಾಲ ಕಾದು ನಿಲ್ಲುವ ಪರಿಸ್ಥಿತಿ ಸಾಮಾನ್ಯವಾಗಿದೆ.ಈ ಬಗ್ಗೆ ನಗರಸಭೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕುಡಿಯುವ ನೀರಿಗಾಗಿ ಕೆಲವೆಡೆ ಪ್ರತಿಭಟನೆಗಳು ಕೂಡ ನಡೆಯುತ್ತಿವೆ. ಕುಡಿಯುವ ನೀರು ಪೂರೈಕೆಯಲ್ಲೂ ಸಹ ಜಿಲ್ಲಾಡಳಿತ ಹಾಗೂ ನಗರಸಭೆ ಕ್ರಮ ಕೈಗೊಳ್ಳದಿರುವ ಬಗ್ಗೆ ಹಿಡಿಶಾಪ ಹಾಕುತ್ತಿದ್ದಾರೆ.ಸಹಕರಿಸದ ಜಿಲ್ಲಾಡಳಿತ

ಶಾಂತಿಸಾಗರದಿಂದ ನೀರು ಪೂರೈಸುವ ನಾಲ್ಕು ವಿದ್ಯುತ್ ಪರಿವರ್ತಕಗಳು ಸುಟ್ಟು ಹಾಳಾಗಿವೆ. ಇವುಗಳನ್ನು ದುರಸ್ತಿ ಮಾಡಿಸಲು ಹಣ ಬೇಕು. ಇದಕ್ಕೆ ಸಂಬಂಧಿಸಿದ ಹಣ ಜಿಲ್ಲಾಡಳಿತದ ಬಳಿಯಿದೆ. ಆದರೆ, ಯೋಜನಾ ನಿರ್ದೇಶಕರು ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ನಗರಸಭೆ ಅಧ್ಯಕ್ಷೆ ಸುನಿತಾ ಮಲ್ಲಿಕಾರ್ಜುನ್ ಕಿಡಿಕಾರಿದರು.ನಗರದಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿರುವ ಕುರಿತು ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿ, ನಗರದ ವಿವಿಧ ಬಡಾವಣೆಗಳಿಗೆ ಶಾಂತಿಸಾಗರದಿಂದ ಕುಡಿಯುವ ನೀರು ಪೂರೈಸುವಲ್ಲಿ ಪದೇ ಪದೇ ವ್ಯತ್ಯಯವಾಗುತ್ತಿದೆ. ಇದನ್ನು ಸರಿಪಡಿಸುವಲ್ಲಿ ಜಿಲ್ಲಾಧಿಕಾರಿ ಕಚೇರಿಯ ಯೋಜನಾ ನಿರ್ದೇಶಕ ಚಂದ್ರಶೇಖರ್ ನಗರಸಭೆ ಜತೆ ಸಹಕರಿಸುತ್ತಿಲ್ಲ ಎಂದು ವರು ಆರೋಪಿಸಿದರು.ನೀರು ಪೂರೈಕೆಯಲ್ಲಿ ಉಂಟಾಗುತ್ತಿರುವ ವ್ಯತ್ಯಯ ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಇದಕ್ಕಾಗಿ ಕಾರ್ಯನಿರ್ವಾಹಕ ಎಂಜಿನಿಯರ್ ವಿಜಯಭಾಸ್ಕರ್ ಜತೆ ಚರ್ಚಿಸಲಾಗಿದೆ. ಪ್ರಸ್ತುತ ರೂ1 ಕೋಟಿ ಅಗತ್ಯವಿದ್ದು, ಕಳೆದ ಆರು ತಿಂಗಳಿನಿಂದ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡುತ್ತಿದ್ದರೂ ಸಹ ಯೋಜನಾ ನಿರ್ದೇಶಕ ಚಂದ್ರಶೇಖರ್ ಇಂದು- ನಾಳೆ ಎಂದು ಸುಮ್ಮನೇ ಸತಾಯಿಸುತ್ತಿದ್ದಾರೆ ಎಂದು ದೂರಿದರು.  2011-12ನೇ ಸಾಲಿನ ರೂ83, ಲಕ್ಷ 2012-13ನೇ ಸಾಲಿನ ರೂ1.86 ಕೋಟಿ ಬಾಕಿ ಉಳಿದಿದ್ದು, ಸಂಬಂಧಿಸಿದ ರೂ73 ಲಕ್ಷ ಅನುದಾನ ಜಿಲ್ಲಾಡಳಿತದ ಬಳಿಯಿದ್ದು, ಸಕಾಲದಲ್ಲಿ ಅನುಮೋದನೆ ನೀಡಿ ಹಣ ಬಿಡುಗಡೆ ಮಾಡಿದಲ್ಲಿ ನಗರಸಭೆ ವತಿಯಿಂದ ಅಗತ್ಯ ಕಾಮಗಾರಿ ಕೈಗೊಳ್ಳಬಹುದು. ಸರ್ಕಾರದಿಂದ ಬಂದ ಹಣವನ್ನೆಲ್ಲಾ ತಮ್ಮ ಬಳಿ ಇಟ್ಟುಕೊಂಡರೆ ನಾವು ಹೇಗೆ ಕೆಲಸ ಮಾಡಬೇಕೆಂದು ಪ್ರಶ್ನಿಸಿದರು. ನಗರಸಭೆ ವತಿಯಿಂದ ವಿವಿಧ ಪ್ರದೇಶಗಳಲ್ಲಿ 8 ಉಚಿತ ಆರೋಗ್ಯ ಶಿಬಿರ ನಡೆಸಲು ಉದ್ದೇಶಿಸಲಾಗಿದೆ. ಈ ಕುರಿತು ಅವರು ಅನುಮೋದನೆ ನೀಡಿಲ್ಲ. ಪರಿಶಿಷ್ಟ ಜಾತಿ, ಪಂಗಡದ 200 ಮಂದಿ ವಿಧವೆಯರಿಗೆ ಹಾಗೂ ಸಾಮಾನ್ಯ ವರ್ಗದ 200 ಮಂದಿ ವಿಧವೆಯರಿಗೆ ಸೌಕರ್ಯ ನೀಡಲು ಉದ್ದೇಶಿಸಿದ್ದು, ಅದಕ್ಕೂ ಸರಿಯಾಗಿ ಸಹಕಾರ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ನೀರು ಪೂರೈಕೆಯಾಗದ ನಗರದ ಬಡಾವಣೆಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಇದಕ್ಕಾಗಿ ನಾಲ್ಕು ಹೊಸ ಟ್ಯಾಂಕರ್‌ಗಳ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ, ನಗರಸಭೆಯ ಎರಡು ಟ್ಯಾಂಕರ್‌ಗಳು ನೀರು ಪೂರೈಕೆ ಮಾಡುತ್ತಿವೆ. ಅಗತ್ಯವಿರುವವರು ನಗರಸಭೆ ದೂರವಾಣಿ ಸಂಖ್ಯೆ: 08194-222401ಸಂಪರ್ಕಿಸಿದರೆ ಟ್ಯಾಂಕರ್ ಕಳುಹಿಸಲಾಗುವುದು ಎಂದು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry