ಬರದ ನಾಡಿಗೆ ಬಂದ ವರದಾ

7

ಬರದ ನಾಡಿಗೆ ಬಂದ ವರದಾ

Published:
Updated:

ಸುಮಾರು ವರ್ಷಗಳಿಂದ ಅನಾವೃಷ್ಟಿಗೆ ಸಿಲುಕಿ ನರಳುತ್ತಿರುವ ಶಿಗ್ಗಾವಿ ತಾಲ್ಲೂಕು ಶಿಗ್ಗಾವಿ ಏತ ನೀರಾವರಿ ಯೋಜನೆಯಿಂದ ರೈತರ ಮುಖದಲ್ಲಿ  ಮಂದಹಾಸ ಕಾಣುವಂತಾಗಿದೆ. ಬರದ ನಾಡಿಗೆ ಬಂದ ವರದಾಳನ್ನು ರೈತರು ಹರ್ಷದಿಂದ ಬರಮಾಡಿಕೊಂಡಿದ್ದಾರೆ.



ರಾಜ್ಯದಲ್ಲಿ ಅತಿ ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ ಶಿಗ್ಗಾವಿಯ ಸವಣೂರು ತಾಲ್ಲೂಕು.  ಈ ಕ್ಷೇತ್ರದಲ್ಲಿ ಬಹುತೇಕ ಕೃಷಿ ಭೂಮಿ ಮಳೆಯಾಶ್ರಿತ ವ್ಯವಸಾಯ ಹೊಂದಿದೆ. ಹೀಗಾಗಿ ಸರ್ಕಾರ ರೈತರ ಶಿಗ್ಗಾವಿ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸುವ ಮೂಲಕ ಸುಮಾರು 238 ಕೋಟಿ ರೂಪಾಯಿ ವೆಚ್ಚದಲ್ಲಿ ಸುಮಾರು 24ಸಾವಿರ ಎಕರೆ ಭೂಮಿಗೆ ನೀರಾವರಿ ಕೈಗೆತ್ತಿಕೊಂಡಿದೆ.



ರೈತರ ಭೂಮಿಗೆ ಸ್ಪ್ರಿಂಕ್ಲರ್ ಅಳವಡಿಸಿ ತುಂತುರು ನೀರಾವರಿ ಯೋಜನೆ ಹಮ್ಮಿಕೊಂಡಿರುವುದು ದೇಶದಲ್ಲಿ ಪ್ರಥಮ ಯೋಜನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.



ಹಲವು ವರ್ಷ ಕಾಲ ಅತಿವೃಷ್ಟಿ, ಅನಾವೃಷ್ಟಿಗೆ ಸುಟ್ಟು ಸುಣ್ಣವಾಗಿದ್ದ ಶಿಗ್ಗಾವಿ- ಸವಣೂರ ರೈತರ ವ್ಯವಸಾಯ ವ್ಯವಸ್ಥೆಯಲ್ಲಿ ಬದಲಾವಣೆ, ಆರ್ಥಿಕ ವ್ಯವಸ್ಥೆ ವೃದ್ಧಿಗೊಳಿಸುವ ಮಹತ್ತರ ಗುರಿಯೊಂದಿಗೆ ಇಡೀ ಕ್ಷೇತ್ರವನ್ನು ನೀರಾವರಿ ಯೋಜನೆಗೆ ಅನುಷ್ಠಾನಗೊಳಿಸುವ ಮೂಲಕ `ಭೂ ತಾಯಿಗೆ ಹಸಿರು ಸೀರೆ~ ಉಡಿಸುವ ಕನಸು ಕಂಡ ಜಲಸಂಪನ್ಮೂಲ ಸಚಿವ, ಕ್ಷೇತ್ರದ ಶಾಸಕ ಬಸವರಾಜ ಬೊಮ್ಮಾಯಿ ಕನಸು ಕೇವಲ ಮೂರು ವರ್ಷದಲ್ಲಿ ನನಸಾಗಿದೆ.



ಈ ಯೋಜನೆಯಿಂದ ರೈತರ ಹೊಲಗದ್ದೆಗಳಿಗೆ ನೀರಾವರಿ ಜೊತೆಗೆ ಶಿಗ್ಗಾವಿ, ಸವಣೂರ ಹಾಗೂ ಬಂಕಾಪುರ ಪಟ್ಟಣಕ್ಕೆ ಕುಡಿಯುವ ನೀರಿನ ಸೌಲಭ್ಯ ಒದಗಿಸುವ ಉದ್ದೇಶ ಇದೆ.



ಹೀಗಾಗಿ ಪಟ್ಟಣದ ನಾಗನೂರ ಕೆರೆಗೆ ನೀರು ಬಿಡುವ ಮೂಲಕ ಪಟ್ಟಣದಲ್ಲಿರುವ ಕುಡಿಯುವ ನೀರಿನ ಅಭಾವವನ್ನೂ ನೀಗುವ ಮಹತ್ತರ ಯೋಜನೆ ಇದಾಗಿದೆ. ಅದಕ್ಕಾಗಿ 5 ಸಣ್ಣ ನೀರಾವರಿ ಕೆರೆಗಳಿಗೆ ನೀರು ತುಂಬಿಸುವ ಮತ್ತು ಆರು ಬಾಂದಾರಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಅದರಿಂದ ಸುಮಾರು 9900ಹೆಕ್ಟೇರ್ ಪ್ರದೇಶಕ್ಕೆ ಸಂಪೂರ್ಣ ನೀರಾವರಿ ಸೌಲಭ್ಯ ಒದಗಿಸಲಾಗುತ್ತಿದೆ.



ಈ ಯೋಜನೆಯಲ್ಲಿ ಹರವಿ, ಅಲ್ಲಿಪುರ, ಮಾರನಬೀಡು, ಕುಂದೂರು, ಬಂಕಾಪುರ ಹಾಗೂ ಶಿಗ್ಗಾವಿಯಲ್ಲಿ ಉಪಕಾಲುವೆಗಳನ್ನು ನಿರ್ಮಿಸಲಾಗಿದೆ.



ಶಿಗ್ಗಾವಿ, ಸವಣೂರು ಹಾಗೂ ಹಾನಗಲ್ ತಾಲ್ಲೂಕಿನ ಬಹುತೇಕ ಗ್ರಾಮಗಳು ಈ ಯೋಜನೆಯ ಲಾಭ ಪಡೆಯಲಿವೆ. ಅದರಿಂದ ರೈತನ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ ಎಂದು ರೈತರಾದ ರಮೇಶ ಬೆಡಕಿ, ಪ್ರಕಾಶ ಕುಗೋಡಿ, ಶೇಕಣ್ಣ ಕುಂದೂರ, ಸಿದ್ದಲಿಂಗ ಕಲಿವಾಳ ಸೇರಿದಂತೆ ಅನೇಕ ರೈತರು ಆಶಯ ವ್ಯಕ್ತಪಡಿಸಿದರು.

 



 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry