ಶನಿವಾರ, ಮೇ 28, 2022
25 °C

ಬರದ ಭೀತಿಯಲ್ಲಿ ತಾಲ್ಲೂಕಿನ ರೈತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಗಿರಿ: ತಾಲ್ಲೂಕಿನಲ್ಲಿ ಮುಂಗಾರು ಮಳೆ ಬೀಳದೇ ಇರುವುದರಿಂದ ಮತ್ತೆ ಬರಗಾಲ ಬರುತ್ತದೆ ಎಂಬ ಭೀತಿಯಲ್ಲಿ ರೈತರು ಚಿಂತಾಕ್ರಾಂತರಾಗಿ ಮುಗಿಲನ್ನು ದಿಟ್ಟಿಸಿ ನೋಡುತ್ತಿದ್ದಾರೆ.ಕಳೆದ ತಿಂಗಳು ಎರಡು ಬಾರಿ ಮಳೆ ಬಿದ್ದದ್ದರಿಂದ ರೈತರು ಇನ್ನೇನೂ ಮುಂಗಾರು ಮಳೆ ಪ್ರಾರಂಭವಾಗುತ್ತದೆ ಎಂಬ ಖುಷಿಯಲ್ಲಿ ಇದ್ದರು. ಆದರೆ, ಮತ್ತೆ ಮಳೆ ಬೀಳದೇ ಈಗ ಮಳೆಗಾಗಿ ಮುಗಿಲು ನೋಡುವಂತಾಗಿದೆ.ಈಗಾಗಲೇ ರೈತರು ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯಕ್ಕಾಗಿ ರಸಗೊಬ್ಬರ, ಬೀಜಗಳನ್ನು ಸಾಲ, ಸೋಲ ಮಾಡಿ ಖರೀದಿಸಿಕೊಂಡು ಮನೆಗಳಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದಾರೆ. ಮುಂದೆ ಮಳೆ ಬಾರದೇ ಇದ್ದರೇ ಏನಪ್ಪಾ ಮಾಡುವುದು ಎಂಬ ಚಿಂತೆಯಲ್ಲಿ ಕಾಲಕಳೆಯುತ್ತಿದ್ದಾರೆ.ಕಳೆದ ವರ್ಷ ಮಳೆಗಾಲ ಕಡಿಮೆಯಾದರೂ ಈ ಸಮಯಕ್ಕೆ ಬಿತ್ತನೆ ಕಾರ್ಯ ಆರಂಭಗೊಂಡಿತ್ತು. ಆದರೆ, ಈ ಬಾರಿ ಬಿತ್ತನೆ ಕಾರ್ಯ ಮಾಡಲು ಮಳೆರಾಯ ಭೂಮಿಗೆ ಇಳಿಯಲು ಮೀನ-ಮೇಷ ಎಣಿಸುತ್ತಿದ್ದಾನೆ.

ತಾಲ್ಲೂಕಿನಲ್ಲಿ ಅಡಿಕೆ ಬಿಟ್ಟರೆ ಮೆಕ್ಕೆಜೋಳವನ್ನು ಹೆಚ್ಚು ಬೆಳೆಯಲಾಗುತ್ತದೆ. ಸುಮಾರು 30 ಸಾವಿರ ಎಕರೆಗಿಂತಲೂ ಹೆಚ್ಚು ಪ್ರದೇಶದಲ್ಲಿ ಮೆಕ್ಕೆಜೋಳವನ್ನು ಬೆಳೆಯಲಾಗುತ್ತದೆ.ಆದರೆ, ಮಳೆ ಬಾರದೇ ಇರುವುದರಿಂದ ರೈತರು ಚಿಂತೆಯಲ್ಲಿ ಮುಳುಗಿದ್ದಾರೆ. ಇನ್ನು ಕೆರೆಕಟ್ಟೆಗಳು ಸಂಪೂರ್ಣವಾಗಿ ನೀರಿಲ್ಲದೇ ಒಣಗಿ ನಿಂತಿವೆ. ಜಾನುವಾರುಗಳ ಮೇವಿಗೂ ಕೂಡಾ ತತ್ವಾರ ಉಂಟಾಗಿದೆ. ಹೀಗೆಯೇ ಇನ್ನು ಹದಿನೈದು ದಿನಗಳ ಕಾಲ ಮಳೆ ಬಾರದೇ ಇದ್ದರೆ ಸಂಪೂರ್ಣವಾಗಿ ತಾಲ್ಲೂಕಿನಲ್ಲಿ ಬರಗಾಲ ಉಂಟಾಗಲಿದೆ ಎಂದು ರೈತರು ಕಳವಳ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.