ಮಂಗಳವಾರ, ಡಿಸೆಂಬರ್ 10, 2019
26 °C

ಬರಪೀಡಿತ ಜಿಲ್ಲೆ: ಜಿ.ಪಂ.ನಿರ್ಣಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬರಪೀಡಿತ ಜಿಲ್ಲೆ: ಜಿ.ಪಂ.ನಿರ್ಣಯ

ಬಾಗಲಕೋಟೆ: `ಮುಂಗಾರು ಮಳೆಯಾಗದಿರುವುದರಿಂದ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು, ಜಿಲ್ಲೆಯನ್ನು ಬರಪೀಡಿತ ಎಂದು ಸರ್ಕಾರ ಘೋಷಿಸಬೇಕು' ಎಂದು ಬುಧವಾರ ನಡೆದ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು.ಬರ ಘೋಷಣೆ ಕುರಿತು ನಿರ್ಣಯ ಮಂಡಿಸಿದ ಜಿ.ಪಂ. ಸದಸ್ಯ ಬಸವಂತಪ್ಪ ಮೇಟಿ, `ಜಿಲ್ಲೆಯಲ್ಲಿ ಆಗಸ್ಟ್ ಅಂತ್ಯದ ವರೆಗೆ 305.7 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆ, 241.9 ಮಿ.ಮೀ. ಮಾತ್ರ ಮಳೆಯಾಗಿದೆ. ಜಿಲ್ಲೆಯ 94,100 ಹೆಕ್ಟೆರ್ ಖುಷ್ಕಿ ಜಮೀನಿನಲ್ಲಿ 77,120 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದ ಹೆಸರು, ಜೋಳ, ಸೋಯಾ, ಸೂರ್ಯಕಾಂತಿ, ಸಜ್ಜೆ ಮತ್ತಿತರರ ಬೆಳೆ ಬಿಸಿಲಿನ ತಾಪಕ್ಕೆ ಒಣಗಿದೆ' ಎಂದು ಸಭೆಯ ಗಮನಕ್ಕೆ ತಂದರು.`ನಾಲ್ಕು ವಾರ ಸತತವಾಗಿ ಮಳೆಯಾಗದಿದ್ದರೇ ಬರ ಘೋಷಿಸಬೇಕು ಎಂಬ ಸರ್ಕಾರದ ನಿಯಮಾವಳಿ ಇದೆ. ಆದರೆ, ಜಿಲ್ಲೆಯಲ್ಲಿ ಸತತ 10 ವಾರಗಳಿಂದ ಮಳೆಯಾಗಿಲ್ಲದ ಪರಿಣಾಮ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿದೆ. ಜಿಲ್ಲಾಡಳಿತ ತಕ್ಷಣ ಬರ ಘೋಷಣೆ ಮಾಡಬೇಕು, ರೈತರಿಗೆ ಬೆಳೆ ನಷ್ಠ ಪರಿಹಾರ ಒದಗಿಸಬೇಕು, ಸಾಲ ಮನ್ನಾಕ್ಕೆ ಕ್ರಮ ಕೈಗೊಳ್ಳಬೇಕು' ಎಂದು ಆಗ್ರಹಿಸಿದರು.`ಆಲಮಟ್ಟಿ ಮತ್ತು ಹಿಡಕಲ್ ಜಲಾಶಯದಿಂದ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ತ್ವರಿತವಾಗಿ ಆಗಬೇಕು, ಕೊಳವೆ ಬಾವಿಗಳನ್ನು ಪುನಶ್ಚೇತನಗೊಳಿಸಬೇಕು' ಎಂದು ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿಗಳ ಗಮನ ಸೆಳೆದರು.ವಿಮೆ ಅವೈಜ್ಞಾನಿಕ: ಬರ ನಿರ್ಣಯ ಕುರಿತು ಮಾತನಾಡಿದ ಜಿ.ಪಂ. ಸದಸ್ಯ ಡಾ.ಎಂ.ಜಿ.ಕಿತ್ತಲಿ, `ಬೆಳೆ ವಿಮೆ ಅವೈಜ್ಞಾನಿಕವಾಗಿದೆ. ರೈತರು ಕಟ್ಟಿದ ಪ್ರಿಮಿಯಂಗಿಂತ ಕಡಿಮೆ ಪ್ರಮಾಣದಲ್ಲಿ ವಿಮೆ ನೀಡಲಾಗುತ್ತಿದೆ. ಈ ಬಗ್ಗೆ ಸರ್ಕಾರ ಗಮನಹರಿಸಬೇಕು, ರೈತರಿಗೆ ಸೂಕ್ತ ಬೆಳೆ ವಿಮೆ ಲಭ್ಯವಾಗುವಂತೆ ಕ್ರಮಕೈಗೊಳ್ಳಬೇಕು' ಎಂದು ಒತ್ತಾಯಿಸಿದರು.ಮೇವು ಪೂರೈಸಿ: `ಬರದಿಂದ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗಿದೆ. ಸರ್ಕಾರ ಮೇವಿನ ವ್ಯವಸ್ಥೆ ಮಾಡಬೇಕು' ಎಂದು ಸದಸ್ಯ ಪಾಂಡು ಪೊಲೀಸ ಮನವಿ ಮಾಡಿದರು.ಕೊಳವೆ ಬಾವಿ ಆದೇಶ ರದ್ದುಗೊಳಿಸಿ: `ಬಾಗಲಕೋಟೆ ಮತ್ತು ಬಾದಾಮಿ ತಾಲ್ಲೂಕಿನಲ್ಲಿ ಹೊಸದಾಗಿ ಕೊಳವೆಬಾವಿ ಕೊರೆಯಿಸಲು ಜಿಲ್ಲಾಡಳಿತದಿಂದ ಕಡ್ಡಾಯವಾಗಿ ಅನುಮತಿ ಪಡೆದಯಬೇಕು ಎಂಬ ಸರ್ಕಾರದ ಹೊಸ ಆದೇಶದಿಂದ ಬರದಿಂದ ಕಂಗೆಟ್ಟಿರುವ ರೈತ ಸಮುದಾಯಕ್ಕೆ ತೊಂದರೆಯಾಗಲಿದ್ದು, ಈ ಆದೇಶವನ್ನು ಹಿಂಪಡೆಯಬೇಕು' ಎಂದು ಜಿ.ಪಂ.ಸದಸ್ಯ ಹೂವಪ್ಪ ರಾಠೋಡ ಒತ್ತಾಯಿಸಿದರು.ವಸತಿ ಯೋಜನೆ ಸ್ಥಗಿತ: `ಜಿಲ್ಲೆಯಲ್ಲಿ ಬಸವ ವಸತಿ ಯೋಜನೆ ಫಲಾನುಭವಿಗಳಿಗೆ ಹಂಚಿಕೆಯಾಗಿದ್ದ ಮನೆಗಳು ವಿವಿಧ ಹಂತದಲ್ಲಿ ನಿರ್ಮಾಣವಾಗುತ್ತಿವೆ. ಈ ನಡುವೆ ಸುಮಾರು 8 ಸಾವಿರ ಮನೆಗಳನ್ನು ರಾಜೀವ್‌ಗಾಂಧಿ ಹೌಸಿಂಗ್ ಬೋರ್ಡ್ ಅಧಿಕಾರಿಗಳು ಕಾರಣವಿಲ್ಲದೇ ತಡೆಹಿಡಿದಿದ್ದಾರೆ. ಇದರಿಂದ ಫಲಾನುಭವಿಗಳು ತೊಂದರೆಗೆ ಒಳಗಾಗಿದ್ದಾರೆ. ತಕ್ಷಣ ಮನೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕು. ಅನರ್ಹರಿದ್ದರೆ ಕ್ರಮಕೈಗೊಳ್ಳಿ ಆದರೆ, ಅರ್ಹರನ್ನು ಯೋಜನೆಯಿಂದ ಕೈಬಿಡಬೇಡಿ, ಅಗತ್ಯವಿದ್ದರೆ ಮತ್ತಷ್ಟು ಮನೆಗಳನ್ನು ನಿರ್ಮಿಸಿ' ಎಂದು ಜಿ.ಪಂ.ಸದಸ್ಯ ಹನುಮಂತ ನಿರಾಣಿ ಆಗ್ರಹಿಸಿದರು.ಸರ್ಕಾರಕ್ಕೆ ವರದಿ: ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಜಿಲ್ಲಾಧಿಕಾರಿ ಮನೋಜ್ ಜೈನ್, `ಬರದಿಂದ ಆಗಿರುವ ಬೆಳೆ ನಷ್ಠದ ಕುರಿತು ಶೀಘ್ರದಲ್ಲೇ ಸರ್ಕಾರಕ್ಕೆ ವರದಿ ಕಳುಹಿಸಲಾಗುವುದು, ಬಳಿಕ ಸರ್ಕಾರ ಬರ ಘೋಷಣೆ ಮಾಡಲಿದೆ' ಎಂದರು.`ಬಾಗಲಕೋಟೆ, ಬಾದಾಮಿ ತಾಲ್ಲೂಕು ವ್ಯಾಪ್ತಿಯಲ್ಲಿ ಅಂತರ್ಜಲ ಕುಸಿತವಾಗಿರುವ ಕಾರಣ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ರಾಜ್ಯ ಸರ್ಕಾರ ಕೊಳವೆಬಾವಿ ಕೊರೆಸುವ ಮುನ್ನ ಜಿಲ್ಲಾಡಳಿತದಿಂದ ಕಡ್ಡಾಯವಾಗಿ ಅನುಮತಿ ಪಡೆಯುವಂತೆ ಸೂಚಿಸಿದೆ. ಈ ಬಗ್ಗೆ ಏನೂ ಮಾಡಲು ಸಾಧ್ಯವಿಲ್ಲ' ಎಂದರು.`ಜಿ.ಪಂ. ತೆರವಾಗಿರುವ ಎರಡು ಸ್ಥಾನಗಳಿಗೆ ಚುನಾವಣೆ ನಡೆಸುವ ಸಂಬಂಧ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಈ ಬಗ್ಗೆ ಶೀಘ್ರದಲ್ಲೇ ಚುನಾವಣೆ ಘೋಷಣೆ ಆಗುವ ಸಾಧ್ಯತೆ ಇದೆ' ಎಂದು ತಿಳಿಸಿದರು.`ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಬಗ್ಗೆ ಸದಸ್ಯರು ಬೃಹತ್ ನೀರಾವರಿ ಸಚಿವರಿಗೆ ಮನವಿ ಮಾಡುವಂತೆ' ಜೈನ್ ಸಲಹೆ ನೀಡಿದರು.ಕಳಪೆ ಕಾಮಗಾರಿ: `ಮುಧೋಳ ತಾಲ್ಲೂಕಿನಲ್ಲಿ ವಿವಿಧ ವಸತಿ ನಿಲಯಗಳ ದುರಸ್ಥಿ ಮತ್ತು ಬೆಳಗಲಿ-ಮಿರ್ಜಿ ರಸ್ತೆ ನಿರ್ಮಾಣದಲ್ಲಿ ಜಿ.ಪಂ.ಎಂಜಿನಿಯರ್ ವಿಭಾಗದಿಂದ ಲೋಪವಾಗಿದೆ, ಈ ಬಗ್ಗೆ ಸಂಬಂಧ ಪಟ್ಟ ಎಂಜಿನಿಯರ್ ಮತ್ತು ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಳ್ಳಬೇಕು' ಎಂದು ಜಿ.ಪಂ.ಸದಸ್ಯ ಮಹಾಂತೇಶ ಹಿಟ್ಟಿನಮಠ ಆಗ್ರಹಿಸಿದರು.ವಿಷಯಕ್ಕೆ ಸಂಬಂಧಿಸಿದಂತೆ ಹಿಟ್ಟಿನಮಠ ಮತ್ತು ಜಿ.ಪಂ.ಕಾರ್ಯನಿರ್ವಾಹಣ ಎಂಜಿನಿಯರ್ ಮನೋಹರ ಮಂದೋಲಿ ನಡುವೆ ಬಿಸಿಬಿಸಿ ಚರ್ಚೆ ನಡೆಯಿತು.ಕ್ರಮದ ಭರವಸೆ: `ರಸ್ತೆ ನಿರ್ಮಾಣ ಮತ್ತು ವಸತಿ ನಿಲಯ ದುರಸ್ಥಿಯಲ್ಲಿ ಆಗಿರುವ ಕಾಮಗಾರಿ ಲೋಪದ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವುದಾಗಿ' ಜಿ.ಪಂ.ಸಿಇಒ ಎಸ್.ಜಿ.ಪಾಟೀಲ ತಿಳಿಸಿದರು.ಜಿಲ್ಲಾಧಿಕಾರಿ ಮನೋಜ್ ಜೈನ್ ಅವರನ್ನು ಜಿ.ಪಂ. ಅಧ್ಯಕ್ಷೆ ಶಾಂತವ್ವ ಭೂಷಣ್ಣನವರ, ಉಪಾಧ್ಯಕ್ಷ ಕೃಷ್ಣಾ ಓಗೆಣ್ಣನವರ ಸನ್ಮಾನಿಸಿದರು.

ಪ್ರತಿಕ್ರಿಯಿಸಿ (+)