ಬರಪೀಡಿತ ತಾಲ್ಲೂಕು ಘೋಷಣೆಗೆ ಆಗ್ರಹ

7
ಹಿರಿಯೂರು: ತಾಲ್ಲೂಕು ಪಂಚಾಯ್ತಿ ಪ್ರಗತಿ ಪರಿಶೀಲನಾ ಸಭೆ

ಬರಪೀಡಿತ ತಾಲ್ಲೂಕು ಘೋಷಣೆಗೆ ಆಗ್ರಹ

Published:
Updated:

ಹಿರಿಯೂರು: ತಾಲ್ಲೂಕಿನಲ್ಲಿ ಪ್ರಸ್ತುತ ಹಂಗಾಮಿನಲ್ಲಿ ಕೇವಲ ಶೇ. 10 ರಷ್ಟು ಮಾತ್ರ ಬಿತ್ತನೆಯಾಗಿರುವ ಕಾರಣ ಹಿರಿಯೂರು ತಾಲ್ಲೂಕನ್ನು ಸರ್ಕಾರ ಬರಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಬೇಕು ಎಂದು ನಗರದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸದಸ್ಯರು ಒಮ್ಮತದಿಂದ ಒತ್ತಾಯಿಸಿದರು.ಜೂನ್-ಜುಲೈ ತಿಂಗಳಲ್ಲಿ ವಾಡಿಕೆ ಮಳೆಗಿಂತ ಶೇ. 50 ರಷ್ಟು ಕಡಿಮೆಯಾಗಿದೆ. ಸೆಪ್ಟೆಂಬರ್ ಮೊದಲ ವಾರ ಕೆಲವು ಕಡೆ ಉತ್ತಮ ಮಳೆಯಾಗಿದೆ. ಆದರೆ ಈಗ ಶೇಂಗಾ ಬಿತ್ತನೆ ಮಾಡಿದರೆ ಇಳುವರಿ ಕಡಿಮೆಯಾಗುತ್ತದೆ. ಬಿತ್ತನೆ ಕ್ಷೇತ್ರದಲ್ಲಿ ಕಡಿಮೆಯಾಗಿರುವುದು, ಮಣ್ಣಿನಲ್ಲಿ ತೇವಾಂಶದ ಸೂಚ್ಯಂಕ ಶೇ. 25 ರಷ್ಟಿರುವುದು ಹಾಗೂ ಸೆಟಲೈಟ್ ಮೂಲಕ ಬೆಳೆ ನಷ್ಟ ಸಮೀಕ್ಷೆ ನಡೆಸುವ ಮೂಲಕ ಬರಗಾಲ ಪ್ರದೇಶ ಎಂಬ ತೀರ್ಮಾನಕ್ಕೆ ಬರಲಾಗಿದೆ ಎಂದು ಕೃಷಿ ಆಧಿಕಾರಿ ತಿಳಿಸಿದರು.ಬರಗಾಲದ ಪ್ರಯುಕ್ತ ಕೃಷಿ ಸಾಲ ಮನ್ನಾ ಮಾಡಬೇಕು. ಭೂಕಂದಾಯ ವಸೂಲಿ ಮಾಡಬಾರದು ಎಂದು ಸದಸ್ಯರು ಆಗ್ರಹಿಸಿದರು.ಮಹಾರಾಷ್ಟ್ರದಲ್ಲಿ ದಾಳಿಂಬೆ ಬೆಳೆ ಪುನಶ್ಚೇತನಕ್ಕೆ ಸಹಾಯಧನ ನೀಡಲಾಗುತ್ತಿದೆ. ನಮ್ಮಲ್ಲಿ ಬ್ಯಾಕ್ಟೀರಿಯಲ್ ಬ್ರೈಟ್ ರೋಗದಿಂದ ಬೆಳೆಗಾರರು ತತ್ತರಿಸಿ ಹೋಗಿದ್ದು, ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ತೋಟಗಾರಿಕೆ ಬೆಳೆಗಳಿಗೆ ರೈತರು ಪಡೆದಿರುವ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಕೃಷಿಕ ಸಮಾಜದ ಅಧ್ಯಕ್ಷ ಎಚ್.ಆರ್. ತಿಮ್ಮಯ್ಯ ಒತ್ತಾಯಿಸಿದರು.ಎರಡೂವರೆ ಎಕರೆ ವಿಸ್ತೀರ್ಣದಲ್ಲಿರುವ ಹುಚ್ಚವ್ವನಹಳ್ಳಿ ಕೃಷಿ ಹೊಂಡವನ್ನು ಅಭಿವೃದ್ಧಿ ಪಡಿಸಬೇಕು. ಪರಿಶಿಷ್ಟ ಜಾತಿ-ವರ್ಗ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ಹಣ ಪಾವತಿಸುವ ವ್ಯವಸ್ಥೆಯನ್ನು ತುರ್ತು ಜಾರಿಗೆ ತರಬೇಕು. ಹಾಸ್ಟೆಲ್‌ಗಳಲ್ಲಿ ಕಳ್ಳತನ ಹೆಚ್ಚಾಗುತ್ತಿದ್ದು, ವಾರ್ಡನ್‌ಗಳು ಎಚ್ಚರವಹಿಸಬೇಕು. ಮಕ್ಕಳಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಸದಸ್ಯರು ಆಗ್ರಹಿಸಿದರು.ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ಬೆಸ್ಕಾಂ ಇಲಾಖೆ ವಿಫಲವಾಗಿದೆ. ಅನಧಿಕೃತ ಸಂಪರ್ಕಗಳು ಹೆಚ್ಚುತ್ತಿವೆ. ಇವನ್ನು ಸಕ್ರಮಗೊಳಿಸಬೇಕು. ವಾಣಿ ವಿಲಾಸ ಜಲಾಶಯದ ಅಭಿವೃದ್ಧಿಗೆ 5 ಕೋಟಿ ರೂ, ಬಿಡುಗಡೆಯಾಗಿದ್ದು, 23 ಕೋಟಿ ರೂ ಬಿಡುಗಡೆ ಮಾಡುವಂತೆ ಒತ್ತಾಯಿಸಲು ಸಂಸದರ ಜತೆ ದೆಹಲಿಗೆ ನಿಯೋಗ ಹೋಗಲಾಗುವುದು ಎಂದು ತಿಮ್ಮಯ್ಯ ತಿಳಿಸಿದರು.ಅತಿಥಿ ಶಿಕ್ಷಕರನ್ನು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಬೇಕು. ತುರ್ತು ಅಗತ್ಯಕ್ಕೆ ನಿವೃತ್ತ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಿ ಎಂದು ಸದಸ್ಯರು ಸಲಹೆ ಮಾಡಿದರು. ಅಧ್ಯಕ್ಷೆ ಪುಷ್ಪಾ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸಿದ್ದಗಂಗಮ್ಮ, ಇಒ ಜಿ.ಆರ್. ರಮೇಶ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry