ಬರಪೀಡಿತ ಪಟ್ಟಿಗೆ ಹಿರಿಯೂರು, ಹೊಳಲ್ಕೆರೆ

7

ಬರಪೀಡಿತ ಪಟ್ಟಿಗೆ ಹಿರಿಯೂರು, ಹೊಳಲ್ಕೆರೆ

Published:
Updated:

ಚಿತ್ರದುರ್ಗ: ಹಿರಿಯೂರು, ಹೊಳಲ್ಕೆರೆ ತಾಲ್ಲೂಕುಗಳನ್ನು ಸಹ ಬರಪೀಡಿತ ಪ್ರದೇಶದ ಪಟ್ಟಿಗೆ ಸೇರಿಸಲಾಗಿದೆ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಶುಕ್ರವಾರ ಪ್ರಕಟಿಸಿದರು.ಜಿಲ್ಲೆಯ ಉಳಿದ ನಾಲ್ಕು ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳು ಎಂದು ಪ್ರಕಟಿಸಲಾಗಿತ್ತು. ಆದರೆ, ತೀವ್ರ ಬರ ಪರಿಸ್ಥಿತಿಗೆ ಸಿಲುಕಿದ್ದ ಹಿರಿಯೂರು ಮತ್ತು ಹೊಳಲ್ಕೆರೆ ತಾಲ್ಲೂಕುಗಳನ್ನು ಕೈಬಿಟ್ಟಿದ್ದಕ್ಕೆ ರೈತ ಸಮುದಾಯ ಮತ್ತು ಜನಪ್ರತಿನಿಧಿಗಳು ಅಸಮಾಧಾನ ವ್ಯಕ್ತಪಡಿಸಿದರು.ಈ ಎರಡು ತಾಲ್ಲೂಕುಗಳ ಸ್ಥಿತಿಗತಿ ಬಗ್ಗೆ ಶುಕ್ರವಾರ ವರದಿ ಪಡೆದ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಬರಪೀಡಿತ ಪ್ರದೇಶಗಳ ಪಟ್ಟಿಯಿಂದ ಹೊರಗುಳಿದಿದ್ದ ಈ ತಾಲ್ಲೂಕುಗಳನ್ನು ಸೇರಿಸಲು ನಿರ್ಧರಿಸಿದರು.ಶುಕ್ರವಾರ ಸಂಜೆ `ಶರಣ ಸಂಸ್ಕೃತಿ~ ಉತ್ಸವದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿದ ಮುಖ್ಯಮಂತ್ರಿ ಸದಾನಂದಗೌಡ ಜಿಲ್ಲಾ ಪಂಚಾಯ್ತಿ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಬರ ಪರಿಸ್ಥಿತಿ ಕುರಿತು ಪ್ರಗತಿ ಪರಿಶೀಲನೆ ನಡೆಸಿದರು.ಹಣದ ಕೊರತೆಯಿಲ್ಲ, ಅಧಿಕಾರಿಗಳು ರಜೆ ಪಡೆಯದೆ ಕೆಲಸದ ವೇಗ ಹೆಚ್ಚಿಸಿ ಜನರ ನೆರವಿಗೆ ಧಾವಿಸಬೇಕು. ಕರ್ತವ್ಯದಿಂದ ಯಾವುದೇ ಅಧಿಕಾರಿ ದೂರ ಉಳಿಯಬಾರದು. ರಜಾ ದಿನಗಳ್ಲ್ಲಲ್ಲೂ ಸಹ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಸರ್ಕಾರದ ಮೇಲೆ ದೂರುಗಳು ಬಂದರೆ, ಯಾವುದೇ ವ್ಯಕ್ತಿ ತಪ್ಪು ಮಾಡಿದರೆ ಮುಲಾಜಿಗೆ ಒಳಗಾಗದೆ ಶಿಸ್ತು ಕ್ರಮಕೈಗೊಳ್ಳಲಾಗುವುದು. ಯಾವುದೇ ಸ್ಥಳದಲ್ಲಿ ತೊಂದರೆ ಇದ್ದರೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ತಾಕೀತು ಮಾಡಿದರು.ಮುಖ್ಯವಾಗಿ ಸೆಪ್ಟೆಂಬರ್ ತಿಂಗಳಲ್ಲಿ ಶೇ. 76ರಷ್ಟು ಮಳೆ ಕೊರತೆಯಾಗಿದೆ. 22 ಹೋಬಳಿಗಳು ತೀವ್ರ ಬರಕ್ಕೆ ತುತ್ತಾಗಿವೆ. ರೂ. 452 ಕೋಟಿ ಬೆಳೆ ನಷ್ಟವಾಗಿದೆ. ಈಗಾಗಲೇ ಅಗತ್ಯವಿರುವ ಸ್ಥಳಗಳಲ್ಲಿ ಗೋಶಾಲೆ ತೆರೆದು ಜಾನವಾರುಗಳಿಗೆ ಮೇವು ಒದಗಿಸಲು ರೂ. 5 ಕೋಟಿ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ರೂ. 2.56 ಕೋಟಿ  ಖರ್ಚಾಗಿದೆ ಎಂದು ತಿಳಿಸಿದರು.ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಮತ್ತು ಜಿ.ಪಂ. ಸಿಇಒ ಜಯರಾಂ ಸೇರಿದಂತೆ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಜಿ.ಪಂ. ಎಂಜಿನಿಯರಿಂಗ್ ಇಲಾಖೆಯಿಂದ ಮಾಹಿತಿ ಪಡೆದುಕೊಂಡ ಅವರು, ಹಣದ ಕೊರತೆಯಿಲ್ಲ. ಕೇಂದ್ರ ಸರಕಾರ ಕೊಡುತ್ತದೋ, ಬಿಡುತ್ತದೋ ಬೇಡ. ಬರದ ವಿಷಯದಲ್ಲಿ ರಾಜಕೀಯ ಬೇಡ. ಎಷ್ಟೇ ಹಣ ಬೇಕಾದರೂ ರಾಜ್ಯ ಸರಕಾರ ಕೊಡಲು ಸಿದ್ಧವಿದೆ. ಅಧಿಕಾರಿಗಳು ತಮ್ಮ ಕೆಲಸದ ವೇಗವನ್ನು ಹೆಚ್ಚಿಸಿಕೊಳ್ಳಬೇಕು. ಜಿಲ್ಲಾಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಕಾಯ್ದುಕೊಂಡು ಸಮಸ್ಯೆಗಳನ್ನು ಗಮನಕ್ಕೆ ತರಬೇಕು ಎಂದು ಸೂಚಿಸಿದರು.ಕುಡಿಯುವ ನೀರಿಗೆ ಈ ವರ್ಷದಲ್ಲಿ ತಯಾರಿಸಿದ ರೂ. 67.46 ಕೋಟಿ ಕ್ರಿಯಾಯೋಜನೆಯಲ್ಲಿ ಈಗಾಗಲೇ ರೂ. 18.87 ಕೋಟಿ ಬಿಡುಗಡೆಯಾಗಿದೆ. ಇದರಲ್ಲಿ ರೂ. 10.57 ಕೋಟಿ ಖರ್ಚಾಗಿದೆ. ಇನ್ನುಳಿದ ಹಣ ಬಳಸಿಕೊಂಡು ಬರದ ಹಿನ್ನೆಲೆಯಲ್ಲಿ ಗುರುತಿಸಿರುವ 523 ಹಳ್ಳಿಗಳ ಕುಡಿವ ನೀರಿನ ತೊಂದರೆ ನಿವಾರಿಸುವಂತೆ ನಿರ್ದೇಶಿಸಿದರು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನಾರಾಯಣಸ್ವಾಮಿ ಹದಿನೈದು ದಿನಕ್ಕೊಮ್ಮೆ ಜಿಲ್ಲೆಗೆ ಭೇಟಿ ನೀಡಿ ಜಿಲ್ಲಾದ್ಯಂತ ಪ್ರವಾಸ ಕೈಗೊಂಡು ಬರ ಪರಿಹಾರ ಕಾರ್ಯಗಳನ್ನು ವೀಕ್ಷಿಸಲಿದ್ದಾರೆ ಎಂದರು.15 ದಿನದ ಗಡುವು: ಬರ ಇರುವುದರಿಂದ ಕೆಲ ಇಲಾಖೆಗಳಿಗೆ ಹೆಚ್ಚಿನ ಕೆಲಸ ಇರಬಹುದು. ಹಾಗಂತ ಯಾವುದೇ ಕಡತಗಳನ್ನು 15 ದಿನಕ್ಕೂ ಹೆಚ್ಚು ಕಾಲ ತಮ್ಮ ಕಚೇರಿಯಲ್ಲೇ ಇಟ್ಟುಕೊಳ್ಳಬೇಡಿ. ರಜಾದಿನದಲ್ಲೂ ಕೆಲಸ ಮಾಡಿ ನೀತಿ, ನಿಯಮ, ಕಾನೂನುಗಳಿಗೆ ಸಂಬಂಸಿದ ಕಡತಗಳನ್ನು ಸಲ್ಲಿಕೆಯಾದ ಹದಿನೈದು ದಿನದೊಳಗೆ ಕಳುಹಿಸಬೇಕು ಎಂದು ಅಧಿಕಾರಿಗಳಿಗೆ ಚಾಟಿ ಬೀಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry