ಮಂಗಳವಾರ, ಮೇ 11, 2021
24 °C

ಬರಪೀಡಿತ ಪ್ರದೇಶ ಘೋಷಣೆಗೆ ಅಪೀಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಣಾವರ: ಹೋಬಳಿಯಲ್ಲಿ ಈ ಬಾರಿ ವರುಣನ ಮುನಿಸು ಅನ್ನದಾತರನ್ನು ಕಂಗಾಲಾಗಿಸಿದೆ. ಬಯಲುಸೀಮೆ ಬಾಣಾವರ ಹೋಬಳಿ ಮಳೆ ಆಶ್ರಿತ ಪ್ರದೇಶವಾಗಿದ್ದು, ಈ ವರ್ಷ ಮುಂಗಾರು ಮತ್ತು ಹಿಂಗಾರು ಎರಡೂ ಕೈಕೊಟ್ಟಿದ್ದು ಬಿತ್ತಿದ ಬೆಳೆಗಳು ಒಣಗಿ ರೈತ ಪರಿತಪಿಸುತ್ತಿದ್ದಾನೆ. ಹೋಬಳಿಯಲ್ಲಿ 90 ಕಂದಾಯ ಗ್ರಾಮಗಳಿದ್ದು, 65ರಿಂದ 70 ಸಾವಿರ ಎಕರೆ ಕೃಷಿ ಭೂಮಿ ಇದೆ. ಮಳೆಗಾಲ ಆರಂಭದಲ್ಲಿ ಓಮ್ಮೆ ಮಾತ್ರ ಸುರಿದ ವರ್ಷಧಾರೆ ನಂತರ ಇತ್ತ ಸುಳಿದಿಲ್ಲ. ಇಲ್ಲಿನ ಕೃಷಿ ಸಂಪೂರ್ಣ ಮಳೆ ಆಶ್ರಿತವಾಗಿದ್ದು, ವರುಣನ ಅವಕೃಪೆ ಈ ಬಾರಿ  ಕೃಷಿಕರಲ್ಲಿ ಬಾರಿ ನಿರಾಶೆ ಮೂಡಿಸಿದೆ. ವಾಣಿಜ್ಯ ಬೆಳೆಗಳಾದ ಸೂರ್ಯಕಾಂತಿ, ಎಳ್ಳು, ತೊಗರಿ, ಜೋಳ... ಕೈಗೆ ಸಿಗದೇ ನೊಂದಿದ್ದ ರೈತ ಕೊನೆ ಪಕ್ಷ ಹಿಂಗಾರಿನಲ್ಲಿ ರಾಗಿಯನ್ನಾದರೂ ಬೆಳೆದುಕೊಳ್ಳುವರ ಉತ್ಸಾಹದಲ್ಲಿದ್ದ. ಈಗ  ಹಿಂಗಾರು ಮಳೆಯೂ ಕೈ ಕೊಟ್ಟ್ದ್ದಿದು ರೈತನ ಆಸೆಗೆ ತಣ್ಣಿರೆರಚಿದಂತಾಗಿದೆ.   ಮುಂಗಾರು ಆರಂಭದಲ್ಲಿ ಸುರಿದ ಮುಸಲಧಾರೆ ರವಕ್ಕೆ ಪುಳಕಿತರಾಗಿ ರೈತರು ಹುಮ್ಮಸ್ಸಿನಿಂದ ಬಿತ್ತನೆ ಮಾಡಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಒಮ್ಮೆ ಬಂದ ಮಳೆ ಮತ್ತೆ ಇತ್ತ ಮುಖ ಮಾಡದೇ ಬಿತ್ತಿದ್ದ ಸೂರ್ಯಕಾಂತಿ, ಎಳ್ಳು, ಜೋಳ ಬೆಳೆಗಳು ಒಣಗಿವೆ.  ಸಾಲ-ಸೊಲ ಮಾಡಿ ಬಿತ್ತನೆಬೀಜ- ಗೊಬ್ಬರ ತಂದು ಹುತ್ತಿಬಿತ್ತಿ ಬೆಳೆಗಳನ್ನೇ ನೆಚ್ಚಿಕೊಂಡಿದ್ದ ರೈತರು ಇತ್ತ ಬೆಳೆ ಇಲ್ಲದೇ ಸಾಲದ ಬಾಧೆಯ ಸಂಕಷ್ಟದಲ್ಲಿದ್ದಾರೆ.ಒಂದು ದಶಕದಿಂದ ಇಲ್ಲಿ ಸಕಾಲದಲ್ಲಿ ಮಳೆ ಬಾರದೆ ರೈತರು ಬರದ ಬವಣೆಯಲ್ಲಿ ಕಾಲ ನೂಕುವಂತಾಗಿದೆ. ಅನ್ನದಾತರಿಗೆ ಈ ವರ್ಷವೂ ಬರದ ಭೀತಿ ಆವರಿಸಿದೆ. ಮುಂಗಾರಿನ ಆರಂಭದಲ್ಲಿ ಆಸೆ ತೋರಿಸುವ ಮಳೆರಾಯ ರೈತರೊಂದಿಗೆ ಕಣ್ಣಾ ಮುಚ್ಚಾಲೆಯಾಡುತ್ತಿದ್ದಾನೆ. ಕಳೆದ ವರ್ಷ ತುಂಬಿದ್ದ ಕೆರೆಕಟ್ಟೆಗಳೆಲ್ಲ ಬತ್ತುತ್ತಿರುವುದರಿಂದ ಅಂತರ್ಜಲ ಮಟ್ಟ ಕುಸಿದಿದ್ದು, ಕೊಳವೆ ಬಾವಿಗಳಲ್ಲೂ ನೀರು ಕಡಿಮೆಯಾಗಿದೆ.  ಹಿಂಗಾರಾದರೂ ಕೈಹಿಡಿ ಯಬಹುದು ಎನ್ನುವ ನಿರೀಕ್ಷೆತಲ್ಲಿದ್ದ ರೈತನಿಗೆ ಅದು ಹುಸಿಯಾಗಿ, ಹಸಿರಿನಿಂದ ಕಂಗೊಳಿಸಬೇಕಾಗಿದ್ದ ಭೂಮಿ ಬರಿದಾಗಿ ರೈತರನ್ನು ಕೆಂಗೆಡಿಸಿದೆ. ವರ್ಷಧಾರೆಯ ಮುನಿಸಿನಿಂದ ಜಾನುವಾರುಗಳು ಮೇವಿಲ್ಲದೆ ಪರದಾಡುತ್ತಿವೆ. ಇದೇ ಸ್ಥಿತಿ ಮುಂದುವರೆದರೆ     ಕುಡಿಯುವ ನೀರಿಗೂ ತತ್ವಾರ ಉಂಟಾಗಲಿದೆ.    ಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಧಾವಿಸಬೇಕು. ಜನಪ್ರತಿನಿಧಿಗಳು, ಅಧಿಕಾರಿಗಳು ಇಲ್ಲಿನ ಮಳೆ, ಬೆಳೆ ಪರಿಸ್ಥಿತಿ ಸಮಗ್ರ ವರದಿ ತಯಾರಿಸಿ ಸರ್ಕಾರದ ಗಮನಕ್ಕೆ ತಂದು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂಬುದು ಅನ್ನದಾತರ ಒಕ್ಕೊರಲಿನ ನುಡಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.