ಗುರುವಾರ , ಅಕ್ಟೋಬರ್ 17, 2019
22 °C

ಬರಬರುತ್ತಾ ಅಯ್ಯಪ್ಪ ಡಲ್ಲಾದದ್ದು ಯಾಕೋ?

Published:
Updated:

 ಅದು 1970, 80ರ ದಶಕ. ರಾಮೋತ್ಸವ, ಗಣೇಶೋತ್ಸವ ಎಂದರೆ ಸಂಗೀತದ ಸೀಸನ್ ಆಗಿರುತ್ತಿತ್ತು. ನವೆಂಬರ್ ಎಂದರೆ ರಾಜ್ಯೋತ್ಸವದ ಸೀಸನ್. ಈ ನವೆಂಬರ್- ಡಿಸೆಂಬರ್‌ನಲ್ಲಿ ಹೊಸದಾಗಿ ಹುಟ್ಟಿಕೊಂಡದ್ದು ಅಯ್ಯಪ್ಪನ ಸೀಸನ್. ನಮ್ಮ ನಗರದ್ಲ್ಲಲೂ ಆ ದೇವರು ಒಂದು ದೊಡ್ಡ `ಕಲ್ಟ್~ ಆಗಿ ಬೆಳೆದದ್ದು ನಿಜ. ರಾಮೋತ್ಸವ, ಗಣೇಶೋತ್ಸವದಲ್ಲಿ ಶಾಸ್ತ್ರೀಯ ಸಂಗೀತಕ್ಕೆ ಆದ್ಯತೆ ಇರುತ್ತಿತ್ತು. ಅಯ್ಯಪ್ಪನ ಸೀಸನ್‌ನಲ್ಲಿ ಕೇಳುತ್ತಿದ್ದದ್ದು ಆ ದೇವರದ್ದೇ ಭಕ್ತಿ ಸಂಗೀತ.ಹಾಗೆ ನೋಡಿದರೆ ಬೆಂಗಳೂರು ಸಣ್ಣ ಪ್ರಮಾಣದಲ್ಲಿ ಮಲಯಾಳಿಗಳ ಪ್ರಭಾವ ಇರುವ ನಗರ. ಹಾಗೆ ನೋಡಿದರೆ ತಮಿಳು, ಮಲಯಾಳಂ ಪ್ರಭಾವ ಇಲ್ಲಿ ಹೆಚ್ಚಾಗಿದೆ. ತಮಿಳು ಹಾಗೂ ಮಲಯಾಳಂನಲ್ಲಿ ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ `ಕಲ್ಟ್ ಫಾಲೋಯಿಂಗ್~ ಇದೆ.

 

ಕನ್ನಡದ ದೇವರಿಗೆ ಈ ಥರ `ಕಲ್ಟ್ ಫಾಲೋಯಿಂಗ್~ ಇಲ್ಲ. ಇಲ್ಲಿ `ಚನ್ನಕೇಶವನಿಗೆ ಮಾಲೆ ಹಾಕುತ್ತೇವೆ~ ಎಂದು ಯಾರೂ ಹೇಳುವುದಿಲ್ಲ. ಇಂಥ `ಕಲ್ಟ್ ಬ್ರಾಂಡ್ ಬಿಲ್ಡಿಂಗ್~ ಮಾಡುವುದರಲ್ಲಿ ತಮಿಳರದ್ದು ಎತ್ತಿದಕೈ. ಎಲ್ಲಾ ಭಾಷೆಯವರಿಗೂ `ಕಲ್ಟ್ ದೇವರಾಗಿ~ ಬೆಳೆದದ್ದು ಅಯ್ಯಪ್ಪ.  ಆಟೋ ಓಡಿಸುವವರು, ದಿನಗೂಲಿಗಳು ಮೊದಲಾದ ಬೇರೆ ಬೇರೆ ಕಸುಬು ಮಾಡುವವರು ಈ `ಬ್ರಾಂಡ್ ಬಿಲ್ಡಿಂಗ್~ನಲ್ಲಿ ತೊಡಗಿ, ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ಮೂರು ದಶಕಗಳ ಹಿಂದೆ ಅಯ್ಯಪ್ಪ ದೇವರ ಸೀಸನ್ ಬಂತೆಂದರೆ ವೀರಮಣಿ, ಶೀರ‌್ಗಾಳಿ ಗೋವಿಂದರಾಜನ್ ಹಾಡಿದ ಆ ದೇವರ ಭಕ್ತಿಗೀತೆಗಳ ರೆಕಾರ್ಡಿಂಗ್ಸ್ ಬರುತ್ತಿದ್ದವು. ಅಷ್ಟೇ ಅಲ್ಲದೆ ಅವರು ನಗರದ ವಿವಿಧೆಡೆ ಟೂರ್ ಮಾಡಿ ಅಯ್ಯಪ್ಪನ ಹಾಡುಗಳನ್ನು ಹಾಡುತ್ತಿದ್ದರು. ಶಾಸ್ತ್ರೀಯ ಸಂಗೀತದ ಕೊನೆಯಲ್ಲಿ ಯೇಸುದಾಸ್ ಕೂಡ ಒಂದೊಮ್ಮೆ ಆರ್.ಎನ್.ಜಯಗೋಪಾಲ್ ಅಯ್ಯಪ್ಪನ ಕುರಿತು ಬರೆದಿರುವ ಹಾಡನ್ನು ಕೇಳುಗರ `ಫರ್ಮಾಯಿಷ್~ ಮೇರೆಗೆ ಹಾಡುತ್ತಿದ್ದರು.ಆಗ ಅಯ್ಯಪ್ಪ ಸೀಸನ್ ಎಂದರೆ ನಗರದ ಹಲವೆಡೆ ಉತ್ಸವದ ಉತ್ಸಾಹ ಬಂದುಬಿಡುತ್ತಿತ್ತು. ಕಪ್ಪುಡುಗೆ ಧರಿಸಿದ ಭಕ್ತರ ದಂಡು ಒಕ್ಕೊರಲಿನಿಂದ ಅಯ್ಯಪ್ಪನ ಗೀತೆಗಳನ್ನು ಲಯಬದ್ಧವಾಗಿ ಹಾಡುತ್ತಿದ್ದರು. ಎಷ್ಟೋ ಜನ ಆ ಲಯಕ್ಕೇ ಮರುಳಾಗಿ ಹಾಡುಗಳಿಗೆ ಕಿವಿಯಾಗುತ್ತಾ ಮೈಮರೆಯುತ್ತಿದ್ದುದನ್ನೂ ನಾನು ನೋಡಿದ್ದೇನೆ.ಈಗ ಯಾಕೋ ಇಂಥ ವಿಷಯದಲ್ಲಿ `ಅಯ್ಯಪ್ಪ ಸೀಸನ್~ ನಗರದಲ್ಲಿ ಮಂಕಾಗಿದೆ ಎನ್ನಿಸತೊಡಗಿದೆ. ಮೊದಲಿನಂತೆ ಈಗ ಪೆಂಡಾಲುಗಳಿಂದ ಸಂಗೀತ ಕೇಳುತ್ತಿಲ್ಲ. ಯೇಸುದಾಸ್ ಬಂದುನಿಂತು ಕನ್ನಡದ ಸಾಹಿತಿ ಬರೆದ ಹಾಡು ಹಾಡುವುದಿಲ್ಲ. ಹೋದವಾರ ಇದೇ `ಮೆಟ್ರೊ~ದಲ್ಲಿ ಪ್ರಕಟವಾದ ಲೇಖನವೊಂದರ ಪ್ರಕಾರ ನಗರದಲ್ಲೆಗ ಸುಮಾರು 40 ಅಯ್ಯಪ್ಪನ ದೇವಸ್ಥಾನಗಳಿವೆ. ಇದರರ್ಥ ಅಯ್ಯಪ್ಪನ ಭಕ್ತರು ಮೊದಲಿಗಿಂತ ಈಗ ಹೆಚ್ಚು ನಿತ್ಯ ಪೂಜಿಸಿಕೊಳ್ಳುವ ದೇವರಾಗಿದ್ದಾನೆ. ಒಂದೇ ಸೀಸನ್‌ನಲ್ಲಿ ವ್ರತ ಮಾಡುವ ಉಮೇದು ಕಡಿಮೆಯಾಗಲು ಇದೂ ಕಾರಣವಿರಬಹುದೆ?ಹಿಂದೆ ಅಮಿತಾಭ್ ಬಚ್ಚನ್, ವಿಷ್ಣುವರ್ಧನ್, ರಾಜ್‌ಕುಮಾರ್, ರಜನೀಕಾಂತ್ ಎಲ್ಲರೂ ಶಬರಿಮಲೆಗೆ ಹೋಗಿ ಅಯ್ಯಪ್ಪನ ದರ್ಶನ ಮಾಡಿಬಂದಾಗ ಅದು ದೊಡ್ಡ ಸುದ್ದಿಯಾಗುತ್ತಿತ್ತು. ಅವರ ಅಭಿಮಾನಿಗಳು ಕೂಡ ಆಮೇಲೆ ದಂಡುದಂಡಾಗಿ ಮಾಲೆ ಹಾಕಿರುವುದಕ್ಕೆ ಬೆಂಗಳೂರಿನಲ್ಲೂ ಲೆಕ್ಕವಿಲ್ಲದಷ್ಟು ಉದಾಹರಣೆಗಳು ಸಿಗುತ್ತವೆ. ಆ ನಟರೆಲ್ಲಾ ಒಂದು ವಿಧದಲ್ಲಿ ಅಯ್ಯಪ್ಪನನ್ನು `ಎಂಡಾರ್ಸ್‌~ ಮಾಡಿದ್ದರು. ಇತ್ತೀಚೆಗೆ ಆ ರೀತಿ ಹೆಚ್ಚಾಗಿ ಆಗುತ್ತಿಲ್ಲ. ತೆಲುಗಿನ ನಟ ಚಿರಂಜೀವಿ ಪುತ್ರ ರಾಮ್‌ಚರಣ್ ತೇಜ್ ಅಯ್ಯಪ್ಪನ ಮಾಲೆ ಹಾಕಿದ ಫೋಟೋಗಳು ಅನೇಕ ಮಾಧ್ಯಮಗಳಲ್ಲಿ ಪ್ರಕಟಗೊಂಡಿದ್ದವು. ಅದನ್ನು ನೋಡಿ ತೆಲುಗಿನ ಕೆಲವರಾದರೂ ತಾವೂ ಮಾಲೆ ಹಾಕಿರಬಹುದೇನೋ? ಈಗೀಗ ನಮ್ಮ ಸಿನಿಮಾ ತಾರೆಯರಿಗೆ ಶಬರಿಮಲೆಯ ಆಕರ್ಷಣೆ ಕಡಿಮೆಯಾದಂತಿದೆ.ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರನ್ನು ಬಿಡುವುದಿಲ್ಲ ಎಂಬುದು ಗೊತ್ತಿರುವ ವಿಷಯ. ಹಾಗಾಗಿ ಅಯ್ಯಪ್ಪ `ಗಂಡು ಕಲ್ಟ್ ದೇವರು~. ಹೀಗಿರುವಾಗ ಗರ್ಭಗುಡಿಯೊಳಗೇ ದೇವರ ದರ್ಶನ ಮಾಡಿರುವುದಾಗಿ ಜಯಮಾಲಾ ಕೊಟ್ಟ ಹೇಳಿಕೆ ಎಲ್ಲಾ ವರ್ಗದ ಜನರನ್ನು ಚಕಿತಗೊಳಿಸಿತು. ಅದು ಒಂದು ರೀತಿಯಲ್ಲಿ ಮಹಿಳೆಯರ ವಿಮೋಚನೆಯ ಹೆಜ್ಜೆಯಾಗಿ ಕಂಡಿತು. ಜಯಮಾಲಾ ಅವರಿಗೆ ಖಂಡಿತ ಆ ಉದ್ದೇಶವಿರಲಾರದು.

 

ತಿಳಿದೋ ತಿಳಿಯದೆಯೋ ಅವರ ಈ ಅನುಭವ ಮಹಿಳಾ ಸಬಲೀಕರಣದ ಸಂಕೇತವಾಗಿಬಿಟ್ಟಿತು.ಅಯ್ಯಪ್ಪನ ಪ್ರಭಾವ ನಗರದಲ್ಲಿ ಕಡಿಮೆಯಾಗಿರುವುದಕ್ಕೆ ಸುಮಾರು ಕಾರಣಗಳಿರಬಹುದು. ಆದರೆ, ಶಬರಿಮಲೆಯ `ಮಕರ ವಿಳಕ್ಕು~ ಮನುಷ್ಯ ಸೃಷ್ಟಿಸಿದ ಬೆಳಕು ಎಂದು ಆ ದೇವಸ್ಥಾನದವರೇ ಹೈಕೋರ್ಟ್‌ನಲ್ಲಿ ಘೋಷಿಸಿಕೊಂಡರು. ಹಾಗಾಗಿ ಭಕ್ತರಿಗೆ ಅದು ಪವಾಡವೆಂಬ ಭಾವನೆ ಸ್ವಲ್ಪ ಮಟ್ಟಿಗೆ ಹೊರಟುಹೋಯಿತು. ಈಗ ಪರ್ಯಾಯ ದೇವರುಗಳೂ ಹುಟ್ಟಿಕೊಳ್ಳುತ್ತಿವೆ. ಗೆಳೆಯರೊಬ್ಬರು ಹೇಳಿದಂತೆ ಈಗ ನಗರಕ್ಕೆ `ಓಂ ಶಕ್ತಿ ಕಲ್ಟ್~ ಬಂದಿದೆಯಂತೆ. ಆ ದೇವರ ಯಾತ್ರೆಗೆ ಮಹಿಳೆಯರು ಮಾತ್ರ ಹೋಗುತ್ತಾರಂತೆ.

ಮಂಡ್ಯ ಹತ್ತಿರ ಅಭಿರಾಮಿ ಎಂಬ ದೇವರಿಗೆ ಭಕ್ತರಿದ್ದಾರೆ.

 

ಆ ದೇವಸ್ಥಾನ ಕಟ್ಟಿದ ಯಾರೋ ಬೆಂಗಳೂರು- ಮೈಸೂರು ಮಾರ್ಗದ ಹೆದ್ದಾರಿ ಪಕ್ಕದ ಗೋಡೆ ಮೇಲೆಲ್ಲಾ `ಲಾರ್ಡ್ ಅಭಿರಾಮಿ~ ಅಂತ ಬರೆಸಿದ್ದರು. ಅಭಿರಾಮಿ ತಮಿಳುನಾಡಿನಿಂದ ಬಂದ ದೇವತೆಯ ಹೆಸರು. ಪಾಪ, ಅವರಿಗೆ `ಲಾರ್ಡ್~ ಎಂಬುದು ಪುಲ್ಲಿಂಗ ಎಂಬ ಅರಿವು ಕೂಡ ಇಲ್ಲ. ಆದರೆ, ಅವರ `ಬ್ರಾಂಡ್ ಬಿಲ್ಡಿಂಗ್~ ಜಾಣತನವಂತೂ ಅದ್ಭುತ.ಅದೇನೇ ಇರಲಿ, ಈಗಲೂ ಅಯ್ಯಪ್ಪನ ಭಕ್ತರು ಚದುರಿದಂತೆ ಇದ್ದಾರೆ. ನಗರದ ಮೊದಲ ಅಯ್ಯಪ್ಪ ದೇವಸ್ಥಾನ ಜಾಲಹಳ್ಳಿ ಕ್ರಾಸ್‌ನಲ್ಲಿದೆ. ಸಜ್ಜನರಾವ್ ಸರ್ಕಲ್‌ನ ಇನ್ನೊಂದು ದೇವಸ್ಥಾನದಿಂದಲೂ ಶಬರಿಮಲೆಗೆ ಅನೇಕ ಭಕ್ತರು ಹೊರಡುತ್ತಾರೆ. ಬೆಂಗಳೂರಿನ ಕೆಲವು ಶಾಸಕರು ವ್ಯಾನ್, ಬಸ್ ಮಾಡಿ ಶಬರಿಮಲೆಗೆ ಭಕ್ತರನ್ನು ಕಳುಹಿಸುತ್ತಿದ್ದುದನ್ನೂ ನಾನು ಕಂಡಿದ್ದೇನೆ. ಅದನ್ನು ಈಗಲೂ ಮುಂದುವರಿಸಿರುವ ಶಾಸಕರಿದ್ದಾರಂತೆ.ಬೇಕೋ ಬೇಡವೋ ಮೊಬೈಲ್‌ಗಳಿಗೆ `ಹರಿವರಾಸನಂ~ ರಿಂಗ್‌ಟೋನ್ ಬಂದುಬೀಳುವ ಸೀಸನ್ ಇದಂತೂ ಹೌದು. ಅಂದಹಾಗೆ, 5 ಕೋಟಿ ಮೊಬೈಲ್‌ಗಳಲ್ಲಿ ಈ ರಿಂಗ್‌ಟೋನ್ ಇದೆಯಂತೆ. ಇದು ಯೇಸುದಾಸ್ ಅಯ್ಯಪ್ಪನ ಬಗ್ಗೆ ಹಾಡಿರುವ ಹಾಡು.

`ಅಯ್ಯಪ್ಪನ ಕಲ್ಟ್~ ಮಾರ್ಪಾಟಾಗಿರುವ ಸಂದರ್ಭವನ್ನು ನಾವೀಗ ಕಾಣುತ್ತಿದ್ದೇವೆ. ಮೊದಲು ಇದ್ದ `ಕಲ್ಟ್ ಫಾಲೋಯಿಂಗ್~ ಹೋಗಿ ಬೇರೆ ದೇವರಂತೆ ಅಯ್ಯಪ್ಪ ಸ್ವಲ್ಪ `ಸೆಟ್ಲ್~ ಆಗುವ ಹಾಗೆ ಕಾಣುತ್ತಿದೆ.ಫುಟ್‌ಪಾತ್ ಪಡಿಪಾಟಲು

ಭಕ್ತಿಮಾರ್ಗದಿಂದ ನಿವೇಶನ ಲೋಕಕ್ಕೆ ವಿಷಯಾಂತರ ಮಾಡಿದರೆ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್‌ನ ಒತ್ತಡ ಎಷ್ಟಿದೆ ಎಂಬುದು ನಮ್ಮ ಅರಿವಿಗೆ ಬಂದೀತು. ಇಲ್ಲಿ ಬಾಡಿಗೆ ಹೆಚ್ಚು. ಮನೆ ಕೊಳ್ಳಲು ಹೋದರೆ ಅವುಗಳ ಬೆಲೆಯೂ ಹೆಚ್ಚು. ಅಪಾರ್ಟ್‌ಮೆಂಟ್‌ಗಳ ರೇಟು ಕೈಮೀರಿದೆ. ಅವೆಲ್ಲಾ ಒಂದು ವರ್ಗಕ್ಕೆ ಮಾತ್ರ ಎಂಬ ಸ್ಪಷ್ಟ ಚಿತ್ರ ಸಿಗುವ ಪರಿಸ್ಥಿತಿ. ಸೂಕ್ಷ್ಮವಾಗಿ ಗಮನಿಸಿದರೆ, ಇಷ್ಟೆಲ್ಲಾ ಬೆಲೆ ಏರಿಕೆಯ ಹಿಂದೆ `ಹಿಡನ್ ಕಾಸ್ಟ್~ ಅಡಗಿರುತ್ತದೆ. ಅದರ ಬಗ್ಗೆ ನಾವು ಹೆಚ್ಚು ಯೋಚಿಸುವುದಿಲ್ಲ.ನಗರದ ಅನೇಕ ಕಡೆಗಳಲ್ಲಿ ಫುಟ್‌ಪಾತ್‌ಗಳನ್ನೆಲ್ಲಾ ಪದೇಪದೇ ತೆಗೆದು ಹಾಕುವ ನಿರಂತರ ಕಾಮಗಾರಿ ನಡೆಯಲು ರಿಯಲ್ ಎಸ್ಟೇಟ್‌ನ ಒತ್ತಡವೇ ಕಾರಣ. ಇಲ್ಲಿ ನಡೆದಾಡುವವರಿಗೆ ಮರ್ಯಾದೆ ಕಡಿಮೆ. ವಾಹನ ಸವಾರರಷ್ಟೇ ಬೆಂಗಳೂರಿನ ಭವಿಷ್ಯ ಎಂಬುದು ಕುರುಡು ನಂಬಿಕೆ. ಮಕ್ಕಳು, ಹಿರಿಯರನ್ನೂ ಒಳಗೊಂಡ ಪಾದಚಾರಿಗಳನ್ನು ನಿರ್ಲಕ್ಷಿಸಿ ಫುಟ್‌ಪಾತ್ ಕೀಳುತ್ತಿರುವುದು ಅನಾಗರಿಕತೆಯ ಲಕ್ಷಣ. ನಗರವನ್ನು ಆಳುವವರು ಈ ಬಗ್ಗೆ ಗಮನ ಹರಿಸಬೇಕು. ಇಲ್ಲವಾದರೆ ಫುಟ್‌ಪಾತ್ ನಿರ್ಮಾಣದ ವಿಷಯದಲ್ಲಿ ಕುಖ್ಯಾತಿ ಪಡೆಯಬೇಕಾದೀತು.

 

Post Comments (+)