ಮಂಗಳವಾರ, ಮೇ 18, 2021
22 °C

ಬರಬೇಕಿದ್ದ ಬೊಮ್ಮಾಯಿ ತಂಡ ಬೈ ಬೈ!

ಪ್ರಜಾವಾಣಿ ವಿಶೇಷ ವರದಿ Updated:

ಅಕ್ಷರ ಗಾತ್ರ : | |

ರಾಯಚೂರು: ತೀವ್ರ ಬರಗಾಲ ಸ್ಥಿತಿಗೆ ಕಂಗೆಟ್ಟ ಜಿಲ್ಲೆಯ ಜನತೆ ಗ್ರಾಮೀಣ ಪ್ರದೇಶದ ಜನತೆ ಒಂದೆಡೆ ಗುಳೇ ಹೊರಟಿದ್ದರೆ ಮತ್ತೊಂದೆಡೆ ಕುಡಿಯುವ ನೀರಿಗಾಗಿ  ಹಗಲು ರಾತ್ರಿ ಊರೂರು ಅಲೆಯುವ ಸ್ಥಿತಿ ಕಂಡು ಬರುತ್ತಿದೆ.ಬರಪರಿಸ್ಥಿತಿ ವೀಕ್ಷಣೆಗೆ ಪೂರ್ವ ನಿಗದಿಯಂತೆ 11ರಂದು ಜಿಲ್ಲೆಗೆ ಆಗಮಿಸಬೇಕಿದ್ದ ರಾಜ್ಯ ಜಲಸಂಪನ್ಮೂಲ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸಚಿವರ ತಂಡದ ಪ್ರವಾಸ ಹಠಾತ್ ರದ್ದಾಗಿದೆ. ಸಚಿವ ಬೊಮ್ಮಾಯಿ ಮಹಾರಾಷ್ಟ್ರಕ್ಕೆ ತೆರಳಿ ಕೊಯ್ನಾ ಜಲಾಶಯದಿಂದ ನೀರು ಬಿಡಿಸಲು ಅಲ್ಲಿನ ಸರ್ಕಾರಕ್ಕೆ ಮನವರಿಕೆ ಮಾಡಲು ಹೋಗಿದ್ದರಿಂದ ಈ ಪ್ರವಾಸ ರದ್ದಾಗಿದೆ ಎಂದು ತಿಳಿದಿದೆ.ಆದರೆ ಪೂರ್ವ ನಿಗದಿಯಂತೆ ರಾಜ್ಯ ವಿಧಾನಸಭಾ ವಿರೋಧ ಪಕ್ಷದ ನಾಯಕ ಎಸ್ ಸಿದ್ಧರಾಮಯ್ಯ ಅವರ ನೇತೃತ್ವದ ತಂಡವು 11ರಂದು ಜಿಲ್ಲೆಯಲ್ಲಿ ಬರ ಪರಿಸ್ಥಿತಿ ವೀಕ್ಷಣೆಗೆ ಬರಲಿದೆ. ನಾಲ್ಕು ತಿಂಗಳಿಂದ ಬರಕ್ಕೆ ಕಂಗೆಟ್ಟು ಗೋಳಾಡಿದರೂ ಜಿಲ್ಲೆಯತ್ತ ಕಣ್ತೆರೆದೂ ನೋಡದ ರಾಜಕೀಯ ಪಕ್ಷಗಳ ರಾಜ್ಯ ಮಟ್ಟದ ನಾಯಕರು, ಸರ್ಕಾರದ ಸಚಿವರ ದಂಡಿನ ಪ್ರವಾಸದ ಬಗ್ಗೆ ಜನತೆಯಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.ಹಗಲು ಬಿಸಿಲಿನ ತಾಪ. ಬರದಿಂದ ಕೈಗೆ ಕೆಲಸವಿಲ್ಲ. ಕುಡಿಯುವ ನೀರಿಗಾಗಿ ಅಲೆದಾಟಕ್ಕೆ ಗ್ರಾಮೀಣ ಜನತೆ ಸುಸ್ತಾಗಿದ್ದಾರೆ. ತೆರೆದ ಬಾವಿ, ಹ್ಯಾಂಡ್ ಪಂಪ್, ದೂರದ ಹಳ್ಳಕ್ಕೆ ಹೋಗಿ ಒರತೆ ತೋಡಿ ನೀರು ಪಡೆಯುವ ದೃಶ್ಯಗಳು ಕಂಡು ಬರುತ್ತಿವೆ.ಇದಿನ್ನು ಏಪ್ರಿಲ್ ಮೊದಲ ವಾರ. ಇನ್ನೂ ಮೇ ಕೊನೆ ವಾರದವರೆಗೂ ಬಿಸಿಲಿನ ತಾಪ, ನೀರಿನ ಸಮಸ್ಯೆ ಇದ್ದದ್ದೆ. ದನಕರುಗಳ ಸ್ಥಿತಿ ಚಿಂತಾಜನಕವಾಗಿದೆ. ಒಂದೊಮ್ಮೆ ಮೇವು ಸಿಕ್ಕರೂ ಕುಡಿಯಲು ನೀರು ಸಿಗದ ಸ್ಥಿತಿ ಇದೆ ಎಂದು ರೈತ ಸಮುದಾಯ ಆತಂಕ ವ್ಯಕ್ತಪಡಿಸುತ್ತಾರೆ.ತುಂಗಭದ್ರಾ ಎಡದಂಡೆ ಕಾಲುವೆ ವ್ಯಾಪ್ತಿ ಪ್ರದೇಶದಲ್ಲಿ 302 ಕೆರೆಗಳಿಗೆ ನೀರು ತುಂಬಿಸಲಾಗಿದೆ. 654 ಮೆಟ್ರಿಕ್ ಟನ್ ಮೇವು ಸಂಗ್ರಹಣೆ ಮಾಡಲಾಗಿದೆ. ಕೊಳವೆ ಬಾವಿ ಸ್ವಚ್ಛಗೊಳಿಸಲಾಗಿದೆ. ಹಣದ ಕೊರತೆ ಇಲ್ಲ. ನೀರಿನ ಸಮಸ್ಯೆ ಕಂಡು ಬಂದ ಕಡೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಡಳಿತ ಈಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಮಾಹಿತಿ ನೀಡಿದೆ.ಸರ್ಕಾರದಿಂದ ಪ್ರತಿ ವಿಧಾನ ಸಭಾ ಕ್ಷೇತ್ರಕ್ಕೆ 25 ಲಕ್ಷ, ಕೊಳವೆ ಸ್ವಚ್ಛತೆಗೆ ಕೋಟಿ ರೂಪಾಯಿ, ಪರಿಹಾರ ಕಾಮಗಾರಿ ಕೈಗೊಳ್ಳಲು ರೂ. 4 ಕೋಟಿ ದೊರಕಿಸಿದೆ ಎಂದು ಜಿಲ್ಲ ಉಸ್ತುವಾರಿ ಸಚಿವರು ಹೋದ ತಿಂಗಳು ನಡೆಸಿದ ಸಭೆಯಲ್ಲಿ ಹೇಳಿದ್ದರು.ಆದರೆ, ವಾಸ್ತವ ಸ್ಥಿತಿಯಲ್ಲಿ ಜನತೆ ನಿತ್ಯ ಎದುರಿಸುತ್ತಿರುವ ಸಮಸ್ಯೆ ಮುಂದುವರಿದ್ದು, ಇದು ಆಡಳಿತ ಯಂತ್ರ ಎಷ್ಟರ ಮಟ್ಟಿಗೆ ಕ್ರಮ ಕೈಗೊಂಡಿದೆ ಎಂಬುದನ್ನು ಜಗಜ್ಜಾಹೀರು ಮಾಡುತ್ತಿದೆ. ಜನ ಕೊಡಗಳನ್ನು ಹಿಡಿದುಕೊಂಡು ಊರೂರು ಸುತ್ತುವುದು, ಹಳ್ಳಕೊಳ್ಳಕ್ಕೆ ತೆರಳುವ ದೃಶ್ಯಗಳು ಕೊಳವೆ ಬಾವಿ ಮರು ಸ್ವಚ್ಛಗೊಳಿಸಲಾಗಿದೆ( ರೀ ಫ್ಲಶಿಂಗ್), ಅಗತ್ಯವಿದ್ದ ಕಡೆ ಕೊಳವೆ ಬಾವಿ ತೋಡಲಾಗಿದೆ. ಪೈಪ್ ಹಾಕಲಾಗುತ್ತಿದೆ ಎಂಬ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿಯ ಮಾಹಿತಿಯನ್ನು ಅಣಕಿಸುವಂತಿದೆ. ಆಡಳಿತ ಯಂತ್ರ ಹೇಳುವುದೇನು? ಜನ ಅನುಭವಿಸುತ್ತಿರುವುದೇನು? ಎಂದು ಪ್ರಶ್ನಿವಂಥ ಸ್ಥಿತಿ ಕಂಡು ಬರುತ್ತಿದೆ.ನಾಲ್ಕು ತಿಂಗಳ ಹಿಂದೆಯೇ ಜಿಲ್ಲೆಯ ರೈತರು ಮೇವು ಸಂಗ್ರಹಣೆಗೆ ಆದ್ಯತೆ ಕೊಡಲು, ಕುಡಿಯುವ ನೀರಿನ ಸಮಸ್ಯೆ ಹೋಗಲಾಡಿಸಲು, ಗುಳೇ ಹೋಗುವುದನ್ನು ತಪ್ಪಿಸಲು ಒತ್ತಾಯಿಸಿದರೂ ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ಏನೂ ಆಗಲಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಮಳೆ ಇಲ್ಲ. ಬೆಳೆ ಇಲ್ಲ. ಕೆಲಸವೂ ಇಲ್ಲ. ಕುಡಿಯಲು ನೀರು ತರುವುದೇ ಕೆಲಸ. ಕೈಗಂತೂ ಕೆಲಸವಿಲ್ಲ. ಕನಿಷ್ಠ ನೀರು ಕುಡಿದಾದರೂ ಬದುಕಬೇಕು. ಇಲ್ಲದೇ ಇದ್ದರೇ ಗುಳೇ ಹೋಗಬೇಕು. ದನಕರುಗಳು ದಿನದಿಂದ ದಿನಕ್ಕೆ ಹಳ್ಳಿಗಳಲ್ಲಿ ಕಡಿಮೆ ಆಗುತ್ತಿವೆ. ತಾವು ಬದುಕುವುದೇ ಕಷ್ಟ ಆಗಿರುವಾಗಿ ಅವುಗಳನ್ನು ಸಾಕುವುದು ಗಂಭೀರವಾಗಿದೆ.ಹೀಗಾಗಿ ಮಾರಾಟ ಮಾಡಿ ದುಡಿಮೆ ಅರಸಿ ಹೋಗುವ ಸ್ಥಿತಿ ಬಂದಿದೆ. ಜಿಲ್ಲೆಯಲ್ಲಿ ಮೇವು ಸಂಗ್ರಹ ಎಲ್ಲೋ ಒಂದು ಕಡೆ ಮಾಡಿರಬಹುದು ಅಷ್ಟೇ. ಅನೇಕ ಕಡೆ ಮಾಡಿಲ್ಲ. ಈ ರೀತಿ ಮೇವು ಸಂಗ್ರಹಣೆಯನ್ನು ಸರ್ಕಾರ ಮಾಡಿದರೂ ರೈತರಿಗೆ ಅದು ಪ್ರಯೋಜನ ಆಗುವುದಿಲ್ಲ.

 

ಕೈಯಲ್ಲಿ ಕಾಸಿಲ್ಲ. ಟ್ರ್ಯಾಕ್ಟರ್ ಬಾಡಿಗೆ ಮಾಡಿಕೊಂಡು ಬಂದು ಮೇವು ಒಯ್ಯುವ ಶಕ್ತಿ ರೈತರು ಕಳೆದುಕೊಂಡಿದ್ದಾರೆ. ಮೇವು ಲಭ್ಯವಿದ್ದ ಕಡೆ ರೈತರೇ ಖರೀದಿಸಿಕೊಳ್ಳುತ್ತಾರೆ. ರೈತರ ಮನೆಯ ದನಕರುಗಳಿಗೆ ತಕ್ಕಂತೆ ಹಣ ದೊರಕಿಸಿ ಎಂದು ಸರ್ಕಾರಕ್ಕೆ 4 ತಿಂಗಳ ಹಿಂದೆಯೇ ಮನವಿ ಮಾಡಿದ್ದರೂ ಸ್ಪಂದಿಸಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ `ಪ್ರಜಾವಾಣಿ~ಗೆ ತಿಳಿಸಿದರು.ಜಿಲ್ಲಾಡಳಿತದಿಂದ ಸಮರ್ಪಕ ಮಾಹಿತಿ ಇಲ್ಲ: ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಯಾವ್ಯಾವ ಕ್ರಮ ಕೈಗೊಳ್ಳಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಏನು ವ್ಯವಸ್ಥೆ ಮಾಡಲಾಗಿದೆ. ಬರ ಪರಿಹಾರ ಕಾಮಗಾರಿ ಎಲ್ಲಿ ಕೈಗೊಳ್ಳಲಾಗಿದೆ. ಸರ್ಕಾರದಿಂದ ಈವರೆಗೂ ಜಿಲ್ಲಾಡಳಿತಕ್ಕೆ ಮತ್ತು ಜಿಲ್ಲಾ ಪಂಚಾಯಿತಿಗೆ ಬಂದ ಹಣವೆಷ್ಟು? ಎಂಬುದರ ಬಗ್ಗೆ ಈವರೆಗೂ ಜಿಲ್ಲಾಡಳಿತವಾಗಲಿ. ಜಿಲ್ಲಾ ಪಂಚಾಯಿತಿಯಾಗಲಿ ಜಿಲ್ಲೆಯ ಜನತೆ ಹಿತದೃಷ್ಟಿಯಿಂದ ಮಾಹಿತಿ ನೀಡುವ ಗೋಜಿಗೂ ಹೋಗಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.