ಬರಲಿದೆ ಪವನ ಶಕ್ತಿ ಕಾರು!

7

ಬರಲಿದೆ ಪವನ ಶಕ್ತಿ ಕಾರು!

Published:
Updated:

ವಿದ್ಯುತ್ ಕೊರತೆಯೆ? ಪವನ ವಿದ್ಯುತ್ ಯಂತ್ರ ಬಂದಿತಲ್ಲ! ಪೆಟ್ರೋಲ್ ಡೀಸೆಲ್ ಕೊರತೆ ಆದರೆ? ಅರೆ, ಅದಕ್ಕೂ ಬರಲಿದೆ `ಪವನಶಕ್ತಿ ಚಾಲಿತ ಕಾರು~!

ಈ ನಿಟ್ಟಿನಲ್ಲಿಯೇ ಸಂಶೋಧನೆ-ಅಭಿವೃದ್ಧಿ ಕಾರ್ಯ ಎರಡೂ ಪೂರ್ಣಗೊಂಡು `ಎಂಡಿಐ~ ತಂತ್ರಜ್ಞಾನ ವರ್ಷಗಳ ಹಿಂದೆಯೇ ಪರಿಚಯವಾಯಿತು. ಈಗ ಟಾಟಾ ಕಾರು `ಗಾಳಿ~ಯನ್ನೇ ಉಸಿರಾಡುತ್ತಾ ಪ್ರಾಯೋಗಿಕವಾಗಿ ಚಲಿಸಲಾರಂಭಿಸಿದೆ!ಲಕ್ಷಾಂತರ ವರ್ಷಗಳ ಹಿಂದೆ ಕೋಟಿ ಕೋಟಿ ವನ್ಯಜೀವಿಗಳು, ವೃಕ್ಷಗಳು ನೆಲದಾಳ ಸೇರಿ ಪಳೆಯುಳಿಕೆಗಳಾಗಿ, ಇಂಗಾಲವಾಗಿ,  ದ್ರವ ಇಂಧನ ಮೂಲವಾಗಿ ಪರಿವರ್ತಿತವಾಗಿದ್ದು ಪ್ರಕೃತಿಯ ನಿಯಮದಂತೆ ನಡೆದಿದೆ.

 

ಅದೇ ಇಂಧನ ಮೂಲವನ್ನು ನಾವು ಯಂತ್ರಗಳ ಬಳಕೆ ಆರಂಭವಾದಂದಿನಿಂದ ಸತತವಾಗಿ ಬಳಸುತ್ತಾ ಬಂದಿದ್ದೇವೆ. ಆದರೆ, ಆ ನೈಸರ್ಗಿಕ ಇಂಧನ ಮೂಲ ಕೆಲವೇ ವರ್ಷಗಳಲ್ಲಿ ಮುಗಿಯಲಿದೆ. ಮುಂದೆ?!ಪರ್ಯಾಯ ಇಂಧನದ ಶೋಧ ಆರಂಭವಾದಾಗ ವಿದ್ಯುತ್ ಚಾಲಿತ ವಾಹನಗಳು, ಹೊಂಗೆ ಎಣ್ಣೆ ಚಾಲಿತ ಯಂತ್ರಗಳ ಆವಿಷ್ಕಾರವಾಯಿತು. ವಿದ್ಯುತ್ ಬೇಡಿಕೆ ಅಧಿಕ- ಉತ್ಪಾದನೆ ಕುಸಿತ ಎಂಬ ಇಂದಿನ ಪರಿಸ್ಥಿತಿಯಲ್ಲಿ ಜಲಮೂಲಗಳು ಕಾಣೆಯಾಗಿರುವಾಗ ಶಾಖೋತ್ಪನ್ನ ವಿದ್ಯುತ್, ಪವನ ವಿದ್ಯುತ್, ಸೌರ ವಿದ್ಯುತ್ ಬದಲಿ ಶಕ್ತಿ ಮೂಲವಾದವು. ಇವು ಯಂತ್ರಗಳ ಶಕ್ತಿ ಬೇಡಿಕೆಗೆ ಉತ್ತರವಾದವು. ಆದರೆ, ಪೆಟ್ರೋಲ್, ಡೀಸೆಲ್ ಖಾಲಿಯಾದಾಗ ವಿಶ್ವದಲ್ಲಿನ ಕೋಟಿ ಕೋಟಿ ಲೆಕ್ಕದಲ್ಲಿರುವ ವಾಹನಗಳ ಗತಿ!ಅಂಥ ಭೀತಿ ಎದುರಾದಾಗಲೇ ಹೊಸ ಪರ್ಯಾಯಗಳ ಬಗ್ಗೆ   ಆಲೋಚಿಸುವುದು ಅನಿವಾರ್ಯವಾಯಿತು. ಇಂಥ ಸಂದರ್ಭದಲ್ಲಿಯೇ ಮೊಳಕೆಯೊಡಿದಿದ್ದು `ಒತ್ತಡದ ಗಾಳಿಯ ಶಕ್ತಿ~ ಚಿಂತನೆ.ಹಬೆಯ ಒತ್ತಡದಿಂದ ರೈಲು ಯಂತ್ರ ಚಾಲನೆಗೊಳಿಸಬಹುದು ಎಂಬ ಆಲೋಚನೆ ಬಂದಿದ್ದು ಜೇಮ್ಸ ವ್ಯಾಟ್ಸನ್‌ಗೆ, ಅದೂ ನೂರಾರು ವರ್ಷಗಳ ಹಿಂದೆ. ಈಗ ಅದರ ಪರಿಷ್ಕೃತ `ಐಡಿಯಾ~ದಂತೆ ಇದೆ ಈ `ಒತ್ತಡ ಗಾಳಿ ಶಕ್ತಿ~.ಒಂದು ಸಿಲಿಂಡರ್‌ಗೆ ಗಾಳಿ ತುಂಬುತ್ತಾ ಒತ್ತಡ ಉಂಟು ಮಾಡಿದರೆ ಹೊರಹೊಮ್ಮುವ ಶಕ್ತಿಯಿಂದಲೇ ವಾಹನಗಳು ಚಲಿಸುವಂತಾದರೆ!ವಾಸ್ತವವಾಗಿ ಇದೇನೂ ಹೊಸ ಆಲೋಚನೆ- ಆವಿಷ್ಕಾರ ಅಲ್ಲ. ದಶಕಗಳ ಕಾಲದಿಂದಲೂ `ಒತ್ತಡದ ಗಾಳಿ ಶಕ್ತಿ~ ಬಳಕೆ ವಾಹನಗಳಲ್ಲಿದೆ. ಶರವೇಗದಲ್ಲಿ ಸಾಗುತ್ತಿರುವ ವಾಹನವನ್ನು ತಕ್ಷಣವೇ ನಿಲ್ಲಿಸಲು `ಏರ್‌ಬ್ರೇಕ್~ ಆಗಿ ಬಳಕೆಯಾಗುತ್ತಿದೆ. ಹತ್ತಾರು ವರ್ಷಗಳಿಂದ ವಿಮಾನಗಳಲ್ಲಿ, ಕೆಲವು ವರ್ಷಗಳಿಂದ ಬಸ್‌ಗಳಲ್ಲಿ ಬಾಗಿಲು ತೆಗೆದು-ಮುಚ್ಚಲೂ ಈ ಒತ್ತಡದ ಗಾಳಿ ಶಕ್ತಿಯನ್ನು ಬಳಸಿಕೊಳ್ಳಲಾಗುತ್ತಿದೆ.ಈಗ ಅದನ್ನೇ ಇನ್ನಷ್ಟು ಪರಿಷ್ಕರಿಸಿ ಯಂತ್ರಗಳ ಗಾಲಿಗಳು ಚಾಲನೆಗೊಳ್ಳುವಂತೆ ಮಾಡಲಾಗುತ್ತಿದೆ, `ಎಂಡಿಐ~ ತಂತ್ರಜ್ಞಾನ ಎನ್ನಲಾಗುತ್ತಿದೆ. ಈ ತಂತ್ರಜ್ಞಾನವನ್ನೇ ಬಳಸಿ ಕಾರು ಚಲಿಸುವಂತಾದರೆ. ವಾವ್ ಎಂಥ ಅದ್ಭುತ ಕಲ್ಪನೆ!ಈ ಅದ್ಭುತ ಕಲ್ಪನೆಯನ್ನೇ ಭಾರತದಲ್ಲಿ ವಾಸ್ತವಕ್ಕಿಳಿಸಲು ಮುಂದಡಿ ಇಟ್ಟಿದೆ ಟಾಟಾ ಮೋಟಾರ್ಸ್‌.`ಒತ್ತಡದ ಗಾಳಿ ಶಕ್ತಿ~ಯಿಂದಲೇ ಚಲಿಸುವ ಕಾರನ್ನು ಭಾರತದಲ್ಲಿ ಅಭಿವೃದ್ಧಿಪಡಿಸುವ ಸಂಬಂಧ `ಮೋಟಾರ್ ಡೆವಲಪ್‌ಮೆಂಟ್ ಇಂಟರ್‌ನ್ಯಾಷನಲ್~(ಎಂಡಿಐ)ನಿಂದ ಅನುಮತಿಯನ್ನೂ ಪಡೆದುಕೊಂಡಿರುವ ಟಾಟಾ ಮೋಟಾರ್ಸ್‌, ಯೋಜನೆ ವಾಸ್ತವಕ್ಕಿಳಿಸಿ ಯಶಸ್ವಿ ಆಗಿರುವುದಾಗಿ ಹೇಳಿಕೊಂಡಿದೆ. ಈಗ `ಮಾರುಕಟ್ಟೆಗೆ ನೇರ ಪ್ರವೇಶಿಸುವಂತಹ ಕಾರು~ ತಯಾರಿಸಲು ಮುಂದಡಿ ಇಟ್ಟಿದೆ.1991ರಲ್ಲಿ ಲುಕ್ಸೆಂಬರ್ಗ್‌ನಲ್ಲಿ ಗಯ್‌ನೆಗರ್ ಬ್ಯಾಕ್ ಎಂಬ ಮೆಕಾನಿಕಲ್ ಎಂಜಿನಿಯರ್ `ಎಂಡಿಐ~ ತಂತ್ರಜ್ಞಾನ ಕುರಿತು ಹಲವು ಬಗೆಯ ಪ್ರಯೋಗಗಳನ್ನು ಕೈಗೊಂಡು `ಪರಿಸರ ಮಾಲಿನ್ಯ~ವನ್ನೇ ಉಂಟು ಮಾಡದ ಯಂತ್ರಗಳ ಮಾದರಿಗಳನ್ನು ರೂಪಿಸಿದರು(ಪೆಟ್ರೋಲ್-ಡೀಸೆಲ್ ಬಳಸುವುದೇ ಇಲ್ಲವಾದ್ದರಿಂದ ಹೊಗೆ ಇಲ್ಲ.ಹಾಗಾಗಿ ಪರಿಸರ ಮಾಲಿನ್ಯವೂ ಇಲ್ಲ). ಆದರೆ ಈ ಯಂತ್ರಕ್ಕೆ `ಬ್ರೇಕ್~ ಬಿದ್ದಿದ್ದು, ಕಾನೂನು ತಗಾದೆಗಳು ಮತ್ತು ತಪ್ಪು ರೀತಿಯಲ್ಲಿ ಶೋಧ ಆರಂಭಿಸಿದ್ದರಿಂದ. ಹಾಗಾಗಿಯೇ 2010ರಲ್ಲಿ ಅಮೆರಿಕದಲ್ಲಿ `ಒತ್ತಡ ಗಾಳಿ ಶಕ್ತಿ~ಯ ಮೊದಲ ಕಾರು ಪರಿಚಯಿಸುವ ಯತ್ನವೂ ಫಲಕಾರಿಯಾಗಲಿಲ್ಲ.ಈ ಮಧ್ಯೆ 2007ರಲ್ಲಿ ಎಂಡಿಐ ಮತ್ತು ಟಾಟಾ ಮೋಟಾರ್ಸ್‌ ನಡುವೆ ತಂತ್ರಜ್ಞಾನ ವಿನಿಮಯ ಒಪ್ಪಂದವಾಯಿತು. ಭಾರತದಲ್ಲಿ ಇಂಥ ವಾಹನತಯಾರಿಸಿ ಮಾರುಕಟ್ಟೆಗೆ ಪರಿಚಯಿಸುವ ಜವಾಬ್ದಾರಿಯನ್ನು ಟಾಟಾ ಮೋಟಾರ್ಸ್‌ ಹೊತ್ತುಕೊಂಡಿತು.ಟಾಟಾ ಮೋಟಾರ್ಸ್, ಮೊನ್ನೆ `ಒತ್ತಡ ಗಾಳಿ ಯಂತ್ರ~ವನ್ನು ಎರಡು ವಾಹನಗಳಿಗೆ ಅಳವಡಿಸಿ ಪರಿಶೀಲಿಸಿ ಯಶಸ್ಸು ಕಂಡಿದೆ. ಅಲ್ಲಿಗೆ, ಒತ್ತಡದ ಗಾಳಿ ಯಂತ್ರ 1ರಿಂದ 2ನೇ ಗೇರ್‌ಗೆ ಬಿದ್ದಿತು ಎನ್ನಬಹುದು.

 

ಇನ್ನು `ಟಾಪ್‌ಗೇರ್~ನಲ್ಲಿ  ವೇಗವಾಗಿ ಚಲಾಯಿಸುವುದೊಂದೇ ಬಾಕಿ! ಆದರೆ, ನಿಮ್ಮ ಕಲ್ಪನೆಗೆ, ಕಾತುರಕ್ಕೆ ಸ್ವಲ್ಪ `ಏರ್ ಬ್ರೇಕ್~ ಹಾಕಿರಿ. ಇನ್ನೂ ಮಹತ್ವದ ಘಟ್ಟ ಬಾಕಿ ಇದೆ.`ಒತ್ತಡದ ಗಾಳಿ ಶಕ್ತಿ~ ಯಂತ್ರವನ್ನು ಯಾವ ಆಕಾರ-ಗಾತ್ರದ ವಾಹನಕ್ಕೆ ಸೂಕ್ತ ರೀತಿ ಜೋಡಿಸಬಹುದು? ಯಾವ ಯಾವ ಅಪ್ಲಿಕೇಷನ್‌ಗಳನ್ನು ಅಳವಡಿಸಬಹುದು? ಎಂಬ ಬಗ್ಗೆ ಜಂಟಿಯಾಗಿ ಪ್ರಯೋಗದಲ್ಲಿ ತೊಡಗಿಸಿಕೊಂಡಿರುವ `ಎಂಡಿಐ~ ಮತ್ತು ಟಾಟಾ ಮೋಟಾರ್ಸ್‌, ಜನ ಬಳಕೆಗೆ ಯೋಗ್ಯವಾದ ರೀತಿಯ `ಗಾಳಿ ಕಾರನ್ನು~ ಮಾರುಕಟ್ಟೆಗೆ ಪರಿಚಯಿಸುವ ಬಗ್ಗೆ ಕಾರ್ಯನಿರತವಾಗಿವೆ.ಆದರೆ, ಯಾವಾಗ ಈ ವಿನೂತನ ಕಾರು ಹೊರ ಬರಲಿದೆ? ಈ ಬಗ್ಗೆ ಯಾವುದೇ ಕಾಲ ಮಿತಿ ವಿಧಿಸಲಾಗಿಲ್ಲ ಎನ್ನುತ್ತದೆ ಟಾಟಾ ಮೋಟಾರ್ಸ್‌.ಗಾಳಿ ಕಾರು!

ಕಾರ್ಬನ್-ಫೈಬರ್‌ನಿಂದ ಮಾಡಿದ ಬಹಳ ಗಟ್ಟಿಯಾದ ಸಿಲಿಂಡರ್‌ನಲ್ಲಿ 30 ಎಂಪಿಎ (4500 ಪಿಎಸ್‌ಐ ಅಥವಾ 310 ಬಾರ್) ಒತ್ತಡದಲ್ಲಿ ಭರ್ತಿಯಾಗಿರುವ ಗಾಳಿಯು ಹೊರಬರುವಾಗ ಉಂಟುಮಾಡುವ ಶಕ್ತಿಯ ಮೂಲಕವೇ ಯಂತ್ರದಲ್ಲಿ (ಹಿಂದೆ ಹಬೆಯಂತ್ರದಲ್ಲಿ  ಸಂಚಯವಾದ ಶಕ್ತಿ ರಭಸದಿಂದ ಹೊರಬಿದ್ದಾಗ ಉಗಿಬಂಡಿ ಚಲಿಸಿದಂತೆ) ಚಾಲನೆಯುಂಟಾಗುತ್ತದೆ.ಇದೇ `ಕಂಪ್ರೆಸ್ಡ್ ಏರ್ ಕಾರ್~ನ ಸರಳ ತಂತ್ರಜ್ಞಾನ. ಇಂಥ `ಒತ್ತಡದ ಗಾಳಿ ಶಕ್ತಿ~ಯ ಕಾರಿನ ಪ್ರಯೋಗ 1920ರಿಂದಲೂ ನಡೆಯುತ್ತಿದೆ. ಈ ಕಾರಿನಲ್ಲಿ ಒತ್ತಡ ಗಾಳಿಯಿಂದ ಶಕ್ತಿ ಹೊರಬೀಳುತ್ತಿದ್ದರೆ ಅದೇ ಶಕ್ತಿಯ ಒಂದಂಶವನ್ನು ಬಳಸಿಕೊಂಡು ಸಿಲಿಂಡರ್‌ಗೆ ಮತ್ತೆ ಗಾಳಿ ತುಂಬಿ ಒತ್ತಡ ಉಂಟುಮಾಡುವುದಕ್ಕೆ ಪಂಪ್ ಸಹ ಜೋಡಣೆ ಆಗಿರುತ್ತದೆ. ಜತೆಗೆ ಆರಂಭದಲ್ಲಿ ಚಾಲನೆಗೆ ಶಕ್ತಿ ನೀಡಲು ಪುಟ್ಟ ಬ್ಯಾಟರಿಯೂ ಇರುತ್ತದೆ.ಈ ಎಂಡಿಐ ತಂತ್ರಜ್ಞಾನದೊಟ್ಟಿಗೇ ಬ್ಯಾಟರಿ ಅಥವಾ ಗ್ಯಾಸೊಲಿನ್‌ನಿಂದ ಚಾಲನೆಗೊಳ್ಳುವ ಹೈಬ್ರಿಡ್ ಕಾರುಗಳ ಪ್ರಯೋಗವೂ ವಿವಿಧ ದೇಶಗಳಲ್ಲಿ ನಡೆಯುತ್ತಿದೆ.

`ಎಂಡಿಐ~ ತಂತ್ರಜ್ಞಾನ ಎಂಬುದು `ಕಾನ್-ರಾಡ್ ಸಿಸ್ಟೆಂ~. ಇದರಲ್ಲಿ ಯಂತ್ರದ ಪಿಸ್ಟನ್ ಕಾರಿನ ಮಧ್ಯ, ಮೇಲ್ಭಾಗದಲ್ಲಿ 70 ಡಿಗ್ರಿ ಸೈಕಲ್ಸ್ ಲೆಕ್ಕದಲ್ಲಿ ಜೋಡಣೆಯಾಗಿ ಚಲಿಸುವಂತಹುದ್ದಾಗಿರುತ್ತದೆ.ಈ ವಾಹನದ ಇನ್ನೊಂದು ವಿಶೇಷವೆಂದರೆ ಗೇರ್‌ಗಳ ಬದಲಾವಣೆ ಸ್ವಯಂಚಾಲಿತ ಹಾಗೂ ಎಲೆಕ್ಟ್ರಾನಿಕ್ ಸಿಸ್ಟಂ(ಎಂಡಿಐ ಅಭಿವೃದ್ಧಿಪಡಿಸಿದ್ದು) ಮೂಲಕ ನಿಯಂತ್ರಿತ. ಕಾರಿನ ವೇಗವೂ ಕಂಪ್ಯೂಟರೀಕೃತ.    

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry