ಬರಲಿದೆ ಮಾತನಾಡುವ ಕಾರು!

7

ಬರಲಿದೆ ಮಾತನಾಡುವ ಕಾರು!

Published:
Updated:
ಬರಲಿದೆ ಮಾತನಾಡುವ ಕಾರು!

ಕಾರುಗಳು ಮಾತನಾಡುತ್ತವೆ...! ಅರೆ ಇದೇನಿದು? ಹೀಗೂ ಉಂಟೆ? ಎಂದು ಹುಬ್ಬೇರಿಸದಿರಿ. ಇದು ಯಾವುದೋ ಹಾಲಿವುಡ್ ಸಿನಿಮಾ ಅಲ್ಲ, ಮಕ್ಕಳ ಕಾಮಿಕ್ಸ್‌ನ ವರ್ಣರಂಜಿತ ಕಥೆಯೂ ಅಲ್ಲ. ಕೆಲವೇ ದಿನಗಳಲ್ಲಿ ಇಂತಹುದೊಂದು ಮಾತನಾಡುವ ಕಾರು ರಸ್ತೆಗಿಳಿಯುವ ದಿನಗಳು ದೂರವಿಲ್ಲ.ಹೌದು, ಅಮೆರಿಕದ ಉತ್ತರ ಕೆರೊಲಿನಾ ವಿಶ್ವವಿದ್ಯಾನಿಲಯದ ತಂತ್ರಜ್ಞರು ಕಾರುಗಳಿಗೆ `ದನಿ' ನೀಡಿದ್ದಾರೆ! `ಇಂಟಲಿಜೆಂಟ್ ಸಾರಿಗೆ ವ್ಯವಸ್ಥೆ'ಯ ಭಾಗವಾಗಿ ಮಾತನಾಡುವ ಕಾರುಗಳ ಮಾದರಿಯನ್ನು ತಂತ್ರಜ್ಞರು ಅಭಿವೃದ್ಧಿಪಡಿಸುತ್ತಿದ್ದಾರೆ. v2v (Vehicle -to-Vehicle) ಎಂದು ಕರೆಯಲಾಗುವ ಈ ತಂತ್ರಜ್ಞಾನ ಶೈಶವಾವಸ್ಥೆಯಲ್ಲೇ ಯಶಸ್ಸನ್ನು ಕಂಡಿದೆ ಎಂದು ತಂತ್ರಜ್ಞರು ಹರ್ಷ ವ್ಯಕ್ತಪಡಿಸಿದ್ದಾರೆ.ಮಾತನಾಡುವ ಕಾರುಗಳು ಚಾಲಕರಿಗೆ ಅವರು ಸಾಗುತ್ತಿರುವ ಮಾರ್ಗಗಳಲ್ಲಿನ ಸಂಚಾರ ದಟ್ಟಣೆ ಕುರಿತ ಮಾಹಿತಿ ನೀಡುತ್ತವೆ. ಸುಗಮವಾಗಿ ಸಂಚರಿಸಬಹುದಾದ ಪರ್ಯಾಯ ಮಾರ್ಗಗಳನ್ನೂ ಸೂಚಿಸುತ್ತವೆ. ರಸ್ತೆಯ ಸದ್ಯದ ಸ್ಥಿತಿಗತಿ ಬಗೆಗೂ ಅವು ಮಾಹಿತಿ ಕಲೆಹಾಕಿ, ಯಾವ ದಾರಿಯಲ್ಲಿ ಸಾಗಿದರೆ ಎಷ್ಟು ಬೇಗ ಗಮ್ಯವನ್ನು ತಲಪುಬಹುದು ಎಂಬ ಅಂದಾಜು ಲೆಕ್ಕವನ್ನೂ ಮುಂದಿಡುತ್ತವೆ.ಇದೆಲ್ಲದಕ್ಕಿಂತ ಮುಖ್ಯವಾದ ಸಂಗತಿ ಎಂದರೆ, ಈ ಮಾತನಾಡುವ ಕಾರು ಮುಂದಿನ ವಾಹನಗಳಿಗೆ, ಅಡೆತಡೆಗಳಿಗೆ ಡಿಕ್ಕಿ ಹೊಡೆಯುವುದನ್ನೂ ತಪ್ಪಿಸುತ್ತವೆ. ಕಾರಿನಲ್ಲಿರುವ ಕ್ಯಾಮೆರಾ ಮತ್ತು ತಂತ್ರಾಂಶಗಳು ಮುಂದೆ ನೂರಾರು ಮೀಟರ್ ದೂರದಲ್ಲಿ ಸಾಗುತ್ತಿರುವ ವಾಹನದ ವೇಗವನ್ನು ಗ್ರಹಿಸಿ, ಚಾಲಕ ಯಾವ ಕ್ಷಣದಲ್ಲಿ ಬ್ರೇಕ್ ಹಾಕಬೇಕು ಎಂಬುದನ್ನೂ ತಿಳಿಸುತ್ತವೆಯಂತೆ!

ಚಲನೆಯ ದಿಕ್ಕು-ವೇಗ ಕುರಿತ ದತ್ತಾಂಶಗಳನ್ನು ಈ ಕಾರುಗಳು ರೇಡಿಯೊ ತರಂಗಾಂತರಗಳ ಮೂಲಕ ಪರಸ್ಪರ ವಿನಿಮಯ ಮಾಡಿಕೊಳ್ಳುವ ವ್ಯವಸ್ಥೆಯೂ ಈ ಭವಿಷ್ಯದ ಮಾತನಾಡುವ ಕಾರುಗಳಲ್ಲಿ ಇರಲಿದೆ.ಸಂಚಾರ ದಟ್ಟಣೆಯಲ್ಲಿ ಸಿಕ್ಕಿಕೊಂಡ ಕಾರು ದತ್ತಾಂಶಗಳನ್ನು ರವಾನಿಸುತ್ತದೆ. ಇದನ್ನು ಸ್ವೀಕರಿಸುವ ಅದೇ ಮಾರ್ಗದಲ್ಲಿ ಸಾಕಷ್ಟು ದೂರದಲ್ಲಿ ಇರುವ ಇನ್ನೊಂದು ಕಾರು ತಕ್ಷಣವೇ ಆ ದತ್ತಾಂಶಗಳನ್ನು ದನಿಯಾಗಿ ಪರಿವರ್ತಿಸಿ, ಮಾರ್ಗ ಬದಲಿಸುವಂತೆ ಚಾಲಕನ ಕಿವಿಯಲ್ಲಿ ಉಸುರುತ್ತದೆ. ಹೀಗಾಗಿ ಚಾಲಕ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಳ್ಳದೇ ಪರ್ಯಾಯ ಮಾರ್ಗದಲ್ಲಿ ಸಾಗುವಂತೆಯೂ ನೆರವಾಗುತ್ತದೆ ಈ ಕಾರು ಎನ್ನುತ್ತಾರೆ ತಂತ್ರಜ್ಞರು.ಅದಿಷ್ಟೇ ಅಲ್ಲ, ಕಾರಿನಲ್ಲಿದ್ದವರ ಹೊಟ್ಟೆ ಹಸಿದಿದ್ದರೆ ಮುಂದೆ ಎಲ್ಲಿ, ಎಷ್ಟು ದೂರದಲ್ಲಿ ರೆಸ್ಟೊರೆಂಟ್ ಸಿಗಬಹುದು ಎಂಬುದನ್ನೂ ಈ ಅತ್ಯಾಧುನಿಕ ತಂತ್ರಜ್ಞಾನದ ಕಾರು ತಿಳಿಸಿಕೊಡುತ್ತದೆ. ಹೇಗೆಂದರೆ, ಕಾರಿನಲ್ಲಿರುವ ತಂತ್ರಾಂಶವು ಮುಂದೆ ಸಾಕಷ್ಟು ದೂರದಲ್ಲಿ ಸಾಗುತ್ತಿರುವ ಕಾರುಗಳಿಗೆ ರೆಸ್ಟೊರೆಂಟ್ ಕುರಿತ ಪ್ರಶ್ನೆಯೊಪಾದಿಯ ದತ್ತಾಂಶಗಳನ್ನು ರವಾನಿಸುತ್ತದೆ. ಮುಂದೆ ಸಾಗುತ್ತಿರುವ ಕಾರುಗಳು ಇದನ್ನು ಸ್ವೀಕರಿಸಿ ಅಲ್ಲಿರುವ ರೆಸ್ಟೋರೆಂಟ್‌ಗಳ ಬಗೆಗೆ ಮಾಹಿತಿ ರವಾನಿಸುತ್ತವೆ!ಈಗಾಗಲೇ ಇಂಥ ಮ್ಯಾಜಿಕ್ ಕಾರುಗಳು ಅಮೆರಿಕದ ಕೆಲವೆಡೆ ಪ್ರಾಯೋಗಿಕವಾಗಿ ರಸ್ತೆಗಿಳಿದೂ ಆಗಿದೆ. ಆದರೆ ಇವು ಕಡಿಮೆ ಸಾಮರ್ಥ್ಯದ ಸಂವಹನ ಕೌಶಲ ಹೊಂದಿವೆ. ಅಂದರೆ ಮೊಬೈಲ್‌ನಲ್ಲಿ ಬ್ಲೂಟೂತ್ ಸಂಪರ್ಕದಂತೆ ತೀರಾ ಹತ್ತಿರದಲ್ಲಿರುವ ಕಾರುಗಳ ಜತೆಗಷ್ಟೆ ಪರಸ್ಪರ ಸಂವಹನದಲ್ಲಿ ತೊಡಗುತ್ತವೆ, ಮಾಹಿತಿ ವಿನಿಮಯ ಮಾಡಿಕೊಳ್ಳುತ್ತವೆ.ಆದರೆ, ವೇಗವಾಗಿ ಚಲಿಸುವ ಕಾರುಗಳು ಪರಸ್ಪರ ಡಿಕ್ಕಿಯಾಗುವುದು, ಆಕಸ್ಮಿಕ ಅಪಘಾತಗಳಿಗೆ ಒಳಗಾಗುವುದಕ್ಕೆ ಮಾತ್ರ ತಕ್ಕಮಟ್ಟಿಗೆ `ಬ್ರೇಕ್' ಬಿದ್ದಿದೆ. ಉತ್ತರ ಕೆರೊಲಿನಾ ವಿಶ್ವವಿದ್ಯಾನಿಲಯದ ತಂತ್ರಜ್ಞರು ಅಭಿವೃದ್ಧಿಪಡಿಸಿರುವ ಕಾರಿನ ತಂತ್ರಾಂಶದ ಮಾದರಿ ಇದಕ್ಕಿಂತ ಭಿನ್ನ. ಇದು ರೇಡಿಯೊ ತರಂಗಾಂತರಗಳ ಮೂಲಕ ಹಲವು ನೂರು ಮೀಟರ್‌ಗಳಷ್ಟು ದೂರದ ಕಾರುಗಳೊಂದಿಗೆ ಸಂಪರ್ಕ ಬೆಸೆಯಬಲ್ಲದಾಗಿದೆ.ಆದರೆ, ಇದರಲ್ಲೂ ತುಸು ನ್ಯೂನತೆ ಕಂಡುಬಂದಿವೆ. ಕೆಲವೊಮ್ಮೆ ರೇಡಿಯೊ ತರಂಗಾಂತರಗಳು ಬೇರೆ ಬೇರೆ ವಸ್ತುಗಳಿಗೆ ತಗುಲಿ ನಷ್ಟವಾಗಿ ಹೋಗುವ ಸಮಸ್ಯೆ ಹಿಂದಿನ ಮಾದರಿಗಳಲ್ಲಿ ಕಂಡುಬಂದಿತ್ತು. ಆದರೆ ಸದ್ಯ ತಯಾರಾಗಿರುವ ಪ್ರಾಯೋಗಿಕ ಮಾದರಿಯಲ್ಲಿ ಈ ತೊಡಕುಗಳಿಲ್ಲ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ ತಂತ್ರಜ್ಞರು.ಉಳಿದಿರುವ ಇನ್ನೂ ಕೆಲವು ನ್ಯೂನತೆಗಳನ್ನು ಆದಷ್ಟೂ ಬೇಗ ನಿವಾರಿಸಿಕೊಂಡು ಈ ತಂತ್ರಜ್ಞಾನವನ್ನು ಇನ್ನಷ್ಟು ಮೇಲ್ದರ್ಜೆಗೇರಿಸಿ ಕಿಲೊಮೀಟರ್‌ಗಳಷ್ಟು ದೂರದಲ್ಲಿ ಸಾಗುತ್ತಿರುವ ಕಾರುಗಳೊಂದಿಗೆ ಹಿಂದಿನ ಕಾರು ಸಂಪರ್ಕ ಹೊಂದಿ ದತ್ತಾಂಶ ರವಾನಿಸಿಕೊಂಡು, ಮಾಹಿತಿ ಪಡೆದು ಚಾಲಕರಿಗೆ ದನಿಯ ಮೂಲಕವೇ ಮಾರ್ಗದರ್ಶನ ಮಾಡುವಂತೆ ಮಾಡುವುದು ತಂತ್ರಜ್ಞರ ಗುರಿಯಾಗಿದೆ.ಇಂಥ ಕಾರುಗಳಿಂದ ರಸ್ತೆ ಅಪಘಾತಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಕಡಿವೆು ಮಾಡಬಹುದು ಎಂಬುದು ತಂತ್ರಜ್ಞರ ಲೆಕ್ಕಾಚಾರ.

ಇಂತಹ ಪ್ರಯತ್ನಗಳು ಈಗಾಗಲೇ ಇಟಲಿ, ಜರ್ಮನಿ, ಆಸ್ಟ್ರೇಲಿಯಾದಲ್ಲಿ ನಡೆಯುತ್ತಿವೆ. ಸದ್ಯದ ಅಮೆರಿಕ ಮಾದರಿ ಅವೆಲ್ಲಾವನ್ನೂ ಹಿಂದಿಕ್ಕಿದೆ ಎಂಬುದು ಉತ್ತರ ಕೆರೊಲಿನಾ ವಿಶ್ವವಿದ್ಯಾನಿಲಯದ ತಂತ್ರಜ್ಞರ ಅಂಬೋಣ.

-ಕೆ.ಎಸ್. ಗಿರೀಶ್ .

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry