ಬರಲಿದೆ ಸೈಬರ್ ಸುರಕ್ಷತೆ ಕೋರ್ಸ್

ಬೆಂಗಳೂರು: ರಾಜ್ಯದ ವಿಶ್ವವಿದ್ಯಾಲಯಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ರ್ಯಾಂಕಿಂಗ್ ನೀಡುವುದಕ್ಕೆ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಮಾನದಂಡಗಳನ್ನು ರೂಪಿಸಿದೆ.
ಇತ್ತೀಚೆಗೆ ನಡೆದಿರುವ ಪರಿಷತ್ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಉನ್ನತ ಶಿಕ್ಷಣ ಸಚಿವ ಟಿ.ಬಿ. ಜಯಚಂದ್ರ ಅವರು ಶನಿವಾರ ಈ ವಿಷಯ ತಿಳಿಸಿದರು. ರ್ಯಾಂಕಿಂಗ್ ನೀಡಲು ಮೂರು ಹಂತದ ಮಾನದಂಡಗಳನ್ನು ನಿಗದಿಪಡಿಸಲಾಗಿದೆ. ಪ್ರತಿ ಹಂತದಲ್ಲೂ ನಿರ್ದಿಷ್ಟ ಅಂಕಗಳನ್ನು ನಿಗದಿ ಪಡಿಸಲಾಗಿದೆ. ಪ್ರತಿ ವಿವಿಯು ಈ ಮೂರೂ ಹಂತಗಳಲ್ಲಿ ಪಡೆಯುವ ಅಂಕಗಳ ಆಧಾರದಲ್ಲಿ ರ್ಯಾಂಕ್ ನಿರ್ಧಾರವಾಗಲಿದೆ.
ಹೊಸ ಕೋರ್ಸ್: ರಾಜ್ಯ ವಿವಿಗಳಲ್ಲಿ ಸೈಬರ್ ಸುರಕ್ಷತೆಗೆ ಸಂಬಂಧಿಸಿದ ಕೋರ್ಸ್ಗಳನ್ನು ಆರಂಭಿಸಲು ಪರಿಷತ್ ಸಭೆ ತೀರ್ಮಾನಿಸಿದೆ. ‘ಈ ಕೋರ್ಸ್ ಮಾಡಿದವರಿಗೆ ಉದ್ಯೋಗಾವಕಾಶ ಹೆಚ್ಚು ಇದೆ. ನಮ್ಮ ದೇಶದಲ್ಲಿ ಪ್ರತಿ ವರ್ಷ ಒಂದು ಲಕ್ಷ ಸೈಬರ್ ಸುರಕ್ಷತಾ ತಂತ್ರಜ್ಞರ ಅಗತ್ಯವಿದೆ’ ಎಂದರು.
ಪ್ರಾರಂಭಿಕ ಹಂತವಾಗಿ ಮುಂದಿನ ಶೈಕ್ಷಣಿಕ ವರ್ಷದಿಂದ ಸೈಬರ್ ಸುರಕ್ಷತೆ ಸಂಬಂಧಿಸಿದ 13 ಪಿಜಿ ಡಿಪ್ಲೊಮಾ ಕೋರ್ಸ್ಗಳನ್ನು ಆರಂಭಿಸಲು ಪರಿಷತ್ ಸಭೆ ನಿರ್ಧರಿಸಿದೆ.
ಅನುದಾನ: ಕೇಂದ್ರ ಮಾನವಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ‘ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನ’ (ರೂಸಾ) ಅಡಿಯಲ್ಲಿ ನೀಡಿದ ಅನುದಾನದಲ್ಲಿ ಹಂಪಿಯ ಕನ್ನಡ ವಿವಿ, ಗುಲಬರ್ಗ ವಿವಿ, ದಾವಣಗೆರೆ ವಿವಿ ಮತ್ತು ವಿಜಯಪುರದ ಮಹಿಳಾ ವಿವಿಗಳಿಗೆ ತಲಾ ₹ 20 ಕೋಟಿ ನೀಡಲಾಗಿದೆ. ನರಗುಂದದ ಎಂಜಿನಿಯರಿಂಗ್ ಕಾಲೇಜು ಕಟ್ಟಡ ನಿರ್ಮಾಣಕ್ಕೆ ₹26 ಕೋಟಿ ಮತ್ತು ಜೇವರ್ಗಿಯಲ್ಲಿ ಮಾದರಿ ಪದವಿ ಕಾಲೇಜು ನಿರ್ಮಾಣಕ್ಕೆ ₹ 4 ಕೋಟಿ ನೀಡಲಾಗಿದೆ’ ಎಂದು ಜಯಚಂದ್ರ ಮಾಹಿತಿ ನೀಡಿದರು.
‘ರಾಜ್ಯದ 92 ಪದವಿ ಕಾಲೇಜುಗಳಿಗೆ ‘ರೂಸಾ’ ಅಡಿಯಲ್ಲಿ ತಲಾ ₹2 ಕೋಟಿ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಉತ್ತರ ಕರ್ನಾಟಕದ 36 ಕಾಲೇಜುಗಳು ಸೇರಿವೆ. ಈ ಹಣದ ಸದ್ವಿನಿಯೋಗಕ್ಕೆ ಸಲಹೆ ನೀಡುವುದಕ್ಕಾಗಿ ಪ್ರತಿ ಸಂಸ್ಥೆಗೂ ಮಾರ್ಗದರ್ಶಕರನ್ನು ನೇಮಿಸಲಾಗುವುದು’ ಎಂದರು.
ಸಮಿತಿ: ಸ್ವಾಯತ್ತ ಎಂಜಿನಿಯರಿಂಗ್ ಕಾಲೇಜು ಮತ್ತು ವಿಟಿಯು ವ್ಯಾಪ್ತಿಯ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಅಂಕಗಳ ಮಾನದಂಡದಲ್ಲಿ ವ್ಯತ್ಯಾಸ ಇರುವುದರಿಂದ ನೇರ ನೇಮಕಾತಿ ಮತ್ತು ಮೆರಿಟ್ ಆಧಾರದ ಮೇಲೆ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುವಾಗ ಸಾಮಾನ್ಯ ಕಾಲೇಜುಗಳ ಅಭ್ಯರ್ಥಿಗಳಿಗೆ ಆಗುವ ಅನ್ಯಾಯದ ಕುರಿತಾಗಿ ಮಾಧ್ಯಮದವರು ಸಚಿವರ ಗಮನ ಸೆಳೆದರು.
ಇದಕ್ಕೆ ಉತ್ತರ ನೀಡಿದ ಉನ್ನತ ಶಿಕ್ಷಣ ಪರಿಷತ್ನ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಎ. ಕೋರಿ, ‘ಈ ವಿಚಾರ ನಮ್ಮ ಗಮನಕ್ಕೆ ಬಂದಿದೆ. ಇದರ ಅಧ್ಯಯನಕ್ಕಾಗಿ ಈಗಾಗಲೇ ಗೋವಾ ವಿವಿ ವಿಶ್ರಾಂತ ಕುಲಪತಿ ಪ್ರೊ. ಸೋಂದೆ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಎಐಸಿಟಿಇ ನಿಯಮಗಳ ಪ್ರಕಾರ, ಸ್ವಾಯತ್ತ ಕಾಲೇಜುಗಳ ವಿದ್ಯಾರ್ಥಿಗಳನ್ನು ನೇಮಕಾತಿ ಮತ್ತು ಪ್ರವೇಶಾತಿಗಾಗಿ ಪರಿಗಣಿಸುವಾಗ ಅವರು ಪಡೆದಿರುವ ಒಟ್ಟು ಅಂಕಗಳಲ್ಲಿ 7.5 ಅಂಕಗಳನ್ನು ಕಡಿತಗೊಳಿಸಬೇಕು’ ಎಂದು ಅವರು ತಿಳಿಸಿದರು.
ವಿವಿ ರ್ಯಾಂಕಿಂಗ್ ಮಾನದಂಡಗಳು
1. ಅಧ್ಯಯನ ಶ್ರೇಷ್ಠತೆ, ಬೋಧನಾ ಸಾಮರ್ಥ್ಯ
2. ಉದ್ಯೋಗ ಯೋಗ್ಯತೆ, ವಿನೂತನ ಸಾಧನೆ, ಮೂಲ ಸೌಕರ್ಯ
3. ಒಳಗೊಳ್ಳುವಿಕೆ ಮತ್ತು ಸಾಮಾಜಿಕ ಪರಿಣಾಮ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.